ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ |

ಯತ್ರೈತಾಸ್ತು ನ ಪೂಜ್ಯoತೇ ಸರ್ವಾಸ್ತತ್ರಾ ಫಲಾ ಕ್ರಿಯಾಃ ||

(ಎಲ್ಲಿ ಸ್ತ್ರೀಯರಿಗೆ ಗೌರವ ಸನ್ಮಾನಗಳು ದೊರೆಯುತ್ತವೆಯೋ ಅಲ್ಲಿ ದೇವತೆಗಳು ಪ್ರಸನ್ನರಾಗುತ್ತಾರೆ. ಯಾವ ಮನೆಯಲ್ಲಿ ಸ್ತ್ರೀಯರು ಗೌರವಿಸಲ್ಪಡುವುದಿಲ್ಲವೋ ಅಲ್ಲಿ ಮಾಡುವ ಎಲ್ಲ ಯಜ್ಞ - ಪೂಜೆಗಳು ನಿಷ್ಫಲವಾಗುತ್ತವೆ !’~ ಮನುಸ್ಮೃತಿ) ಎಂಬ ಸಂಸ್ಕೃತದಲ್ಲಿ ಬರುವ ಜನಪ್ರಿಯ ಮಾತು ಸ್ತ್ರೀಯರಿಗೆ ಎಲ್ಲ ಕಾಲಕ್ಕೂ ಇರುವ ಅಥವಾ ಇರಲೇಬೇಕಾದ ಮಹತ್ವವನ್ನು ನಿರೂಪಿಸುತ್ತದೆ. ಇದೊಂದು ಉಕ್ತಿ ಸಾಕು, ನಮ್ಮ ಸನಾತನ ಭವ್ಯ ಪರಂಪರೆಯಲ್ಲಿ ಸ್ತ್ರೀಯರಿಗೆ ಯಾವ ಮಟ್ಟಿಗಿನ ಎತ್ತರದ ಸ್ಥಾನ ಇತ್ತು ಎಂಬುದನ್ನು ತೋರಿಸಲು. ಸ್ತ್ರೀಯರಿರುವಲ್ಲಿ ದೇವರುಗಳು ನೆಲೆಸಿರುತ್ತಾರೆ ಎನ್ನುವ ಮೂಲಕ ದೇವತೆಯ ಸ್ಥಾನ ಕೊಟ್ಟಿದ್ದರು. ಆದರೆ ಪ್ರಸ್ತುತ ಕಾಲಮಾನದಲ್ಲಿ ಈ ಮಾತು ಹೆಚ್ಚು ಬರಿಯ ಪುಸ್ತಕಗಳ ಹಾಳೆಗಳ ನಡುವೆಯೇ ಉಳಿದುಹೋಗುತ್ತಿದೆಯಾ ?

ಸ್ತ್ರೀ ಪುರುಷರು ಸಮಾನರು, ಗೌರವಾದರಗಳಲ್ಲಿ ಲಿಂಗ ಭೇದವೇಕೆ ಮಾಡಬೇಕು ? ಎನ್ನುವ ವಾದ ಹೆಚ್ಚು ಮಾಡುವವರು, ತಾವು ಮೊದಲು ಆ ಗೌರವಗಳನ್ನು ಪಡೆಯಲು ಅರ್ಹರಾಗಿರಬೇಕು ಎನ್ನುವುದನ್ನು ಮರೆಯಬಾರದು. ಗತ್ತಾಗಿ ವೆಸ್ಟೆರ್ನ್ ಬಟ್ಟೆ ಹಾಕಿಕೊಂಡು ಕೇವಲ ಆಧುನಿಕತೆಯನ್ನು ಮೈಗೆ ಹೊದ್ದ ತಕ್ಷಣ ಮರ್ಯಾದೆ ದಕ್ಕುವಂತದ್ದಲ್ಲ..! ಅಥವಾ ನಮ್ಮ ಹುಟ್ಟು, ಹಿನ್ನೆಲೆಯಿಂದ ನಿರ್ಧಾರವಾಗುವಂತದ್ದಲ್ಲ. ಅದು ನಮ್ಮ ನಡವಳಿಕೆ, ಇತರರೊಂದಿಗೆ ನಾವು ನಡೆದುಕೊಳ್ಳುವ ರೀತಿ-ನೀತಿ, ವ್ಯಕ್ತಿತ್ವ, ಈ ಎಲ್ಲದರ ಅಖೈರು ಮೊತ್ತ. ಇದು ನಮ್ಮ ಪೂರ್ವಜರಿಗೆ ಗೊತ್ತಿತ್ತು. ಆದ್ದರಿಂದ ಮನೆಯ ಹೆಣ್ಣುಮಕ್ಕಳನ್ನೇ ಆಗಲಿ ಅಥವಾ ಬೇರಾವ ಹೆಣ್ಣುಮಕ್ಕಳನ್ನೇ ಆಗಲಿ, ಅತಿ ಮಮತೆ ಮತ್ತು ಪ್ರೀತಿಯಿಂದ ಗೌರವಿಸುತ್ತಿದ್ದರು, ಜೋಪಾನವಾಗಿ ಕಾಯುತ್ತಿದ್ದರು. ಅಷ್ಟೇ ಮಟ್ಟದ ಗೌರವಗಳನ್ನು, ಮಹತ್ವವನ್ನು ಸ್ತ್ರೀಯರು ಕೂಡ ಪುರುಷರಿಗೆ ಕೊಡುತ್ತಿದ್ದರು.

