ಈ ಬಾರಿ ಪ್ರತಿಯೊಬ್ಬರಿಗೂ ಸುಂದರ ಸೂಕ್ತ ಆರೋಗ್ಯಕರ ಜಗತ್ತನ್ನು ನಿರ್ಮಿಸೋಣ ಎಂಬ ಧ್ಯೇಯ ವಾಕ್ಯದೊಡನೆ ಲೋಕ ಆರೋಗ್ಯ ದಿನ ಆಚರಿಸಲಾಗುತ್ತಿದೆ. ವರ್ಲ್ಡ್ ಹೆಲ್ತ್ ಡೇ ಎಂಬುದನ್ನು ಲೋಕ ಆರೋಗ್ಯ ದಿನ ಎನ್ನಬೇಕೇ ಹೊರತು ವಿಶ್ವ ಆರೋಗ್ಯ ದಿನ ಎನ್ನಬಾರದು. ಯುನಿವರ್ಸ್ ಎಂಬುದಕ್ಕೆ ವಿಶ್ವ ಎಂಬುದನ್ನು ಬಳಸುವಾಗ ಅದಕ್ಕಿರುವ ವ್ಯಾಪಕತೆ ದೊಡ್ಡದು. ಲೋಕದ ಹಾಗೆಯೇ ಜಗತ್ತು ಎಂಬುದನ್ನು ಬಳಸಬಹುದು ಹೊರತು ವಿಶ್ವವನ್ನಲ್ಲ. ಲೋಕವನ್ನು ಕುಲಗೆಡಿಸಿರುವ ಮಾನವ ವಿಶ್ವದ ಆರೋಗ್ಯ ರಕ್ಷಣೆ ಮಾಡುತ್ತಾನೆ ಎಂಬ ನಂಬಿಕೆ ಯಾರಿಗೆ ತಾನೆ ಇರಲು ಸಾಧ್ಯ?
ಒಂದು ಕಡೆ ಬೊಜ್ಜು ಮಕ್ಕಳು ಮತ್ತೊಂದು ಕಡೆ ನರಪೇತಲ ಮಕ್ಕಳು. ಹಿರಿಯರಿಗೂ ಇದು ಅನ್ವಯಿಸುತ್ತದೆ. ಬೊಜ್ಜು ಇಲ್ಲವೇ ಅಪೌಷ್ಟಿಕತೆ ಎರಡು ಸಹ ಆರೋಗ್ಯದ ಲಕ್ಷ್ಮಣ ಅಲ್ಲ. ಜಗತ್ತಿನಲ್ಲಿ ಅದರಲ್ಲೂ ಭಾರತದಲ್ಲಿ ಮಾನಸಿಕ ಆರೋಗ್ಯ ಕೂಡ ಗಂಭೀರ ಸಮಸ್ಯೆಯಾಗಿದೆ. ನಮಗೆ ಗೊತ್ತಿರಲಿ ಗೊತ್ತಿಲ್ಲದಿರಲಿ ಜಗತ್ತಿನ ಪ್ರತಿ 20 ಜನರಲ್ಲಿ ಒಬ್ಬರು ಮನೋಬಾಧಿತ ಸೈಕೋಪಾತ್ ಇದ್ದಾರೆ ಎಂದು ಜಾಗತಿಕ ಆರೋಗ್ಯ ಸಂಸ್ಥೆ ಹೇಳಿದೆ. ಭಾರತದಲ್ಲಿ ಇದು 10ಕ್ಕೆ ಒಂದು ಎಂದು ಒಂದು ಲೆಕ್ಕಾಚಾರ ಇದೆ. ಇದು ಆತಂಕಕಾರಿ.
ಅನೈತಿಕ ಪೋಲೀಸ್ ಗಿರಿ, ಪಬ್ಜಿ ಮಾದರಿಯ ಆಟದ ಮಾಟದ ಕೊಲೆ, ಧಾರ್ಮಿಕ ಗೂಂಡಾಗಿರಿ ಇವೆಲ್ಲ ಇಂತಹ ಮನೋಭಾವಗಳೇ ಆಗಿವೆ. ನೀರು, ಗಾಳಿ, ಪರಿಸರ, ಆಹಾರ ಇವು ನಾಲ್ಕು ಆರೋಗ್ಯದ ಮೂಲಭೂತ ಸಂಗತಿಗಳು.
