ಉಡುಪಿ:  ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳು ರಾಜ್ಯದ ಜನರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವುದರೊಂದಿಗೆ ಅವರಿಗೆ ನೆಮ್ಮದಿ ನೀಡಿ, ಸಾಮಾಜಿಕ ಪರಿವರ್ತನೆ ಮಾಡಲಾಗಿದೆ. ಈ ಯೋಜನೆಗಳು ದೇಶಕ್ಕೆ ಮಾದರಿಯಾಗಿದೆ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎಂ. ರೇವಣ್ಣ ಹೇಳಿದರು.

ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಗ್ಯಾರಂಟಿ ಯೋಜನೆಯ ಜಿಲ್ಲಾ ಮಟ್ಟದ ಕಚೇರಿಯು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಪ್ರಾರಂಭವಾಗಿದ್ದು, ಈಗಾಗಲೇ ಸಮಿತಿಯ ಸದಸ್ಯರುಗಳಿಗೆ ಗುರುತಿನ ಚೀಟಿಯನ್ನೂ ಸಹ ನೀಡಲಾಗಿದೆ. ಗ್ಯಾರಂಟಿ ಯೋಜನೆಯ ಸಮಿತಿ ಸದಸ್ಯರುಗಳು ತಾಲೂಕಿನ ಪ್ರತೀ ಮನೆಗೂ ಭೇಟಿ ನೀಡಿ, ಪಂಚ ಗ್ಯಾರಂಟಿಗಳು ದೊರಕಿರುವ ಬಗ್ಗೆ ಮಾಹಿತಿ ಕಲೆ ಹಾಕಬೇಕು. ಒಂದು ವೇಳೆ ಯೋಜನೆಗಳು ಫಲಾನುಭವಿಗಳನ್ನು ತಲುಪುವಲ್ಲಿ ಯಾವುದೇ ನ್ಯೂನ್ಯತೆಗಳು ಇದ್ದಲ್ಲಿ ಅದನ್ನು ಪರಿಹರಿಸಿ, ವ್ಯವಸ್ಥಿತವಾಗಿ ಯೋಜನೆಗಳು ಫಲಾನುಭವಿಗಳನ್ನು ತಲುಪುವಂತೆ ಮಾಡಬೇಕು ಎಂದರು.

ಗೃಹಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಸದ ಅರ್ಹ ಫಲಾನುಭವಿಗಳಿದ್ದರು ಗೃಹ ಸಾಲ ತೆಗೆದುಕೊಳ್ಳುವ ಉದ್ದೆಶದಿಂದ ಇನ್ ಕಂಮ್ ಟ್ಯಾಸ್ಕ್ ರಿರ್ಟನ್ ಅಥವಾ ಜಿ.ಎಸ್.ಟಿ ಪಾವತಿಸುತ್ತಾರೆ ಎಂಬ ಕಾರಣದಿಂದ ಅವರ ಅರ್ಜಿಗಳನ್ನು ಪುರಸ್ಕರಿಸಿರುವುದಿಲ್ಲ ಎಂಬ ದೂರುಗಳು ಬರುತ್ತಿವೆ ಈ ಬಗ್ಗೆ ಪರಿಶೀಲಿಸಿ ಅರ್ಹರಿದ್ದಲ್ಲಿ ಅವರಿಗೂ ಗ್ಯಾರಂಟಿ ಯೋಜನೆ ತಲುಪಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಯುವನಿಧಿ ಗ್ಯಾರಂಟಿ ಯೋಜನೆಯಡಿ ಸ್ಟೈಫ್ಯಾಂಡ್ ಪಡೆಯುತ್ತಿರುವ ಫಲಾನುಭವಿಗಳು 2 ವರ್ಷಗಳ ನಂತರ ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲವಾಗುವಂತೆ ಅವರಿಗೆ ಕೌಶಲ್ಯಾ ಅಭಿವೃದ್ಧಿ ತರಬೇತಿಗಳನ್ನು ನೀಡಬೇಕೆಂದು ಅಧಿಕಾರಿಗಳಿಂದ ಸೂಚನೆ ನೀಡಿದರು.