ಈಗೆಲ್ಲ ಮಹಿಳೆಯರಿಗು ಸಮಾನ ಹಕ್ಕುಗಳಿಗಾಗಿ ಎಷ್ಟೆಲ್ಲ ಹೊರಾಟಗಳು, ಚರ್ಚೆಗಳು ನಡಿಯುತ್ತಲೇ ಇರುತ್ತವೆ. ಆ ಹೋರಾಟದ ಫಲ ಏನು ? ಮಹಿಳೆಯರಿಗೆ ಸ್ವಾತಂತ್ರ್ಯ ಬೇಕು, ಅಥವಾ ಹೆತ್ತವರು ಅದನ್ನು ಕೊಡಬೇಕು ನಿಜ. ಜೊತೆಗೆ ಆ ಸ್ವಾತಂತ್ರವನ್ನು ಯಾವುದಕ್ಕಾಗಿ ಅಥವಾ ಹೇಗೆ ಬಳಸಿಕೊಂಡು ನಮ್ಮ ಜೀವನದಲ್ಲಿ ಉನ್ನತಿಯನ್ನು ಪಡೆಯಬೇಕು ಎಂಬುದನ್ನು ಕೂಡ ಕಲಿಸಿಕೊಡಬೇಕು. ಸ್ವತಂತ್ರ ಕೇವಲ ಹೆಣ್ಣುಮಕ್ಕಳು ಅಥವಾ ಗಂಡು ಮಕ್ಕಳಿಗೆ ಸೀಮಿತವಾದ್ದಲ್ಲ. ಅದು ಭೂಮಿಯಲ್ಲಿ ನ್ಯಾಯವಾಗಿ ಬದುಕುವ ಪ್ರತಿಯೊಂದು ಜೀವಿಗೂ ಇರುವ ಸ್ವತ್ತು. ಹೆಚ್ಚು ಸ್ವಾತಂತ್ರ ಕೊಟ್ಟರೆ ಮಕ್ಕಳು ಹಾದಿ ತಪ್ಪುತ್ತಾರೆ ಎಂದು, ಅತಿಯಾಗಿ ಮುಚ್ಚಟೆ ಮಾಡಿ ಬೆಳೆಸಿದರೆ, ಆ ಮಕ್ಕಳಿಗೆ ಹೊರಗಿನ ಪ್ರಪಂಚ ಜ್ಞಾನ ಸಿಗದೆಯೇ ಇರಬಹುದು. ಅಥವಾ, ಬಂಧವೆ ಬಂಧನವಾಗಿ ಪರಿಣಮಿಸಿ ಎಲ್ಲ ಕಟ್ಟುಪಾಡುಗಳನ್ನು ಮೀರಿ ಹೊರಡಬೇಕು ಎನ್ನುವ ಹಠ ಹುಟ್ಟಿಸುವ ಅಪಾಯಕಾರಿ ಮನಸ್ಥಿತಿಯನ್ನು ಸೃಷ್ಟಿಸಬಹುದು..! ನಾವು ಇತರರಿಗೆ ಕೊಟ್ಟು, ಪಡೆಯುವ ಗೌರವಾದರಗಳೆಲ್ಲ ನಮ್ಮ ಸಂಸ್ಕೃತಿಯ ಭಾಗವೇ ಆಗಿದೆ. ಇಲ್ಲಿ ಹೆಣ್ಣು ಗಂಡಿನ ಪ್ರಶ್ನೆಯಲ್ಲ. ಬಾಲ್ಯದಿಂದಲೇ ನೈತಿಕತೆಯ ಪಾಠಗಳು ಎಲ್ಲಾ ಮಕ್ಕಳಿಗೆ ಹೆತ್ತವರಿಂದ ಸಿಗುತ್ತಿದ್ದವು. ಅಲ್ಲಿ ಭೇದವಿರುತ್ತಿರಲಿಲ್ಲ. ಅವು ಕೇವಲ ಕೇಳಿ ತಿಳಿದ ಪಾಠಗಳಲ್ಲ. ಮನೆಯ ಹಿರಿಯರು, ತಂದೆ ತಾಯಿಯರನ್ನು ನೋಡಿ ಅನುಸರಿಸುತ್ತ ಕಲಿತ ಪಾಠಗಳು. ಹಾಗಾಗಿ ನಮ್ಮ ರಕ್ತದಲ್ಲಿ ಅವೆಲ್ಲ ಕಲೆತು ಹೋಗಿದ್ದವು. ಆದ್ದರಿಂದಲೋ ಏನೋ ಅಂದೆಲ್ಲ ಇಂದಿನತೆ ಮಾನನಷ್ಟ ಮೊಕದ್ದಮೆಗಳ ಹಾವಳಿ ಇರಲಿಲ್ಲ ಅನಿಸುತ್ತದೆ..!

