ತುಮಕೂರು, ಜನವರಿ 02: ವಿದ್ಯಾರ್ಥಿಗಳು ಹಾಗೂ ಯುವ ಸಮೂಹವು ಗ್ರಾಹಕ ಜಾಗೃತಿಯ ವಿಚಾರಗಳ ವಿಶೇಷ ಗಮನಹರಿಸಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ವಿಜಯಲಕ್ಷ್ಮೀ ಜಿ.ಟಿ ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆ, ಅಖಿಲ ಭಾರತೀಯ ಗ್ರಾಹಕ ಪಂಚಾಯತ್, ಹಾಗೂ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಅಯೋಗದ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್ 30 ರಂದು ನಗರದ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾದ “ಗ್ರಾಹಕ ಜಾಗೃತಿ ಕಾರ್ಯಕ್ರಮ” ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಹಕರು ಜಾಗೃತಿ ಹೊಂದುವ ಮೂಲಕ ವಂಚನೆಯನ್ನು ಸಮರ್ಥವಾಗಿ ಎದುರಿಸಬಹುದು, ಮೋಸ ಹೋದ ಯಾವುದೇ ಗ್ರಾಹಕನು ತನಗಾದ ನಷ್ಟವನ್ನು ಹಿಂಪಡೆಯಲು ಗ್ರಾಹಕನು ವಾಸಿಸುವ ಅಥವಾ ಕೆಲಸ ಮಾಡುವ ಪ್ರದೇಶದ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ವಕೀಲರ ಅವಶ್ಯಕತೆ ಇಲ್ಲದೆ ನೇರವಾಗಿ ಸರಳವಾಗಿ ಲಿಖಿತ ರೂಪದಲ್ಲಿ ದೂರನ್ನು ಸಲ್ಲಿಸಬಹದಾಗಿದ್ದು, 5 ಲಕ್ಷದವರಗಿನ ಪ್ರಕರಣಗಳಿಗೆ ಸಂಪೂರ್ಣ ಉಚಿತ ನೆರವು ಇರುತ್ತದೆ, ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು, ವಿದ್ಯಾರ್ಥಿಗಳು ಕಾನೂನುಗಳ ಬಗ್ಗೆ ಅರಿವು ಹೊಂದಿ ಸುಶಿಕ್ಷತರಾಗಿ ವಸ್ತುಗಳೊಂದಿಗೆ ವ್ಯವಹರಿಸಬೇಕು, ತಂತ್ರಜ್ಞಾನದ ಮೂಲಕ ನಡೆಯುವ ಅಪರಾಧಗಳ ಬಗ್ಗೆ ಜಾಗರೂಕರಾಗಿರಬೇಕು ಎಂದರು.
ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಸದಸ್ಯೆ ನಿವೇದಿತಾ ರವೀಶ್ ರವರು ಕಥಾನಕಗಳ ಮೂಲಕ ಮಾನವನ ಜಾಗೃತಿ ಮತ್ತು ಅಭ್ಯುದಯದ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು ಗ್ರಾಹಕ ವ್ಯವಸ್ಥೆಯಲ್ಲಿ ನಡೆಯುವಂತಹ ಅನ್ಯಾಯಗಳ ಕುರಿತು ಪ್ರಶ್ನೆಗಳನ್ನು ಕೇಳಿ ಮತ್ತು ಅದನ್ನು ತಡೆಗಟ್ಟುವಂತಹ ಹಲವಾರು ಉಪಯುಕ್ತ ಮಾಹಿತಿಗಳನ್ನು ಬಗ್ಗೆ ಉತ್ತರ ಕಂಡುಕೊಂಡರು.
ಅಖಿಲ ಭಾರತೀಯ ಗ್ರಾಹಕ ಪಂಚಾಯತ್‍ನ ಗಾಯತ್ರಿ ನಾಡಿಗ್, ರಾಷ್ಟೀಯ ಸೇವಾ ಯೋಜನೆಯ ಡಾ. ಅರುಣ್ ಎಸ್ ಬಿ, ಅಖಿಲ ಭಾರತೀಯ ಗ್ರಾಹಕ ಪಂಚಾಯತ್‍ನ ಜಿಲ್ಲಾ ಕಾರ್ಯದರ್ಶಿ ರಘುರಾಮ್, ಸೇರಿದಂತೆ ಕಾಲೇಜು ವಿಧ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ: ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಯುಕ್ತವಾಗಿ ಗ್ರಾಹಕರ ವ್ಯಾಜ್ಯ ಪರಿಹರಿಸಲು ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸ್ಥಾಪಿಸಿದ್ದು, ಜಿಲ್ಲೆಯಲ್ಲಿ, ಅಶೋಕ ರಸ್ತೆಯ ರೆಡ್ ಕ್ರಾಸ್ ಕಟ್ಟಡದಲ್ಲ್ಲಿ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವಿದೆ, ಮೋಸಕ್ಕೊಳಗಾದ ಗ್ರಾಹಕರು ಪರಿಹಾರದ ನಿಟ್ಟಿನಲ್ಲಿ ದೂರು ಸಲ್ಲಿಸಲು ಸಂಪರ್ಕಿಸಬಹದು, ಹೆಚ್ಚಿನ ಮಾಹಿತಿಗೆ 0816-2273037 ಇ ಮೇಲ್ ವಿಳಾಸ: tmkdcf-ka@nic.in ಸಂಪರ್ಕಿಸಬಹುದು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷರಾದ ವಿಜಯಲಕ್ಷ್ಮೀ ಜಿ.ಟಿ ತಿಳಿಸಿದರು.