'ಬದುಕಿನಲ್ಲಿ' ಎಂಬ ಶಬ್ಧವನ್ನು ಬಿಡಿಸಿ, ಸ್ವಲ್ಪ ಬದಲಾಯಿಸಿ 'ಬದುಕಿ' ನಲಿ ಎಂದು ಮಾಡಿದರೆ ಎಷ್ಟೊಂದು ಅರ್ಥಗರ್ಭಿತ ಅಲ್ವಾ!

ಬದುಕು ಎಲ್ಲರಿಗೂ ರಹಸ್ಯ, ಅಲ್ಲಿ ನೋವಿದೆ, ನಲಿವಿದೆ, ಕತ್ತಲಿದೆ, ಬೆಳಕಿದೆ. ಈ ಊಹಿಸಲಾಗದ ಪಯಣದಲ್ಲಿ ಬರುವ ಕಷ್ಟಗಳಿಗೆ ತತ್ತರಿಸದೆ ಬಂದದ್ದನ್ನು ಬಂದಂತೆ ಸ್ವೀಕರಿಸುವ ಪ್ರಬುದ್ಧತೆ, ಪರಿಪಕ್ವತೆ ಬಂದಾಗ ಮಾತ್ರ ಬದುಕಿನಲ್ಲಿ ನಲಿಯುತ್ತೇವೆ. ನಲಿದಾಗಲೇ ನೈಜವಾಗಿ ಬದುಕುತ್ತೇವೆ, ಇಲ್ಲವಾದಲ್ಲಿ ಬದುಕು ಕಗ್ಗಂಟು. 

Image courtesy

ಯಾರು, ಯಾವ ಸ್ಥಾನದಲ್ಲಿ ಇರುತ್ತೇವೆಯೋ, ಯಾವ ಸ್ಥಿತಿಗತಿಯಲ್ಲಿ ಇರುತ್ತೇವೆಯೋ ಅಲ್ಲಿಯೇ ನಲಿಯುವ ಕಲೆ ನಮ್ಮದಾದಾಗ ಬದುಕು ನಗಲು ಪ್ರಾರಂಭವಾಗುತ್ತದೆ.

ಒಬ್ಬ ರೈತ ಬೆವರು ಸುರಿಸಿ ಕಷ್ಟಪಟ್ಟು ದುಡಿದು ಆ ದುಡಿಮೆಯಲ್ಲೇ ನಲಿಯುವನು, ಹೀಗಾಗಿ ಕಷ್ಟಗಳ ನಡುವೆಯೂ ಬಂದದ್ದನ್ನು ಬಂದಂತೆ ಸ್ವೀಕರಿಸಿ ನಲಿಯುತ್ತಲೇ ಇರುತ್ತಾನೆ. ಯಾವ ದಿನ ಈ ಮನಸ್ಥಿತಿಯಿಂದ ಹೊರಬಂದು ಲಾಭಾಂಶದ ಬೆನ್ನು ಹತ್ತುತ್ತಾನೆಯೋ ಆಗ ದುಡಿಮೆಯ ಬೆವರಿನ ನಲಿವು ಕಡಿಮೆಯಾಗುತ್ತಾ ವ್ಯಾವಹಾರಿಕನಾಗುತ್ತಾನೆ. ಇದರ ಅರ್ಥ ಇಷ್ಟೇ! ನಾವು, ಎಲ್ಲಿದ್ದೇವೆಯೋ ಅಲ್ಲಿಯೇ ನಲಿದಾಗ ಮಾತ್ರ ಬದುಕು ಅರ್ಥ ಪಡೆದುಕೊಳ್ಳುತ್ತದೆ.

ಒಂದು ದೊಡ್ಡ ಸಾಮ್ರಾಜ್ಯವಿತ್ತು, ಆ ಸಾಮ್ರಾಜ್ಯದ ಸುತ್ತಲೂ ದಟ್ಟ ಕಾಡು, ನದಿ, ಗಿರಿ ಶಿಖರಗಳು. ಸುತ್ತಲೂ ಚೀನಾ ಮಹಾಗೋಡೆಯಂತಹ ದೊಡ್ಡ ಕೋಟೆ. ಆ ಕೋಟೆಗೆ ದೊಡ್ಡದಾದ ಹೊರ ದ್ವಾರ ಬಾಗಿಲು. ಆ ಕೋಟೆಯ ಹೊರ ಬಾಗಿಲಿಗೆ ಶಕ್ತಿಯುತ ದ್ವಾರಪಾಲಕರ ಕಾವಲು.

