ನೀರು ಪೂರೈಕೆ ನಗರಾಡಳಿತಗಳ ಜವಾಬ್ದಾರಿ. ಅದನ್ನು ನಿಬಾಯಿಸುವಲ್ಲಿ ಅವು ಎಡವುವುದೇ ನಲ್ಲಿ ಒಡೆದು ರಸ್ತೆಯಲ್ಲಿ ನೀರು ಪೋಲಾಗಲು ಕಾರಣ. ಜಗತ್ತಿನಲ್ಲಿ ಭೂಭಾಗ ಮೀರಿ ಸಾಗರ ಜಾಗಿದೆ. ಇರುವ ನೀರಿನಲ್ಲಿ ಉಪ್ಪು ನೀರಿನ ಪ್ರಮಾಣ 97ರಷ್ಟು. ಉಳಿದ 3%ದಷ್ಟು ಸಿಹಿ ನೀರಿನಲ್ಲಿ ಮುಕ್ಕಾಲು ಮೂರು ವೀಸಾವನ್ನು ಮಾನವ ಕೆಡಿಸಿಟ್ಟಿದ್ದಾನೆ. ಹಾಗಾಗಿ ಶುದ್ಧ ನೀರು ಒಂದು ಶೇಕಡಾ ಕೂಡ ಇಲ್ಲ! ಇದ್ದ ಬದ್ದ ನೀರನ್ನು ಶುದ್ಧೀಕರಿಸಿ ಜನರಿಗೆ ಕುಡಿಯುವ ನೀರು ಒದಗಿಸುವ ಜವಾಬ್ದಾರಿ ಸ್ಥಳೀಯಾಡಳಿತಗಳದ್ದು.

ಭಾರತದ ಹಳ್ಳಿಗಳಲ್ಲಿ ಕುಡಿಯುವ ನೀರಿನ ಪೂರೈಕೆ ಹೆಸರಿಗೆ ಮಾತ್ರ ಇದೆ. ಪಟ್ಟಣ, ನಗರಗಳಲ್ಲಿ ಜಲ ಮಂಡಳಿಗಳು  ನೀರು ಪೂರೈಕೆಯ ಜವಾಬ್ದಾರಿ ವಹಿಸಿಕೊಂಡಿವೆ. ಈಜಿಪ್ತ್, ಚೀನಾ, ಸಿಂಧೂ ಮೊದಲಾದ ನಾಗರಿಕತೆಗಳಲ್ಲಿ ನದಿಗಳಿಂದ ನೀರು ಪೂರೈಕೆಯ ವ್ಯವಸ್ಥೆ ಇತ್ತು.

ಈಗ ಫ್ರಾನ್ಸ್‌ನಲ್ಲಿ ಇರುವ ಪಾಂಟ್ ಡಿ ಗಾರ್ಡ್ ಇಲ್ಲಿ ಗಾರ್ಡನ್ ನದಿಯಿಂದ ಜನವಸತಿಗಳಿಗೆ ನೀರು ಸಾಗಿಸಲು ರೋಮನರು ಮಾಡಿದ ವ್ಯವಸ್ಥೆ ಅದ್ಭುತ. ಪಾಂಟ್ ಡಿ ಗಾರ್ಡ್ ವಿಶ್ವ ಸಂಸ್ಥೆಯ ಪರಂಪರಾ ತಾಣಗಳಲ್ಲಿ ಜಾಗ ಪಡೆದಿದೆ. ಕಮಾನು ಸೇತುವೆ ಮೇಲೆ 50 ಕಿಮೀ ದೂರ ಕುಡಿಯುವ ನೀರು ಸಾಗಿಸಿದ ಕ್ರಿ. ಪೂ.ದ ಯೋಜನೆಯಿದು. ಕೆಲವು ಕಡೆ ಕಮಾನು ಸೇತುವೆ ಮೇಲೆ ಮತ್ತೆ ಎತ್ತರದ ಕಮಾನು ಸೇತುವೆ ಕಟ್ಟೆ ಕಟ್ಟಿ ಮೇಲಿನ ಕಲ್ಲು ಕಾಲುವೆಯಲ್ಲಿ ನೀರು ಸಾಗಿಸಿದ ತಂತ್ರಜ್ಞಾನ ಅದು.

