ಉಡುಪಿ, ಜುಲೈ 21: ಭಾರತೀಯ ಹವಾಮಾನ ಇಲಾಖೆ/ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಇವರ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗದಲ್ಲಿ ಇಂದಿನಿಂದ (ಜು.21) ಜುಲೈ 27 ರ ವರೆಗೆ ಜಿಲ್ಲೆಯಲ್ಲಿ ಹೆಚ್ಚಿನ ಗಾಳಿ (ಸುಮಾರು 50 ಕೆ.ಎಂ.ಪಿ.ಹೆಚ್) ಯಿಂದ ಕೂಡಿದ ಮಳೆಯಾಗಲಿದ್ದು, ಅರಬ್ಬಿ ಸಮುದ್ರದಲ್ಲಿ ಹೆಚ್ಚಿನ ಗಾಳಿ ಬೀಸುವ ಸಾಧ್ಯತೆಯಿದ್ದು, ಸಮುದ್ರದ ಅಲೆಗಳ ಎತ್ತರವು ಹೆಚ್ಚಾಗಿರುತ್ತದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಈ ಹಿನ್ನಲೆ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ಈ ಕೆಳಗಿನಂತೆ ನೀಡಿರುತ್ತದೆ.
ಸಾರ್ವಜನಿಕರು, ಪ್ರವಾಸಿಗರು ಹಾಗೂ ಮೀನುಗಾರರು ನದಿ/ನೀರಿರುವ ಪ್ರದೇಶ ಮತ್ತು ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸಬೇಕು ಮತ್ತು ಸಾರ್ವಜನಿಕರು, ಮಕ್ಕಳು ಹಾಗೂ ಕಾರ್ಮಿಕರು ಮಳೆ ಗಾಳಿ, ಸಿಡಿಲು ಬೀಳುವ ಸಂದರ್ಭದಲ್ಲಿ ಹೊರಗೆ ತಿರುಗಾಡದೆ, ಸೂಕ್ತ ಕಟ್ಟಡದಲ್ಲಿ ಆಶ್ರಯ ಪಡೆಯಬೇಕು. ಕೃಷಿಕರು ಮಳೆ/ಸಿಡಿಲಿನಂತಹ ಸಂದರ್ಭದಲ್ಲಿ ಹೊರಗಿನ ಕೃಷಿ ಚಟುವಟಿಕೆಯಿಂದ ದೂರವಿರಬೇಕು.
ಈ ಸಂದರ್ಭದಲ್ಲಿ ಮಕ್ಕಳು/ಸಾರ್ವಜನಿಕರು ಅಪಾಯಕಾರಿ ಮರ/ವಿದ್ಯುತ್ ಕಂಬದ ಹತ್ತಿರ ಸುಳಿಯಬಾರದು ಮತ್ತು ತುಂಡಾದ ವಿದ್ಯುತ್ ತಂತಿಗಳಿಂದ ದೂರವಿರಬೇಕು. ದುರ್ಬಲವಾದ / ಹಳೆಯ ಕಟ್ಟಡ ಅಥವಾ ಮರಗಳ ಹತ್ತಿರ / ಮರಗಳ ಕೆಳಗೆ ನಿಲ್ಲಬಾರದು. ಕಟ್ಟಡಗಳ ಮೇಲೆ ಆಪಾಯಕಾರಿ ಗೆಲ್ಲು/ರೆಂಬೆ-ಕೊಂಬೆಗಳಿದ್ದಲ್ಲಿ ಮೊದಲೇ ಕತ್ತರಿಸಿ, ವಾಸಿಸುವ ಕಟ್ಟಡಗಳನ್ನು ರಕ್ಷಿಸಿಕೊಳ್ಳಬೇಕು.
