ವಿದ್ಯಾಗಿರಿ: ಮನೋವಿಜ್ಞಾನ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸಹಾನುಭೂತಿಯ ನೆಲೆಸಿರಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.                                                                                             

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ ಆಳ್ವಾಸ್‍ನ ಪದವಿ ಮತ್ತು ಸ್ನಾತಕೋತ್ತರ ಮನೋವಿಜ್ಞಾನ ವಿಭಾಗಗಳು ಆಳ್ವಾಸ್ ಕ್ಷೇಮ ತರಬೇತಿ ಕೇಂದ್ರದ ಸಹಯೋಗದೊಂದಿಗೆ ವಿಭಾಗದ ಆವರಣದಲ್ಲಿ ಹಮ್ಮಿಕೊಂಡ 'ಮೆಟಾನೋಯಾ'- ಮನೋವಿಜ್ಞಾನ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು .  

ಸದೃಢ ಮಾನಸಿಕ ಆರೋಗ್ಯ ಕಾಯ್ದುಕೊಳ್ಳುವಲ್ಲಿ ಗೆಳೆಯರ ಪಾತ್ರವು ಪ್ರಮುಖವಾಗಿದೆ ಎಂದ ಅವರು, ಇಂತಹ ಕಾರ್ಯಕ್ರಮಗಳು ಮಾನಸಿಕ ಆರೋಗ್ಯದ ಬಗ್ಗೆ ಉತ್ತಮ ತಿಳಿವಳಿಕೆಯನ್ನು ಉತ್ತೇಜಿಸುವಲ್ಲಿ ಪೂರಕವಾಗಿದೆ ಎಂದರು.  ಭಾರತದಲ್ಲಿ ಮಾನಸಿಕ ಆರೋಗ್ಯದೆಡೆಗೆ ಕಾಳಜಿವಹಿಸುವವರು ಅತೀ ವಿರಳ. ಮಾನಸಿಕ ಸಮಾಲೋಚನೆಯನ್ನು ಅನ್ಯ ದೃಷ್ಠಿಯಲ್ಲಿ ನೋಡುವವರೆ ಜಾಸ್ತಿ. ಇದು ಸಲ್ಲ ಎಂದರು. ಆಳ್ವಾಸ್‍ನ ಮನೋವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ನಮ್ಮ ಕ್ಯಾಂಪಸ್‍ನಲ್ಲಿರುವ ಬೇರೆ ವಿದ್ಯಾರ್ಥಿಗಳ ಮನಸ್ಥಿತಿಯಲ್ಲಾಗುವ ಬದಲಾವಣೆಯನ್ನು ಕೂಡಲೇ ಗ್ರಹಿಸಿ, ಪರಿಹಾರವನ್ನು ಒದಗಿಸಲು ಮುಂದಾಗಬೇಕು ಎಂದರು. 

ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, ಇಂದು  ನಮ್ಮ ಕೆಲಸದ ಸ್ಥಳಗಳು ಹೆಚ್ಚು ವಾಣಿಜ್ಯೀಕರಣ ಹಾಗೂ ಕಾಪೋರೇಟ್  ಸಂಸ್ಕೃತಿಯತ್ತ ಸಾಗುತ್ತಿವೆ.  ಹಣ ಸಂಪಾದನೆ ಮತ್ತು ಭೌತಿಕ ವಸ್ತುಗಳ ಸ್ವಾಧೀನವು ನಮ್ಮ ಪ್ರಧಾನ ಕಾಳಜಿಯಾಗುತ್ತಿವೆ.  ನಮ್ಮ ವ್ಯವಸ್ಥೆ ಮಾನವ ಕೇಂದ್ರಿತವಾಗಿರದೆ, ಎಲ್ಲವೂ ವಸ್ತು ಕೇಂದ್ರಿತವಾಗುತ್ತಿರುವುದು ನಮ್ಮೆಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ. 2022ರಲ್ಲಿ ಭಾರತದಲ್ಲಿ ಸುಮಾರು 11249 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ ಹಾಗೂ ಇದು ಕಳವಳಕಾರಿಯಾಗಿದೆ ಎಂದರು.  ಸಾಮಾಜಿಕ ಕಾರ್ಯ ಹಾಗೂ ಸ್ಪಂದನೆಗಳು ನಮ್ಮ ಮಾನಸಿಕ ಆರೋಗ್ಯ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು. ಸಾಮಾಜಿಕ ಪ್ರಸ್ತುತತೆಯ ಒಳನೋಟಗಳನ್ನು ಸಂಕ್ಷಿಪ್ತವಾಗಿ ತಿಳಿಸಿದರು .