ಮಂಗಳೂರು ಎರಡು ನದಿಗಳ ನಡುವೆ ಇರುವುದರಿಂದ ಇಲ್ಲಿ ನೀರಿನ ಸಮಸ್ಯೆ ಇರಲಿಲ್ಲ. ನಗರ ಬೆಳೆದಂತೆ ನಲ್ಲಿ ನೀರು ಪೂರೈಕೆ ಬಂತು. ನೇತ್ರಾವತಿ ನದಿಗೆ ಅಡ್ಡ ಕಟ್ಟೆ ಕಟ್ಟಿ ಅಲ್ಲಿಂದ ನೀರು ಪೂರೈಸಲಾಗುತ್ತಿದೆ. ಅನುಮತಿ ಇಲ್ಲದೆ ನೀರು ಕದಿಯುವವರಿಗೇನೂ ಕೊರತೆ ಇಲ್ಲ. ಕೆಲವರು ಸಿಕ್ಕಿ ಬಿದ್ದು ದಂಡ ಕಟ್ಟಿದ್ದು ಇದೆಯಾದರೂ ಹಲವರು ಸಿಕ್ಕಿಲ್ಲ. ಅದಕ್ಕೆ ಕಾರಣ ಬೇಲೆಯೇ ಹೊಲ ಮೇಯುವ ವ್ಯವಸ್ಥೆ.

                                               ಹಂಪನಕಟ್ಟೆ ಬಳಿ ನಲ್ಲಿ ಒಡೆದು ಹರಿದ ನೀರು

ಫಾದರ್ ಮುಲ್ಲರ್ ಆಸ್ಪತ್ರೆ ‌ಎದುರು ನೆಲದಡಿ ನಲ್ಲಿ ಒಡೆದು ರಸ್ತೆಯ ಮೇಲೆ ನೀರು ಹರಿದುದರಿಂದ ಮುಖ್ಯ ಪೂರೈಕೆ   ನಲ್ಲಿಯನ್ನು ಬಂದ್ ಮಾಡಲಾಯಿತು. ಹಾಗಾಗಿ ಆ ಸುತ್ತ ನೀರು ಪೂರೈಕೆಯಲ್ಲಿ ವ್ಯತ್ಯಾಸ ಆಯಿತು. ಕಳೆದ ವಾರ  ಬಲ್ಮಠ, ಬಾವುಟ ಗುಡ್ಡೆ, ಹಂಪನಕಟ್ಟೆವರೆಗೆ ನಾನಾ‌ ಕಡೆ ನಲ್ಲಿ ಒಡೆದು ರಸ್ತೆಯಲ್ಲಿ ಹರಿಯಿತು.

ನಲ್ಲಿ ಹಾಕುವಾಗ ಅಲ್ಲಿನ ನೀರು ಪೂರೈಕೆ ಬಲ, ನಲ್ಲಿಯ ಗುಣಮಟ್ಟ, ಎಷ್ಟು ಆಳದಲ್ಲಿ ಹಾಕಲಾಗಿದೆ, ಯೋಜನೆಗೆ ಒದಗಿಸಿದ ಹಣ ಸದುಪಯೋಗ  ಆಗಿದೆಯೇ ಎಂಬುದನ್ನು ಸ್ಥಳೀಯ ಕಾರ್ಪೊರೇಟರ್, ಜನಪ್ರತಿನಿಧಿಗಳು ಪ್ರತಿ ಹಂತದಲ್ಲೂ ಪರಿಶೀಲಿಸಬೇಕು. ಹಾಗೆ ಮಾಡಿದಾಗ ಕಳಪೆ ಕಾಮಗಾರಿಯಿಂದ ನೀರು ಪೋಲಾಗುವುದು ತಪ್ಪುತ್ತದೆ. ಕುಡಿಯಲು ಪೂರೈಸುವ ನೀರನ್ನು ಯಾವ್ಯಾವುದಕ್ಕೋ ಉಪಯೋಗಿಸುವುದರ ಮೇಲೂ ನಿಗಾ ಅಗತ್ಯ.