ಹೆಚ್ಚು ಮಳೆಯಾಗುತ್ತಿರುವುದರಿಂದ ಕೆಲವು ಪ್ರದೇಶಗಳಲ್ಲಿ ಭೂಕುಸಿತವಾಗುವ ಸಂಭವ ಹೆಚ್ಚಾಗಿರುತ್ತದೆ. ಇಂತಹ ಪ್ರದೇಶದಲ್ಲಿ ವಾಸಿಸುವ ಸಾರ್ವಜನಿಕರು ತಹಶೀಲ್ದಾರರ ಕಛೇರಿ ಅಥವಾ ಗ್ರಾಮ ಪಂಚಾಯಿತಿ ಸಿಬ್ಬಂಧಿಗಳನ್ನು ಸಂಪರ್ಕಿಸಿ ಹತ್ತಿರದ ಕಾಳಜಿ ಕೇಂದ್ರದಲ್ಲಿ ಸಾಕಷ್ಟು ಮುಂಚಿತವಾಗಿಯೆ ಆಶ್ರಯ ಪಡೆಯಬಹುದಾಗಿದೆ.
ಮುಂದಿನ 7 ದಿನಗಳಲ್ಲಿ, ಹೆಚ್ಚು ಗಾಳಿಯೊಂದಿಗೆ ಮಳೆ ಬರುವುದರಿಂದ ಸಾರ್ವಜನಿಕರು ಹೊರಗೆ ತಿರುಗಾಡದೆ ಸೂಕ್ತ ಕಟ್ಟಡದಲ್ಲಿ ವಾಸಿಸಬೇಕು. ದುರ್ಬಲ ಕಟ್ಟಡದಲ್ಲಿ ವಾಸವಿದ್ದಲ್ಲಿ ಅಥವಾ ಅಗತ್ಯವಿದ್ದಲ್ಲಿ ಮುಂಜಾಗೃತ ಕ್ರಮವಾಗಿ ಹತ್ತಿರದ ಕಾಳಜಿ ಕೇಂದ್ರದಲ್ಲಿ ಉಳಿಯಬಹುದು.
ಹೆಚ್ಚಿನ ಮಾಹಿತಿಗಾಗಿ ತುರ್ತು ಸೇವೆಗೆ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂ ಶುಲ್ಕ ರಹಿತ 1077 ಹಾಗೂ ದೂರವಾಣಿ ಸಂಖ್ಯೆ: 0820-2574802, ಉಡುಪಿ ನಗರಸಭೆಯ ಸಹಾಯವಾಣಿ ಸಂಖ್ಯೆ: 0820-2593366 ಹಾಗೂ 0820-2520306 ಅಥವಾ ತಾಲೂಕು ತಹಶೀಲ್ದಾರರ ಕಛೇರಿಗಳಾದ ಉಡುಪಿ ದೂ.ಸಂಖ್ಯೆ: 0820-2520417, ಕುಂದಾಪುರ ದೂ.ಸಂಖ್ಯೆ: 08254-230357, ಕಾಪು ದೂ.ಸಂಖ್ಯೆ: 0820-2551444, ಬ್ರಹ್ಮಾವರ ದೂ.ಸಂಖ್ಯೆ: 0820-2560494, ಬೈಂದೂರು ದೂ.ಸಂಖ್ಯೆ: 08254-251657, ಕಾರ್ಕಳ ದೂ.ಸಂಖ್ಯೆ: 08258-230201 ಹಾಗೂ ಹೆಬ್ರಿ ದೂ.ಸಂಖ್ಯೆ: 08253-250201 ಅನ್ನು ಸಂಪರ್ಕಿಸಬಹುದಾಗಿದೆ.
ಜಿಲ್ಲಾ/ತಾಲೂಕು ಮಟ್ಟದ ಅಧಿಕಾರಿಗಳು, ನಿಯೋಜನೆಗೊಂಡ ನೋಡಲ್ ಅಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಯ ವಿಪತ್ತು ನಿರ್ವಹಣಾ ಸಮಿತಿಯ ಸದಸ್ಯರು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು ವಿಪತ್ತನ್ನು ನಿಭಾಯಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.