ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟ ಎನ್ನಲಾದ ಹಾಗೂ ಬ್ರಿಟಿಷರಿಂದ ಕಲ್ಯಾಣಪ್ಪ ಕಾಟಕಾಯಿ ಎನ್ನಲಾದ 1837ರ ಸ್ವಾತಂತ್ರ್ಯ ಸಂಗ್ರಾಮವು ನೆನಪಿಸಿಕೊಳ್ಳಬೇಕಾದ ಘಟನೆಗಳಲ್ಲಿ ಒಂದಾಗಿದೆ. ಇದರ ಹಿಂದೆ ಎರಡ್ಮೂರು ಕಾರಣಗಳು ಇವೆ. ಕಂದಾಯವನ್ನು ಹಣದ ರೂಪದಲ್ಲಿಯೇ ನೀಡಬೇಕು ಎಂದು ‌ಆದೇಶ ಮಾಡಿದ್ದು. 1834ರಲ್ಲಿ ಕೊಡಗಿನ ಕೊನೆಯ ರಾಜ ಚಿಕ್ಕವೀರನನ್ನು ಗಡಿಪಾರು ಮಾಡಿ ಕಾಶಿಗೆ ಅಟ್ಟಿದ್ದು. ಅಮೆರಿಕದಿಂದ ಬ್ರಿಟಿಷರು ತರಿಸುವ ಹೊಗೆಸೊಪ್ಪು ಮಾರಾಟಕ್ಕಾಗಿ ಸ್ಥಳೀಯ ಹೊಗೆಸೊಪ್ಪಿಗೆ ತಡೆ. ತುಳು ಭಾಷಿಕರಿದ್ದ ಸುಳ್ಯ, ಬೆಳ್ಳಾರೆ ಪ್ರದೇಶಗಳನ್ನು ಆಗಿನ ಕೆನರಾ ಜಿಲ್ಲೆಗೆ ಸೇರಿಸಿದ್ದು.

ಚಿಕ್ಕವೀರ ರಾಜನ ವಾರಸುದಾರ ಇಬ್ಬರು ಕೊಡಗಿನ ಹಾಲೇರಿ ವಂಶದ ಆಡಳಿತವನ್ನು ಮತ್ತೆ ಸ್ಥಾಪಿಸಲು ನಡೆಸಿದ ಪ್ರಯತ್ನ ಇದರ ಹಿಂದೆ ಇದೆ. ಇದು ಪ್ರಾದೇಶಿಕ ದೇಶೀಯತೆ ಹೋರಾಟವಾದರೂ ಸ್ವಾತಂತ್ರ್ಯ ಹೋರಾಟದ ಒಂದು ಭಾಗವೇ ಆಗುತ್ತದೆ. ಈ ಹೋರಾಟದಲ್ಲಿ ಅಂತಿಮವಾಗಿ ಎಲ್ಲ ಜಾತಿ ಜನರು ಪಾಲ್ಗೊಂಡರೂ ಸುಳ್ಯದಲ್ಲಿ ಸಂಘಟನೆ ನಡೆದುದರಿಂದ ಇದನ್ನು ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟ ಎಂದು ಹೇಳುತ್ತಾರೆ. ಅದಕ್ಕೆ ತಕ್ಕಂತೆ ಸುಳ್ಯದ ಅರೆಭಾಷೆಯ ಗೌಡ ಸಮುದಾಯದವರು ಈ ಹೋರಾಟದಲ್ಲಿ ಮುಖ್ಯ ಪಾತ್ರ ವಹಿಸಿದ್ದರು.

ಅಪರಂಪಾರ ಹೆಸರಿನಲ್ಲಿ ಅಣ್ಣ, ಕಲ್ಯಾಣಸ್ವಾಮಿ ಹೆಸರಿನಲ್ಲಿ ತಮ್ಮ ಕೊಡಗು ಕಳೆದುಕೊಂಡ ರಾಜ್ಯದ ಸ್ಥಾಪನೆಗಾಗಿ ಸಂಘಟನೆಗೆ ಕೈ ಹಾಕುತ್ತಾರೆ. ಸುಳ್ಯ ಸುತ್ತಿನ ಗೌಡ ಸಮುದಾಯದವರು ಅವರ ಹಿಂದೆ ನಿಲ್ಲುತ್ತಾರೆ. ಕೆದಂಬಾಡಿ ರಾಮಯ್ಯ ಗೌಡ ಈ ವಲಯದಲ್ಲಿ ಈ ಹೋರಾಟದ ಪ್ರಮುಖ ನಾಯಕರು. ಇವರು ತಮ್ಮ ಮಗಳ ಮದುವೆಯನ್ನು ಹೋರಾಟಕ್ಕೆ ಜನ ಸಂಘಟನೆಗಾಗಿ ಬಳಸಿಕೊಂಡುದು ರೋಚಕವಾದ ಇತಿಹಾಸವಾಗಿದೆ. ಹಾಲೇರಿ ಆಡಳಿತ ಮತ್ತೆ ಬಂದರೂ ಸರಿ, ಬ್ರಿಟಿಷರ ಆಡಳಿತ ಬೇಡ ಎಂಬುದು ಇವರ ನಿಲುವು.