                                          ಸಂತ ಅಲೋಶಿಯಸ್ ರಸ್ತೆಯಲ್ಲಿ ಕೆಳ ಮೆಟ್ಟಿಲಲ್ಲಿ ನಲ್ಲಿ ಸೋರಿಕೆ

ತಂಡಾಸು ಗುಂಡಿ ಮೊದಲಾದವಕ್ಕೆ ರಸ್ತೆ ಅಗೆಯುವವರು ಎಚ್ಚರ ವಹಿಸದೆ ಕುಡಿಯುವ ನೀರಿನ ನಲ್ಲಿಗೆ ಹಾನಿ ಮಾಡಿದ್ದಿದೆ. ಹಿಂದೆ ಟೆಲಿಕಾಂ ಜನ ಹೀಗೆ ಅಗೆಯುವುದು ಹೆಚ್ಚು ಇತ್ತು. ಇಂದು ಅದೆಲ್ಲ ನಿಂತಿದೆ. ಆದರೆ ‌ನಾನಾ‌ ಅಗೆತಗಳಂತೂ ನಿಂತಿಲ್ಲ. ನಲ್ಲಿ ಬಗೆಗೆ ನಿಗಾ ಅಗತ್ಯ.

ಹಿಂದಿನ ಕಾಲದಲ್ಲಿ ಮಣ್ಣಿನ ದಾರಿ, ರಸ್ತೆ ಇತ್ತು. ಗಾಳಿಗೆ ಅದರ  ಮೇಲು ಮಣ್ಣು ಹಾರದಿರಲಿ ಎಂದು ನೀರು ಹನಿಸುತ್ತಿದ್ದರು. ಅದನ್ನು ಸಂಪ್ರದಾಯ ಮಾಡಿಕೊಂಡು ಸಿಮೆಂಟ್ ಮೇಲೆ ನೀರು ಸಿಂಪಡಿಸುವ ಜನರನ್ನು ನೋಡಿದರೆ ನಗು ಬರುತ್ತದೆ. ಖಾಸಗಿಯವರು ನೀರು ಕದ್ದು ಮಾರುವುದಿದೆ. ಕೊಡಿಯಾಲ್‌ಬೈಲ್ ಬಿಜೆಪಿ ಕಚೇರಿಯ ಎದುರುಗಡೆಯ ಶೌಚಾಲಯಕ್ಕೆ ಕೊಟ್ಟ ನೀರು ಕದ್ದು ಅಲ್ಲೇ ಒಬ್ಬರು ಕ್ಯಾಂಟೀನ್, ಜ್ಯೂಸ್ ಅಂಗಡಿ ನಡೆಸಿ ಆದ ಗದ್ದಲಕ್ಕೆ ಆರು ತಿಂಗಳು.

                                                           ಇದು ನಲ್ಲಿ ಸೋರಿಕೆಯಲ್ಲ, ಶರವು ದೇವಾಲಯ ರಸ್ತೆಯಲ್ಲಿ ಬೇಕಾಬಿಟ್ಟಿ ಬಳಕೆ

ನೀರು ಪೂರೈಕೆಯ ಕಚೇರಿಗಳು ಜಿಲ್ಲಾಧಿಕಾರಿಯವರ ನಿವಾಸದ ಪಕ್ಕದಲ್ಲೇ ಇದ್ದರೂ ನೀರು ಅವರ ಕಣ್ತಪ್ಪಿಸಿ ಹರಿಸುವ ಜಾಣರು ಅಲ್ಲಿದ್ದಾರೆ. ಇದಕ್ಕೆಲ್ಲ ಕಡಿವಾಣ ಹಾಕಬೇಕಾದ ಅಗತ್ಯವಿದೆ. ನೀರು ಪೂರೈಕೆ ಕಾಮಗಾರಿ ಗುಣಮಟ್ಟದ್ದಾಗಿ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳ ಸಹಿತ ಜನಪ್ರತಿನಿಧಿಗಳದ್ದೂ ಆಗಿದೆ. 


-By ಪೇಜಾ