ಆ ಸಾಮ್ರಾಜ್ಯದಲ್ಲಿ ಒಬ್ಬ ಮೈಗಳ್ಳ ಯುವಕನಿದ್ದ. ಅವನಿಗೆ ಯಾವ ವಿದ್ಯೆಗಳು ತಲೆಗೆ ಹತ್ತಿರಲಿಲ್ಲ. ಮುಂದೆ ಬದುಕಲ್ಲಿ ಬದುಕು ನಡೆಸುವುದು ದುಸ್ತರವಾಯ್ತು. ಅವನಿಗೆ ವಿದ್ಯೆಯಿಲ್ಲದಿರುವ ಕಾರಣ ಯಾರೂ ಕೆಲಸ ಕೊಡಲು  ಮುಂದಾಗಲಿಲ್ಲ. ಹೀಗಾಗಿ ಅವನಿಗೆ ಚಿಂತೆ ಪ್ರಾರಂಭವಾಯ್ತು. ಒಂದೊತ್ತಿನ ಊಟಕ್ಕೂ ಗತಿ ಇಲ್ಲದಂತಾಯಿತು. ಇದೇ ಸಮಯದಲ್ಲಿ ಆ ಸಾಮ್ರಾಜ್ಯದ ಕೋಟೆಯ ಹೊರ ಬಾಗಿಲು ಕಾಯಲು ದ್ವಾರ ಪಾಲಕರ ಕೆಲಸಕ್ಕೆ ನೇಮಕ ಪ್ರಾರಂಭವಾಗಿತ್ತು. ಚಳಿ, ಮಳೆ, ಬಿಸಿಲು ಎಲ್ಲವನ್ನೂ ಸಹಿಸಿ ನಿಲ್ಲುವ ಕಾವಲುಗಾರರನ ಅಗತ್ಯವಿತ್ತು. 

ಈ ಯುವಕ, ಆ ನೇಮಕಾತಿಯಲ್ಲಿ ಪಾಲ್ಗೊಂಡು ಆಯ್ಕೆಯಾದ. ಆ ಸಿಕ್ಕ ಕೆಲಸದಿಂದ ತುಂಬಾ ಸಂತೋಷಗೊಂಡ. ವೇತನ ಕಡಿಮೆಯಾದರೂ ಅವನ ಯೋಗ್ಯತೆಗೆ ತಕ್ಕಷ್ಟೇ ಸಿಕ್ಕ ಅವಕಾಶ ಅದಾಗಿತ್ತು. ಅವನ ಕೆಲಸ ಪ್ರಾರಂಭವಾಯ್ತು. ಅವನು ಇಷ್ಟ ಪಟ್ಟು ಸೇರಿದ್ದರಿಂದ ಆ ಕೆಲಸದಲ್ಲಿ ಬರುವ ಯಾವುದೇ ಕಷ್ಟಗಳು ಅವನಿಗೆ ಕಷ್ಟಗಳೇ ಎನಿಸುತ್ತಿರಲಿಲ್ಲ. ಸುಡುವ ಬಿಸಿಲಿರಲಿ, ಅತಿಯಾದ ಮಳೆಯಿರಲಿ, ಮೈ ಕೊರೆಯುವ ಚಳಿ ಇರಲಿ, ತನ್ನ ಕೆಲಸದಲ್ಲಿ ಸಂತೋಷದಿಂದ ನಲಿಯುತ್ತ ಬದುಕಿದ್ದ.