ಆದರೆ ಇಂದು ನಾವು ನಮ್ಮ ಮಕ್ಕಳಿಗೆ ಕೊಡುತ್ತಿರುವ ಸಂಸ್ಕಾರ, ಸಂಸ್ಕೃತಿ ಎಂತದ್ದು? ಇನ್ನು ಚಿಕ್ಕ ವಯಸ್ಸಿನಲ್ಲೆ, ಚಿಕ್ಕ ಗಂಡು ಹೆಣ್ಣು ಮಕ್ಕಳೆ, ಕೈಕೈ ಹಿಡಿದು ನರ್ತಿಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗಳನ್ನು ಪಡೆಯಬೇಕು ಎನ್ನುವ ಹುಚ್ಚು ಹತ್ತಿಸುವಂದದ್ದು..! ಇಂತಹುದನ್ನು ಕಲಿಸಿ, ಮತ್ತೆಂತ ವ್ಯಕ್ತಿತ್ವವನ್ನು ನಾವು ನಿರೀಕ್ಷಿಸುತ್ತಿದ್ದೇವೆ? ಇದು ವಿಷಾದಕಾರ ಸತ್ಯ ಅಲ್ಲವೇ ?? ಯಾವ ಬೀಜ ಬಿತ್ತುತ್ತೆವೋ ಅಂತಹದೆ ಫಲ ಪಡೆಯುತ್ತೇವೆ. ನಮ್ಮ ಸಂಸ್ಕೃತಿಯ ಆಚರಣೆಗಳ ಹಿಂದಿನ ಸಾರ, ಸ್ವಾರಸ್ಯವನ್ನು ಅರ್ಥೈಸಿಕೊಂಡು, ಅನುಸರಿಸುವ, ನಮ್ಮೊಳಗೆ ಅಡಕಗೊಳಿಸಿಕೊಳ್ಳುವ ಸಾಮರ್ಥ್ಯವಿಲ್ಲದೆ, ಪಾಶ್ಚತ್ಯ ಸಂಸ್ಕೃತಿಯನ್ನು ತಳುಕು ಹಾಕಿಕೊಂಡು ಸಾಗುವ ದುರ್ಬಲತೆಯಡೆಗೆ ನಮ್ಮ ಸೋ ಕಾಲ್ಡ್ ಆಧುನಿಕ ಸಮಾಜ ಜಾರುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂಬುದು ನನ್ನ ಅಭಿಪ್ರಾಯ..! ನೀವೆನಂತೀರಿ..?

Article by

-ಪಲ್ಲವಿ ಚೆನ್ನಬಸಪ್ಪ