ಮಂಗಳೂರು: ಲೂಡ್ರ್ಸ್ ಶಾಲೆಯನ್ನು ಸ್ಥಾಪಕರು ಒಂದು ಉತ್ತಮ ಗುರಿಯನ್ನು ಹೊಂದಿ ಈ ಶಾಲೆಯನ್ನು ನಿರ್ಮಿಸಿದರು. ನಮ್ಮ ಪರಿಸರದ ವಿದ್ಯಾರ್ಥಿಗಳಿಗೆ ಅಂದಿನ ಕಾಲದಲ್ಲಿ ಸಿ.ಬಿ.ಎಸ್.ಇ ಪಠ್ಯಕ್ರಮದ ಮೌಲ್ಯಾಧಾರಿತ ಶಿಕ್ಷಣ ಸಂಸ್ಥೆಯನ್ನು ಸಮಾಜದ ವಿದ್ಯಾರ್ಥಿಗಳ ಪ್ರಗತಿಗಾಗಿ ಸ್ಥಾಪನೆ ಮಾಡಿದರು.
ಸ್ಥಾಪಕರ ದೂರದೃಷ್ಟಿ, ನಿರಂತರ ಪ್ರಯತ್ನ ಮತ್ತು ಕಠಿಣ ಪರಿಶ್ರಮದ ಮೂಲಕ ಈ ಲೂಡ್ರ್ಸ್ ವಿದ್ಯಾಲಯವು ಪ್ರಾರಂಭವಾಯಿತು. ನಮ್ಮ ಪರಿಸರದ ವಿದ್ಯಾರ್ಥಿಗಳು ಉತ್ತಮ ನಾಯಕರಾಗಿ ಸ್ಮರ್ಧಾತ್ಮಕ ಪರೀಕ್ಷೆಯ ಮೂಲಕ ದೇಶ ವಿದೇಶಗಳಲ್ಲಿ ಸಾಧನೆಯನ್ನು ಮಾಡಿ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಹೊಂದಲಿ ಎನ್ನುವುದು ಅವರ ಕನಸಾಗಿತ್ತು. ಈ ಶಾಲೆಯು ವಿವಿಧ ರಂಗಗಳಲ್ಲಿ ಬೆಳವಣಿಗೆಯನ್ನು ಹೊಂದುತ್ತಾ ಶ್ರೇಯಸ್ಸನ್ನು ಪಡೆಯುತ್ತಿದೆ. ಈ ಶೈಕ್ಷಣಿಕ ಸಂಸ್ಥೆಯು ಮುಂದೆಯೂ ಕೂಡ ಅನೇಕ ರೀತಿಯ ಪರಿವರ್ತನೆಯನ್ನು ಹೊಂದಿ ಸಮಾಜದ ಹಾಗೂ ಈ ಪ್ರದೇಶದ ವಿದ್ಯಾರ್ಥಿಗಳ ಬೆಳವಣಿಗೆಗೆ ದಾರಿದೀಪವಾಗಲಿ ಎಂದು ಧರ್ಮಗುರು ಹೆರಾಲ್ಡ್ ಡಿಸೋಜ ಶುಭ ಹಾರೈಸಿದರು.
ಅವರು ಲೂಡ್ರ್ಸ್ ಸೆಂಟ್ರಲ್ ಸ್ಕೂಲ್‍ನ ಸ್ಥಾಪಕರ ದಿನಾಚರಣೆಯ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದು, ಸ್ಥಾಪಕರ ಭಾವ ಚಿತ್ರಕ್ಕೆ ಹೂಹಾರ ಹಾಕಿ ಗೌರವವನ್ನು ಸಲ್ಲಿಸಿ ಮಾತನಾಡುತ್ತಿದ್ದರು.
