ವಿದ್ಯಾಗಿರಿ: ಜರ್ಮನಿಯ ರಿಯಾನ್-ರೋಹೂರ್‍ನಲ್ಲಿ  ಜುಲೈ 16 ರಿಂದ 27 ರ ವರೆಗೆ ನಡೆಯಲಿರುವ ವಲ್ರ್ಡ್ಯುನಿವರ್ಸಿಟಿ ಗೇಮ್ಸ್ 2025 (ಜಾಗತಿಕ ವಿಶ್ವವಿದ್ಯಾಲಯಗಳ ಕ್ರೀಡಾಕೂಟ-2025) ಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕ್ರೀಡಾ ದತ್ತು ಯೋಜನೆಯ 11 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಇದರೊಂದಿಗೆ ಈ ವರೆಗೆ 32 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದರು. 

ಪುರುಷರ ವಿಭಾಗದಲ್ಲಿ ಗಗನ್  (5000 ಮೀಟರ್ಸ್ ಓಟ), ಸಚಿನ್ (20 ಕಿ.ಮೀ ನಡಿಗೆ), ಬಾಲಕೃಷ್ಣ (400 ಮೀ ಓಟ), ತೌಫಿಕ್ ಎನ್ (ಡೆಕತ್ಲಾನ್) ಹಾಗೂ ಮಹಿಳಾ ವಿಭಾಗದಲ್ಲಿ ದೀಕ್ಷಿತಾ (400 ಮೀ ಹರ್ಡಲ್ಸ್), ಬಸಂತಿ ಕುಮಾರಿ (ಹಾಫ್ ಮ್ಯಾರಥಾನ್), ಮಂಜು ಯಾದವ್ (ಸ್ಟೀಪಲ್ ಚೇಸ್),  ಸಿಂಧುಶ್ರೀ (ಪೋಲ್‍ವರ್ಟ್),  ಸಾಕ್ಷಿ (ಈಟಿ ಎಸೆತ), ಜ್ಯೋತಿ (ಹಾಫ್ ಮ್ಯಾರಥಾನ್), ಶಾಲಿನಿ (20 ಕಿಮೀ ನಡಿಗೆ),  ಪಾಲ್ಗೊಳ್ಳಲಿದ್ದಾರೆ. 

ಸಿಲೆಕ್ಷನ್ ಟ್ರಯಲ್ಸ್ ಗೇಮ್ಸ್ ಮೂಲಕ ಆಯ್ಕೆ

ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದ ಈ ಕ್ರೀಡಾಪಟುಗಳು ಭುವನೇಶ್ವರದ ಕಳಿಂಗ ಇನ್‍ಸ್ಟಿಟ್ಯೂಟ್ ಆಪ್ ಇಂಡಸ್ಟ್ರಿಯಲ್ ಟೆಕ್ನಾಲಜಿ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ನಡೆದಿದ್ದ ಆಯ್ಕೆ ಪ್ರಕ್ರಿಯೆಯಲ್ಲಿ (ಸಿಲೆಕ್ಷನ್ ಟ್ರಯಲ್ಸ್ ಗೇಮ್ಸ್) ಪ್ರವೇಶ ಪಡೆದಿದ್ದಾರೆ.  

