ಗಮ್ಜಾಲ್ 50 ದಿನ ಎನ್ನುವಾಗ ಅಜ್ಜೆರ್ ಮತ್ತು ಭೂದಾನ ನೆನಪಾಗುತ್ತದೆ. ಸಂಬಂಧ ಇಲ್ಲದಿದ್ದರೂ ಅನುಬಂಧ ಇರುವುದೇ ಇದರ ವಿಶೇಷ. ಅರುವತ್ತರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ರಾಜ್‌ಕುಮಾರ್, ಕಲ್ಯಾಣ್‌ಕುಮಾರ್, ಉದಯಕುಮಾರ್ ಕುಮಾರತ್ರಯರ ಉತ್ತುಂಗದ ಕಾಲ. ತುಳು ಚಿತ್ರರಂಗದಲ್ಲಿ ಈಗೊಂದು ದಶಕದಿಂದ ನವೀನ್ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು ಎಂಬ ಕಾಮಿಡಿತ್ರಯರ ಕಾಲ. ಇತ್ತೀಚೆಗೆ ನಾಯಕ ನಟ ಪೃಥ್ವಿ ಅಂಬರ್ ಸಭೆಯೊಂದರಲ್ಲಿ ಅವರನ್ನು ನೋಡಿ ಜನ ತುಳು ಸಿನಿಮಾ ನೋಡಲು ಬರುತ್ತಾರೆ ಎಂದರು. ಕಾಮಿಡಿತ್ರಯರಿಗೆ ಹೀಗೆ ಮನ್ನಣೆ ಸಾರ್ವತ್ರಿಕ.

ಗಮ್ಜಾಲ್‌ನ ಅಜ್ಜೆರ್ ಮೊದಲ ಕತೆ. ಅದರಲ್ಲಿ ನವೀನ್ ಪಡೀಲ್ ತಂದೆಯ ಪಾತ್ರದಲ್ಲೂ, ಅರವಿಂದ ಬೋಳಾರ್ ಮತ್ತು ಭೋಜರಾಜ ವಾಮಂಜೂರು ಅವರ ಮಕ್ಕಳಾಗಿ‌ ನಟಿಸಿದ್ದರು. ನವೀನ್ ಪಡೀಲ್ ಇಲ್ಲಿ ಉತ್ತಮ ನಟನೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅವರಿಗೆ ಅಂಥ ನಟನೆ ಬಯಸುವ ಪಾತ್ರ ಸಿಗದೆ‌ ಪೊಡಿ ದಾಮು ಮಾದರಿಯ ಪಾತ್ರ ಸಿಕ್ಕರೆ‌ ಕಷ್ಟ.

ಜೇಮ್ಸ್ ಬಾಂಡ್ ಮಾದರಿಯ ಪಾತ್ರ, ರಾಮ ರಾವಣ ವೇಷ, ಹಳ್ಳಿ ಗಮಾರ ಎಂದು ಎಲ್ಲ ಪಾತ್ರಗಳಿಗೂ ನ್ಯಾಯ ಸಲ್ಲಿಸಿದ‌ ಕನ್ನಡದ ನಟರಲ್ಲಿ ಮುಖ್ಯ ಹೆಸರು ರಾಜ್‌ಕುಮಾರ್ ಅವರದು. ಅರುವತ್ತರ ದಶಕದ ಭೂದಾನ ಚಿತ್ರದಲ್ಲಿ ರಾಜ್‌ಕುಮಾರ್ ತಂದೆಯ ಪಾತ್ರದಲ್ಲಿ ನಟಿಸಿದ್ದರೆ, ಅವರ ಮಕ್ಕಳಾಗಿ ಕಲ್ಯಾಣ್‌ಕುಮಾರ್, ಉದಯಕುಮಾರ್, ಲೀಲಾವತಿ  ನಟಿಸಿದ್ದರು. ಅಜ್ಜೆರ್ ಆ ಭೂದಾನವನ್ನು ಕತೆಯಲ್ಲಿ ಅಲ್ಲ ಪಾತ್ರ ನಿರ್ವಹಣೆಯ ಬಗೆಯಲ್ಲಿ  ನೆನಪಾಗುತ್ತದೆ.

