ಈಶಾನ್ಯ ಭಾರತದಲ್ಲಿ ಇಲ್ಲವೇ ಅಂಥ ಗುಡ್ಡಗಾಡು ಪ್ರದೇಶಗಳಲ್ಲಿ ಮಾತ್ರ ಅಟ್ಟದಲ್ಲಿ ಮತ್ತು ಘಟ್ಟದ ತಳಿಗಳಲ್ಲಿ ವಾಸ ಎಂದು ತಿಳಿಯಬೇಕಾಗಿಲ್ಲ. ಎಲ್ಲೆಡೆ ಅಂಥ ರಸಾತಳಗಳು ಇವೆ.
ನಾನಾ ನಗರಗಳಲ್ಲಿ ನಾನು ಇದನ್ನು ಗಮನಿಸಿದ್ದೇನೆ. ತುಳುನಾಡಿನ ಕೊರಗ ಜನಾಂಗದವರು ಗುಡ್ಡದ ತಗ್ಗಿನ ಕೊರಕಲುಗಳನ್ನು ಅಗ ಮಾಡಿಕೊಂಡುದರಿಂದ ಅವರು ಕೊರಗರು. ಅವರದು ಪ್ರಾಕೃತಿಕ ಅಗರು ಎಂದರೆ ಪ್ರಾಕಾರ, ಅದು ಕಟ್ಟಿದ್ದಲ್ಲ. ಮಂಗಳೂರಿನ ಕಾಪುಕಾಡ್ ಅನಂತರ ಕಾಪಿಕಾಡ್ ಆಗಿದೆ. ಕೆಲವೆಡೆ ಅದು ಕಾಪು ಇತ್ಯಾದಿ ಆಗಿದೆ. ಮಂಗಳೂರಿನ ಕಾಪಿಕಾಡ್ ಕೊರಕಲತ್ತ ಕೆಲವು ಕೊರಗ ಕುಟುಂಬಗಳು ಈಗಲೂ ಇವೆ. ಅವರ ಕಾಪು(ಪಿ)ಕಾಡನ್ನು ನುಂಗಿದ ಕೆಲವರು ಅವರಿಗೆ ಜಾಗ ಕೊಟ್ಟಂತೆ ನಾಟಕ ಇಲ್ಲವೇ ಮಾಡಿದ್ದಾರೆ.
ಬೆಂಗಳೂರಿಗೆ ನಾನು ಹೋದಾಗ ಅಂಥ ಸಾಕಷ್ಟು ಏರು ತಗ್ಗುಗಳು ಇದ್ದವು. ಮುಂದೆ ಸಮತಟ್ಟು ಕ್ರಿಯೆ ಹೆಚ್ಚಿದಂತೆ ಆ ಅತಳ ಪಾತಾಳಗಳೆಲ್ಲ ಕಡಿಮೆ ಆಗಿವೆ.
ತಿರುಪತಿ ಹೆಸರು ರಾಮಾನುಜಾಚಾರ್ಯರ ಪ್ರವೇಶದ ಬಳಿಕದ್ದು. ತಿರುಪತಿಯ ಮೂಲ ಹೆಸರು ಪೊತ್ತಲ. ಇದು ಬಲಿಯೇಂದ್ರರು ಕಟ್ಟಿದ ಎರಡನೇ ರಾಜ್ಯದ ಪ್ರದೇಶ. ಪುಸತ್ ತಳ ಪುಸತ್ತಳ ಪೊತ್ತಲ ಆಗಿದೆ. ಇಲ್ಲಿ ಎತ್ತರದಿಂದ ತಳ ಭಾಗದದತ್ತಣ ಪ್ರದೇಶಗಳನ್ನು ಅತಳ ವಿತಳ ಸುತಳ ಪಾತಾಳ ರಸಾತಳ ಎಂದಿತ್ಯಾದಿಯಾಗಿ ಕರೆಯಲಾಗಿದೆ.
ಇತರ ನಾನು ಸುತ್ತಿದ ಎಲ್ಲ ಕಡೆಯೂ ಇಂಥ ತಳನಾಡು ಕಂಡಿದ್ದೇನೆ. ತುಳುನಾಡು ಕನ್ನಡ ಬಯಲುಸಿಮೆಯವರಿಗೆ ತಳನಾಡು ತಾನೆ? ತಳನಾಡು ತುಳುನಾಡು ಆಗಲು ಎಷ್ಟು ಹೊತ್ತು?
ಇತ್ತೀಚಿನ ವರುಷಗಳಲ್ಲಿ ನಗರಗಳಲ್ಲಿ ಕಸಗಳನ್ನು ಮತ್ತು ಒಡೆದ ಹಳೆಯ ಕಟ್ಟಡಗಳ ಅವಶೇಷಗಳನ್ನು ತಗ್ಗು ಜಾಗಗಳಿಗೆ ತುಂಬುವ ಮೂಲಕ ಒಂದು ರೀತಿಯ ಸಮಾನತೆ ಸಾಧಿಸುತ್ತಿದ್ದಾರೆ. ಆದರೂ ಪಾತಾಳ ಪೂರ್ಣ ಏರಾಗಿಲ್ಲ, ಏರು ಪೂರ್ತಿ ತಗ್ಗಾಗಿಲ್ಲ. ಆದರೂ ಅಸಮಾನತೆಯ ಸಮಾಜದಲ್ಲಿ ಇದನ್ನೂ ಒಂದು ಕ್ರಾಂತಿ ಎಂದು ನಕ್ಕು ಬಿಡಬಹುದು.
ಇಷ್ಟಾದರೂ ಮಂಗಳೂರು ಎಲ್ಲ ಪಾತಾಳಗಳು ಕಸ ಕಟ್ಟಡಾವಶೇಷ ತುಂಬಿಕೊಳ್ಳಲು ಬಿಟ್ಟಿಲ್ಲ. ಅದಕ್ಕೆ ಮುಖ್ಯ ಕಾರಣವೆಂದರೆ ಪಾತಾಳಗಳಲ್ಲಿ ಮೊದಲೇ ಜನ ವಸತಿ ತುಂಬಿಕೊಂಡಿರುವುದು. ಮಂಗಳೂರಿನಲ್ಲಿ ಎಲ್ಲಿ ಬೇಕಾದರೂ ಅತ್ತಿತ್ತ ಕಣ್ಣು ಹಾಯಿಸಿ ರಸಾತಳ ವಿತಳ ಸುತಳಗಳು ಸುತ್ತಿ ಬಳಸಿ ಕಾಣಿಸುತ್ತವೆ ತಾನೆ? ಈ ಪಾತಾಳಗಳು ಪ್ರಕೃತಿಯ ಸೊಗಸು. ನಿಸರ್ಗ ಉಳಿಸುವುದಕ್ಕಿಂತ ಬಳಸುವುದು ಮುಖ್ಯ ಎಂಬಂತೆ ನಡೆಯುತ್ತಿರುವವನು ಈ ಮಾನವ. ಮುಂದೆ ಯಾವ ರಸಾತಳದಲ್ಲಿ ಬೀಳಲಿರುವನೋ ಯಾರು ಬಲ್ಲರು?
-By ಪೇಜಾ