ವಿದ್ಯಾಗಿರಿ:  ನಿಮ್ಮ ವ್ಯಕ್ತಿತ್ವ ಹಾಗೂ ಕೌಶಲಗಳ ಮೂಲಕವೇ ಸಮಾಜಕ್ಕೆ ಪರಿಚಿತರಾಗಿ ಎಂದು ಆಳ್ವಾಸ್ ಕಾಲೇಜಿನ ಕುಲಸಚಿವ (ಅಕಾಡೆಮಿಕ್ಸ್) ಡಾ ಟಿ. ಕೆ. ರವೀಂದ್ರನ್ ಹೇಳಿದರು.

ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ವಿಚಾರ ಸಂಕಿರಣ ಸಭಾಂಗಣದಲ್ಲಿ ಪದವಿ ಸಮಾಜ ಕಾರ್ಯ ವಿಭಾಗದ ಸ್ಪಟಿಕ ವಿದ್ಯಾರ್ಥಿ ವೇದಿಕೆಯ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. 

ದೊಡ್ಡದಾಗಿ ಕನಸು ಕಾಣಬೇಕು. ಇದರಿಂದ ಉನ್ನತ ಸಾಧನೆ ಮಾಡಲು ಸಾಧ್ಯ. ವರ್ತಮಾನದಲ್ಲಿ ಜಗತ್ತು ಒಂದು ಪುಟ್ಟ ಹಳ್ಳಿ ಆಗಿದೆ. ಅವಕಾಶಗಳು ವಿಸ್ತಾರಗೊಂಡಿದ್ದು, ಸ್ಪರ್ಧೆ ಹೆಚ್ಚಿದೆ ಎಂದರು. 

ಸಮಾಜ ಕಾರ್ಯದ ವಿದ್ಯಾರ್ಥಿಗಳಿಗೆ ಅವಕಾಶಗಳ ಕೊರತೆ ಬರಲು ಸಾಧ್ಯವಿಲ್ಲ. ಈ ವೃತ್ತಿಯೂ ನೀಡುವ ಸಂತೃಪ್ತಿ ಬೇರೆ ಕಡೆಯೂ ಸಿಗಲು ಸಾಧ್ಯವಿಲ್ಲ ಎಂದು ಹೇಳಿದರು. 

ವಿದ್ಯಾರ್ಥಿ ಜೀವನದ ಮಹತ್ವ ತಿಳಿಯುವುದು ಕಾಲೇಜಿನಿಂದ ಹೊರ ಹೋದ ಮೇಲೆ. ನಿಜವಾದ ಜೀವನ ಪ್ರಾರಂಭವಾಗುವುದು ನೀವು ವಿದ್ಯಾಭ್ಯಾಸ ಮುಗಿಸಿದ ನಂತರ. ವಿದ್ಯಾರ್ಥಿ ಜೀವನದಲ್ಲಿ ಕೆಲವರು ತಮ್ಮ ತಪ್ಪುಗಳಿಗೆ ಕಾಲೇಜನ್ನು ದೂರುತ್ತಾರೆ. ಆದರೆ ವೃತ್ತಿ ಜೀವನದಲ್ಲಿ ನಿಮ್ಮ ತಪ್ಪುಗಳಿಗೆ ನೀವೇ ಜವಾಬ್ದಾರಿ. ಜೀವನದಲ್ಲಿ ಎರಡನೇ ಅವಕಾಶಕ್ಕಾಗಿ ಕಾಯದೆ ಸಿಕ್ಕ ಅವಕಾಶಗಳ ಸದುಪಯೋಗಪಡೆಸಿಕೊಳ್ಳಿ ಎಂದರು. 

ನಮ್ಮ ದೇಶದಲ್ಲಿ ಉದ್ಯೋಗದ ಕೊರತೆ ಇಲ್ಲ. ಆದರೆ, ಅದಕ್ಕೆ ತಕ್ಕ ಅಭ್ಯರ್ಥಿಗಳ ಕೊರತೆ ಇದೆ. ಹಾಗಾಗಿ ಉದ್ಯೋಗಕ್ಕೆ ಬೇಕಾದ ಕೌಶಲಗಳನ್ನು ವೃದ್ಧಿಸಿಕೊಳ್ಳಿ ಎಂದರು. 

ಎಸ್.ಕೆ.ಎಫ್. ಬಾಯ್ಲೆರ್ಸ್ ಮತ್ತು ಡ್ರೈಯರ್ಸ್ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿ ಪ್ರಶಾಂತ್ ದೇವಾಡಿಗ ಮಾತನಾಡಿ, ‘ನಿಮ್ಮ ಜೀವನದ ಗುರಿಯನ್ನು ಆಲೋಚಿಸಿ. ಆ ಗುರಿಯನ್ನು ಸಾಧಿಸಲು ಬೇಕಾದ ಸಿದ್ಧತೆಗಳನ್ನು ನಡೆಸಿ’ ಎಂದರು. 

ವೃತ್ತಿ ಜೀವನಕ್ಕೆ ಬೇಕಾದ ವಿವಿಧ ಕೌಶಲ, ಜ್ಞಾನ, ಹಾಗೂ ವರ್ತನೆಗಳ ಮೇಲೆ ಗಮನವಿರಿಸಿ ಎಂದರು. 

ಆಳ್ವಾಸ್ ಕಾಲೇಜಿನ ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಸ್ಪಟಿಕ ವಿದ್ಯಾರ್ಥಿ ವೇದಿಕೆಯೂ ಅನೇಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಹಾಗೂ ಕಾಲೇಜಿನ ಅಭಿವೃದ್ಧಿಗೆ ಉತ್ತಮ ಕೆಲಸ ಮಾಡಿದೆ. ಸಮಾಜ ಕಾರ್ಯ ವಿಭಾಗದ ಸೇವಾ ಮನೋಭಾವ ಶ್ಲಾಘನೀಯ ಎಂದು ಹೇಳಿದರು.

ಪದವಿ ಸಮಾಜ ಕಾರ್ಯದ ಮುಖ್ಯಸ್ಥೆ ಡಾ. ಮಧುಮಲಾ, ಸ್ಪಟಿಕ ವಿದ್ಯಾರ್ಥಿ ವೇದಿಕೆಯ ಸಂಯೋಜಕಿ ಡಾ. ಸ್ವಪ್ನ ಆಳ್ವ ಇದ್ದರು.