ಇತ್ತೀಚಿನ ದಿನಗಳಲ್ಲಿ ಜನರನ್ನು ಅತಿ ಹೆಚ್ಚು ಕಾಡುತ್ತಿರುವ ಸಮಸ್ಯೆಯೆಂದರೆ ಮಾನಸಿಕ ಖಿನ್ನತೆ. ಅದರಲ್ಲೂ ಈ ಸಮಸ್ಯೆಗೆ ಬೇಗ ಒಳಗಾಗುವವರು ಸ್ತ್ರೀಯರೇ ಹೆಚ್ಚು.

ಈ ಮಾನಸಿಕ ಖಿನ್ನತೆ ಯಾಕಾಗಿ ಬರುತ್ತದೆ ?

ಆಧುನಿಕ ಜೀವನ ಶೈಲಿ, ಒತ್ತಡ, ನಮಗಾಗಿ ನಾವು ಕೊಡಲಾಗದ ಒಂದಷ್ಟು ಸಮಯ, ಸೂಕ್ಷ್ಮ ಮನಃಸ್ಥಿತಿ, ಅತಿಯಾದ ನಿರೀಕ್ಷೆ, ಕ್ಷಣಿಕ ವಿಷಯ ಸುಖಗಳ ಹಂಬಲ, ಈ ಎಲ್ಲವೂ ಮಾನಸಿಕ ಖಿನ್ನತೆಗೆ ಕಾರಣವಾಗುತ್ತಿವೆ. ವಿಶೇಷವಾಗಿ ಸ್ತ್ರೀಯರಿಗಾದರೆ ಕಾಡುವ ತಿಂಗಳ ಸಮಸ್ಯೆಯಿಂದ ಹಾರ್ಮೋನ್ ಗಳ ವ್ಯತ್ಯಾಸ, ಜೊತೆಗೆ ಜವಾಬ್ದಾರಿಗಳ ಹೊರೆ, ಕೆಲವು ಸಂಧರ್ಭಗಳ ನಿಭಾಯಿಸಲೇ ಬೇಕಾದ ಅನಿವಾರ್ಯತೆ, ಇಷ್ಟವಿದ್ದರೂ ಇರದಿದ್ದರೂ ಕೆಲವೊಮ್ಮೆ ಹೊಂದಿಕೊಂಡು, ಕೆಲವೊಂದನ್ನ ಸಹಿಸಿಕೊಂಡು ಮುನ್ನಡೆಯಲೇಬೇಕಲ್ಲ !! ಕಾರಣ ಅವಳು ಕರುಣಾಮಯಿ, ವಸುಂಧರೆ ಎಂಬ ಪಟ್ಟ ಕಟ್ಟಿದ್ದೇವಲ್ಲ. ಅದಕ್ಕೆ ತಕ್ಕಂತೆ ಆಕೆ ನಡೆದುಕೊಳ್ಳಲೆ ಬೇಕು. ಆ ಪಟ್ಟದಿಂದ ಆಕೆ ಆಚೀಚೆ ಸ್ವಲ್ಪ ಸರಿದಾಡಿದರು ಸಹಿಸಲಾರರು !! ಆದ್ದರಿಂದ ತನ್ನ ಕಾಲಡಿಯ ನೆಲ ಕುಸಿಯುತ್ತಿದ್ದರು ಆಕೆ ಮತ್ತೊಬ್ಬರಿಗೆ ಮಡಿಲು ನೀಡಿ ನೆರಳಾಗುವ ಹಸಿರ ಸೆಲೆ. ಹಾಗೆ ನೆರಳು ಪಡೆದವರಲ್ಲಿ ಎಷ್ಟು ಜನ ನಿಜಕ್ಕೂ ನೆರಳು ನೀಡಿದವಳಿಗೆ ಹೆಗಲಾಗುತ್ತಾರೆ !?. ಸೋತವಳ ಮನದ ಇಂಗಿತಗಳನ್ನು ಅರ್ಥೈಸಿಕೊಂಡು, ಅನುಸರಿಸಿಕೊಂಡು ನಡೆಯುವವರಿದ್ದಾರೆ ? ಇಂತಹ ಹತ್ತು ಹಲವಾರು ಕಾರಣಗಳು ಖಿನ್ನತೆಗೆ ಕಾರಣವಾಗಬಹುದು. ಆದರೆ ಚಿಕ್ಕ ಚಿಕ್ಕ ವಿಷಯಗಳೂ ಕೂಡ ದೊಡ್ಡ ಸಮಸ್ಯೆಗಳಿಗೆ ಎಡೆಮಾಡಿ ಕೊಡುತ್ತವೆ ಎಂಬುದoತೂ ಸತ್ಯ. ಇದರಿಂದ ಮಾನಸಿಕ ಆರೋಗ್ಯ ಕೇಂದ್ರಗಳು ಹೆಚ್ಚುತ್ತಿವೆ.

