ಉಡುಪಿ, ಜ 20: ಜಿಲ್ಲೆಯಲ್ಲಿ ಐ.ಆನ್ ಡಿಜಿಟಲ್ ಝೋನ್, ಐ.ಡಿ.ಝಡ್ ಮಿಲ್ಕ್ ಡೈರಿ ರೋಡ್, ಡಾ.ಟಿ.ಎಂ.ಎ ಪೈ ಪಾಲಿಟೆಕ್ನಿಕ್, ಎಂ.ಐ.ಟಿ ಕ್ಯಾಂಪಸ್, ಈಶ್ವರ ನಗರ, ಮಣಿಪಾಲ ಮತ್ತು ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ ಇಲ್ಲಿ ಜನವರಿ 22 ರಿಂದ 24 ರ ವರೆಗೆ ಮತ್ತು 28 ರಿಂದ 30 ರ ವರೆಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ವತಿಯಿಂದ ಜಾಂಯ್ಟ್ ಎನ್ಟ್ರೆನ್ಸ್ ಎಕ್ಸಾಮಿನೇಷನ್ ನಡೆಯಲಿರುವ ಹಿನ್ನೆಲೆ, ಪರೀಕ್ಷೆಗಳು ಸುಸೂತ್ರವಾಗಿ ಮತ್ತು ದೋಷರಹಿತವಾಗಿ ನಡೆಸಲು ಹಾಗೂ ನಡೆಯಬಹುದಾದ ಎಲ್ಲಾ ಅವ್ಯವಹಾರಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿಗಧಿಪಡಿಸಿದ ಪರೀಕ್ಷಾ ಕೇಂದ್ರಗಳ ಸುತ್ತಲೂ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಹಾಗೂ ಸುತ್ತಲೂ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ, 1973 ರ ಕ್ರಿಮಿನಲ್ ಪ್ರೊಸೀಜರ್ ಕೋಡ್‍ನ ಸೆಕ್ಷನ್ 144(1) ರಂತೆ ನಿಷೇಧಾಜ್ಞೆ ಜಾರಿಗೊಳಿಸಿ, ಈ ಕೆಳಕಂಡಂತೆ ಷರತ್ತು ವಿಧಿಸಿ, ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಆದೇಶಿಸಿರುತ್ತಾರೆ.
ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ರಿಂದ 300 ಮೀಟರ್‍ಗಳ ವ್ಯಾಪ್ತಿಯಲ್ಲಿರುವ ಸೈಬರ್ ಕೆಫೆ, ಫೋಟೋಕಾಪಿ, ಪ್ರಿಂಟಿಂಗ್, ಜೆರಾಕ್ಸ್ ಅಂಗಡಿಗಳನ್ನು ಮುಚ್ಚಬೇಕು. ಯಾವುದೇ ಸಾರ್ವಜನಿಕರು 5 ಜನ ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ನಿಷೇಧಿತ ಪ್ರದೇಶವೆಂದು ಜಾರಿಗೊಳಿಸಿದ ಪರೀಕ್ಷಾ ಕೇಂದ್ರದ ವ್ಯಾಪ್ತಿಯಲ್ಲಿ ಗುಂಪು ಸೇರುವುದು ಅಥವಾ ತಿರುಗುವುದು, ಅನುಮಾನಾಸ್ಪದ ವ್ಯಕ್ತಿಗಳು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವುದು ಹಾಗೂ ಪರೀಕ್ಷಾ ಕೇಂದ್ರದ ಸುತ್ತ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿರುತ್ತದೆ.