ಲಕ್ಷ ವರುಷಗಳ ಹಿಂದೆ ನೀರಿಗೆ‌ ಬಿದ್ದ ಮರದ ಬೊಡ್ಡೆಯ ಮೇಲೆ‌ ಕುಳಿತು ನೀರಿನಲ್ಲಿ ಸವಾರಿ ಮಾಡಿದ ಮಾನವನು ಕೈ ಇಲ್ಲವೇ ಕೋಲು ಬಳಸಿ ಅದನ್ನು ನಡೆಸುವುದನ್ನು ಕಲಿತ.

ಬೊಡ್ಡೆ ದೋಣಿಯಾಗಿ, ದೋಣಿ ಮನೆಯಾಗಿ, ಭಾರೀ ಹಡಗಾಗಿ, ಐಷಾರಾಮಿ ಚಲಿಸುವ ಊರುಗಳಾಗಿ, ಯುದ್ಧ ವಾಹಕವಾಗಿ, ನೀರ್ಮುಳುಗ ವಾಹನ ಯುದ್ಧಾಸ್ತ್ರವಾಗಿ ನಾನಾ ಬದಲಾವಣೆ ಕಂಡಿದೆ. ನದಿ ದಾಟಿಸುವ, ಮೀನು ಹಿಡಿಯಲು ನೆರವಾದ ಮರ ಕಲಗಳು ಅಂದರೆ ಮರದ‌ ವಾಹನಗಳು ಆಟ ಪೈಪೋಟಿ ‌ವಾಹಕವಾದುದೂ ವಿಶೇಷ. ಮರದ ವಾಹನ ಇರುವವರೇ ಮರಕ್ಕಲರು ಮರಕಾಲರು.

ದೋಣಿ, ಗೊಂಡೋಲ, ಹಾಯಿ‌ ದೋಣಿಗಳನ್ನು ವೇಗವಾಗಿ ಓಡಿಸುವ ಸ್ಪರ್ಧೆ ಗ್ರೀಸ್, ರೋಮನ್ನರಲ್ಲಿ ಆರಂಭವಾದರೂ ಅದಕ್ಕೆ ಮೊದಲು ನಡೆದಿಲ್ಲ ಎಂದು ಹೇಳಲಾಗದು.

ಇಂದಿನ ಕಯಾಕ್ ಇವುಗಳ ಆರಂಭ ಎಸ್ಕಿಮೋಗಳಿಂದ. ತಂಡ್ರಾ ಮಂಜು ವಲಯದ ಇವರು ತಿಮಿಂಗಿಲದ‌ ಎಲುಬುಗಳಿಂದ ಚೌಕಟ್ಟು ಕಟ್ಟಿ ಅದಕ್ಕೆ ಪ್ರಾಣಿಗಳ ಚರ್ಮ ಬಳಸಿ ಕಯಾಕ್ ತಯಾರಿಸುತ್ತಿದ್ದರು. ಒಬ್ಬರೇ ಕುಳಿತು ಇದನ್ನು ಬಳಸಿ ಅವರು ನೀರು ಬೇಟೆ ನಡೆಸುತ್ತಿದ್ದರು. ಸೀಲ್, ಮೀನು ‌ಮೊದಲಾದವನ್ನು ಹಿಡಿಯುತ್ತಿದ್ದರು.

ದೋಣಿ ನಡೆಸಲು ಹುಟ್ಟು ಹಾಕುವ ಬಿದಿರು ‌ಇಲ್ಲವೇ ಜಲ್ಲ ಬಳಸುತ್ತಾರೆ. ಆಳ ಇರುವಲ್ಲಿ ಅದು ನೆಲ ಮುಟ್ಟುವುದಿಲ್ಲವಾದುದರಿಂದ ತುಲವು ಬಳಸಿದರು.