ಈಗ ಅರೋಗ್ಯ ಸುಧಾರಣೆಗಾಗಿ ಸಾಕಷ್ಟು ಮಾರ್ಗಗಳು, ಹೊಸ ಹೊಸ ಆವಿಷ್ಕಾರಗಳು ತೆರೆದುಕೊಂಡಿವೆ ನಿಜ. ಇದರಿಂದ ದೇಶದ ಅರ್ಥ ವ್ಯವಸ್ಥೆಗೆ ಕೊಂಚ ಸಹಾಯ ಆಗುತ್ತಿದೆಯೇ ಹೊರತು, ಜನರ ಆರೋಗ್ಯದ ಮಟ್ಟ ನಿಜಕ್ಕೂ ಬದಲಾಗಿದೆಯಾ..? ಎನ್ನುವ ಪ್ರಶ್ನೆ ಕಾಡುತ್ತದೆ. ಯಾರದೋ ಮಾತಿಗೆ ಮರುಳಾಗಿ, ಅಥವಾ ಮತ್ಯಾವ ಚಟಕ್ಕೋ ಸಿಕ್ಕಿ, ನಲುಗಿ, ಬಲಿಯಾಗುವವರು ಹೆಚ್ಚುತ್ತಿದ್ದಾರೆ. ಇದಕ್ಕೆಲ್ಲ ಮುಖ್ಯ ಕಾರಣದಲ್ಲಿ ಆಧುನಿಕ ಜೀವನ ಶೈಲಿಯದೆ ಹೆಚ್ಚು ಪಾಲು. ಕಾಲಕ್ಕೆ ತಕ್ಕಂತೆ ಬದಲಾವಣೆ ಅತ್ಯಗತ್ಯ. ಆದರೆ ಬದಲಾವಣೆ ಎಷ್ಟಿರಬೇಕು ? ನೆಮ್ಮದಿಯ ಬದುಕಿಗೆ ಎಷ್ಟು ಬೇಕೋ ಅಷ್ಟೇ ಇರಬೇಕು. ನಮ್ಮ ಸಂಸ್ಕೃತಿ ಸಂಸ್ಕಾರದ ಎಲ್ಲೆ ಮೀರುವಂತಹ ಬದಲಾವಣೆ ಅನಗತ್ಯ. ಪ್ರಪಂಚದ ಅತಿದೊಡ್ಡ ಮನಃಶಾಸ್ತ್ರ ಪುಸ್ತಕ ಎಂದರೆ ಅದು ಭಗವದ್ಗೀತೆ. ಮಾನವನ ಎಲ್ಲ ಸಮಸ್ಯೆಗಳಿಗು ನಮ್ಮ ಶಾಸ್ತ್ರ, ಪುರಾಣ, ಇತಿಹಾಸಗಳಲ್ಲಿ ಪರಿಹಾರವಿದೆ.

