ಭಾರತದಲ್ಲಿ ವೈದಿಕ ಅನುಯಾಯಿಗಳು ಚಾಂದ್ರಮಾನ ಯುಗಾದಿ ಎಂದರೆ, ಮೂಲನಿವಾಸಿಗಳು ಸೌರಮಾನ ಲೆಕ್ಕಾಚಾರದವರು. ಈ ಬಾರಿ ಎರಡೂ ಯುಗಾದಿ ಬೆಂಬೆನ್ನಿಗೆ ಬಂದಿರುವುದು ವಿಶೇಷ. ಆದರೆ ಸಂಪ್ರದಾಯಗಳೆಲ್ಲ ವಿಶೇಷವಲ್ಲ.
ತುಳುವರು ಬಿಸು ದಿನ ಎಂದರೆ ಸೌರಮಾನ ಯುಗಾದಿಯಂದು ಮಾಡುವ ಪಾಯಸಕ್ಕೆ ಗೋಡಂಬಿ ಹಸಿ ಬೀಜ ಹಾಕುವುದನ್ನು ಸಂಪ್ರದಾಯ ಮಾಡಿಕೊಂಡಿದ್ದಾರೆ. ಕೆಲವರು ಅದನ್ನು ಬಲು ಪುರಾತನ ಎಂದು ತಿಳಿದುಕೊಂಡಿದ್ದಾರೆ. ತುಳುನಾಡಿನಲ್ಲಿ ಗೋಡಂಬಿ ಬೆಳೆ ಎಲ್ಲೆಡೆ ಆದುದು ಶತಮಾನದ ಇತಿಹಾಸ. ಹಾಗಾಗಿ ಈ ಹಸಿ ಗೋಡಂಬಿ ಪಾಯಸದ ಸಂಪ್ರದಾಯಕ್ಕೆ ನೂರು ವರುಷ ಮೀರದು.
ತುಳುನಾಡು, ಕೇರಳ, ತಮಿಳುನಾಡು, ಪಂಜಾಬ್, ಅಸ್ಸಾಂ, ಈಶಾನ್ಯ ರಾಜ್ಯಗಳು, ಸಿಕ್ಕಿಂ, ಬಂಗಾಳ ಹಾಗೂ ಎಲ್ಲ ರಾಜ್ಯಗಳ ಬುಡಕಟ್ಟು ನೆಲೆಗಳಲ್ಲಿ ಸೌರಮಾನ ಯುಗಾದಿ ಆಚರಿಸುತ್ತಾರೆ. ತುಳುವರು ಬಿಸು, ಮಲಯಾಳಿಗರು ವಿಶು, ಪಂಜಾಬಿನವರು ಬೈಶಾಕಿ, ಅಸ್ಸಾಂ ಜನರು ಬಿಹು ಎಂದೆಲ್ಲ ಆಚರಿಸುವ ಇದನ್ನು ಮೂಲನಿವಾಸಿಗಳು ಯುಗಾದಿ ಎಂದು ಹೇಳುವುದು ಕಡಿಮೆ. ಬಿಹು, ಬಿಸು, ಬೈಶಾಕಿ ಹಬ್ಬ ಎಂದಷ್ಟೇ ಹೇಳುತ್ತಾರೆ.
ಯೂರೋಪಿನ ಕ್ಯಾಲೆಂಡರ್ ಕೂಡ ಹಿಂದೆ ಮಾರ್ಚ್‌ನಲ್ಲಿ ಹೊಸ ವರುಷ ಆಚರಿಸುತ್ತಿದ್ದುದರಿಂದ ಇದು ವಸಂತ ಕಾಲದ ಫಲಗಳ ಮತ್ತು ಸುಗ್ಗಿ ಬೆಳೆ ಕೊಯಿಲು ಕಾಲದ ಹಬ್ಬವಾಗಿದೆ.
ಬಿಸು ಇದಕ್ಕೆಲ್ಲ ತಾಯಿ. ಬಿಸು> ಬಸಂತ್> ಬಸಂತ> ವಸಂತ ಎಂದು ಶಬ್ದಗಳು ಬಂದಿವೆ. ಬೈಶಾಕಿ ಇನ್ನೊಂದು ರೂಪವಾದರೆ, ವೈಶಾಖ, ವಿಶು ಮತ್ತಿನ್ನೊಂದು ರೂಪವಾಗಿದೆ. ಸುಗ್ಗಿ ಕೊಯಿಲು ಜೊತೆಗೆ ನಾನಾ ಫಲ ವಸ್ತುಗಳು ಧಾರಾಳವಾಗಿ ಕೈಗೆ ಸಿಗುವ ಕಾಲವಿದು.