ಶಿವರಾಮ ಕಾರಂತರ ಚೋಮನ ದುಡಿ ಕಾದಂಬರಿಯನ್ನು ಜಿ. ವಿ. ಅಯ್ಯರ್ ಚಲನಚಿತ್ರ ಮಾಡಲು ಕೇಳಿದ್ದು, ಅಜ್ಜ ಕಾರಂತರು ಬೇಡ, ಸಾಧ್ಯವಿದ್ದರೆ ಅಂಥದೇ ಚಿತ್ರ ತೆಗೆದು ತೋರಿಸಿ ಎಂದುಬಿಟ್ಟರು. ಜಿ. ವಿ. ಅಯ್ಯರ್ ‌ಚೋಮನ ದುಡಿ ಮಾದರಿ ಭೂದಾನ ಬರೆದು, ಚಿತ್ರ ನಿರ್ಮಿಸಿಯೇ ಬಿಟ್ಟರು. ತುಂಡು ಭೂಮಿಗಾಗಿ ತುಡಿಯುವ ಚೋಮ, ಭೂದಾನದಡಿ ಕಲ್ಲು ಮೊರಡಿ ನೀಡಿ ವಂಚಿಸುವ ಜಮೀನ್ದಾರ, ಹಸನಾದ ಮೇಲೆ ಅದನ್ನೂ ಸೆಳೆಯಲು ಹೆಣೆಯುವ ಸಾಲದ ನಾಟಕ ಕತೆ. ಶೋಷಣೆ ವಿರುದ್ಧ ‌ಬಂಡೆದ್ದು ಒಬ್ಬ ಮಗ ಕ್ರಿಶ್ಚಿಯನ್, ಇನ್ನೊಬ್ಬ ಮಗ ಮುಸ್ಲಿಂ ಆಗುವ ದಲಿತ ಕುಟುಂಬದ ಕತೆಯಿದು.

ಕುಮಾರತ್ರಯರು ಮೂವರೂ ಸಮಾನ ಪಾತ್ರಗಳಲ್ಲಿ ಕಾಣಿಸಿಕೊಂಡ ಏಕೈಕ ಕನ್ನಡ ಚಿತ್ರವಿದು. ಗಾಳಿಗೋಪುರದಲ್ಲಿ ಕುಮಾರತ್ರಯರು ಮೂವರೂ ಇದ್ದರೂ ರಾಜ್‌ಕುಮಾರ್ ಅವರಿಗೆ ದೊರೆತ ಪ್ರಾಮುಖ್ಯತೆ ಇತರ ಪಾತ್ರಗಳಿಗೆ ದೊರೆತಿಲ್ಲ.

ಈ ಸಂಗತಿಯಲ್ಲಿ ತುಳುವಿನ ಕಾಮಿಡಿತ್ರಯರು ಅದೃಷ್ಟವಂತರು. ಮೂವರಿಗೂ ಸಮಾನ ಅವಕಾಶದ ಚಿತ್ರಗಳು ಸಾಲು ಸಾಲಾಗಿ ಬರುತ್ತಿವೆ. ಆದರೆ ಹೆಚ್ಚಿನ ಚಿತ್ರಗಳು ನಗೆ ಹೂರಣದ ಹೊರತಾಗಿ ಬೇರೇನನ್ನೂ ಹೇಳುವುದಿಲ್ಲ. ಅಂದರೆ ಅಭಿನಯದಲ್ಲಿ ‌ಹೊಸತನ್ನು ನಿರೀಕ್ಷಿಸಲು ಸಾಧ್ಯವಿಲ್ಲ.

ಚೋಮನ ದುಡಿ ‌ಮುಂದೆ ಪ್ರಾಯೋಗಿಕ ಚಿತ್ರವಾಗಿ ತೆರೆಗೆ‌ ಬಂತು. ಪ್ರಾಯೋಗಿಕ ಚಿತ್ರಗಳ ಸಂಗತಿ ಸಲೀಸು, ಸಾಕಷ್ಟು ಪ್ರಶಸ್ತಿಗಳು, ಚಿತ್ರಮಂದಿರದಲ್ಲಿ ಜನಬರ! ಜಿ. ವಿ. ಅಯ್ಯರ್ ಸ್ವಂತ‌ ತಯಾರಿಕೆಯ ಸಿನಿಮಾಗಳಲ್ಲಿ ಬ್ಲಾಕ್ ಬಸ್ಟರ್‌ ಸಿನಿಮಾ ಭೂದಾನ ಮಾತ್ರ. ಅಯ್ಯರ್ ಅಜ್ಜನಾದ ಮೇಲೆ ಸಂಸ್ಕೃತ ಸಿನಿಮಾ ತಯಾರಿಸಿಕೊಂಡು ಓಡಾಡುತ್ತಿದ್ದರು; ಇಂದಿಲ್ಲ.

ಭೂದಾನದ ಕುಮಾರತ್ರಯರು‌ ಸಹ ಇಂದಿಲ್ಲ. ಅದರಲ್ಲಿದ್ದವರಲ್ಲಿ ಲೀಲಾವತಿಯಂಥ ಒಬ್ಬಿಬ್ಬರು ನಮ್ಮೆದುರು‌ ಇದ್ದಾರೆ. ತುಳುವಿನ ಕಾಮಿಡಿತ್ರಯರಿಗೆ ನೆನಪುಳಿಯುವ ಅಭಿನಯ ನೀಡಲು ಅವಕಾಶ ಇರುವ ಕೆಲವಾದರೂ ಚಿತ್ರಗಳು ಬರುವುದು ತುಳು ಚಿತ್ರರಂಗದ ಹಿತದೃಷ್ಟಿಯಿಂದ ಒಳ್ಳೆಯದು.


-By ಪೇಜಾ