ಅದನ್ನು ಕಂಡುಕೊಳ್ಳವ ತಾಳ್ಮೆ ವಿರಳವಾಗಿದೆ ಅಷ್ಟೇ.

ಯೋಗ, ಧ್ಯಾನ, ಮುಂತಾದ ನಮ್ಮ ಆಚರಣೆಗಳೆಲ್ಲ ಬರಿ ದೈಹಿಕವಾಗಿ ಮಾತ್ರವಲ್ಲದೆ, ಮಾನಸಿಕವಾಗಿಯು ನಮ್ಮನ್ನು ಸದೃಢವಾಗಿಸುತ್ತವೆ. ಪ್ರಪಂಚವೇ ನಮ್ಮ ದೇಶದ ಶ್ರೀಮಂತ ಸಂಸ್ಕೃತಿ, ಸಂಸ್ಕಾರಗಳನ್ನು ಮೆಚ್ಚಿ ನಮ್ಮೆಡೆಗೆ ಮರಳುತ್ತಿರುವಾಗ, ನಮ್ಮವರು ಪಾಶ್ಚಾತ್ಯ ಸಂಸ್ಕೃತಿಗೆ ಮರುಳಾಗುತ್ತಿರುವುದು ವಿಪರ್ಯಾಸವೇ ಸರಿ. ಮರುಳಾಗುವುದು ಆಧುನಿಕತೆಯ ಒಂದು ಭಾಗವೋ, ಅಥವಾ ನಮ್ಮತನದ ಬಗ್ಗೆ ನಮಗಿರುವ ಉದಾಸೀನತೆಯೋ, ಅಥವಾ ಗಟ್ಟಿತನ ಉಳಿಸಿಕೊಳ್ಳಲಾಗದ ನಮ್ಮ ದೌರ್ಬಲ್ಯವೊ !?

ಸಮಸ್ಯೆ ಆಧುನಿಕಥೆಯದ್ದಲ್ಲ. ಅದರೊಳಗಿರುವ ನಮ್ಮ ಯೋಚನೆ, ಯೋಜನೆ, ಅಭಿಪ್ರಾಯಗಳ ಕಂತೆಗಳು ಸಾಗುವ ಹಾದಿಯದ್ದು..! ಜಗತ್ತಿನ ತಳುಕು ಬಳುಕಿಗೆ ಮರುಳಾಗಿ ಆರೋಗ್ಯ, ಬದುಕು ಎಲ್ಲವನ್ನೂ ಹಾಳು ಮಾಡಿಕೊಳ್ಳುತ್ತಿರುವ ಜನತೆ, ಇನ್ನಾದರು ಬದಲಾಗಬೇಕಿದೆ. ನಮ್ಮ ಸಮಸ್ಯೆಗಳು ನಮ್ಮದೇ ಆಯ್ಕೆಯ ಪರಿಣಾಮಗಳಾಗಿರುತ್ತವೆ. ಆದ್ದರಿಂದ ಆಯ್ಕೆ ಉತ್ತಮವಾಗಿರಲಿ..! ಎನ್ನುವುದು ನನ್ನ ಅಭಿಪ್ರಾಯ. ನೀವೇನಂತೀರಿ?

( "ಮನಯೇವ ಮನುಷ್ಯಾಣಾಂ, ಕಾರಣಯೋ ಬಂಧನ, ಮೋಕ್ಷಯಃ" ಯಾವುದೇ ಬಂಧನಕ್ಕು ಅಥವಾ ಮೋಕ್ಷ ಸಾಧನೆಗು ಮನಸ್ಸೇ ಕಾರಣ) ಏಳುಬೀಳುಗಳು ಸಾವಿರ ಬರಲಿ, ಮನಸ್ಸು ಸದೃಢವಾಗಿರಲಿ.

Article By

_ಪಲ್ಲವಿ ಚೆನ್ನಬಸಪ್ಪ ✍