ಉಜಿರೆ:  ಕೃತಕಬುದ್ಧಿ ಮತ್ತೆ ಹಾಗೂ ಆಧುನಿಕ ವೈಜ್ಞಾನಿಕ ಆವಿಷ್ಕಾರಗಳಿಂದಾಗಿ ಶಿಕ್ಷಣ, ಆರೋಗ್ಯ, ಉದ್ಯೋಗ, ಕೈಗಾರಿಕೆ ಹಾಗೂ ಪರಿಸರದ ಕ್ಷೇತ್ರಗಳಲ್ಲಿ ವೈವಿಧ್ಯಮಯ ಉದ್ಯೋಗಾವಕಶಗಳು ಸಿಗುತ್ತವೆ ಎಂದು ಬೆಂಗಳೂರಿನ ಅಲ್ಲೆöನ್ಸ್ ವಿಶ್ವವಿದ್ಯಾಲಯದ ಗಣಕವಿಜ್ಞಾನ ವಿಭಾಗದ ಉಪನ್ಯಾಸಕ ಡಾ. ನಾಗರಾಜ, ಎಸ್. ಹೇಳಿದರು.

ಅವರು ಸೋಮವಾರ ಉಜಿರೆಯಲ್ಲಿ ಗಣಕವಿಜ್ಞಾನ ವಿಭಾಗದ ಆಶ್ರಯದಲ್ಲಿ ರೋಟರಿ ವೃತ್ತ್ತಿಮಾರ್ಗದರ್ಶನ ಮತ್ತು ಉದ್ಯೋಗ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು.

ಆಧುನಿಕ ಆವಿಷ್ಕಾರಗಳು ಮತ್ತು ಕೃತಕಬುದ್ಧಿಮತ್ತೆ ನಮ್ಮ ಜೀವನಶೈಲಿಯ ಗುಣಮಟ್ಟ ಸುಧಾರಿಸುವಲ್ಲಿ ಪ್ರಮುಖಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳು ಇವುಗಳ ಸದುಪಯೋಗ ಪಡೆದು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಪ್ರೊ. ಪಿ. ವಿಶ್ವನಾಥ್ ಮಾತನಾಡಿ, ಕೃತಕ ಬುದ್ಧಿಮತ್ತೆ ಹಾಗೂ ವೈಜ್ಞಾನಿಕ ಆವಿಷ್ಕಾರಗಳು ಕೌಶಲ ಅಭಿವೃದ್ಧಿಗೆ ಪ್ರೇರಣೆ ನೀಡುತ್ತವೆ ಎಂದರು.

ಗಣಕವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಶೈಲೇಶ್ ಕುಮಾರ್ ಉಪಸ್ಥಿತರಿದ್ದರು.

ಎಸ್.ಡಿ.ಎಂ-ರೋಟರಿ ವೃತ್ತಿ ಮಾರ್ಗದರ್ಶನ ಕೇಂದ್ರದ ನಿರ್ದೇಶಕ ಡಾ. ನಾಗರಾಜ ಪೂಜಾರಿ ಕಾರ್ಯಕ್ರಮದ ಸಂಯೋಜನೆ ಮಾಡಿದರು.

ಜೈವಿಕ ತಂತ್ರಜ್ಞಾನ ವಿಭಾಗದ ಉಪನ್ಯಾಸಕ ದೀಕ್ಷಿತ್ ರೈ ಕಾರ್ಯಕ್ರಮ ನಿರ್ವಹಿಸಿದರು.

ಬಿ.ಸಿ.ಎ., ಬಿ.ಕಾಂ. ಮತ್ತು ಬಿ.ಬಿ.ಎ. ಪದವಿ ತರಗತಿಯ ಅಂತಿಮ ವರ್ಷದ 375 ವಿದ್ಯಾರ್ಥಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದು ಮಾಹಿತಿ, ಮಾರ್ಗದರ್ಶನದ ಪ್ರಯೋಜನ ಪಡೆದರು.