ಕೆಲವರಲ್ಲಿ ಕೋವಿ ಇದ್ದರೂ ಹೆಚ್ಚಿನವರು ತರಬೇತಿ ಇಲ್ಲದ ಸೈನಿಕರು. ಕೈಗೆ ಸಿಕ್ಕಿದ ಆಯುಧ ಹಿಡಿದು ಹೋರಾಡಿದವರೇ ಹೆಚ್ಚು. ಕೊತ್ತಲ್ಂಗೆಯಿಂದ ತರ್ಕತ್ತೆವರೆಗೆ ಸಾಮಾನ್ಯ ಆಯುಧದಾರಿ ಸೈನಿಕರೇ ಅಧಿಕವಿದ್ದರು. ಸೈನ್ಯ ಕಟ್ಟಲು ಹಣ ಬೇಕು. ಅದಕ್ಕಾಗಿ ಬೆಳ್ಳಾರೆ,  ಪುತ್ತೂರು ಇಲ್ಲೆಲ್ಲ ಬ್ರಿಟಿಷ್ ಖಜಾನೆಯನ್ನು ಇವರು ಲೂಟಿ ಮಾಡಿದರು. ಬೆಳ್ಳಾರೆಯಲ್ಲಿ ಖಜಾನೆ ಲೂಟಿ ರಾಮಯ್ಯ ಗೌಡರ ನೇತೃತ್ವದಲ್ಲಿ ನಡೆದುದರಿಂದ ಹಾಗೂ ಮಂಗಳೂರಿಗೆ ಮುಖ್ಯ ಸೇನೆಯನ್ನು ಮುನ್ನಡೆಸಿದವರು ರಾಮ ಗೌಡರಾದುದರಿಂದ ಬ್ರಿಟಿಷರು ಅವರ ಮೇಲೆ ಮುಖ್ಯವಾಗಿ ಕಣ್ಣಿಟ್ಟರು.

ಒಂದು ತುಕಡಿ ಮಡಿಕೇರಯತ್ತ, ಒಂದು ತುಕಡಿ ಕುಂಬಳೆ ಹಾದಿಯಾಗಿ‌ ನಡೆದರೆ ಬಂಡಾಯಗಾರರ ಮುಖ್ಯ ತಂಡ ಬಂಟ್ವಾಳ ದಾರಿಯಾಗಿ ಮಂಗಳೂರಿಗೆ ಲಗ್ಗೆ ಹಾಕಿತು. ಬೆಳ್ಳಾರೆಯಿಂದ ಹೊರಟ ಮುಖ್ಯ ತುಕಡಿಯ ಸೈನಿಕರ ಸಂಖ್ಯೆ ಮಂಗಳೂರು ಮುಟ್ಟುವಾಗ 2,500ರಿಂದ 5,500ಕ್ಕೆ ಮುಟ್ಟಿತ್ತು. ಉಪ್ಪಿನಂಗಡಿ ಬಳಿ ಮಂಜು ಬೈದ್ಯ, ಮುಂದೆ ವಿಟ್ಲದ ದೊಂಬ ಹೆಗಡೆ,   ಕುಡುಮದ ಕುಮಾರಯ‌ ಹೆಗಡೆ, ನಂದಾವರದ ಬಂಗರಸ ಎಂದು ಸೇನೆ ಬಲಿಯಿತು. ಏಪ್ರಿಲ್ ‌5ನೇ ತಾರೀಕಿನಂದು ಜನರು ಸಮುದ್ರದ ಗಾಳಿ ಪಡೆಯಲು ಬರುತ್ತಿದ್ದ ಇಂದಿನ ಬಾವುಟ ಗುಡ್ಡೆಗೆ ಬಂದು ಸೇನೆ ಹಾಲೇರಿ ಬಾವುಟವನ್ನು ಹಾರಿಸಿತು. ಈ ಸೇನೆ ದಾರಿಯಲ್ಲಿ ಸಿಕ್ಕ ಬ್ರಿಟಿಷ್ ಪಡೆಯವರನ್ನು ತರಿದುದಲ್ಲದೆ, ಮಂಗಳೂರಿನಲ್ಲಿ ಸಹ‌ ಬ್ರಿಟಿಷರನ್ನು ಹುಡುಕಿ ಕೊಲ್ಲತೊಡಗಿತು. ಉಳಿದ ಬ್ರಿಟಿಷರು ಕಣ್ಣಾನೂರಿಗೆ ಓಡಿ ಹೋದರು.