ಶಾಲೆಯ ಸಂಚಾಲಕರಾದ ವಂ| ಧ| ಡಾ| ಜೆ.ಬಿ ಸಲ್ಡಾನಾ “ವ| ಧ| ಬರ್ನಾಡ್, ಎಲ್. ಡಿಸೋಜ ದೂರದೃಷ್ಟಿಯ ವ್ಯಕ್ತಿಯಾಗಿದ್ದರು. ಸಮಾಜದ ಜನರ ಪ್ರಗತಿಗಾಗಿ ಕನಸನ್ನು ಕಂಡವರು. ಇವರ ಮುಂದಾಲೋಚನೆಯ ಕೊಡುಗೆಯಾಗಿ ಬಿಜೈ ಪರಿಸರದಲ್ಲಿ ಅನೇಕ ರೀತಿಯ ಬದಲಾವಣೆಗಳನ್ನು ತಂದರು. ಶಿಕ್ಷಣದಲ್ಲಿ ಹೊಸ ಮುನ್ನುಡಿಯನ್ನು ಬರೆದು ಬಿಜೈ ಪರಿದರದಲ್ಲಿ ಸಿ.ಬಿ.ಎಸ್.ಇ ಪಠ್ಯಕ್ರಮದ ಶಾಲೆಯನ್ನು ಸ್ಥಾಪಿಸಿ, ಸಮಾಜಕ್ಕೆ ಸುಂದರ ಕಲಿಕಾ ವಾತಾವರಣವನ್ನು ನಿರ್ಮಿಸಿ, ಪರಿಸರದ ಜನ ಸಮೂಹಕ್ಕೆ ಸನ್ಮಾರ್ಗವನ್ನು ತೋರಿಸಿದರು. ಪ್ರತಿಯೊಂದು ಕಾರ್ಯದಲ್ಲೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡರು. ಈ ಪ್ರದೇಶದಲ್ಲಿ ಹೊಸತನವನ್ನು ತಂದು, ಗೌರವದಿಂದ ಬಾಳಿ ಆದರ್ಶವನ್ನು ಮೆರೆದರು. ಸ್ಥಾಪಕರ ಉತ್ತಮ ವ್ಯಕ್ತಿತ್ಯವನ್ನು, ಮೌಲ್ಯಗಳನ್ನು ಮೈಗೂಡಿಸಿಕೊಂಡು ನಾವು ಪ್ರಗತಿಯತ್ತ ಸಾಗೋಣ” ಎಂದು ಕರೆಯನ್ನು ನೀಡಿದರು.
ಲೂಡ್ರ್ಸ್ ಸೆಂಟ್ರಲ್ ಸ್ಕೂಲ್‍ನ ಪ್ರಾಂಶುಪಾಲರಾದ ವಂದನೀಯ ಜಾನ್ಸನ್ ಎಲ್ ಸಿಕ್ವೇರರವರು ವೇದಿಕೆಯಲ್ಲಿರುವ ಎಲ್ಲರನ್ನೂ ಪ್ರೀತಿಪೂರ್ವಕವಾಗಿ ಸ್ವಾಗತಿಸಿದರು.
ವೇದಿಕೆಯಲ್ಲಿ ಬಿಜೈ ಪ್ಯಾರಿಸ್ ಪ್ಯಾಸ್ಟರಲ್ ಪರಿಷದ್‍ನ ಉಪಾಧ್ಯಕ್ಷ ಅಶೋಕ್ ಪಿಂಟೋ, ವಂ|ಫಾ| ಅರುಲ್ ಜೋಸೆಫ್, ವಂ| ಫಾ| ನೋರ್ಮನ್ ಮಥಾಯಸ್, ಉಪಪ್ರಾಂಶುಪಾಲೆ ಬೆಲಿಟಾ ಮಸ್ಕರೇನ್ಹಸ್ ಮತ್ತು ಅನಿತಾ ಥೋಮಸ್ ಉಪಸ್ಥಿತರಿದ್ದರು.
ಶಿಕ್ಷಕಿ ಲಿಡಿಯಾ ಡಿ’ಸೋಜ ಶಾಲೆಯ ಸ್ಥಾಪನೆಯ ಸವಿನೆನಪುಗಳನ್ನು ವಿವರಿಸಿದರು. ವೇದಿಕೆಯಲ್ಲಿರುವ ಗಣ್ಯರು ಸ್ಥಾಪಕರ ಭಾವಚಿತ್ರಕ್ಕೆ ಹೂಹಾರ ಹಾಕಿ ಗೌರವಿಸಿದರು. ಕಿರುನೃತ್ಯ ರೂಪಕವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿ ಸ್ಥಾಪಕರ ಮೌಲ್ಯವನ್ನು ತೋರ್ಪಡಿಸಿದರು. ಶಿಕ್ಷಕಿ ಲಿಸಾ ಪೆರಿಸ್ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಡಿಲ್ಲಾ ಕುಲಾಸೊ ಕಾರ್ಯಕ್ರಮವನ್ನು ಸಂಯೋಜಿಸಿ ಧನ್ಯವಾದ ಸಮರ್ಪಣೆಗೈದರು.