ಒಂದು ದಿನ ರಾಜನು ರಾಜ್ಯದಲ್ಲಿಯ ಆಗುಹೋಗುಗಳನ್ನು ನೋಡಿಕೊಳ್ಳಲು ರಾಜ್ಯವನ್ನು ಸುತ್ತುತ್ತಿದ್ದ. ಆಗ ಭಯಂಕರ ಕಾಶ್ಮೀರದಲ್ಲಿರುವಂತೆ ಭಯಾನಕ ಚಳಿಗಾಲವಿತ್ತು. ರಾಜನು ಅರಮನೆಯಿಂದ ಹೊರ ಬರುವಾಗ ಮೈತುಂಬಾ ಉಣ್ಣೆಯ ವಸ್ತ್ರಗಳನ್ನು ಧರಿಸಿ ಹೊರಬಿದ್ದರೂ, ತಾಳಲಾಗದ ಚಳಿ ಅದಾಗಿತ್ತು. ರಾಜನು ರಾತ್ರಿ ರಾಜ್ಯವನ್ನೆಲ್ಲಾ ಸುತ್ತಿ ಕೋಟೆಯ ಮುಖ್ಯ ದ್ವಾರಕ್ಕೆ ಬಂದು ವೀಕ್ಷಿಸಿದ. ಹೊರಗೆ ಕವಲುಗಾರನಾಗಿ ನಿಂತ ಈ ಯುವಕನನ್ನು ನೋಡಿದ. ಮೈ ಮೇಲೆ ಯಾವ ಉಣ್ಣೆಯ ಬಟ್ಟೆಯಿಲ್ಲ. ಕೇವಲ ತೆಳು ಬಟ್ಟೆಯಲ್ಲಿಯೇ ಕಾವಲು ಕಾಯುತ್ತಿದ್ದರೂ ಸ್ವಲ್ಪವೂ ನಡುಗದೆ ಹಾಡುತ್ತಾ ನಲಿಯುತ್ತಾ ಪಹರೆ ಕಾಯುವಲ್ಲಿ ತಲ್ಲೀನನಾಗಿದ್ದ.

ಇವನನ್ನು ನೋಡಿದ ರಾಜನು ಆಶ್ಚರ್ಯಚಕಿತನಾದ. ಅಬ್ಬಾ! ಇಷ್ಟು ಬಟ್ಟೆ ಮೈಮೇಲೆ ಹಾಕಿಕೊಂಡರೂ ನನಗೆ ಚಳಿ ತಡೆಯಲಾಗುತ್ತಿಲ್ಲ. ಹೀಗಿರುವಾಗ ಈ ಯುವಕ ಮೈ ಮೇಲೆ ಏನನ್ನೂ ಹಾಕದೆ ಅದು ಹೇಗೆ ಈ ಚಳಿಯನ್ನು ಸಹಿಸಿ, ಚಳಿಯೇ ಇಲ್ಲವೆನ್ನುವಂತೆ ಇರುವನಲ್ಲ ಎಂದು ಉದ್ಗಾರವನಿತ್ತ. ಅಯ್ಯೋ ಪಾಪ ಈ ಯುವಕನಿಗೆ ಏನಾದರೂ ಮಾಡಲೇಬೇಕು ಎಂದುಕೊಂಡು ಆ ಯುವಕನ ಹತ್ತಿರ ಬಂದ. ಇಷ್ಟೊಂದು ಭಯಾನಕ ಮೈಕೋರೆಯುವ ಚಳಿಯಲ್ಲಿ ನಿನಗೆ ಚಳಿ ಎನಿಸುತ್ತಿಲ್ಲವೇ ಎಂದು ಕೇಳಿದ. ಚಿಂತೆ ಮಾಡಬೇಡ ನಾನು ಅರಮನೆಗೆ ಹೋದ ತಕ್ಷಣವೇ ನಾಳೆಯೊಳಗೆ ಈ ಚಳಿಗೆ ನಿನಗೆ ಉಣ್ಣೆಯ ಬಟ್ಟೆಯನ್ನು ಕಳಿಸಿಕೊಡುತ್ತೇನೆ. ಈ ಚಳಿಯಿಂದ ನಿನಗೆ ರಕ್ಷಣೆಯನ್ನು ಒದಗಿಸುವಲ್ಲಿ ನಾನು ಸಹಾಯವನ್ನ ಮಾಡುತ್ತೇನೆ ಎಂದು ಅಭಯವನ್ನಿತ್ತು ರಾಜ್ಯದ ಒಳಗೆ ನಡೆದ.