ಮುಂದೆ ಬ್ರಿಟಿಷರು ಮದರಾಸು ಮತ್ತು ಬಳ್ಳಾರಿ ತುಕಡಿಗಳನ್ನು ತರಿಸಿದರು. ದೊಡ್ಡ ಸೇನೆಯೊಂದಿಗೆ ಬಂದ‌ ಬ್ರಿಟಿಷರು ಮಂಗಳೂರಿನಲ್ಲಿ ‌ಸ್ವಾತಂತ್ರ್ಯ ಹೋರಾಟಗಾರರ   13 ದಿನಗಳ ಆಡಳಿತವನ್ನು ಕೊನೆಗೊಳಿಸಿದರು. ಬಂಗರಸ, ಮಂಜು ಬೈದ್ಯ‌ ಮೊದಲಾದವರನ್ನು ಬಿಕರ್ನಕಟ್ಟೆಯಲ್ಲಿ ನೇಣಿಗೇರಿಸಿದರು. ತಪ್ಪಿಸಿಕೊಂಡ ಬಂಡಾಯ ನಾಯಕರನ್ನು ಬೇರೆ ಬೇರೆ ಕಡೆ ಬಂಧಿಸಿ ತಲೆ ತೆಗೆದರು, ಇಲ್ಲವೇ ಜೀವಾವಧಿ ಶಿಕ್ಷೆ ನೀಡಿದರು. ಹೀಗೆ ಒಂದು ಸ್ವಾತಂತ್ರ್ಯ ಸಂಗ್ರಾಮ ಭೂಗತವಾಯಿತು.

ಹಾಲೇರಿ ಅರಸೊತ್ತಿಗೆ ಬಗೆಗೆ ಸ್ಥಳೀಯರಿಗೆ ಪೂರ್ಣ ಒಲವು ಇರಲಿಲ್ಲ. ತೀರಾ ಜನಸಾಮಾನ್ಯರು ಆಗಲೂ ಯಾರು ಆಳಿದರೂ ಒಂದೇ‌ ಎಂಬ ನಿಲುವಿನವರಾಗಿದ್ದರು. ಕೂಜುಗೋಡು ಮಲ್ಲಪ್ಪ, ಪುಟ್ಟ ಬಸವ, ಹುಲಿನಂಜಯ್ಯ, ಕುಡೆಕಲ್ಲು ಪುಟ್ಟಗೌಡ, ಪಡ್ಪಿನಂಗಡಿಯ ಇಸ್ಮಾಯಿಲ್, ಗುಡ್ಡೆ ಅಪ್ಪಯ್ಯ ಗೌಡ, ಉಕ್ಕಣ ಬಂಟ, ದೇರಾಜೆ ಬಚ್ಚ ಪಟೇಲ, ಚಟ್ಟಿ ಕುಡಿಯ ಎಂದು ಸಾವಿರಾರು ಜನ ಈ ಹೋರಾಟದಲ್ಲಿ ಹುತಾತ್ಮರಾದರು. ದಾರಿಯಲ್ಲಿ ಇವರು ಕುಂಬ್ಳೆ ಖಜಾನೆ, ಅಂತಿಮವಾಗಿ ಮಂಗಳೂರು ಖಜಾನೆ ವಶಪಡಿಸಿಕೊಂಡಿದ್ದರು. ಬ್ರಿಟಿಷರ ವರದಿಗಳು ಈ ಹೋರಾಟದ ಆಳ ಅರಿಯಲು ಇರುವ ದಾಖಲೆಗಳು ಹೊರತು ನಮ್ಮ ದಾಖಲೆಗಳಲ್ಲ. ಈ ವೀರರ ಫೋಟೋ ದಾಖಲೆಗಳು ಕೂಡ ಇಲ್ಲ. ಕುಟುಂಬದ ದಾಖಲೆ ಸಹ ಬ್ರಿಟಿಷರ ‌ವರದಿಯ ಮೇಲೆಯೇ‌ ನಿಲ್ಲಬೇಕಾಗಿದೆ. ಏನೇ ಆದರೂ ಇದೊಂದು ಆರಂಭಿಕ ಸ್ವಾತಂತ್ರ್ಯ ಹೋರಾಟ ಎನ್ನುವುದರಲ್ಲಿ ಎರಡು ಮಾತಿಲ್ಲ. 


-By ಪೇಜಾ