ಮನೆಯೆ ಮಂತ್ರಾಲಯ ಮನಸ್ಸೇ ದೇವಾಲಯ ಎಂಬ ಮಾತಿದೆ. ಆದರೆ ಪ್ರಸ್ತುತದಲ್ಲಿ ಇದು ಎಷ್ಟು ನಿಜವಾಗಿದೆ ಎಂಬುದನ್ನು ಯೋಚಿಸುವ ಪರಿಸ್ಥಿತಿಗೆ ತಲುಪಿರುವುದು ಶೋಚನೀಯ. ಒಬ್ಬ ವ್ಯಕ್ತಿಗೆ ವಿದ್ಯೆ/ಜ್ಞಾನ ಜೀವನದಲ್ಲಿ ಹೇಗೆ ಬಹುಮುಖ್ಯ ಪಾತ್ರ ವಹಿಸುತ್ತದೆಯೋ, ಆ ವ್ಯಕ್ತಿಯ ಸುತ್ತಮುತ್ತಲಿನ ವಾತಾವರಣವೂ ಅಷ್ಟೇ ಮುಖ್ಯವಾಗಿರುತ್ತದೆ.

ಚಿಕ್ಕಂದಿನಿಂದಲೂ ಯಾವುದೇ ಮನುಷ್ಯ, ಯಾವ ಪರಿಸ್ಥಿತಿ ಅಥವಾ ವಾತಾವರಣ ಮತ್ತು ವ್ಯಕ್ತಿಯ ಆದರ್ಶಗಳನ್ನು ನೋಡುತ್ತಾ ಬೆಳೆಯುತ್ತಾನೊ, ಬಹುಪಾಲು ಅವನ ನಂಬಿಕೆ, ಅನಿಸಿಕೆಗಳನ್ನು ಅದೇ ತಳಹದಿಯಲ್ಲಿ ಬೆಳೆಸಿಕೊಂಡಿರುತ್ತಾನೆ. ಮುಂದೆ ಬದುಕಿನಲ್ಲಿನ ಸಾಸಿರ ಏರಿಳಿತಗಳು ಬಂದಾಗಲು ಅವೆ ನಿಲುವಿನ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಾನೆ. ಇದು ಪೂರಕವು ಆಗಬಹುದು. ಕೆಲವೊಮ್ಮೆ ಮಾರಕವು ಆಗಬಹುದು. depend upon person and the situation.

ಆದರೆ ಬದುಕು ಎಲ್ಲರಿಗೂ ಒಂದೇ ತರಹದ ತಿರುವುಗಳಲ್ಲಿ ತಂದು ನಿಲ್ಲಿಸುವುದಿಲ್ಲ. ಪ್ರತಿಯೊಬ್ಬರ ಬದುಕು ಬೇರೆಯದೇ. ಎಲ್ಲರಿಗೂ ಬಿಸಿ ಮೃಷ್ಟಾನ್ನವೇ ದೊರೆಯುವುದಿಲ್ಲ. ಕೆಲವರಿಗೆ ತಂಗಳು ದಕ್ಕುತ್ತದೆ. ತಂಗಳಿಗು ಒಗ್ಗರಣೆ ಹಾಕಿಕೊಂಡು ಚಪ್ಪರಿಸುವ ಕಲೆ ಗೊತ್ತಿರಬೇಕು. ಅರ್ಥಾತ್ ಸಿಕ್ಕರುವುದರಲ್ಲೇ ಬದುಕು ಕಟ್ಟಿಕೊಂಡು ಹೊಟ್ಟೆ ತುಂಬಿಸಿಕೊಳ್ಳುವ ಕಲೆಯನ್ನು ರೂಢಿಸಿಕೊಳ್ಳಬೇಕು. ಕೆಲವರಿಗೆ ಒಂದು ತುತ್ತಿನ ಊಟಕ್ಕೂ ಗತಿಯಿರುವುದಿಲ್ಲ.

