ಉಡುಪಿ, ಜ. 18: ರಾಷ್ಟ್ರೀಯ ಹೆದ್ದಾರಿ 169 ಎ ರ ಉಡುಪಿ ನಗರ ಹಾಗೂ ಮಣಿಪಾಲ್ ರಸ್ತೆಯ ಇಂದ್ರಾಳಿ ಸಮೀಪದ ರೈಲ್ವೇ ಮೇಲ್ಸೇತುವೆ ಅಭಿವೃದ್ಧಿ ಕಾಮಗಾರಿಯ ಪರಿಶೀಲನೆಯನ್ನು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸ್ಥಳ ಭೇಟಿ ಮಾಡಿ, ವೀಕ್ಷಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ರೈಲ್ವೇ ಮೇಲ್ಸೇತುವೆಯಾಗಿ ಕಬ್ಬಿಣದ ಗರ್ಡರ್ ನಿರ್ಮಾಣದ ವೆಲ್ಡಿಂಗ್ ಕಾಮಗಾರಿಯ ವೇಗವು ನಿರೀಕ್ಷಿತ ಮಟ್ಟದಲ್ಲಿ ಆಗದೇ ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಅದರ ವೇಗವನ್ನು ಮತ್ತಷ್ಟು ಹೆಚ್ಚಿಸಲು ಹೆಚ್ಚಿನ ಕಾರ್ಮಿಕರನ್ನು ನಿಯೋಜಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ಕಬ್ಬಿಣದ ಗರ್ಡರ್ಸ್ ನಿರ್ಮಾಣದ ಕಾಮಗಾರಿಯು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಅದನ್ನು ರೈಲ್ವೇ ಹಳಿಗಳ ಮೇಲ್ಭಾಗದಲ್ಲಿ ಸೇತುವೆಯಾಗಿ ನಿರ್ಮಿಸಲು ಅಗತ್ಯವಿರುವ ಸಿವಿಲ್ ಕಾಮಗಾರಿಗಳನ್ನು ಸಹ ತ್ವರಿತವಾಗಿ ಕೈಗೊಳ್ಳುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ಕೊಂಕಣ ರೈಲ್ವೆಯ ಸೀನೀಯರ್ ಇಂಜಿನಿಯರ್ ಗೋಪಾಲ ಕೃಷ್ಣ, ಗುತ್ತಿಗೆದಾರರು, ಸಾರ್ವಜನಿಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.