ಮಂಗಳೂರು, ಮಾರ್ಚ್ 06: ಮರವೂರು ಕೆಂಜಾರು ಕಪಿಲಾ ಗೋಶಾಲೆಯನ್ನು ಒಡೆದ ಜನರ ಪ್ರೇರೇಪಕರಾದ ಬಿಜೆಪಿಯ‌ ಸಂಸದ ಶಾಸಕರು ಕೆಲವೇ ತಿಂಗಳ ಹಿಂದೆ ಅಲ್ಲಿ ಗೋಪೂಜೆ‌ ನಡೆಸಿ ಫೋಟೋ ಪ್ರಚಾರ ಪಡೆದದ್ದು ಏಕೆ ಎಂದು ಮಂಗಳೂರು ಮಾಜೀ ಮೇಯರ್ ಕವಿತಾ ಸನಿಲ್ ಪ್ರಶ್ನಿಸಿದರು.


ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಬಿಜೆಪಿ ಮಂದಿ ಚುನಾವಣೆ ‌ಬಂದಾಗ ಗೋಮಾತೆ, ಗೋಪೂಜೆ ಎಂದು ಓಡಾಡುತ್ತಾರೆ. ಗ್ರಾಮ ಪಂಚಾಯತ್ ಚುನಾವಣೆ ಕಾಲದಲ್ಲಿ ನಳಿನ್ ಕುಮಾರ್ ಕಟೀಲು, ಭರತ್ ಶೆಟ್ಟಿ ಮೊದಲಾದ ಬಿಜೆಪಿ ಜನರು ಕಪಿಲಾ ಗೋಶಾಲೆಯಲ್ಲಿ ಗೋಪೂಜೆ ಮಾಡಿ ನಕಲಿ ಗೋಭಕ್ತಿ ತೋರಿಸಿದ್ದರು. ಈಗ ಆ ಗೋಶಾಲೆ ಒಡೆಸಿದ್ದಾರೆ. ನಳಿನ್ ಕುಮಾರ್ ಕಟೀಲು ಅಲ್ಲಿ ಏನೂ ಇಲ್ಲ ಅದನ್ನು ಒಡೆಯಿರಿ ಎಂದರು. ಈಗ ಬೀದಿಯಲ್ಲಿ ಮೇವು, ನೀರು ಇಲ್ಲದೆ ನರಳುತ್ತಿರುವ 270ಕ್ಕೂ ಹೆಚ್ಚು ಜಾನುವಾರುಗಳು ಎಲ್ಲಿಯವು ಎಂದು ಕವಿತಾ ಸನಿಲ್ ಪ್ರಶ್ನಿಸಿದರು.

ಕಲ್ಲಡ್ಕ ಭಟ್ಟರು ಅಲ್ಲಿ ಗೋಶಾಲೆ ಇಲ್ಲ, ಸಣ್ಣ ಕೊಟ್ಟಿಗೆ ಮಾತ್ರ ‌ಇದೆ   ಎನ್ನುತ್ತಾರೆ. ಸಣ್ಣ ಕೊಟ್ಟಿಗೆಯಲ್ಲಿ  300ರಷ್ಟು ಜಾನುವಾರು ಕಟ್ಟುವುದು ಸಾಧ್ಯವೆ? ಕಾಂಗ್ರೆಸ್‌ನವರಾದ ನಾವು ಮನೆಯಲ್ಲಿ ಎಲ್ಲ ಬಗೆಯ ಗೋಸೇವೆ ಮಾಡುವವರು.  ನಕಲಿ ಗೋಭಕ್ತರಾದ ಬಿಜೆಪಿ ಜನ ಎಂದೂ ನಿಜವಾಗಿ ಹಟ್ಟಿಯಲ್ಲಿ ಕೆಲಸ ಮಾಡಿದವರಲ್ಲ. ಒಂದು ಕಡೆ ಪ್ರಕಾಶ್ ಶೆಟ್ಟಿ ಇಟ್ಟಿಗೆ ಕಾರ್ಖಾನೆ ಎನ್ನುವ ಭಟ್ಟರು ಇನ್ನೊಂದು ಕಡೆ ಅಲ್ಲಿ ಮುಸ್ಲಿಮರು ಅರ್ಧ ‌ದರದಲ್ಲಿ ದನ ಸಿಗುವುದಾಗಿ ಮಾತಾಡುತ್ತಾರೆ ಎನ್ನುತ್ತಾರೆ. ಇದ್ಯಾವ ರಾಜಕೀಯ? ಈಗ ಬೀದಿಗೆ ಬಿದ್ದಿರುವ ದನ ಕರುಗಳಲ್ಲಿ ಹತ್ತನ್ನು ಯಾರಾದರೂ ಹೊತ್ತೊಯ್ದರೆ ಬಿಜೆಪಿ ಜನ ಅಯ್ಯೋ ದನ ಕಳವು ಎಂದು ಬೊಬ್ಬೆ ಹೊಡೆಯುವುದು ಖಚಿತ. ಗೋಶಾಲೆಗೆ ಅಧಿಕಾರದಲ್ಲಿ ಇರುವ ಬಿಜೆಪಿ ಬದಲಿ ವ್ಯವಸ್ಥೆ ಮಾಡಿ ಇದನ್ನು ಒಡೆಯಬೇಕಿತ್ತು. ಈ ರೀತಿ ಮೂಕ ಪ್ರಾಣಿಗಳನ್ನು ಬೀದಿಪಾಲು ಮಾಡಿರುವುದು ದನದ್ರೋಹಿ ಕೃತ್ಯ ಎಂದು ಸನಿಲ್ ವಿವರಿಸಿದರು. ಜನದ್ರೋಹಿ ಸರಕಾರ ದನದ್ರೋಹಿ ಕೆಲಸ ಮಾಡಿದೆ ಎಂದೂ ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಕಾಶ್ ಸಾಲ್ಯಾನ್, ರಜನೀಶ್, ದೀಪಕ್ ಪೂಜಾರಿ, ಸದಾಶಿವ ಉಲ್ಲಾಳ್, ನೀರಜ್ ಪಾಲ್, ಸಂತೋಷ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.