ಮಂಗಳೂರು: ಮಂಗಳೂರು ಮತ್ತು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಶಾಲಾ, ಕಾಲೇಜುಗಳು ಇವೆ. ಆದರೆ ಪದವಿ ಪಡೆದು ಹೊರಬರುವವರಿಗೆ ಉದ್ಯೋಗ ಸಿಗುವ ಸಾಧ್ಯತೆಯು ಈಗಿನ ಸರಕಾರದ ಕಾಲದಲ್ಲಿ ಇಲ್ಲವೇ ಇಲ್ಲದಂತಾಗಿದೆ. ಸಿಪಿಎಂ ಈ ನಿಟ್ಟಿನಲ್ಲಿ ಜನಪರ ಜನ ಚಳವಳಿ ನಡೆಸಲಾಗುವುದು ಎಂದು ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ. ಯಾದವ ಶೆಟ್ಟಿ ಹೇಳಿದರು.

ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಅಧಿಕವಾಗುತ್ತಿದೆ. ಪ್ರತಿಗಾಮಿ ಮೌಲ್ಯಗಳು ವರ್ಧಿಸುತ್ತಿರುವುದು ಆತಂಕಕಾರಿ ಆಗಿದೆ. ಈ ನಿಟ್ಟಿನಲ್ಲಿ ಸಿಪಿಎಂ ಪಕ್ಷವು ಶಿಕ್ಷಣ, ಆರೋಗ್ಯ, ಉದ್ಯೋಗದ ಹಕ್ಕಿಗಾಗಿ ಪ್ರಬಲ ಜನ ಚಳವಳಿ ಹಮ್ಮಿಕೊಳ್ಳಲು ನಿರ್ಣಯಿಸಲಾಗಿದೆ ಎಂದು ಅವರು ತಿಳಿಸಿದರು. ಈ ಸಂಬಂಧ ಗುರುಪುರ ಕೈಕಂಬದಲ್ಲಿ ನಡೆದ ಎರಡು ದಿನಗಳ ಸಮಾವೇಶ ಯಶಸ್ವಿಯಾದುದನ್ನು ಅವರು ಹೇಳಿದರು.

ಕಮ್ಯುನಿಸ್ಟ್ ನಾಯಕ ಮುನೀರ್ ಕಾಟಿಪಳ್ಳ ಮಾತನಾಡಿ ಕಾಲೇಜುಗಳು ಪದವೀದರರನ್ನು ಸೃಷ್ಟಿಸಿದರೆ ಸಾಲದು. ವೃತ್ತಿ ಶಿಕ್ಷಣವನ್ನು ಮುಖ್ಯವಾಗಿ ನೀಡಿ, ಉದ್ಯೋಗ ಭದ್ರತೆ ಒದಗಿಸಬೇಕು ಎಂದವರು ತಿಳಿಸಿದರು.

ಜಿಲ್ಲಾಧಿಕಾರಿ ಅವರ ಕೊರಳ ಪಟ್ಟಿ ಹಿಡಿಯುವ ಹೇಳಿದ ಹಿಂದೂ ನಾಯಕರನ್ನು ಕೂಡಲೆ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಹೇಳಿದರು.

ಕಮ್ಯೂನಿಸ್ಟ್‌ ನಾಯಕ ಸುನಿಲ್ ಕುಮಾರ್ ಬಜಾಲ್ ಮೊದಲು ಸ್ವಾಗತಿಸಿದರು ಮತ್ತು ಡಿಸೆಂಬರ್ 2, 3ರಂದು ನಡೆಯುವ ಅಖಿಲ ಭಾರತ ಕಟ್ಟಡ ಕಾರ್ಮಿಕರ ಸಮಾವೇಶದ ಬಗೆಗೆ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಜೆ. ಬಾಲಕೃಷ್ಣ ಶೆಟ್ಟಿ, ಪದ್ಮಾವತಿ ಶೆಟ್ಟಿ, ಸದಾಶಿವರಾವ್, ಸುಕುಮಾರ್ ಮೊದಲಾದವರು ಉಪಸ್ಥಿತರಿದ್ದರು.