ಮಲಯಾಳಂ ಜನ, ಹೆಚ್ಚಿನ ತುಳುವರು ಫಲವಸ್ತುಗಳನ್ನು ಸೇರಿಸಿಟ್ಟು ಪ್ರಕೃತಿ ಆರಾಧನೆ ಮಾಡುತ್ತಾರೆ, ಫಲವಸ್ತುಗಳಿಗೆ ಗೌರವ ಸಲ್ಲಿಸುತ್ತಾರೆ ಹಾಗೂ ಇದನ್ನು ಬಿಸು ಕಣಿ, ವಿಶು ಕಣಿ ಎನ್ನುತ್ತಾರೆ. ಇದರ ಮೂಲಾರ್ಥ ಇಂದು ತಿಳಿಯದೆ ಕಣಿ ಕೇಳಲು ಹೊರಟವರು ಕಾಣಿಸುತ್ತಾರೆ. ಕನಿ(ಣಿ) ಎಂದರೆ ಹಣ್ಣುಗಳು, ಫಲವಸ್ತುಗಳು ಎಂದು ದ್ರಾವಿಡ ಭಾಷೆಗಳಲ್ಲಿ ಅರ್ಥ. ಬಿಸು ಕಣಿಯಲ್ಲಿ ನಿಸರ್ಗ ಮಾತೆಗೆ ಗೌರವ ಸಲ್ಲಿಸಲು ಸೇರಿಸಿಡುವುದು ಇಂಥ ಫಲ ವಸ್ತುಗಳನ್ನು. ಹೂವುಗಳನ್ನು ಇಡುವುದುಂಟು. ಅದರಲ್ಲಿ ಕಕ್ಯ ಮರದ ಹೂವಿಗೆ ವಿಶೇಷ ಮನ್ನಣೆ. ಮಲಯಾಳಂ ಜನರಂತೂ ಈ ಬಂಗಾರ ಬಣ್ಣದ ಹೂಗಳು ಇಲ್ಲದೆ ವಿಶು ಆಚರಿಸುವುದಿಲ್ಲ.
ಪಂಜಾಬ್ ಜನರು ಬಲ್ಲೆ ಬಲ್ಲೆ ಎಂದು ಕುಣಿಯುವ ಬೈಶಾಕಿ ಕುಣಿತ ಹಾಗೂ ಅಸ್ಸಾಂ ಜನರು ಬಿಹು ಹಾಡು ಹೇಳುತ್ತ ಮಾಡುವ ಬಸಂತ ನಾಟ್ಯ ಜಗಮನ್ನಣೆ ಪಡೆದಿದೆ. ಇವು ಭಾರತದಲ್ಲಿ ಎಷ್ಟು ಜನಪ್ರಿಯ ಎಂದರೆ ಅದೆಷ್ಟೋ ಬಡಗಣ ಭಾರತದ ಸಿನಿಮಾಗಳಲ್ಲಿ ಈ ಕುಣಿತಗಳು, ಹಾಡುಗಳು ಬಂದಿವೆ.
ಪಂಜಾಬ್, ಸಿಕ್ಕಿಂ, ಬಂಗಾಳಿ, ಅಸ್ಸಾಂ ಜನರಿಗೆ ಇದು ಪಕ್ಕಾ ಸುಗ್ಗಿ ಕೊಯ್ಲು ಹಬ್ಬ. ಇತರೆಡೆಯೂ ಸುಗ್ಗಿ ಕಾಲದ ಫಲ ವಸ್ತುಗಳ ಹಬ್ಬವಾಗಿ ಇದು ರೈತರ ಹಬ್ಬ ಎನಿಸಿದೆ. ಹೊಸ ಫಲಗಳಿಂದ ಏನಾದರೂ ಅಡುಗೆ ಮಾಡಲೇಬೇಕೆಂಬುದು ನಿಯಮ. ಹಸಿ ಗೇರು ಬೀಜ ಹಾಕುವುದು ಆ ಉದ್ದೇಶಗಳಲ್ಲಿ ಒಂದು. ಕರ್ನಾಟಕದಲ್ಲಿ, ಆಂಧ್ರದಲ್ಲಿ ಚಾಂದ್ರಮಾನ ಯುಗಾದಿ ಆಚರಿಸುವವರು ಬೇವು ಬೆಲ್ಲ ಅಂದರೆ ಜೀವನದ ಸಿಹಿ ಕಹಿಗೆ ಆದ್ಯತೆ ನೀಡಿ ಅದನ್ನು ಹಂಚುತ್ತಾರೆ. ಸೌರಮಾನದವರಂತೆ ರೈತರ ಇಲ್ಲವೇ ಬೆಳೆ ಹಬ್ಬ ಎಂದು ಆಚರಿಸುವುದಿಲ್ಲ. ಆದರೆ ವಸಂತ ಕಾಲದ ಎಂದರೆ ಮೂಲತಾ ಬಿಸು ಕಾಲದ ಉತ್ಸಾಹ ಉತ್ಸವ ಅಲ್ಲಿ ಇರುತ್ತದೆ.
-By ಪೇಜಾ