ಉಡುಪಿ:  ಜಿಲ್ಲೆಯಲ್ಲಿನ ಪಶುಗಳ ಆರೋಗ್ಯ ಸುಧಾರಣೆಗೆ ನೇಮಕಗೊಂಡಿರುವ ಮೈತ್ರಿ ಕಾರ್ಯಕರ್ತರು ಉತ್ತಮವಾಗಿ ಸೇವೆ ನೀಡಬೇಕೆಂದು ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆಯ ಸಚಿವ ಕೆ.ವೆಂಕಟೇಶ್ ಕರೆ ನೀಡಿದರು. 

ಅವರು  ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್‍ನ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಮೈತ್ರಿ ಕಾರ್ಯಕರ್ತರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 

ಸರಕಾರ ಪಶುಗಳು ಉತ್ತಮ ಆರೋಗ್ಯವನ್ನು ಹೊಂದಬೇಕು ಎಂಬ ಉದ್ದೇಶದಿಂದ ಅವುಗಳ ಆರೋಗ್ಯ ಸುಧಾರಣೆಗೆ ಪಶು ವೈದ್ಯರು, ಪಶು ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಮೈತ್ರಿ ಕಾರ್ಯಕರ್ತರನ್ನು ನೇಮಕ ಮಾಡಿದೆ. ಪಶುಗಳಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಲು ಪ್ರತಿಯೊಬ್ಬರೂ ಮುಂದಾಗುವುದರೊಂದಿಗೆ ರೈತ ಸಮುದಾಯದವರೂ ಒಳಗೊಂಡಂತೆ ಜಾನುವಾರುಗಳಿಗೂ ಇದರ ಲಾಭ ದೊರಕಿಸಬೇಕೆಂದು ಕರೆ ನೀಡಿದರು.

ಮೈತ್ರಿ ಕಾರ್ಯಕರ್ತರಿಗೆ ಈಗಾಗಲೇ ಮೂರು ತಿಂಗಳ ತರಬೇತಿ ನೀಡಲಾಗಿದೆ. ಇವರುಗಳು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ತಮ್ಮ ಪಶು ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ, ಜಾನುವಾರುಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಕಲೆಹಾಕಿ, ಅವುಗಳ ಆರೋಗ್ಯದಲ್ಲಿ ಸಮಸ್ಯೆಗಳಿದ್ದಲ್ಲಿ ಅಗತ್ಯ ಸಲಹೆ ಸೂಚನೆ ಹಾಗೂ ಚಿಕಿತ್ಸೆಯನ್ನು ನೀಡಬೇಕು ಎಂದರು.

ಮೈತ್ರಿ ಕಾರ್ಯಕರ್ತರಿಗೆ ಪ್ರಸ್ತುತ 3700 ರೂ. ಗೌರವಧನವನ್ನು ನೀಡಲಾಗುತ್ತಿದೆ. ಇದರ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಕೇಳಿ ಬರುತ್ತಿದೆ. ಈ ಬಗ್ಗೆ ಕೇಂದ್ರದ ಹೈನುಗಾರಿಕೆ ಸಚಿವರ ಗಮನಕ್ಕೆ ತರಲಾಗಿದೆ. ಇದರ ಜೊತೆಗೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಇದರ ಹೆಚ್ಚಳ ಮಾಡುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಪಶುಪಾಲನಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಹಂತಹಂತವಾಗಿ ಹೊರಗುತ್ತಿಗೆ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳುವ ಮೂಲಕ ಖಾಲಿ ಹುದ್ದೆಗಳನ್ನು ತುಂಬುವ ಕೆಲಸವಾಗುತ್ತಿದೆ. ಗ್ರಾಮಾಂತರ ಪ್ರದೇಶದ ಜನರ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಇಲಾಖೆಗೆ ಸಂಬಂಧಿಸಿದಂತೆ ಇರುವ ಕುಂದುಕೊರತೆಗಳನ್ನು ನಿವಾರಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡಲಾಗುವುದು ಎಂದರು. 

 ಶಾಸಕ ಯಶ್‍ಪಾಲ್ ಎ ಸುವರ್ಣ ಮಾತನಾಡಿ, ಗೋಪಾಲಕರ ನಾಡಾಗಿರುವ ಉಡುಪಿ ಜಿಲ್ಲೆಯಲ್ಲಿ ಹೈನುಗಾರಿಕೆ ಅಭಿವೃದ್ಧಿಗೆ ಸರಕಾರ ಬಹಳಷ್ಟು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಹೈನುಗಾರಿಕೆಗೆ ಇನ್ನೂ ಹೆಚ್ಚಿನ ಶಕ್ತಿ ಹಾಗೂ ಪ್ರೋತ್ಸಾಹ ತುಂಬುವ ಕೆಲಸವಾಗಬೇಕು ಎಂದ ಅವರು, ಜಿಲ್ಲೆಯಲ್ಲಿ ಖಾಲಿ ಇರುವ ಪಶು ವೈದ್ಯರ ಹಾಗೂ ಸಿಬ್ಬಂದಿಗಳ ಖಾಲಿ ಹುದ್ದೆಗಳನು ಆದಷ್ಟು ಶೀಘ್ರವಾಗಿ ಭರ್ತಿ ಮಾಡುವಂತೆ ಸಚಿವರ ಗಮನಕ್ಕೆ ತಂದರು. 

ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಮೂಕ ಪ್ರಾಣಿಗಳ ಆರೋಗ್ಯ ಸಂರಕ್ಷಣೆ ಮಾಡುವಂತಹ ಪುಣ್ಯದ ಕೆಲಸವನ್ನು ಮೈತ್ರಿ ಕಾರ್ಯಕರ್ತರುಗಳು ಮಾಡುತ್ತಿದ್ದು, ತರಬೇತಿಯಲ್ಲಿ ಪಡೆದ ಅನುಭವವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದರು. 

 ಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮೈಸೂರು ಜಂಟಿ ನಿರ್ದೇಶಕ ಡಾ. ಶಿವಣ್ಣ  ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ 20 ನೇ ಜಾನುವಾರು ಗಣತಿ ಅನ್ವಯ 2.57 ಲಕ್ಷ ದನ ಹಾಗೂ ಎಣ್ಣೆ, 3107 ಆಡು-ಕುರಿ, 3289 ಹಂದಿಗಳು, 1.18 ಲಕ್ಷ ನಾಯಿಗಳು ಮತ್ತು 11.43 ಲಕ್ಷ ಕೋಳಿಗಳೂ ಇದ್ದು, 1 ಪಾಲಿಕ್ಲಿನಿಕ್, 12 ಪಶು ಆಸ್ಪತ್ರೆಗಳು, 38 ಪಶು ಚಿಕಿತ್ಸಾಲಯಗಳು, 36 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು ಹಾಗೂ 8 ಪಶು ಸಂಜೀವಿನಿ ಆಂಬುಲೆನ್ಸ್ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದ ಅವರು, ಪ್ರಥಮ ಬಾರಿಗೆ ಜಿಲ್ಲೆಯಲ್ಲಿ 26 ಮೈತ್ರಿ ಕಾರ್ಯಕರ್ತರಿಗೆ ತರಬೇತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು. 

 ಇದೇ ಸಂದರ್ಭದಲ್ಲಿ ಜಿಲ್ಲೆಯ ಪಶುಪಾಲನಾ ಇಲಾಖೆಯ ಕೆಲವು ಕಾರ್ಯಕ್ರಮಗಳ ಬಗ್ಗೆ ಕಿರುಚಿತ್ರಣ ಪ್ರದರ್ಶಿಸಲಾಯಿತು. ಮೈತ್ರಿ ಕಾರ್ಯಕರ್ತರುಗಳಿಗೆ ಮೈತ್ರಿ ಕಿಟ್ ಅನ್ನು ಸಾಂಕೇತಿಕವಾಗಿ ವಿತರಿಸಲಾಯಿತು. ಪ್ರಾಣಿಗಳ ಜನನ ನಿಯಂತ್ರಣ ಹಾಗೂ ಹುಚ್ಚುರೋಗ ನಿರೋಧಕ ಲಸಿಕೆ ಮಾಹಿತಿ ಒಳಗೊಂಡ ಕರಪತ್ರವನ್ನು ಸಚಿವರು ಬಿಡುಗಡೆಗೊಳಿಸಿದರು. 

ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶ್ರೀನಿವಾಸ ರಾವ್, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ನಿರ್ದೇಶಕ ಡಾ. ಮಂಜುನಾಥ್ ಎಸ್ ಪಾಳೇಗಾರ್, ಪಶು ವೈದ್ಯಕೀಯ ಪರಿಷತ್ತಿನ ನಿರ್ದೇಶಕ ಡಾ.ಸುಶಾಂತ್ ರೈ, ಮಂಗಳೂರು ಉಪನಿರ್ದೇಶಕ ಡಾ. ಅರುಣ್ ಕುಮಾರ್ ಶೆಟ್ಟಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ಇಲಾಖೆಯ ಸಿಬ್ಬಂದಿಗಳು, ಮೈತ್ರಿ ಕಾರ್ಯಕರ್ತರು ಹಾಗೂ ಮತ್ತಿತರು ಉಪಸ್ಥಿತರಿದ್ದರು. 

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ (ಆಡಳಿತ) ಡಾ. ಎಂ.ಸಿ. ರೆಡ್ಡಪ್ಪ ಸ್ವಾಗತಿಸಿ, ಮುಖ್ಯ ಪಶು ವೈದ್ಯಾಧಿಕಾರಿ ಡಾ. ಉದಯ್ ಕುಮಾರ್ ಶೆಟ್ಟಿ ನಿರೂಪಿಸಿ, ವಂದಿಸಿದರು.