ಉಳ್ಳಾಲ: ತುಳುನಾಡಿನಲ್ಲಿ ಆಟಿ ತಿಂಗಳಲ್ಲಿ ವಿಪರೀತ ಮಳೆ ಮತ್ತು ಬಿಸಿಲಿನಿಂದ ಮೂರು ನಾಲ್ಕು ದಿವಸ ಮನೆಯಿಂದ ಹೊರಗೆ ಬಾರದೆ ಸರಿಯಾಗಿ ಊಟ ಮಾಡದೆ ಅವಿಭಕ್ತ ಕುಟುಂಬದೊಂದಿಗೆ ಇದ್ದ ಸಮಯವನ್ನು ನೆನಪಿಸುವಂತಹ ಕಾರ್ಯಕ್ರಮವನ್ನು ಇವತ್ತು ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ(ರಿ)ಯು ಯಾವುದೇ ವಿಜೃಂಭಣೆ ಇಲ್ಲದೆ ಸೇವಾಶ್ರಮದಲ್ಲಿ ನಡೆಸುತ್ತಿರುವುದು ಶ್ಲಾಘನೀಯ ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸದಾಶಿವ ಉಳ್ಳಾಲ್ ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾದ ನಿಟ್ಟೆ ವಿಶ್ವವಿದ್ಯಾನಿಲಯದ ಮಾನವಿಕ ವಿಭಾಗದ ಪ್ರಭಾರ ಮುಖ್ಯಸ್ಥರಾದ ಡಾ. ಸಾಯಿಗೀತಾ ಹೆಗ್ಡೆ ತುಳುವರಿಗೆ ಪ್ರತಿ ತಿಂಗಳು ಕೂಡಾ ವಿಶೇಷ. ಆರೋಗ್ಯವನ್ನು ದೃಷ್ಠಿಯಲ್ಲಿಟ್ಟುಕೊಂಡೇ ತುಳುವರ ಆಹಾರವನ್ನು ರೂಪಿಸಲಾಗಿದೆ. ಉಷ್ಣದ ಸಮಯದಲ್ಲಿ ಮೈಯನ್ನು ತಂಪುಗೊಳಿಸುವ, ಶೀತ ಸಮಯದಲ್ಲಿ ಉಷ್ಣದ ಆಹಾರವನ್ನು ದೇಹಕ್ಕೆ ಉಷ್ಣವಾಗುವ ಆಹಾರವಸ್ತುಗಳೊಂದಿಗೆ ತಂಪುಗೊಳಿಸುವ ಆಹಾರ ಪದಾರ್ಥಗಳನ್ನು ಸೇರಿಸಿ ಉಣ್ಣುವ ಪದ್ಧತಿ ಇಲ್ಲಿಯದು. ಆಟಿ ತಿಂಗಳ ಕಷ್ಟಗಳ ಬಗ್ಗೆ, ಜನರ ಜೀವನದ ಬಗ್ಗೆ, ಆರೋಗ್ಯಕ್ಕೆ ಸಂಬಂಧಪಟ್ಟ ವಿಷಯಗಳ ಬಗ್ಗೆ, ಆಟಿ ತಿಂಗಳಿನಲ್ಲಿ ಕುಡಿಯುವ ಕಷಾಯದ ಬಗ್ಗೆ, ವಿಪರೀತ ಮಳೆಯಿಂದಾಗಿ, ನೆರೆಯಿಂದಾಗಿ ಆಸ್ತಿ- ಪಾಸ್ತಿ ಹಾನಿಯಾದ ಸಂದರ್ಭವನ್ನು ಸಭೆಗೆ ತಿಳಿಸಿದರು.