ಬದುಕಿನ ಓಣಿಯಲ್ಲಿ ಬರುವ ಪ್ರತಿ ಉಬ್ಬುತಗ್ಗುಗಳನ್ನು ಸಮಸ್ಥಿತಿಯಲ್ಲಿ ಸ್ವೀಕರಿಸಿ ಕಷ್ಟ ಬಂದಾಗ ಕುಗ್ಗದೆ, ಸಿರಿ ಬಂದಾಗ ಹಿಗ್ಗದೆ ಜೀವಿಸುವ ಮನಃಸ್ಥಿತಿಗೆ ನಮ್ಮನ್ನು ನಾವು ತೆರೆದುಕೊಂಡಾಗ ಬದುಕು ಮತ್ತಷ್ಟು ಸುಂದರ ಎನಿಸುತ್ತದೆ. ಜೊತೆಗೆ ನಮ್ಮ ಸುತ್ತಲಿನವರಿಗು ಮತ್ತು ನಮ್ಮ ಮುಂದಿನ ಪೀಳಿಗೆಗು ಇಂತಹ ಬದುಕಿನ ಚಿಕ್ಕ ಚಿಕ್ಕ ಪಾಠಗಳನ್ನು ಮತ್ತು ಆದರ್ಶಗಳನ್ನು ಕಲಿಸುವುದು ಕೂಡ ಈ ಸಮಾಜದ ಭಾಗವಾಗಿ ಬದುಕುತ್ತಿರುವ ನಮ್ಮ ಕರ್ತವ್ಯ / ಧರ್ಮ.

ಈಗೆಲ್ಲ ಆತ್ಮಹತ್ಯೆ, ಕೊಲೆ, ಸುಲುಗೆಗಳಂತ ಹೇಯ ಕೃತ್ಯಗಳು trend ಎಂಬಂತೆ ಹೆಚ್ಚಾಗುತ್ತಿರುವುದಕ್ಕೆ ಬಹುಪಾಲು ಕಾರಣವೆ ಅಸಹಾಯಕತೆ ಮತ್ತು ಖಿನ್ನತೆ. ಬಯಸಿದ್ದೆಲ್ಲ ಸಿಕ್ಕಿಬಿಡಬೇಕೆನ್ನುವ ಹಂಬಲ, ತನಗೆ ದಕ್ಕದ್ದು ಪರರಿಗು ಎಟಕಬಾರದೆನ್ನುವ ಮತ್ಸರ, ಸುಲಭವಾಗಿ ಸಿಕ್ಕು ಪೂರೈಸಿಕೊಂಡ ಅವಶ್ಯಕತೆಯ ನಂತರ ಶುರುವಾಗುವ ಮತ್ತೊಂದು ಬಯಕೆಯ ಸರಪಳಿ, ಇರುವುದರ ನಡುವೆ ಇಲ್ಲದಿರುವಿಕೆಯೆಡೆಗಿನ ಅತಿಯಾದ ಹಪಹಪಿ, possesiveness, ಅತಿಯಾದ ನಿರೀಕ್ಷೆ ಮನುಷ್ಯನಲ್ಲಿನ ತಾಳ್ಮೆಯನ್ನು ಪಾತಾಳಕ್ಕೆ ತಳ್ಳಿಬಿಡುತ್ತದೆ.