ಅಖಿಲ ಭಾರತ ಅಂತರ ವಿವಿಯ ಕ್ರೀಡಾಕೂಟದಲ್ಲಿ ಆಳ್ವಾಸ್ ಚಾಂಪಿಯನ್ಸ್

ಅಖಿಲ ಭಾರತ ಅಂತರ ವಿವಿಯ ವಿವಿಧ ಕ್ರೀಡಾಕೂಟದಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿದ ಆಳ್ವಾಸ್  ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಈ ಭಾರಿ ಅಥ್ಲೇಟಿಕ್ಸ್, ಕ್ರಾಸ್ ಕಂಟ್ರಿ, ಖೋಖೋ ಸ್ಪರ್ಧೆಯಲ್ಲಿ ಸಮಗ್ರ ಚಾಂಪಿಯನ್ಸ್ ಪಟ್ಟ ಅಲಂಕರಿಸಿ, ಬಾಲ್ ಬ್ಯಾಡ್ಮಿಂಟನ್, ವೇಟ್‍ಲಿಫ್ಟಿಂಗ್ ಸ್ಪರ್ಧೆಯಲ್ಲಿ ರನ್ನರ್ಸ್ ಅಪ್ ಸ್ಥಾನ ಗಳಿಸಿದ ಹೆಗ್ಗಳಿಗೆಗೆ ಪಾತ್ರವಾಗಿದ್ದರು.  ರಾಷ್ಟ್ರೀಯ ಮಟ್ಟದ ದೇಹದಾಡ್ಯ ಸ್ಪರ್ಧೆಯಲ್ಲಿ ಆಳ್ವಾಸ್ ಸಂಸ್ಥೆಯ ಕಿಶಾನ್‍ಗೆ ‘ಬೆಸ್ಟ್ ಫಿಸಿಕ್’ ಪ್ರಶಸ್ತಿ ಲಭಿಸಿತ್ತು. 

ಆಳ್ವಾಸ್‍ನ 32 ವಿದ್ಯಾರ್ಥಿಗಳು ಭಾಗಿ

ಈ ಹಿಂದೆ ನಡೆದ ವಲ್ರ್ಡ್ ಯುನಿವರ್ಸಿಟಿ ಗೇಮ್ಸ್‍ಗಳಲ್ಲೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕ್ರೀಡಾಪಟುಗಳು ಪ್ರತಿನಿಧಿಸಿದ್ದು, ಈ ವರ್ಷ ಸೇರಿದಂತೆ ಈ ವರೆಗೆ 32 ಮಂದಿ ಆಯ್ಕೆಯಾಗಿದ್ದಾರೆ.  

2015ರಲ್ಲಿ ಕ್ರೊವೇಶಿಯಾ ನಡೆದ ಗೇಮ್ಸ್‍ನಲ್ಲಿ ಒಬ್ಬರು, 2017ರಲ್ಲಿ ತೈವಾನ್ ನಡೆದ ಗೇಮ್ಸ್‍ನಲ್ಲಿ ಇಬ್ಬರು, 2019ರಲ್ಲಿ ಇಟಲಿಯಲ್ಲಿ ನಡೆದ ಗೇಮ್ಸ್‍ನಲ್ಲಿ 10 ಜನ, 2023ರಲ್ಲಿ ಚೀನಾದ ಚಾಂಗ್ಡುನಲ್ಲಿ ನಡೆದ ಗೇಮ್ಸ್‍ನಲ್ಲಿ 8 ಜನ ಪಾಲ್ಗೊಂಡಿದ್ದರು. 

ಜಾಗತಿಕ ವಿಶ್ವವಿದ್ಯಾನಿಲಯಗಳ ಕ್ರೀಡಾಕೂಟಕ್ಕೆ ಆಳ್ವಾಸ್ ಸಂಸ್ಥೆಯಿಂದ 11 ಕ್ರೀಡಾಪಟುಗಳು ಆಯ್ಕೆಯಾಗಿದ್ದು ಒಬ್ಬರಿಗೆ ತಲಾ ರೂ. 2,50,000 ಹಣಕಾಸಿನ ವ್ಯವಸ್ಥೆ ಅಗತ್ಯವಿದ್ದು, ಇದರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಒಬ್ಬರಿಗೆ ತಲಾ ರೂ. 75,000 ಮೊತ್ತವನ್ನು ನೀಡುವ ಭರವಸೆಯನ್ನು ನೀಡಿದ್ದು, ಉಳಿದ ಮೊತ್ತವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯು ಭರಿಸುತ್ತಿದೆ ಎಂದು ತಿಳಿಸಿದರು.