ಉಡುಪಿ: ಯಕ್ಷಗಾನದಲ್ಲಿರುವ ಭಾವಾಭಿನಯ, ಮಾತುಗಾರಿಕೆ, ಬಣ್ಣ, ವೇಷಭೂಷಣ ಇತ್ಯಾದಿಗಳು ವಿದ್ಯಾರ್ಥಿಗಳಲ್ಲಿ ಸಭಾ ಕಂಪನವನ್ನು ದೂರ ಮಾಡಿ ಅವಧಾನ ಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಶಾಲಾ ದಿನಗಳಲ್ಲಿ ಯಕ್ಷಗಾನದಂತಹ ಕಲಾಶಿಕ್ಷಣವನ್ನು ಪಡೆಯುವುದು ಹೆಚ್ಚು ಸೂಕ್ತ. ಅದು ಶಿಕ್ಷಣಕ್ಕೆ ಪೂರಕ ಹೊರತು ಮಾರಕವಲ್ಲ ಎಂದು ಉಡುಪಿ ವಿಧಾನಸಭಾ ಸದಸ್ಯ ಹಾಗೂ ಯಕ್ಷಶಿಕ್ಷಣ ಟ್ರಸ್ಟ್ ನ ಅಧ್ಯಕ್ಷರೂ ಆದ ಯಶ್ ಪಾಲ್ ಸುವರ್ಣ ಅಭಿಪ್ರಾಯಪಟ್ಟರು.
ಅವರು ಉಡುಪಿ ಯಕ್ಷಗಾನ ಕಲಾರಂಗದ ಸಹಯೋಗದೊಂದಿಗೆ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ನಡೆಯಲಿರುವ 2025-26 ನೇ ಯಕ್ಷ ಶಿಕ್ಷಣ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಯಕ್ಷ ಕಲಾರಂಗದ ಸಂಚಾಲಕ ಮುರಳಿ ಕಡೆಕಾರ್ ಈ ಕಾರ್ಯಕ್ರಮ ಉಡುಪಿಯಲ್ಲಿ ಕಳೆದ 18 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ, ಇತ್ತೀಚೆಗೆ ವಿದ್ಯಾರ್ಥಿನಿಯರು ಗಂಡು ಕಲೆ ಎನಿಸಿದ ಯಕ್ಷಗಾನವನ್ನು ಕಲಿಯಲು ಹೆಚ್ಚು ಹೆಚ್ಚು ಮುಂದೆ ಬರುತ್ತಿರುವುದು ಉತ್ತಮ ಬೆಳವಣಿಗೆ. ಇದು ಹೀಗೆ ಮುಂದುವರಿಯಲಿ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ಯಕ್ಷಗಾನದ ಅಭಿಮಾನಿ ಡಾ. ಬಿ. ಗೋಪಾಲಕೃಷ್ಣ ಆಚಾರ್ಯ ಬಾಲ್ಯದಲ್ಲಿ ಯಕ್ಷಗಾನ ತನ್ನ ಮೇಲೆ ಬೀರಿದ ಪ್ರಭಾವವನ್ನು ನೆನಪಿಕೊಂಡರು. ಯಕ್ಷಶಿಕ್ಷಣ ಟ್ರಸ್ಟಿಗಳಾದ ನಾರಾಯಣ ಎಂ. ಹೆಗಡೆ, ಮೀನಾಲಕ್ಷಣಿ ಅಡ್ಯಂತಾಯ, ಎಸ್ ಡಿ ಎಂ ಸಿ ಅಧ್ಯಕ್ಷೆ ನವ್ಯ ನಾಯಕ್, ಎಸ್ ಡಿ ಎಂ ಸಿ ಗೌರವಾಧ್ಯಕ್ಷೆ ತಾರಾದೇವಿ, ಯಕ್ಷ ಗುರುಗಳಾದ ನಿರಂಜನ್ ಭಟ್ ಮತ್ತು ಆದ್ಯತಾ, ನೋಡಲ್ ಶಿಕ್ಷಕಿ ಮೀನಾಕ್ಷಿ ಉಪಸ್ಥಿತರಿದ್ದರು. ಆರಂಭದಲ್ಲಿ ಯಕ್ಷಗಾನ ವಿದ್ಯಾರ್ಥಿಗಳಿಂದ ಗಣಪತಿ ಸ್ತುತಿ ನೃತ್ಯರೂಪಕ ಮೂಡಿಬಂದಿತು. ಯಕ್ಷಶಿಕ್ಷಣ ಸನಿವಾಸ ಶಿಬಿರದಲ್ಲಿ ಭಾಗವಹಿಸಿದ್ದ ಅವನಿ ಮತ್ತು ಭೈರವಿ ತಮ್ಮ ಸವಿನೆನಪುಗಳನ್ನು ಹಂಚಿಕೊಂಡರು. ಮುಖ್ಯ ಶಿಕ್ಷಕಿ ಇಂದಿರಾ ಸ್ವಾಗತಿಸಿದರು, ಶಿಕ್ಷಕ ರಾಮಚಂದ್ರ ಭಟ್ ನಿರೂಪಿಸಿ ಮೋಹಿನಿ ಧನ್ಯವಾದಗೈದರು