ರೈಲುಗಳಲ್ಲಿ ಆಗುವ ಅತಿ ಜನದಟ್ಟಣೆಗೆ ಹೊರ ಟಿಕೆಟ್ ನೆಲೆಗಳನ್ನು ಒದಗಿಸಲಾಗಿತ್ತು. ಕೋವಿಡ್ 19 ಎಲ್ಲದಕ್ಕೂ ಶಟರ್ ಎಳೆಸಿದೆ.
ನಾಟಕಗಳು, ಪ್ರದರ್ಶನಾಲಯಗಳು, ಕಸರತ್ತು ನೋಟಗಳು ತಮ್ಮ ಕಲೆಗೆ ಶುಲ್ಕ ವಸೂಲು ಮಾಡುತ್ತವೆ. ಇದಕ್ಕೆಲ್ಲ ಐದಾರು ಸಾವಿರ ವರುಷಗಳ ಇತಿಹಾಸವಿದೆ. ಆದರೆ ಆಗೆಲ್ಲ ನಿಗದಿತ ಶುಲ್ಕಗಳು ಇರಲಿಲ್ಲ. ಸಾಧ್ಯವಿರುವಷ್ಟು ಸಹಾಯ ನೀಡುವುದು ಆಗಿನ ಕ್ರಮ. ಕೆಲವರು ಏನೂ ಕೊಡದೆಯೂ ನೋಡುವುದನ್ನು ತಡೆಯುವವರೂ ಇರಲಿಲ್ಲ.
ಗ್ರೀಕ್ ಮತ್ತು ರೋಮನ್ ನಾಗರಿಕತೆಯ ವೇಳೆ ಮ್ಯೂಸಿಯಂ ಮತ್ತು ನಾಟಕಗಳು ಎರಡೂ ಮಾದರಿಯವು ಇದ್ದವು. ಒಂದು ತೆರೆದ ರಂಗಮಂಚದವು. ಇದಕ್ಕೆ ಕೊಡುವವರು ಕೊಡಬಹುದು. ಇನ್ನೊಂದು ಮುಚ್ಚಿದ ರಂಗ ವೇದಿಕೆಯದು. ಇದಕ್ಕೆ ನಿಶ್ಚಿತ ಹಣ ಕೊಡಬೇಕು. ಆ ಶುಲ್ಕಚೀಟಿ ನೀಡಲು ಒಂದು ಗೂಡು ಆರಂಭವಾಯಿತು.
ಟೌನ್ ಹಾಲ್ ಎಂಡ್
ವಾಹನಗಳು ಜನರನ್ನು ಸಾಗಿಸತೊಡಗಿದ ಮೇಲೆ ಆಯಾ ದೂರ, ದರ್ಜೆ ಮೇಲೆ ಟಿಕೆಟ್ ದರ ಇರುತ್ತಿತ್ತು. ಹಣ ಪಡೆದು ಟಿಕೆಟ್ ಕೊಡಲು ಮರಿ ಮನೆಗಳು ತೆರೆದುಕೊಂಡವು. ಅದರಲ್ಲಿ ಹಣ ನೀಡಿ ಟಿಕೆಟ್ ಪಡೆಯುವ ಪುಟ್ಟ ಕಿಟಕಿಗಳಷ್ಟೆ ಇದ್ದವು. ರೈಲು ಮತ್ತು ಹಡಗು ಯಾನಗಳಲ್ಲಿ ಹೆಚ್ಚಿನ ಜನ ಸಾಗುವುದು ಇತ್ತಾದ್ದರಿಂದ ಹೆಚ್ಚು ಶುಲ್ಕಚೀಟಿ ನೀಡಿ ಹಣ ಸಂಗ್ರಹಿಸುವ ಗೂಡುಗಳನ್ನು ನಿರ್ಮಿಸುವ ಅನಿವಾರ್ಯ ಉಂಟಾಯಿತು. ದೊಡ್ಡ ರೈಲು ನಿಲ್ದಾಣಗಳಲ್ಲಿ ಸಾಲು ಟಿಕೆಟ್ ಕಿಟಕಿಗಳು ಇರುವುದನ್ನು ನೀವು ನೋಡಿರುತ್ತೀರಿ.
500ರಷ್ಟು ವರುಷಗಳ ಹಿಂದೆಯೇ ಮಾನವನು ಹಳಿಗಳ ಮೇಲೆ ಗಾಡಿ ಹೂಡಿ ಕಲ್ಲಿದ್ದಲನ್ನು ಗಣಿಗಳಿಂದ ಹೊರಗೆ ತಂದ. ಇದಕ್ಕೆ ಕುದುರೆ ಬಲ, ರಾಟೆ ಮತ್ತು ಮಾನವ ಶಕ್ತಿ ಇತ್ಯಾದಿ ಬಳಸಿದ. ಚಾದಂಗಡಿಯ ಕುದಿಯುವ ನೀರಿನ ಮೇಲಿನ ತಟ್ಟೆಯ ತಟಪಟ ಉಗಿಶಕ್ತಿ ಬಳಕೆಯ ಸಾಧ್ಯತೆ ತೋರಿಸಿದೆ. ಅದು ಬಳಕೆಗೂ ಬಂತು. ಗಣಿ ಸರಿಹೋಯ್ತು, ಸಣ್ಣ ಕೋಚ್ ಗಾಡಿಯಲ್ಲಿ ಎದುರು ದೊಡ್ಡ ಉಗಿಯಂತ್ರ ಸರಿ ಉಳಿಯಲಿಲ್ಲ. 250 ವರುಷಗಳ ಹಿಂದೆ ಉಗಿಬಂಡಿ ಹಳಿಗಳ ಮೇಲೆ ಜನ ವಸ್ತು ಸಾಗಿಸಲಾರಂಭಿಸಿದ್ದು ಸಾಗಣೆಯಲ್ಲಿ ದೊಡ್ಡ ಕ್ರಾಂತಿ.