ಎರಡು ದಿನಗಳ ನಂತರ ರಾಜನು ಹತ್ತಾರು ಜೊತೆ ಉಣ್ಣೆಯ ಬಟ್ಟೆಗಳ ವ್ಯವಸ್ಥೆ ಮಾಡಿ ಆ ಯುವಕನಿಗೆ ಕೊಟ್ಟು ಕಳುಹಿಸಿದ. ಆ ಬಟ್ಟೆಗಳು ಆ ಯುವಕನಿಗೆ ತಲುಪುವುದರೊಳಗೆ ಆ ಯುವಕ ತೀರಿ ಹೋಗಿದ್ದ, ಇದನ್ನು ಕೇಳಿ ರಾಜನು ಬೆಚ್ಚಿಬಿದ್ದ.

ಆದದ್ದು ಇಷ್ಟೇ! ಆ ರಾಜನು ಆ ಯುವಕನ ಹತ್ತಿರ ಬರುವವರೆಗೆ ಆ ಯುವಕ ಆ ಮೈ ಕೊರೆಯುವ ಚಳಿಯನ್ನು ಕೂಡ ಸಹಜವಾಗಿ ತೆಗೆದುಕೊಂಡು ಇದೇ ಸಹಜ ಬದುಕು ಇದೇ ನನ್ನ ಬದುಕು ಎಂದು ಒಳ ಮನಸ್ಸಿನಲ್ಲಿ ನಿರ್ಧರಿಸಿ ಕೆಲಸ ಮಾಡುತ್ತಿದ್ದ. ಹೀಗಾಗಿ ಅವನಿಗೆ ಯಾವ ಚಳಿಯ, ಯಾವ ಬಿಸಿಲಿನ, ಯಾವ ಮಳೆಯ ಗೊಡವೆ ಎನಿಸಿರಲಿಲ್ಲ. ಹೀಗಾಗಿ ಬದುಕಿನಲ್ಲಿ ಬದುಕಿ ನಲಿಯುತ್ತಿದ್ದ.

ಯಾವಾಗ ರಾಜನು ಬಂದು ಇದೋ ಈ ಮೈ ಕೊರೆಯುವ ಚಳಿ ಎಂದು ಚಳಿಯ ಬಗ್ಗೆ ಹೇಳಿ ಆ ಚಳಿಗೆ ರಕ್ಷಣೆಗಾಗಿ ಉಣ್ಣೆಯ ಬಟ್ಟೆಗಳನ್ನು ಕಳಿಸುತ್ತೇನೆ ಎಂದು ಅಭಯ ಹಸ್ತ ನೀಡಿದನೋ ಆ ಕ್ಷಣದಿಂದ ಆ ಯುವಕನಿಗೆ ಅಲ್ಲಿಯವರೆಗೂ ಇಲ್ಲದ ಚಳಿಯ ಅನುಭವ ಪ್ರಾರಂಭವಾಯಿತು. ಆ ಚಳಿಯನ್ನು ತಡೆಯಲಾಗಲಿಲ್ಲ. ಆ ಉಣ್ಣೆಯ ಬಟ್ಟೆಗಳು ಬರುವಷ್ಟರಲ್ಲಿ ಆ ಚಳಿಗೆ ಆ ಯುವಕ ಸತ್ತೇ ಹೋಗಿದ್ದ.

ತಾತ್ಪರ್ಯ ಇಷ್ಟೇ, ಯಾವ ಸ್ಥಿತಿಯಲ್ಲಿ ಇರುತ್ತೇವೆಯೋ ಆ ಸ್ಥಿತಿಯಲ್ಲಿಯೇ ಬದುಕಿ ನಲಿಯುವವರೆಗೆ ಬದುಕಿನಲ್ಲಿ ನಲಿವು ಇರುತ್ತದೆ. ಇಲ್ಲವಾದಲ್ಲಿ ನಲಿವು ಸಾಧ್ಯವಿಲ್ಲ. ಆಗ ಕೇವಲ ಬದುಕು ಮಾತ್ರವಾಗುತ್ತದೆ. ಹೀಗಾಗಿ ಬದುಕಿನಲ್ಲಿ 'ಬದುಕಿ' ನಲಿಯ ಬೇಕು.

ಧನ್ಯವಾದಗಳು. 

Article by

Dr. Rajashekar Nagur ✍️