ಮಂಗಳೂರು, ಮಾರ್ಚ್ 06: ಜನಸಾಮಾನ್ಯರ ಸಮಸ್ಯೆಗಳ ‌ಚರ್ಚೆ ಮಾಡದೆ ರಾಷ್ಟ್ರದ ವಿಚಾರವಾದ ಒಂದು ದೇಶ ಒಂದು ಚುನಾವಣೆ ಬಗೆಗೆ ಬಿಜೆಪಿ ಚರ್ಚೆ ಮಾಡಬೇಕು ಎನ್ನುವುದು ಅಂಬೇಡ್ಕರ್ ಅವರ ಸಂವಿಧಾನ ಬದಲಿಸಲು ನಡೆಸಿರುವ ಹುನ್ನಾರ ಎಂದು ಮಾಜೀ ಮಂತ್ರಿ ಯು. ಟಿ. ಖಾದರ್ ಹೇಳಿದರು.

ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಹಾಲಿ ಶಾಸಕರೂ ಆದ ಖಾದರ್ ಮಾತನಾಡಿ ಕಾಂಗ್ರೆಸ್ ಸಂಸದೀಯ ಪಕ್ಷವು ಒಂದು ದೇಶ ಒಂದು ಚುನಾವಣೆ ಚರ್ಚೆಗೆ ಬೆಂಬಲವಿಲ್ಲ ಎಂದು ತೀರ್ಮಾನ ಮಾಡಿದ್ದರಿಂದ ನಾವದನ್ನು ಪೂರ್ತಿ ವಿರೋಧಿಸುವುದಾಗಿ ಖಾದರ್ ವಿವರಿಸಿದರು.

ಗ್ಯಾಸ್ ಬೆಲೆ ಸಿಲಿಂಡರಿಗೆ ಸಾವಿರ ರೂಪಾಯಿ ಆಗಿದೆ. ಕರ್ನಾಟಕಕ್ಕೆ ಬರಬೇಕಾದ ಜಿಎಸ್ ಟಿ ಪಾಲನ್ನು ಕೇಂದ್ರ ನೀಡದೆ ಸತಾಯಿಸುತ್ತಿದೆ. ಇವನ್ನೆಲ್ಲ ಚರ್ಚೆ ಮಾಡುವುದು ‌ಬಿಟ್ಟು ಬಿಜೆಪಿ ಒಂದು ದೇಶ ಒಂದು ಚುನಾವಣೆ ಎನ್ನುವುದು ಆತ್ಮ ವಂಚನೆ. ಸಂವಿಧಾನವು ಯಾವುದೇ ಕಾರಣದಿಂದ ಒಂದು ಕ್ಷೇತ್ರ ಇಲ್ಲವೇ ಸರಕಾರ ಬರಿದಾದಾಗ ಆರು ತಿಂಗಳಲ್ಲಿ ತುಂಬಲೇಬೇಕು. ಇದು ರಾಷ್ಟ್ರೀಯ ಸಂಗತಿ ಆದ್ದರಿಂದ ರಾಷ್ಟ್ರೀಯ ಮಟ್ಟದಲ್ಲಿ ಸರ್ವ ಪಕ್ಷಗಳ ಸಭೆ ಕರೆದು ಚರ್ಚಿಸಬೇಕು. ಇಲ್ಲಿ ಚರ್ಚೆ ಬೇಡ. ಸಂವಿಧಾನಕ್ಕೆ ವಂಚಿಸಬಾರದು ಖಾದರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಚಂಚಲಾಕ್ಷಿ, ಬದ್ರುದ್ದೀನ್, ನೀರಜ್ ಪಾಲ್, ಸದಾಶಿವ ಉಲ್ಲಾಳ್, ಅಚ್ಯುತ ಗಟ್ಟಿ, ಸಂತೋಷ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಮುಂದುವರಿದು ಪ್ರಶ್ನೆಗಳಿಗೆ ಉತ್ತರಿಸಿದ ಖಾದರ್ ಅವರು ಎಲ್ಲ ಮರಳು ಗಣಿ ಅವ್ಯವಹಾರಕ್ಕೆ ಗಣಿ ಮತ್ತು ಖನಿಜ ಇಲಾಖೆಯ ನಿರಂಜನ್ ಕಾರಣ ಎಂದು ಖಾದರ್ ವಿವರಿಸಿದರು.