ನೀರು ಈಗಾಗಲೇ ಜಗಳದ ವಿಷಯ. ಕಾಸು ಕೊಟ್ಟು ಬಾಟಲಿ ನೀರು ಕುಡಿಯುವ ಸ್ಥಿತಿ ಅಧಿಕರಿಸಿದೆ. ಗಾಳಿಗೆ ಕಾಸಿಲ್ಲ ಎನ್ನುವಂತಿಲ್ಲ. ಕೊರೋನಾ ಕಾಲದಲ್ಲಿ ಆಮ್ಲಜನಕ ಸಿಲಿಂಡರ್ ಪೂರೈಕೆ ವ್ಯಾಪಾರ ಕಳ್ಳ ಮಾರುಕಟ್ಟೆ ಸಹ ಮುಟ್ಟಿತ್ತು. ಪರಿಸರ ಕೆಡಿಸಿರುವ ಮಾನವ ಭೂಬಿಸಿಯ ಪರಿಣಾಮವನ್ನು ಈಗಾಗಲೇ ಎದುರಿಸುತ್ತಿದ್ದಾನೆ. ಆಹಾರ ಪೋಲು ಒಂದು ಕಡೆ, ಆಹಾರಕ್ಕೆ ಹಾಹಾಕಾರ ಮಗದೊಂದು ಕಡೆ ಅದು ಇಂದಿನ ಜಗತ್ತು. ಜಗತ್ತಿನಲ್ಲಿ ಇಂದಿಗೂ 27 ಶೇಕಡಾ ಜನರು ಊಟದ ಸಮಸ್ಯೆ ಎದುರಿಸುತ್ತಿದ್ದಾರೆ. ಅದರಲ್ಲಿ 40 ಶೇಕಡಾ ಭಾರತೀಯರೇ ಆಗಿದ್ದಾರೆ. ಭಾರತದ 48 ಕೋಟಿ ಜನ ಆಹಾರದ ಸಮಸ್ಯೆ ಎದುರಿಸುತ್ತಿದ್ದರೆ, 27 ಕೋಟಿ ಜನರು ಒಪ್ಪತ್ತೂಟದಲ್ಲಿ ದಿನ ದೂಡುತ್ತಿದ್ದಾರೆ. ಕಾಂಗ್ರೆಸ್ ಸರಕಾರ ತಂದ ಆಹಾರ ಭದ್ರತೆ ಕಾಯ್ದೆಯನ್ನು ಬಿಜೆಪಿ ಬಿಟ್ಟಿಲ್ಲವಾದರೂ ಕಡ್ಡಿ ಹಾಕುವ ಕೆಲಸ ಅಧಿಕ.
ಸ್ವಾತಂತ್ರ್ಯ ಪೂರ್ವದಲ್ಲಿ ಕರ್ನಾಟಕದಲ್ಲಿ ಬಾಸೆಲ್ ಮಿಶನ್, ಕೇರಳದಲ್ಲಿ ಲಂಡನ್ ಮಿಶನ್, ಕೊಲ್ಲಾಪುರ ಕಡೆ ಅಮೆರಿಕನ್ ಮಿಶನ್, ಸ್ವಿಸ್ ಮಿಶನ್, ಕೆನಡಾ ಮಿಶನ್ ಮೊದಲಾದವರು ಸೇವೆ ಸಲ್ಲಿಸಲೆಂದೇ ಆಸ್ಪತ್ರೆ ತೆರೆದಿದ್ದರು. ಸ್ವತಂತ್ರ ಭಾರತದಲ್ಲಿ ನಮ್ಮವರು ತೆರದ ಆಸ್ಪತ್ರೆಗಳು ವ್ಯಾಪಾರ ದೃಷ್ಟಿಯನ್ನು ಗಟ್ಟಿ ಮಾಡಿವೆ.