ಮಾಜಿ ಶಾಸಕರು ಹಾಗೂ ಸ್ವಾಗತಾಧ್ಯಕ್ಷರಾದ ಕೆ ಜಯರಾಮ ಶೆಟ್ಟಿಯವರು ಮಾತನಾಡಿ ಸೇವಾಶ್ರಮದಲ್ಲಿರುವ ನಿರ್ಗತಿಕರು ವಿಶೇಷವಾಗಿ ಪ್ರಾಯದ ವೃದ್ಧ ಮಹಿಳೆಯರನ್ನು ಪೋಷಣೆ ಮಾಡುವ ಟ್ರಸ್ಟಿಗಳ ಸೇವಾಸಾಧನೆಯನ್ನು ಪ್ರಶಂಸಿದರು. ಇಂತಹ ಕಷ್ಟದ ಸೇವಾಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ತಿಳಿಸಿದರು.
ಸೇವಾಶ್ರಮದ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಅಧ್ಯಕ್ಷರಾದ ಡಾ. ಜಿ.ಆರ್ ಶೆಟ್ಟಿಯವರು ಈ ಸಂಸ್ಥೆ ಪ್ರಾರಂಭವಾಗಿ 15 ವರ್ಷಗಳಾದವು. ಇಲ್ಲಿರುವ ವೃದ್ಧ ಮಹಿಳೆಯರಿಗೆ ಯಾರು ಆಶ್ರಯಧಾತರು ಇಲ್ಲದಿರುವ ಸಂದರ್ಭದಲ್ಲಿ ಈ ಟ್ರಸ್ಟನ್ನು ಪ್ರಾರಂಭಿಸಿ ಹಲವಾರು ಕಷ್ಟ-ನಷ್ಟಗಳೊಂದಿಗೆ ನಡೆಸಿಕೊಂಡು ಬಂದ ಬಗ್ಗೆ ತಿಳಿಸಿ ಈ ಕಾರ್ಯಕ್ರಮದಲ್ಲಿ ಆಟಿಯ ಪಾರಂಪರಿಕ ತಿಂಡಿತಿನಿಸುಗಳನ್ನು ಹಾಗೂ ಅನ್ನದಾನ ನೀಡಿದ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ(ರಿ)ಗೆ ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ಗೀತಾ ಆರ್ ಶೆಟ್ಟಿ, ಶ್ಯಾಮಲ ಶೆಟ್ಟಿ, ಅಬ್ಬಕ್ಕ ಉತ್ಸವ ಸಮಿತಿಯ ಗೌರವ ಉಪಾಧ್ಯಕ್ಷರಾದ ಸದಾನಂದ ಬಂಗೇರ, ಉಪಾಧ್ಯಕ್ಷರಾದ ಯು.ಪಿ.ಆಲಿಯಬ್ಬ, ದೇವಕಿ ಆರ್ ಉಳ್ಳಾಲ್, ಸಮಿತಿಯ ಪದಾಧಿಕಾರಿಗಳಾದ ಕೆ.ಎಂ.ಕೆ ಮಂಜನಾಡಿ, ಸತೀಶ್ ಭಂಡಾರಿ, ಚಿದಾನಂದ ಎ, ಮಾಧವ ಉಳ್ಳಾಲ್, ಸ್ವರಿತ್, ಶಶಿಕಲಾ ಗಟ್ಟಿ, ವಾಣಿ ಲೋಕಯ್ಯ, ಮಾಧವಿ ಉಳ್ಳಾಲ್, ವಾಣಿ ಗೌಡ, ಸ್ವಪ್ನಾ ಶೆಟ್ಟಿ, ಆಶಾ ಗಟ್ಟಿ, ಅಮಿತಾ ಆಶ್ವಿನ್, ಶೋಭಾ ವಸಂತ್, ಜಯಶ್ರೀ ಕೆ, ಚಿತ್ರಾ ಜಗನ್, ಮುಂತಾದವರು ಉಪಸ್ಥಿತರಿದ್ದರು.
ಅಬ್ಬಕ್ಕ ಉತ್ಸವ ಸಮಿತಿಯ ಅಧ್ಯಕ್ಷರಾದ ದಿನಕರ ಉಳ್ಳಾಲ್ ಸ್ವಾಗತಿಸಿ ಪ್ರಸ್ತಾವಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅನುಪಮ ಸಿ ಬಬ್ಬುಕಟ್ಟೆ ವಂದಿಸಿದರು.