ಈ ತುಲವು‌ ಒಂದು ಬದಿ ಅಗಲ ಇರುವಂತಾದ್ದು. ಎರಡೂ ‌ಬದಿ‌ ತುಳೈ ಸಾಧ್ಯವಿರುವ ತುಲವು ಕಯಾಕ್‌ ನಡೆಸಲು ಬಳಸುತ್ತಾರೆ. ಸಾಮಾನ್ಯವಾಗಿ ಒಬ್ಬರೇ ನಡೆಸುವ ಕಯಾಕ್ ಇರುವುದಾದರೂ ಇಬ್ಬರು ನಡೆಸುವವು ಇತ್ತೀಚೆಗೆ ಚಲಾವಣೆಗೆ ಬಂದಿದೆ.

350 ವರುಷಗಳ ಹಿಂದೆ ರಶಿಯಾದಲ್ಲಿ ಆಧುನಿಕ ಕಯಾಕಿಂಗ್ ಚಾಲನೆ ‌ಪಡೆಯಿತು. 1800ರ ಹೊತ್ತಿಗೆ ಇಡೀ ಯೂರೋಪಿನಲ್ಲಿ ಕಯಾಕಿಂಗ್ ಜನಪ್ರಿಯ ಕ್ರೀಡೆ ಆಗಿತ್ತು. ಹಾಲೆಂಡ್ ದೇಶದವರು ಇತ್ತೀಚಿನ ‌ವರುಷಗಳಲ್ಲಿ ನಿರಂತರವಾಗಿ ಜಾಗತಿಕ ಕಯಾಕಿಂಗ್ ಕ್ರೀಡೆಯಲ್ಲಿ ಅತಿ ಹೆಚ್ಚಿನ ಪದಕಗಳನ್ನು ಗೆಲ್ಲುತ್ತಿದ್ದಾರೆ.

ಭಾರತ ಈ ಆಟದಲ್ಲಿ ತುಂಬ ಹಿಂದಿದೆ. ಆದರೆ ಇತ್ತೀಚೆಗೆ ಕೆಲವರು ಒಲಿಂಪಿಕ್ಸ್ ಅರ್ಹತೆ ಗಳಿಸುತ್ತಿದ್ದಾರೆ ಎಂಬುದು ಮಾತ್ರ ವಿಶೇಷ. 2018ರಲ್ಲಿ ಕೇರಳದಲ್ಲಿ ಲೋಕ ಮಟ್ಟದ ಕಯಾಕಿಂಗ್ ಪೈಪೋಟಿ ನಡೆದು  ಭಾರತದ ಕೆಲವು ಪ್ರತಿಭೆಗಳಿಗೆ ಅವಕಾಶ ದೊರೆಯಿತು. ಮುಂಬಯಿಯಲ್ಲಿ ಹೆಚ್ಚಾಗಿ ಕಯಾಕಿಂಗ್ ಗೆ ಅಗತ್ಯದ ವಸ್ತುಗಳು ತಯಾರಾಗುತ್ತವೆ.

ಕರ್ನಾಟಕದ ಕಯಾಕಿಂಗ್ ಕೇಂದ್ರವಾಗಿ ಈಗ ಕರಾವಳಿಯ ಹೆಜಮಾಡಿ ಗುರುತಿಸಿಕೊಂಡಿದೆ. ದೇಶ ಮಟ್ಟದ ಕಯಾಕಿಂಗ್ ಸ್ಪರ್ಧೆಗಳೂ ಅಲ್ಲಿ ‌ನಡೆದವು. ಕೌಸ್ತುಬ್ ಕಡೆ ಅವರು ಭಾರತದ ನಂಬರ್ ವನ್ ಕಯಾಕಿಂಗ್ ಚಾಂಪಿಯನ್ ಆಗಿದ್ದು ಲಿಮ್ಕಾ ದಾಖಲೆ ಮಾಡಿದ್ದಾರೆ. ನಮಿತಾ ಚಂದಾಲ್ ಅವರು ಇತ್ತೀಚೆಗೆ ಟೋಕಿಯೋ ಒಲಿಂಪಿಕ್ ಅರ್ಹತೆ ಪಡೆದರು.


-By ಪೇಜಾ