1948ರಲ್ಲಿ ಜಿನೀವಾ ಜಾಗತಿಕ ಆರೋಗ್ಯ ಶೃಂಗ ಸಭೆಯಲ್ಲಿ ವಿಶ್ವ ಸಂಸ್ಥೆಯ ಜಾಗತಿಕ ಆರೋಗ್ಯ ಸಂಸ್ಥೆಯು ಲೋಕ ಆರೋಗ್ಯ ದಿನ ಆಚರಿಸುವ ತೀರ್ಮಾನ ತೆಗೆದುಕೊಂಡಿತು. ಅದರಂತೆ 1950 ಏಪ್ರಿಲ್ 7 ಮೊದಲ ಲೋಕ ಆರೋಗ್ಯ ದಿನವು ನಿಮ್ಮ ಆರೋಗ್ಯ ಸೇವೆಗಳನ್ನು ಅರಿತುಕೊಳ್ಳಿ ಎಂಬ ಧ್ಯೇಯ ವಾಕ್ಯದೊಡನೆ ಆರಂಭವಾಯಿತು. 1951ರ ಧ್ಯೇಯ ವಾಕ್ಯ ಲೋಕದ ಎಲ್ಲ ಮಕ್ಕಳಿಗೆ ಆರೋಗ್ಯ ಎಂಬುದಾಗಿತ್ತು.2009ರ ಲೋಕ ಆರೋಗ್ಯ ದಿನದ ಧ್ಯೇಯ ವಾಕ್ಯ ಆಸ್ಪತ್ರೆಗಳನ್ನು ಸುರಕ್ಷಿತವಾಗಿಸಿ ಎನ್ನುವುದಾಗಿದೆ. ಆಸ್ಪತ್ರೆಗಳು ಯಾರಿಗೆ ಸುರಕ್ಷಿತ. ಹಣ ಉಳ್ಳವರಿಗೆ ಮಾತ್ರ ಸುರಕ್ಷಿತ ಆಗಿವೆ. ಬಡವರಿಗೆ ಹೆಣಬಂಧ ಎನಿಸಿವೆ.
ಕೊರೋನಾ ಕಾಲದಲ್ಲಿ ಆಸ್ಪತ್ರೆಗಳು ಮಾಡಿದ ವ್ಯಾಪಾರ ನಾಚಿಕೆಗೇಡಿನದು. ಭಾರತದಲ್ಲಿ ಸರಕಾರಗಳೇ ಅದನ್ನು ಬೆಂಬಲಿಸಿದವು. 2020ರ ಏಪ್ರಿಲ್ 7ರ ಧ್ಯೇಯ ವಾಕ್ಯ ನರ್ಸ್ ಮತ್ತು ಮಿಡ್ ವೈಫ್ ಗಳಿಗೆ ಸಹಕರಿಸಿ ಎನ್ನುವುದಾಗಿತ್ತು. ಕೊರೋನಾ ಕಾಲದಲ್ಲಿ ಅವರು ತೊಂದರೆ ಅನುಭವಿಸಿದರು. ಆಸ್ಪತ್ರೆಗಳು ಆರೋಗ್ಯದ ಹೆಸರಿನಲ್ಲಿ ಅವರನ್ನು ದುಡಿಸಿ ತಾವು ಗಂಟು ಕಟ್ಟಿಕೊಂಡವು.
2015ರಲ್ಲಿ ಲೋಕ ಆರೋಗ್ಯ ದಿನದ ಧ್ಯೇಯ ವಾಕ್ಯ ಹೊಲದಿಂದ ತಟ್ಟೆಗೆ ಆರೋಗ್ಯ ಎಂದಿತ್ತು. ಆಗ ಭಾರತದಲ್ಲಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಸರಕಾರವು ಹೊಲ ಕಿತ್ತುಕೊಂಡರೆ ಆರೋಗ್ಯ ಎಂದಿತು ಎನ್ನಬಹುದು. ಈಗಂತೂ ಅದು ರೈತರ ಪ್ರತಿಭಟನೆಗೆ ಕವಡೆ ಕಿಮ್ಮತ್ತು ಕೂಡ ಕೊಡುತ್ತಿಲ್ಲ.
ಲೋಕದ ಆರೋಗ್ಯ ಕೆಲವರ ವ್ಯಾಪಾರ ವಹಿವಾಟು ಆಗಿರುವ ವರೆಗೆ ಲೋಕ ಆರೋಗ್ಯ ದಿನಾಚರಣೆಗೆ ಅರ್ಥ ಹುಡುಕಲಾಗದು. ಅದೊಂದು ಸಾಂಪ್ರದಾಯಿಕ ಸರಕಾರೀ, ವೈದ್ಯ ಸಿಬ್ಬಂದಿಗಳ ಆಚರಣೆ ಆಗಿ ಮಾತ್ರ ಉಳಿದಿದೆ.
-By ಪೇಜಾ