ಆಗ ಬಂದದ್ದನ್ನು ಎದುರಿಸುವ ಧೈರ್ಯ ಹಳ್ಳ ಹಿಡಿದು, ಬದುಕಿನ ಬವಣೆಗಳೊಂದಿಗೆ ನೇರಾನೇರ ಸಂಘರ್ಷಕ್ಕೆ ನಿಲ್ಲುವ ಶಕ್ತಿ ಕಮ್ಮಿಯಾಗುತ್ತದೆ. ಅಸಹಾಯಕತೆ ಕ್ರೋಧವನ್ನು, ಕೆಲವೊಮ್ಮೆ ಲೋಭವನ್ನು ಹುಟ್ಟು ಹಾಕುತ್ತದೆ. ಆಗ ಹುಚ್ಚು ಮನಸ್ಸು ಸಲ್ಲದ ಕೆಲಸಕ್ಕೆ ಕೈ ಹಾಕುವಂತೆ ಪ್ರೇರೇಪಿಸಿ ಅಡ್ಡದಾರಿ ಹಿಡಿಸುತ್ತದೆ.

ಬದುಕೇ ವ್ಯರ್ಥ, ಏನಿದೆ ಬದುಕಿನಲ್ಲಿ  ಎಂದುಕೊಂಡು ಚಿಕ್ಕ ಚಿಕ್ಕ ಸಮಸ್ಯೆಗಳನ್ನು ಎದುರಿಸಲಾಗದೆ ಸೋತು, ಜವಾಬ್ದಾರಿಗಳಿಂದ ನುಳಿಚಿಕೊಳ್ಳಲೆತ್ನಿಸುವುದರಿಂದ ಬದುಕು ಸುಧಾರಿಸುವುದಿಲ್ಲ. ಭಗವಂತನ ಸೃಷ್ಟಿಯಲ್ಲಿ ವ್ಯರ್ಥವೆನ್ನುವುದೇನು ಇಲ್ಲ. ಬೆಳಗ್ಗೆ ಎದ್ದಾಗ ಮಂದಹಾಸದಿಂದ ನಮ್ಮನ್ನು ಸ್ವಾಗತಿಸುವ ಸೂರ್ಯರಶ್ಮಿಯಿಂದ ಹಿಡಿದು, ನಿತ್ಯ ಚಲಿಸುವ ರಸ್ತೆ, ಅರಳಿ ಘಮಿಸುವ ಹೂಬಳ್ಳಿ, ಗೊತ್ತೇಯಿರದ ದಾರಿಹೋಕ, ಅನುಭವಗಳ ಬಂಢಾರವೆನಿಸುವ ಅಜ್ಜ, ಸೆರಗಿನ ತುದಿಯಲ್ಲಿ ಗಂಟಿಕ್ಕಿಕೊಂಡು ಕೊಡುವ ಅಜ್ಜಿಯ ಕಾಸು, ಜತನದಿಂದ ಬೆಳೆಸುವ ಅಪ್ಪ, ಜೀವ ಕೊಟ್ಟ ಅಮ್ಮ, ಜೀವನ ಕೊಡುತ್ತಿರುವ ಪ್ರಕೃತಿ, ಸಮಾಜ, ಶಿಕ್ಷಕರು, ಸ್ನೇಹಿತರು, ಹುಟ್ಟಿ ಬೆಳೆಯಲು ಆಸರೆಯಾದ ಸೂರು...ಅಬ್ಬಾ !ಮುಗಿಯದ ಈ listನಲ್ಲಿ ಕೆಲವರಿಗೆ ಕೆಲವು ದಕ್ಕಿರಬಹುದು ಅಥವಾ ಕೆಲವರಿಗೆ ಇವುಗಳ ಕೊರತೆಯಿರಬಹುದು.