ಪ್ರದರ್ಶನದಲ್ಲಿ ಎಂಟು ವಿನ್ಯಾಸಗಳನ್ನು ಆಯೋಜಿಸಲಾಗಿತ್ತು. ಪ್ರತಿ ಮಾದರಿಗಳು ಮಾನಸಿಕ ಆರೋಗ್ಯದ ವಿವಿಧ ಅಂಶಗಳನ್ನು ಪ್ರತಿನಿಧಿಸಿತು. ಒಟ್ಟು ಎಂಟು ಮಾದರಿಗಳ ಪೈಕಿ ಆಡ್ಲರ್‍ನ ಜನ್ಮ ಕ್ರಮ, ಭಾವನಾತ್ಮಕ ಮಿದುಳು, ಡಿಜಿಟಲ್ ನಿರ್ವಿಷಿಕರಣ, ಸಕಾರಾತ್ಮಕ ಭಾವನೆಗಳ ಶಕ್ತಿ, ಪರಿಸರ ಸಿದ್ಧಾಂತ ಮತ್ತು ಮಾನಸಿಕ ಯೋಗಕ್ಷೇಮದ ತಿಳುವಳಿಕೆಯನ್ನು ಗಾಢವಾಗಿಸಲು ಶೈಕ್ಷಣಿಕ ಸಾಧನಗಳಾಗಿ ಕಾರ್ಯನಿರ್ವಹಿಸುವ ವರ್ತನೆಯ ಮಂಜುಗಡ್ಡೆಯಂತಹ ಪರಿಕಲ್ಪನೆಗಳನ್ನು ಎತ್ತಿ ತೋರಿಸುವಂತಿತ್ತು. ಮಾದರಿಗಳ ಜೊತೆಗೆ, ಆರು ಧನಾತ್ಮಕ ಮನೋವಿಜ್ಞಾನ ಮೌಲ್ಯಮಾಪನಗಳನ್ನು ರೂಪಿಸಲಾಗಿತ್ತು.  

ಇದರೊಂದಿಗೆ ಎಂಟು ಸಂವಾದಾತ್ಮಕ ಸವಾಲುಗಳ ಪರೀಕ್ಷಾಕಟ್ಟೆಗಳನ್ನು  ರಚಿಸಲಾಗಿದ್ದು, ಪ್ರತಿಯೊಂದೂ ಭಾಗವಹಿಸುವವರ ಪರಿಕಲ್ಪನೆ ರಚನೆ, ಆಯ್ದ ಗಮನ, ಕಣ್ಣು-ಕೈಯ ಸಮನ್ವಯ, ಸಮಸ್ಯೆ ಪರಿಹಾರ ಮತ್ತು ವಿಮರ್ಶಾತ್ಮಕ ಚಿಂತನೆಯಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು, ಪ್ರಾಯೋಗಿಕ ಕಲಿಕೆಯ ಅವಕಾಶವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿತ್ತು.

ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. 

ವಿದ್ಯಾರ್ಥಿಗಳ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಅಭ್ಯಾಸದೊಂದಿಗೆ ಜೀವನಶೈಲಿಯನ್ನು ರೂಪಿಸಲು ಪ್ರೇರಣೆ ನೀಡಲಾಯಿತು.  ತಮ್ಮ ದೈನಂದಿನ ಜೀವನದಲ್ಲಿ ಧನಾತ್ಮಕ ಮಾನಸಿಕ ಆರೋಗ್ಯವನ್ನು ಅಭಿವೃದ್ಧಿಪಡಿಸಲು ಪ್ರೋತ್ಸಾಹಿಸುವಲ್ಲಿ ಯಶಸ್ವಿಯಾಯಿತು.    

ಮನೋವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ಆಡ್ರೆ ಪಿಂಟೋ, ಜೋಸ್ವಿಟಾ ಡೆಸಾ, ಆಳ್ವಾಸ್ ಕ್ಷೇಮ ತರಬೇತಿ ಕೇಂದ್ರದ ನಿರ್ದೇಶಕಿ ಡಾ.ದೀಪಾ ಕೊಠಾರಿ,  ಕಾಲೇಜಿನ ಐಕ್ಯುಎಸಿ ಸಂಯೋಜಕಿ ಡಾ.ಮೂಕಾಂಬಿಕಾ ಹಾಗೂ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಇದ್ದರು.  ವಿದ್ಯಾರ್ಥಿನಿ ಹಿಸಾನಾತ್ ಎಂ. ಕಾರ್ಯಕ್ರಮ ನಿರೂಪಿಸಿದರು.