ಉಡುಪಿ, ಜುಲೈ 28: ಅಂತರಾಷ್ಟ್ರೀಯ ಸಂಸ್ಥೆಯಾಗಿರುವ ರೆಡ್‍ಕ್ರಾಸ್ ಸಂಸ್ಥೆ ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆ. ಅದರಲ್ಲೂ ಉಡುಪಿ ಜಿಲ್ಲಾ ರೆಡ್‍ಕ್ರಾಸ್ ಘಟಕವು ಉತ್ತಮ ಚಟುವಟಿಕೆಗಳ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ ಎಂದು ಕರ್ನಾಟಕ ರಾಜ್ಯಪಾಲರಿಂದ ರಾಜ್ಯ ರೆಡ್‍ಕ್ರಾಸ್ ಘಟಕಕ್ಕೆ ಉಪಾಧ್ಯಕ್ಷರಾಗಿ ನೇಮಕಗೊಂಡ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ ರಾವ್ ಹೇಳಿದರು.
ಅವರು ಶುಕ್ರವಾರ ಉಡುಪಿ ಜಿಲ್ಲಾ ರೆಡ್‍ಕ್ರಾಸ್ ಭವನದಲ್ಲಿ ಜಿಲ್ಲಾ ರೆಡ್‍ಕ್ರಾಸ್ಸಿನ ಚಟುವಟಿಕೆಗಳನ್ನು ಪರಿಶೀಲಿಸಿ, ಆಡಳಿತ ಮಂಡಳಿಯ ಸದಸ್ಯರ ಸಭೆಯಲ್ಲಿ ಮಾತನಾಡಿದರು.
ರೆಡ್‍ಕ್ರಾಸ್ ಘಟಕದಿಂದ ಅನುಷ್ಠಾನಗೊಳ್ಳುತ್ತಿರುವ ವಿಕಲಚೇತನರ ಪುನರ್ವಸತಿ ಕೇಂದ್ರದ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಅವರು, ರೆಡ್‍ಕ್ರಾಸ್ ಸ್ವಯಂಸೇವಕರನ್ನು ಹೆಚ್ಚಿಸುವಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಶಾಲಾ-ಕಾಲೇಜುಗಳಲ್ಲಿ ಜೂನಿಯರ್ ರೆಡ್‍ಕ್ರಾಸ್ ಮತ್ತು ಯುವ ರೆಡ್‍ಕ್ರಾಸ್ ಘಟಕಗಳನ್ನು ಬಲಪಡಿಸುವುದು, ಪ್ರಥಮ ಚಿಕಿತ್ಸಾ ತರಬೇತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು, ಪ್ರಕೃತಿ ವಿಕೋಪದ ಕುರಿತಾಗಿ ಅರಿವು ಮೂಡಿಸುವುದು, ಸದಸ್ಯತ್ವ ಅಭಿಯಾನವನ್ನು ಉತ್ತೇಜಿಸುವುದು ಇತ್ಯಾದಿಗಳ ಕುರಿತಾಗಿ ನಿರ್ಣಯ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಶ್ರವಣ ದೋಷವುಳ್ಳ ಫಲಾನುಭವಿಗಳಿಗೆ ಶ್ರವಣ ಸಾಧನವನ್ನು ವಿತರಿಸಲಾಯಿತು.
ಜಿಲ್ಲಾ ಘಟಕದ ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ. ಅಧ್ಯಕ್ಷತೆ ವಹಿಸಿದ್ದರು.
ಬೆಂಗಳೂರು ನಗರ ರೆಡ್‍ಕ್ರಾಸ್ ಜಿಲ್ಲಾ ಸಭಾಪತಿ ಬಾಲಕೃಷ್ಣ ಶೆಟ್ಟಿ, ರಾಜ್ಯ ರೆಡ್‍ಕ್ರಾಸ್ ಉಪ ಕಾರ್ಯದರ್ಶಿ ಉಮಾಕಾಂತ್, ರಾಜ್ಯ ರೆಡ್‍ಕ್ರಾಸ್ ಆಡಳಿತ ಮಂಡಳಿ ಸದಸ್ಯ ನಾಗೇಶ್ ಬೆಂಗಳೂರು, ಜಿಲ್ಲಾ ರೆಡ್‍ಕ್ರಾಸ್ ಆಡಳಿತ ಮಂಡಳಿ ಸದಸ್ಯ ಅಶ್ವಥ್ ನಾರಾಯಣ, ಕುಂದಾಪುರ ರೆಡ್‍ಕ್ರಾಸ್ ಸಭಾಪತಿ ಜಯಕರ ಶೆಟ್ಟಿ, ಖಚಾಂಚಿ ಶಿವರಾಮ ಶೆಟ್ಟಿ, ಜಿಲ್ಲಾ ರೆಡ್‍ಕ್ರಾಸ್ ಘಟಕದ ಖಚಾಂಚಿ ರಮಾದೇವಿ, ಆಡಳಿತ ಮಂಡಳಿ ಸದಸ್ಯ ಚಂದ್ರಶೇಖರ್, ಮಾಜಿ ಕಾರ್ಯದರ್ಶಿಗಳಾದ ಬಾಲಕೃಷ್ಣ ಶೆಟ್ಟಿ ಹಾಗೂ ರತ್ನಾಕರ ಶೆಟ್ಟಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನಾ, ಯೋಜನಾ ನಿರ್ದೇಶಕ ಶಿವಾಜಿ, ಡಿಡಿಆರ್‍ಸಿ ನೋಡಲ್ ಅಧಿಕಾರಿ ಜಯಶ್ರೀ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಜಿಲ್ಲಾ ಘಟಕದ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಸ್ವಾಗತಿಸಿ, ರೆಡ್‍ಕ್ರಾಸ್‍ನ ಕಾರ್ಯ ಚಟುವಟಿಕೆಗಳ ವಿವರಗಳನ್ನು ನೀಡಿದರು. ಜಿಲ್ಲಾ ರೆಡ್‍ಕ್ರಾಸ್ ಆಡಳಿತ ಮಂಡಳಿ ಸದಸ್ಯ ವಿ.ಜಿ. ಶೆಟ್ಟಿ ವಂದಿಸಿದರು.