ಉಡುಪಿ: ಪ್ರತಿಯೊಂದು ಸಮುದಾಯವನ್ನು ಗೌರವಿಸಿ, ಆದರ್ಶ ವ್ಯಕ್ತಿಗಳ ತತ್ವಗಳನ್ನು ಮುಂದಿನ ಪೀಳಿಗೆಗೆ ಗೊತ್ತುಪಡಿಸುವ ನಿಟ್ಟಿನಲ್ಲಿ ಸರ್ಕಾರ ಜಯಂತಿಗಳನ್ನು ಆಚರಿಸುತ್ತಾ ಬಂದಿದೆ. ಮಹನೀಯರುಗಳ ತತ್ವ, ಸಂದೇಶಗಳು ಸಾರ್ವಕಾಲಿಕವಾಗಿದ್ದು, ಅದರ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಶಾಸಕ ಯಶ್‍ಪಾಲ್ ಎ ಸುವರ್ಣ ಹೇಳಿದರು.
ಅವರು ನಗರದ ಅಂಬಲಪಾಡಿಯ ಜಿಲ್ಲಾ ಸವಿತಾ ಸಮಾಜ ಸಮುದಾಯದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಸವಿತಾ ಸಮಾಜ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಸವಿತಾ ಮಹರ್ಷಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು.
ಸರಕಾರವು ಸಮಾಜದ ಸುಧಾರಣೆಗಾಗಿ ಹಾಗೂ ಏಳಿಗೆಗಾಗಿ ಶ್ರಮಿಸಿದಂತಹ ಮಹನೀಯರ ಜಯಂತಿಗಳನ್ನು ಆಚರಿಸುವಂತಹ ಪುಣ್ಯ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಸಮುದಾಯದ ಜನರನ್ನು ಸಂಘಟಿಸುವ ಮೂಲಕ ಜಯಂತಿಗಳನ್ನು ಆಚರಿಸಿ, ಸಮುದಾಯಕ್ಕೆ ನ್ಯಾಯ ಒದಗಿಸುವ ಕೆಲಸವಾಗುತ್ತಿದೆ ಎಂದರು.
ಸವಿತಾ ಮಹರ್ಷಿಗಳು ಸಮಾಜದ ಶ್ರೇಷ್ಠತೆಗೆ ಅಪಾರ ಕೊಡುಗೆ ನೀಡಿದ ಶ್ರೇಷ್ಠ ವ್ಯಕ್ತಿ. ಶಿವನ ದಿವ್ಯ ದೃಷ್ಠಿಯಲ್ಲಿ ಜನ್ಮ ತಾಳಿದ ಇವರು ಒಬ್ಬ ಪವಾಡ ಪುರುಷರಾಗಿದ್ದರು ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ ಎಂದ ಅವರು, ಸವಿತಾ ಸಮಾಜದ ಅಭಿವೃದ್ಧಿಗೆ ಸರಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಇವುಗಳನ್ನು ಸಮರ್ಪಕವಾಗಿ ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಿದಾಗ ಸಮುದಾಯದ ಜನರು ಮುಖ್ಯ ವಾಹಿನಿಗೆ ಬರಲು ಸಹಕಾರಿಯಾಗುತ್ತದೆ ಎಂದರು.
ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿ, ಸಮುದಾಯಗಳ ಬೆಳವಣಿಗೆಗೆ ಕಾರಣೀಕರ್ತರಾದ ದಾರ್ಶನಿಕರ ಜಯಂತಿಗಳನ್ನು ಜನಸಾಮಾನ್ಯರಿಗೆ ಹಾಗೂ ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಆಚರಿಸುತ್ತಾ ಬರುತ್ತಿರುವುದು ಸಂತಸದ ವಿಷಯ ಎಂದರು.
ನವೀನ್ ಚಂದ್ರ ಭಂಡಾರಿ ಮಾತನಾಡಿ, ಸವಿತಾ ಸಮುದಾಯದ ಜನರು ಒಗ್ಗಟ್ಟಾಗಿ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬಂದು ಇತರರಿಗೆ ಆದರ್ಶಪ್ರಾಯರಾಗಬೇಕು ಎಂದರು.
ಜಿಲ್ಲಾ ಸವಿತಾ ಸಮಾಜದ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲ್ ಉಪನ್ಯಾಸ ನೀಡಿ ಮಾತನಾಡಿ,. ಸವಿತಾ ಮಹರ್ಷಿ ಕ್ಷೌರಿಕ ಸಮಾಜದ ಮೂಲ ಪುರುಷ. ಸವಿತಾ ಮಹರ್ಷಿಗಳು ದೇವಾನುದೇವತೆಗಳಿಗೆ ಕ್ವೌರ ಮಾಡುತ್ತಿದ್ದರು ಎಂಬ ನಂಬಿಕೆ ಇದೆ. ಶಿವನ ದಿವ್ಯ ದೃಷ್ಠಿಯಲ್ಲಿ ಜನ್ಮ ತಾಳಿದ ಸವಿತಾ ಮಹರ್ಷಿ ಬ್ರಹ್ಮಜ್ಞಾನ ಹೊಂದಿದ್ದ ಕಾರಣ ಚತುರ್ವೇದಗಳಲ್ಲಿ ಒಂದಾದ ಸಾಮವೇದವನ್ನು ಬರೆದಿದ್ದಾರೆ ಎಂಬ ಪ್ರತೀತಿ ಇದೆ ಎಂದ ಅವರು, ಸವಿತಾ ಸಮಾಜ ಎಲ್ಲಾ ವರ್ಗದ ಜನರಿಗೂ ತಾರತಮ್ಯವಿಲ್ಲದೇ ಸೇವೆ ನೀಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಡುಪಿ ತಾಲೂಕು ತಹಶೀಲ್ದಾರ್ ಗುರುರಾಜ್, ಜಿಲ್ಲಾ ಸವಿತಾ ಸಮಾಜದ ಗೌರವ ಅಧ್ಯಕ್ಷ ಗೋವಿಂದ ಭಂಡಾರಿ ಬನ್ನಂಜೆ, ಸವಿತಾ ಸಮಾಜದ ಜಿಲ್ಲಾ ಅಧ್ಯಕ್ಷ ನಿಂಜೂರು ವಿಶ್ವನಾಥ ಭಂಡಾರಿ, ಸವಿತಾ ಸಮಾಜದ ವಿವಿಧ ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಮಂಜುನಾಥ ಪಡುಕೆರೆ ನಿರೂಪಿಸಿ, ಸವಿತಾ ಸಮಾಜ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರಾಜು ಸಿ ಭಂಡಾರಿ ವಂದಿಸಿದರು.