ಬದುಕು ಇಷ್ಟೆಲ್ಲಾ ನಮ್ಮ ಪಾಲಿಗೆ ಕೊಟ್ಟಿದ್ದರು ಯಾವುದೋ ಒಂದು ವಸ್ತು/ವ್ಯಕ್ತಿಯ ಕೊರತೆಯ ಕಾರಣದಿಂದ ಬದುಕನ್ನೇ ಅಂತ್ಯಗೊಳಿಸಿಕೊಳ್ಳುವ ಅಥವಾ ಖಿನ್ನತೆಗೆ ಜಾರಿ ಹಾಳುಗೆಡವಿಕೊಳ್ಳುವ ಮನಃಸ್ಥಿತಿಗಳು ಬದಲಾಗಬೇಕು. ಇದಕ್ಕೆಲ್ಲ ಮುಖ್ಯ ಕಾರಣ, ನಾವು ಬೆಳೆವ ವಾತಾವರಣ. ಹಿಂದೆಲ್ಲ ಮನೆಯಲ್ಲಿ ಉತ್ತಮ ಸಂಸ್ಕೃತಿ, ಸಂಸ್ಕಾರ ನೀಡಿ ಮಕ್ಕಳನ್ನು ಬೆಳೆಸುತ್ತಿದ್ದರು. ಕಷ್ಟದ ಪರಿಚಯ ಮಾಡಿಸಿ, ಶ್ರಮದಿಂದ ದಕ್ಕಿದ ಫಲದ ರುಚಿಯ ಅರಿವು ಮೂಡಿಸಿರುತ್ತಿದ್ದರು. ಹಾಗಾಗಿ ಎಂತಹ ಪರಿಸ್ಥಿತಿಯೇ ಬಂದರು ಎದುರಿಸಿ ಬಿಡೋಣ ಅನ್ನುವಂತಹ ಒಂದು healthy ಮೊಂಡುತನ ಬೆಳದು ನಿಂತಿರುತ್ತಿತ್ತು ಮತ್ತು ಅದು ಒಳ್ಳೆಯದೆ.

ನಾನೇನೊ ಸಾಧಿಸಿಬಿಡುತ್ತೇನೆ ಎಂದು ಹೊರಟು, ಮೊದಲ ಪ್ರಯತ್ನದಲ್ಲಿ ಸಿಕ್ಕ ಸಣ್ಣ ಸೋಲಿಗೆ ಕೈಚೆಲ್ಲುವಂತಹ week ಅನ್ನಿಸುವಂತಹ ಮನಃಸ್ಥಿತಿ ಬೆಳೆಯಲು ಬಿಡಬಾರದು. ಎಷ್ಟೇ ಸೋಲುಗಳು ಬಂದರು, ಜಗತ್ತೇ ತಿರುಗಿಬಿದ್ದರು, ಒಳಗೊಂದು ಆತ್ಮವಿಶ್ವಾಸದ ಚಿಲುಮೆ ಉಕ್ಕುತ್ತಲೆ ಇರಬೇಕು. ಇಂತಹ ಆರೋಗ್ಯಕರ ಬೆಳವಣಿಗೆಯನ್ನು ಮೂಡಿಸುವುದು ಮತ್ತು ನಮ್ಮಮುಂದಿನ ಪೀಳಿಗೆಗೆ ಅದನ್ನು ಉಡುಗೊರೆಯಾಗಿ ನೀಡುವುದು ನಮ್ಮೆಲ್ಲರ ಕರ್ತವ್ಯ.

ಆದ್ದರಿಂದ ಮನೆಯೇ ಮಂತ್ರಾಲಯ, ಮನಸ್ಸೇ ದೇವಾಲಯ. ಪ್ರತಿ ಜ್ಞಾನ ಮತ್ತು ಶಿಕ್ಷಣದ ಆರಂಭ ಮನೆಯಿಂದಲೇ ಆಗುತ್ತದೆ. ಪರಿಸ್ಥಿತಿ ಮತ್ತು ಮನಸ್ಥಿತಿಗಳು ಉತ್ತಮವಾಗುವಂತಹ ಹವಾಮಾನ ಸೃಷ್ಟಿಸೋಣ ಮತ್ತು ಇರುವ ಸಮಾಜ ಉತ್ತಮನ್ನಾಗಿಸುವ ನಿಟ್ಟಿನಲ್ಲಿ ಬದುಕೋಣ.


-By ಪಲ್ಲವಿ ಚೆನ್ನಬಸಪ್ಪ