ದಿಲ್ಲಿಯ ಸುಲ್ತಾನ್‌ಪುರಿಯಲ್ಲಿ ಮಹಿಳೆಯ ಸ್ಕೂಟಿಗೆ ಕಾರು ಅಪಘಾತ ಮಾಡಿ ಮಹಿಳೆಯ ಶವದ ಸಹಿತ ಕಂಜಾವಾಲದವರೆಗೆ ನಾಲ್ಕು ಕಿಲೋಮೀಟರ್ ಎಳೆದೊಯ್ದ ಐವರಲ್ಲಿ ಮುಖ್ಯ ಆರೋಪಿ ಮನೋಜ್ ಮಿಟ್ಟಲ್ ಬಿಜೆಪಿ ಸದಸ್ಯ ಎಂದು ಎಎಪಿ‌ ವಕ್ತಾರ ಸೌರಬ್ ಭಾರದ್ವಾಜ್ ಹೇಳಿದ್ದಾರೆ.

Image courtesy

ಈ ಪ್ರಕರಣವು ದಿಲ್ಲಿಯ ಮಂಗೋಲ್ಪುರಿ ಪೋಲೀಸು ಠಾಣೆಯಲ್ಲಿ ದಾಖಲಾಗಿದೆ. ಪಕ್ಕದಲ್ಲೇ ಒಂದು ಬಿಜೆಪಿ ಹೋರ್ಡಿಂಗ್ ಇದ್ದು, ಅದರಲ್ಲಿ ಮಿಟ್ಟಲ್ ಫೋಟೋ ಇದೆ ನೋಡಿ ಎಂದು ಫೋಟೋಗಳನ್ನು ಸಹ ಸೌರಬ್ ಪೋಸ್ಟ್ ಮಾಡಿದ್ದಾರೆ.

ವಾಯುವ್ಯ ದಿಲ್ಲಿಯ ಅಮನ್ ವಿಹಾರ ನಿವಾಸಿ ಅಂಜಲಿ ಸಿಂಗ್ ಘೋರವಾಗಿ ಸಾವಿಗೀಡಾದವರು. ನನ್ನ ಮಗಳ ಮೇಲೆ ಲೈಂಗಿಕ ಕಿರುಕುಳ ನಡೆದಿದೆ ಎಂದು 20ರ ಮೃತ ಯುವತಿಯ ತಾಯಿ ರೇಖಾ ಆರೋಪ ಮಾಡಿದ್ದಾರೆ.

ಸ್ಕೂಟಿ ಮತ್ತು ಮಹಿಳೆಯ ಶವ ಸಮೇತ ನಾಲ್ಕು ಕಿಲೋಮೀಟರ್ ಎಳೆದೊಯ್ದರೂ ಕಾರಲ್ಲಿದ್ದವರಿಗೆ ಗೊತ್ತಾಗಿಲ್ಲ ಎನ್ನುತ್ತಾರಲ್ಲ, ಏನರ್ಥ ಎಂದು ಸೌರಬ್ ಕೇಳಿದ್ದಾರೆ. ಇದನ್ನು ಸಮರ್ಥಿಸುವ ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾರನ್ನು ವಜಾ ಮಾಡುವಂತೆಯೂ ಎಎಪಿ ಒತ್ತಾಯ ಮಾಡಿದೆ.

ಮಹಿಳೆ ಕಾರಿಗೆ ಸಿಕ್ಕಿ  ಎಳೆಯಲ್ಪಡುವಾಗ ಸಾರ್ವಜನಿಕರು 22 ಕರೆ ಮಾಡಿದ್ದು, ಪೋಲೀಸರು ಎಚ್ಚರಗೊಳ್ಳಲು ಅಷ್ಟು ಹೊತ್ತಾಯಿತೆ ಎಂದು ಎಎಪಿ ಛೇಡಿಸಿದೆ. ದಿಲ್ಲಿ ಬಿಜೆಪಿ ಮಾಧ್ಯಮ ವಕ್ತಾರ ಖುರಾನಾ ಅವರು ಪೋಲೀಸರು ಅಪರಾಧಿಗಳನ್ನು ಬಂಧಿಸಿದ್ದಾರೆ. ಶಿಕ್ಷೆ ಕೊಡಿಸುತ್ತಾರೆ ಎಂದು ಸಂಕ್ಷಿಪ್ತ ಹೇಳಿಕೆ ನೀಡಿದೆ.