ಮಸ್ಕತ್‌ನಿಂದ ಮುಂಬೈ ತೆರಳುತ್ತಿದ್ದ ಏರ್ ಇಂಡಿಯಾ ಏಕ್ಸ್‌ಪ್ರೆಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಯೊಬ್ಬರು ಗಂಡು ಮಗುವಿಗೆ ಜನ್ಮನೀಡಿದ ಅಪರೂಪದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಮಸ್ಕತ್‌ನಿಂದ ರಾತ್ರಿ 11.40ಗೆ ಹೊರಡಬೇಕಾಗಿದ್ದ ಐಎಕ್ಸ್ 236 ವಿಮಾನ ವಿಳಂಬವಾಗಿ ಮಧ್ಯರಾತ್ರಿ 12.15 ಗೆ ಹೊರಟಿತ್ತು. ವಿಮಾನ ಟೇಕ್ ಅಪ್ ಆಗಿ ಅರ್ಧ ಮುಕ್ಕಾಲು ಗಂಟೆಯಲ್ಲಿ ಆ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿತು.
ಆ ವಿಮಾನದಲ್ಲಿ ವೈದ್ಯರಾಗಲಿ ನರ್ಸ್‌ಗಳಾಗಲಿ ಇರಲಿಲ್ಲ. ಹೆರಿಗೆ ನೋವು ವಿಪರೀತವಾದಂತೆ ಕೊನೆಗೆ ಇಬ್ಬರು ಕ್ಯಾಬಿನ್ ಕ್ರೂ ಮತ್ತು ಇಬ್ಬರು ಮಹಿಳೆಯರು ಸೇರಿ ಗರ್ಭಿಣಿಗೆ ಸಲಹೆ ನೀಡಿ ಯಶಸ್ವಿಯಾಗಿ ಹೆರಿಗೆ ಮಾಡಿಸಿದರು. ಆ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದರು ಎಂದು ತಿಳಿದು ಬಂದಿದೆ.
ಹೆರಿಗೆ ಮಾಡಿಸಿದ ಸಿಬ್ಬಂದಿ ಹಾಗೂ ಮಹಿಳೆಯರಿಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ತಾಯಿ ಮತ್ತು ಮಗು ಆರೋಗ್ಯವಾಗಿದ್ದು ವಿಮಾನ ಲ್ಯಾಂಡ್ ಆದ ಕೂಡಲೇ ವೈದ್ಯರ ತಂಡ ಆಗಮಿಸಿ ಸೂಕ್ತ ಚಿಕಿತ್ಸೆ ನೀಡಲಾಯಿತು ಎಂದು ವರದಿ ತಿಳಿಸಿದೆ.