ಈ ಮಹಾಭಾರತ ರಾಮಾಯಣ ಕತೆಗಳ ಪದೇ ಪದೇ ಓದುವುದರಿಂದಾಗುವುದಾದರೂ ಏನು ಎಂದು ಹೇಳುವವರಿದ್ದಾರೆ.ಅದು ಒಂದು ಕ್ಷಣವಾದರೂ ನಮ್ಮ ಮನಸ್ಸಿಲ್ಲಿ ಸಮಾಧಾನ ಒಂದಿಷ್ಟು ಸಾಂತ್ವನವಾಗಿ ಒಳಿತು ಕೆಡಕುಗಳ ಅರಿವು ಮೂಡಿಸುವುದೆಂಬುವುದು ಕೂಡ ಸತ್ಯ.ಹೀಗೆ ಒಂದು ಘಟನೆ ನಡೆಯುತ್ತದೆ ಒಂದು ಸಲ ಗಂಡನ ಮನೆಯಲ್ಲಿ ನೊಂದು ಆತ್ಮಹತ್ಯೆಗೆ ಶರಣಾಗಬೇಕೆಂದು ಮನೆಯ ಹೊಸ್ತಿಲು ದಾಟಿ ಹೊರಗೆ ಬಂದ ಮಹಿಳೆ ಅಲ್ಲೆ ದೇವಸ್ಥಾನದಲ್ಲಿ ಕೆಲವು ನಿಮಿಷ ಕುಳಿತುಕೊಂಡಳು .ಅಲ್ಲಿ ಹರಿಕತೆಯೊಂದು ನಡೆಯುತ್ತಿರುತ್ತದೆ...ಮಹಾಭಾರತದ ಒಂದು ಸನ್ನಿವೇಶವನ್ನು ಹೇಳತಿರುತ್ತಾರೆ.

ಸಕಲ ರಾಜ್ಯ ವೈಭೊಗವಿಲ್ಲದೆ ಮಹಾರಥಿ ಬಲಶಾಲಿ ಭೀಮ ತನ್ನ ಅಜ್ಞಾತ ವಾಸ ಅಡುಗೆಯ ಭಟ್ಟನಾಗಿ ಯಾರದೊ ಮನೆಯ ಅಡುಗೆ ಮನೆಯಲ್ಲಿ  ಹರಕಲು ಚಾಪೆಯ ಮೇಲೆ ಮಲಗಿರುವ ಭೀಮನನ್ನು ನೋಡಿ ದ್ರೌಪದಿಯ ದುಃಖ ಉಮ್ಮಳಿಸಿ ಬರುತ್ತದೆ. ಕಷ್ಟವೆಂಬುವುದು ಯಾರನ್ನು ಬಿಟ್ಟಿಲ್ಲ.ಕಾಲ ಬರುವರೆಗೂ ಕಾಯಬೇಕು ಎಂಬ ಮಾತುಗಳು ಮನಮುಟ್ಟಿ ನನ್ನ ಕಷ್ಟಗಳಿಗೂ ಕೊನೆಯಿದೆ ಎಂದು ಮನೆಗೆ ಮರಳಿದಳು.

"ನಾವು ಒಳ್ಳೆಯದನ್ನೇ ಚಿಂತಿಸುತ್ತಿದ್ದರೆ ಒಳ್ಳೆಯವರೇ ಆಗುತ್ತೆವೆ ನಾವು ಏನು ಯೋಚಿಸುತ್ತೆವೆಯೊ ಅದೇ ಆಗಿ ಹೋಗುತ್ತೆವೆ" ಒಂದು ಪುಸ್ತಕ ಓದುತ್ತಿರುವಾಗ ಮನ ಮುಟ್ಟಿದ ಸಾಲು ಇದು. ನಿಜ ಮನದೊಳಗಿನ ಮನದ ನಿರ್ವಾಹಕನ ಮೇಲೆ ನಿಯಂತ್ರಣವಿರದಿದ್ದರೆ ಸಂತಸವೆಂಬುವುದು ಮರಿಚಿಕೆ.ಬದುಕು ಬಂದಂತೆ ಬದುಕು ನೊಂದು ಅಲ್ಲ ದುಃಖವನ್ನು ಕೊಂದು ಬದುಕಬೇಕು.ಸಣ್ಣ ಸಣ್ಣ ಸಮಸ್ಯೆಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ ದುಡುಕಿ ತನ್ನ ಬದುಕನ್ನ ಬಲಿಕೊಟ್ಟವರ ಸುದ್ದಿಗಳು ಕೇಳಿದಾಗ  ಮನಸ್ಸು ಮರುಗುತ್ತದೆ. ನಮ್ಮ ದುಃಖಕ್ಕೆ ನಮ್ಮದೆ ಕಾರಣ ಬೇಕಿಲ್ಲ ಬೇರೆಯವರ ದುಃಖಕ್ಕೂ ನಮ್ಮ ಕಣ್ಣು ಕೂಡ ಒದ್ದೆಯಾಗುವುದು.

ಅದಾರು ಹೆತ್ತ ಮಗಳೊ ಅಥವಾ ಮಗನೊ ದುರಂತವಾಗಿ ಬದುಕು ಕೊನೆಗಾಣಿಸಿದ್ಯಾಕೊ ಎನ್ನುತ್ತೆವೆ. ಸ್ವಲ್ಪ ಸಮಾಧಾನದಿಂದ ಯೋಚಿಸಿದ್ದರೆ ಸರಿ ಹೋಗುತ್ತಿತ್ತೆನೊ ಎಂಬ ಮಾತುಗಳು ಮನದಲ್ಲಿ ಮೂಡುತ್ತವೆ.ಸಾವು ಎಂಬುವುದು ಯಾವಾಗಲಾದರೂ ಒಂದು ದಿನ  ನಮ್ಮ ಕಣ್ಮುಂದೆ ಬಂದೇ ಬರುತ್ತದೆ  ಎಂಬುವುದು ಸೃಷ್ಠಿಯ ಸತ್ಯ.ಅದಾಗೆ ಬರುವವರೆಗೂ ನಮ್ಮ ಕರ್ತವ್ಯದಲ್ಲಿ ವ್ಯಸ್ಥವಾಗಿರಬೇಕು.ಆ ಸಾವನ್ನು  ನಾವೇ ಹುಡುಕಿಕೊಂಡು ಹೋಗುವುದು ಅಪರಾಧವೇ ಸರಿ. ಹಲವರಿಂದ ತುಳಿಯಲ್ಪಟ್ಟ  ಬೀಜ ರಸ್ತೆಯ ಬಿರುಕಿನಲ್ಲಿ ಸಿಲುಕಿ ಚಪ್ಪಲಿಗೆ ಅಂಟಿದ ಮಣ್ಣಿನಲ್ಲೆ ಅದುಮಿದ್ದರು ಮಳೆ ಹನಿ ಬಿದ್ದಾಗ ಬೇರೂರಿ ಚಿಗುರೊಡೆದು ತಲೆಯೆತ್ತಿ ಆಕಾಶ ನೋಡುತ್ತಿತ್ತು ಹುಲ್ಲು.ಹಾಗೇ ಬದುಕುವ ಉತ್ಸಾಹ ಉಸಿರಿರುವ ತನಕ ಇರಬೇಕು.


-By ಅಂಜಲಿ ಶಿದ್ಲಿಂಗ್