ಉಡುಪಿ:  ರಾಜ್ಯ ಸರಕಾರದ ಮಹತ್ವಕಾಂಕ್ಷಿ ಯೋಜನೆಯಾದ ಯುವನಿಧಿ ಯೋಜನೆಯ ಪ್ರಸಕ್ತ ಸಾಲಿನ ನೋಂದಣಿಯು ಆರಂಭವಾಗಿದ್ದು, 2025 ನೇ ಸಾಲಿನಲ್ಲಿ ತೇರ್ಗಡೆಗೊಂಡ ಪದವಿ, ಡಿಪ್ಲೋಮಾ ಮತ್ತು ಎಲ್ಲಾ ಸ್ನಾತಕೋತರ ಅಭ್ಯರ್ಥಿಗಳು ಕರ್ನಾಟಕ ಒನ್, ಗ್ರಾಮ ಒನ್ ಸೇವಾ ಸಿಂಧೂ ಪೋರ್ಟಲ್‍ನಲ್ಲಿ ಆನ್‍ಲೈನ್ ಮೂಲಕ ನೋಂದಣಿ ಹಾಗೂ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ 

2025-26 ನೇ ಸಾಲಿನಲ್ಲಿ ಪದವಿ ಸ್ನಾತಕೋತ್ತರ ಪದವಿ (ವೃತ್ತಿಪರ ಸೇರಿದಂತೆ) ಹಾಗೂ ಯಾವುದೇ ಡಿಪ್ಲೋಮಾ ಪಡೆದು ನಿರುದ್ಯೋಗಿಯಾಗಿರುವ ಅರ್ಹರಿಗೆ ಯುವನಿಧಿ ಯೋಜನೆಯ ಮೂಲಕ ಪ್ರತಿ ತಿಂಗಳು ರೂ 3,000 (ಪದವೀಧರ ನಿರುದ್ಯೋಗಿಗಳಿಗೆ) ಹಾಗೂ 1,500 (ಡಿಪ್ಲೋಮಾ ಪಡೆದ ನಿರುದ್ಯೋಗಿಗಳಿಗೆ) ನೇರ ನಗದು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. 

ಯುವನಿಧಿ ಯೋಜನೆಯ ಫಲಾನುಭವಿಗಳು ತ್ರೈಮಾಸಿಕ ಮೂರು ತಿಂಗಳಿಗೊಮ್ಮೆ ಅಂದರೆ ಮೇ, ಅಗಸ್ಟ್, ನವಂಬರ್ ಹಾಗೂ ಫೆಬ್ರವರಿಯ 25 ನೇ ತಾರೀಕಿನ ಒಳಗಾಗಿ ಆನ್‍ಲೈನ್‍ನಲ್ಲಿ ಲಾಗಿನ್ ಆಗಿ ಸ್ವಯಂ ಘೋಷಣೆ ನೀಡಬೇಕು. ಸ್ವಯಂ ಘೋಷಣೆ ನೀಡದ್ದಿದಲ್ಲಿ ಆ ತಿಂಗಳ ನೇರ ನಗದು ಖಾತೆಗೆ ಜಮೆಯಾಗುವುದಿಲ್ಲ. ಆದ್ದರಿಂದ ಫಲಾನುಭವಿಗಳು ತಪ್ಪದೇ ಸೇವಾ ಸಿಂಧೂ ಪೋರ್ಟಲ್‍ನಲ್ಲಿ ಆನ್‍ಲೈನ್ ಮೂಲಕ ಸ್ವಯಂ ಘೋಷಣೆ ನೀಡಬೇಕು. 

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ರಜತಾದ್ರಿ, ಮಣಿಪಾಲ ದೂ.ಸಂಖ್ಯೆ: 0820-2574869 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.