ಗೃಹಲಕ್ಷ್ಮೀ ಯೋಜನೆಯಡಿ ರಾಜ್ಯದಲ್ಲಿ 1.22 ಕೋಟಿ ಫಲಾನುಭವಿಗಳ ಖಾತೆಗೆ 35,180 ಕೋಟಿ ರೂ. ಹಾಗೂ ಜಿಲ್ಲೆಯಲ್ಲಿ 2,24,348 ಫಲಾನುಭವಿಗಳ ಖಾತೆಗೆ 648.52 ಕೋಟಿ ರೂ. ಗಳನ್ನು ಡಿ.ಬಿಟ.ಇ ಮೂಲಕ ವರ್ಗವಣೆ ಮಾಡಲಾಗಿದೆ. ಗೃಹಜ್ಯೋತಿ ಯೋಜನೆಯಡಿ ರಾಜ್ಯದಲ್ಲಿ 1.63 ಕೋಟಿ ಫಲಾನುಭವಿಗಳಿಗೆ 12,589 ಕೋಟಿ ರೂ. ಹಾಗೂ ಜಿಲ್ಲೆಯಲ್ಲಿ 3,39,305 ಫಲಾನುಭವಿಗಳಿಗೆ 342.16 ಕೋಟಿ ರೂ. ಗಳ ವಿದ್ಯುತ್ ವೆಚ್ಚವನ್ನು ಭರಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ ರಾಜ್ಯದಲ್ಲಿ 63.68 ಕೋಟಿ ಫಲಾನುಭವಿಗಳಿಗೆ ಖಾತೆಗೆ 10,452 ಕೋಟಿ ರೂ. ಹಾಗೂ ಜಿಲ್ಲೆಯಲ್ಲಿ 1.21 ಕೋಟಿ ಫಲಾನುಭವಿಗಳಿಗೆ 202.49 ಕೋಟಿ ರೂ. ಅನ್ನು ಡಿ.ಬಿ.ಟಿ ಮೂಲಕ ವರ್ಗಾಯಿಸಲಾಗಿದೆ. ಶಕ್ತಿ ಯೋಜನೆಯಡಿ ರಾಜ್ಯದಲ್ಲಿ 397 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿ, 9,665 ಕೋಟಿ ರೂ. ಹಾಗೂ ಜಿಲ್ಲೆಯಲ್ಲಿ 2.16 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, 80.45 ಕೋಟಿ ರೂ. ಭರಿಸಲಾಗಿದೆ. ಯುವನಿಧಿ ಯೋಜನೆಯಡಿ ರಾಜ್ಯದಲ್ಲಿ 2.51 ಲಕ್ಷ ಫಲಾನುಭವಿಗಳು ನೋಂದಾಯಿಸಿಕೊಂಡು 270.17 ಕೋಟಿ ರೂ.ಗಳನ್ನು ಅಭ್ಯರ್ಥಿಗಳ ಖಾತೆಗೆ ಪಾವತಿಸಲಾಗಿದೆ. ಜಿಲ್ಲೆಯಲ್ಲಿ 3,494 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, ಇದಕ್ಕಾಗಿ 3.75 ಕೋಟಿ ವೆಚ್ಚ ಮಾಡಲಾಗಿದೆ ಎಂದರು. 

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಮಾತನಾಡಿ, ಜಿಲ್ಲೆಯ ಪಂಚ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಅಂಕಿ-ಅಂಶಗಳನ್ನು ಗಮನಿಸಿದಾಗ ಜಿಲ್ಲೆಯಲ್ಲಿ ಅಧಿಕ ಫಲಾನುಭವಿಗಳಿರುವುದು ಕಂಡುಬಂದಿದೆ. ಪ್ರತಿಶತಃ ನೂರರಷ್ಟು ಅರ್ಹ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳು ತಲುಪಬೇಕು. ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಮನೆ ಮನೆ ಭೇಟಿ ನೀಡಿ, ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರತಿಯೊಬ್ಬರಿಗೂ ತಲುಪಿದೆ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಅಶೋಕ್ ಕೊಡವೂರು ಮಾತನಾಡಿ, ಸರಕಾರ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳನ್ನು ರಚಿಸಿ, ಜವಾಬ್ದಾರಿ ನಮ್ಮ ಮೇಲೆ ಕೊಟ್ಟಿದೆ. ಪಂಚ ಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ ದೊರೆಯುವಂತೆ ನೋಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಕೆಲವು ಸಣ್ಣ-ಪುಟ್ಟ ಗ್ಯಾರಂಟಿ ಯೋಜನೆಗಳ ನ್ಯೂನ್ಯತೆಗಳಿಂದ ಫಲಾನುಭವಿಗಳು ವಂಚಿತರಾಗಿದ್ದಾರೆ. ಇವರಿಗೆ ನ್ಯಾಯ ಕೊಡಿಸುವ ಕೆಲಸವಾಗಬೇಕಿದೆ ಎಂದರು. 

ಸಭೆಯಲ್ಲಿ ಉಪಾಧ್ಯಕ್ಷರುಗಳಾದ ಪ್ರಶಾಂತ್ ಜತ್ತನ್, ಗೀತಾ ವಾಗ್ಳೆ ಹಾಗೂ ಸಂತೋಷ್ ಕುಲಾಲ್, ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಸತೀಶ್ ಜಪ್ತಿ, ವಿವಿಧ ತಾಲೂಕುಗಳ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕುಗಳ ತಹಶೀಲ್ದಾರರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.