ಬ್ರಿಟಿಷರು 1853ರ ಏಪ್ರಿಲ್ 16ರಂದು ಮುಂಬಯಿಯಲ್ಲಿ ಮೊದಲ ರೈಲು ಸಂಪರ್ಕ ಕಲ್ಪಿಸಿದರು. ಅದಕ್ಕೀಗ 168 ವರುಷ. ಭಾರತದ ರೈಲು ನಿಲ್ದಾಣಗಳು ಕಿಕ್ಕಿರಿದು ತುಂಬಿರುವುದು ಮಾಮೂಲು. ಆದರೆ ಕೊರೋನಾ ಬಂದು ಎಲ್ಲದಕ್ಕೂ ಮಿತಿ ಎಂದಿತು. ರೈಲು ನಿಂತವು, ಆರಂಭವಾದರೂ ಎಲ್ಲ ರೈಲುಗಳ ಓಡಲಿಲ್ಲ. ಜನರು ಕೂಡ ರೈಲು ಬಳಸುವುದು ಕಡಿಮೆ ಆಯಿತು. ಆದರೆ ಕೊರೋನಾ ಬರುವ ಮೊದಲು ಎಲ್ಲ ಕಡೆ ಸರತಿ ಸಾಲು, ನುಗ್ಗಾಟ. ಮಂಗಳೂರು ಅದಕ್ಕೆ ಹೊರತಲ್ಲ.
ವೆನ್ ಲಾಕ್ ಎಂಡ್
ಆದ್ದರಿಂದ ಮಂಗಳೂರು ಕೇಂದ್ರ ರೈಲು ನಿಲ್ದಾಣದ ಈಚೆ ವೆನ್ ಲಾಕ್ ಆಸ್ಪತ್ರೆ ಕಡೆಯಿಂದ ಒಂದು ಮತ್ತು ಟೌನ್ ಹಾಲ್ ಕಡೆಯಿಂದ ಒಂದು ಎಂದು ಎರಡು ಹೊರ ಟಿಕೆಟ್ ಕೌಂಟರುಗಳು ಆರಂಭವಾದವು. ಇವುಗಳಲ್ಲಿ ಆಗ ಹೊರಡುವ ರೈಲುಗಳಿಗೆ ಟಿಕೆಟ್ ದೊರೆಯುತ್ತಿತ್ತು ಹೊರತು ಮುಂಗಡ ಕಾಯ್ದಿರಿಸುವುದಕ್ಕೆ ಅವಕಾಶ ಇರಲಿಲ್ಲ. ಅಂಥ ಮುಂಗಡ ಮಾತ್ರ ಕಾಯ್ದಿರಿಸುವ ಕೇಂದ್ರಗಳು ಬೇರೆಯೇ ಇದ್ದವು. ಅವು ಸಾಮಾನ್ಯವಾಗಿ ರೈಲು ನಿಲ್ದಾಣದಿಂದ ದೂರ ಇದ್ದವು.
ಕರೆಂಟ್ ಟಿಕೆಟ್ ಕೊಡುವ ರೈಲು ನಿಲ್ದಾಣದ ಹೊರ ಕೌಂಟರುಗಳಲ್ಲಿ ತಲಾ ಟಿಕೆಟ್ ಒಂದಕ್ಕೆ ಒಂದು ರೂಪಾಯಿ ಮಾತ್ರ ಹೆಚ್ಚಿಗೆ ಪಡೆಯಲಾಗುತ್ತದೆ. ಆದರೆ ಮಂಗಳೂರಿನ ಎರಡೂ ಹೊರ ಶುಲ್ಕಚೀಟಿ ಗೂಡುಗಳು ಕೋವಿಡ್ ಒದೆಗೆ ತತ್ತರಿಸಿ ಮುಚ್ಚಿಹೋದವು. ರೈಲುಗಳು ಏಪ್ರಿಲ್ 1ರ ಬಳಿಕ ಮಾಮೂಲು ಓಡುತ್ತವೆ ಎನ್ನಲಾಗಿದೆ. ಆದರೆ ಅನುಮಾನ. ಜೊತೆಗೆ ಮಾರುವೇಷದ ಕೊರೋನಾ ವಯ್ರಸ್ ಬೇರೆ ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲ್ಲಿ ಎಂದು ಹೆದರಿಸುತ್ತಿದೆ. ಈ ಎಲ್ಲ ಕಾರಣದಿಂದ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದೀಚಿನ ಈ ಹೊರ ಶುಲ್ಕಚೀಟಿ ಗೂಡುಗಳು ಸದ್ಯ ಸೇವೆಗೆ ತೆರೆದುಕೊಳ್ಳುವ ಸಾಧ್ಯತೆಗಳು ಇಲ್ಲ.
-By ಪೇಜಾ