ಪ್ರಾರ್ಥನೆಗಳಿಗೆ ಅಪಾರವಾದ ಶಕ್ತಿ ಇದೆ.ಶ್ರದ್ಧೆ ನಂಬಿಕೆಗಳ ಹಿನ್ನೆಲೆಯಲ್ಲಿ ಇವು ಅಗಾಧ ಪರಿಣಾಮ ಬೀರುತ್ತವೆ.ಪ್ರಾರ್ಥನೆಗಳು ನಮಗೂ ಆ ದಿವ್ಯ ಶಕ್ತಿಗೂ ಸಂಪರ್ಕ ಕಲಿಸುವ ಹೆದ್ದಾರಿ. ಸದೃಢ ಶರೀರಕ್ಕೆ ಹೇಗೆ ಸತ್ವಯುತ ವಾದ ಆಹಾರ ಅವಶ್ಯಕವೋ ಹಾಗೆಯೇ ಮನಸ್ಸಿನ ಭಾವನೆಗಳ ಸಂಸ್ಕಾರಕ್ಕೆ ಪ್ರಾರ್ಥನೆಗಳು ಸಹಕಾರಿ. ಶುದ್ಧ ಮನಸ್ಸಿನಿಂದ ಮಾಡಿದ ಪ್ರಾರ್ಥನೆಗಳಿಂದ ಸತ್ಫಲ ದೊರೆಯುತ್ತದೆ.
ನಮ್ಮ ದಿನದಿನದ ಕೆಲಸಗಳಲ್ಲಿ ಕಾಣಬರುವ ಜಂಜಾಟ,ಮಾನಸಿಕ ಒತ್ತಡ, ಉದ್ವೇಗ, ಕಾಮ,ಕ್ರೋಧ ಮೊದಲಾದ ಅರಿಷಡ್ವರ್ಗಗಳ ಇತ್ಯಾದಿಗಳನ್ನು ನಿಯಂತ್ರಿಸಲು ಮಾನಸಿಕ ಶಾಂತಿ ತೃಪ್ತಿ ಹೊಂದಲು ಪ್ರಾರ್ಥನೆಗಳು ಸಹಾಯಕವಾಗುತ್ತದೆ.
ಭಾರತೀಯ ಸಂಸ್ಕೃತಿಯಲ್ಲಂತೂ ಪ್ರಾರ್ಥನೆಗಳಿಗೆ ವಿಶೇಷವಾದ ಸ್ಥಾನವಿದೆ. ವೇದೋಪನಿಷತ್ತುಗಳ ಕಾಲದಿಂದ ಹಿಡಿದು ಅತ್ಯಾಧುನಿಕ ಯುಗದಲ್ಲೂ ಪ್ರಾರ್ಥನೆ ನಮ್ಮ ಜನರ ಉಸಿರಲ್ಲಿ ಉಸಿರಾಗಿ ಬೆರೆತಿದೆ.
ಸ್ವತಃ ಪ್ರಸಿದ್ಧ ವೈದ್ಯರೂ ವೈದ್ಯ ವಿಜ್ಞಾನಿಗಳೂ ನೋಬೆಲ್ ಪ್ರಶಸ್ತಿ ಪುರಸ್ಕೃತರೂ ಆದ ಡಾ.ಅಲೆಕ್ಸಿಸ್ ಕ್ಯಾರೆಲ್ ಅವರ ಪ್ರಯೋಗಗಳು ಅನುಭವಗಳನ್ನು Man the Unknown ಗ್ರಂಥದಲ್ಲಿ ಎಂತಹ ಕಠಿಣ ಕಾಯಿಲೆಗಳನ್ನು ಪ್ರಾರ್ಥನೆಯ ಬಲದಿಂದ ಗುಣಪಡಿಸಲು ಸಾಧ್ಯವಿದೆ ಎಂದು ಜಗತ್ತಿಗೆ ಸಾರಿದ್ದಾರೆ.
ಸರಳತೆ ಮತ್ತು ಪ್ರಾಮಾಣಿಕ ಹೃದಯದಿಂದ ಪರಮಾತ್ಮನನ್ನು ಪ್ರಾರ್ಥಿಸಿ ಆಗ ನಿಮ್ಮ ಪ್ರಾರ್ಥನೆ ಫಲಕಾರಿಯಾಗುವುದು ಎಂದು ಹೇಳಿದ್ದಾರೆ ರಾಮಕೃಷ್ಣ ಪರಮಹಂಸರು.
-By ರೇಷ್ಮಾ ಶೆಟ್ಟಿ