ನಾವು ಸಣ್ಣವರಿದ್ದಾಗ ಅಮಾಸೆ (ಅಮಾವಾಸ್ಯೆ) ಸ್ನಾನ ಮಾಡುತ್ತಿದ್ದ ಮಲಪು ಜಾಗ ಒಂದು ಬೀಚ್ ಎಂದು ನಮಗೆ ಗೊತ್ತೇ ಇರಲಿಲ್ಲ.

ಇಂದಿನ ಬೀಚ್ ಬಳಿ ಅಂದು ಅಲ್ಲಿ ರಸ್ತೆ, ಡಾಮಾರು ಎಲ್ಲ ಇರಲಿಲ್ಲ. ಮರಳು ತುಂಬಿದ ದಾರಿ ರಸ್ತೆ. ಮುಖ್ಯ ರಸ್ತೆಯಲ್ಲಿ ಬೆಳಿಗ್ಗೆ ಸಂಜೆ ಒಂದೊಂದು ಬಸ್ಸು. ಆಟೋಗಳಿರಲಿಲ್ಲ. ಉಡುಪಿಯ ಈಗಿನ ಸಿಟಿ ಬಸ್ ನಿಲ್ದಾಣದಿಂದ ಬೀಚ್ ಕಡೆಗೆ ಕುದುರೆ ಟಾಂಗಾಗಳು ಇದ್ದವು. ಆದರೆ ಅದರಲ್ಲಿ ಹೋಗುವವರ ಸಂಖ್ಯೆ ತೀರಾ ಕಡಿಮೆ.

                                                               ಗಾಂಧಿ ಸಾಕ್ಷಿ

ನನ್ನ ಅಜ್ಜಿ ಒಮ್ಮೆ ನನ್ನನ್ನು ಕುದುರೆ ಗಾಡಿಯಲ್ಲಿ ಕರೆದೊಯ್ದಿದ್ದರು. ಅದು ಬಿಟ್ಟರೆ ನಮ್ಮದು ಸದಾ ನಡಿಗೆ. ಬೆಂಗಳೂರು, ಮೈಸೂರುಗಳಲ್ಲಿ ಆಗೆಲ್ಲ ಟಾಂಗಾ ಎಂಬ ಕುದುರೆ ಗಾಡಿ ಮಾಮೂಲು. ಮಂಗಳೂರಿನಲ್ಲಿ ಪೆರೇರಾ ಹೋಟೆಲ್ ಎದುರುಗಡೆಯ ಇಂದಿನ ಆಟೋ ನಿಲ್ದಾಣ ಅಂದಿನ ಅತಿ ದೊಡ್ಡ ಜಟಕಾ ಬಂಡಿ ನಿಲ್ದಾಣವಾಗಿತ್ತು.

                                                                ತೆರೆಯುರುಳು

ಮಲಪು ಎಂದು ನಾವು ಸಣ್ಣವರಿದ್ದಾಗ ಕರೆಯುತ್ತಿದ್ದ ಊರು ಮಲ್ಪೆ ನಗರವಾದಂತೆ ನಾವು ಸಮುದ್ರ ಸ್ನಾನ ಮಾಡುತ್ತಿದ್ದ ಜಾಗವು ಬೀಚ್ ಆಗಿ ಬಲಿಯಿತು. ನಮ್ಮ ತಂದೆ ನಾವು ತೀರಾ ಸಣ್ಣವರಿದ್ದಾಗ ನಡೆಸಿಕೊಂಡು ಬರುತ್ತಿದ್ದರು. ವರುಷದಲ್ಲಿ ಎರಡು ದಿನ ಕೈ ಹಿಡಿದು ಕಡಲಿನಲ್ಲಿ ಮುಳುಗಿಸಿ ಏಳಿಸುತ್ತಿದ್ದರು. ಆಮೇಲೆ ಸ್ವಲ್ಪ ಈಚೆ ತೋಡಿನ ನೀರಿನಲ್ಲಿ ಮುಳುಗಿಸುತ್ತಿದ್ದರು. ಇಂದು ಆ ತೋಡಿನ ನೀರಿನಲ್ಲಿ ಕಾಲು ಇಡುವಂತೆಯೂ ಇಲ್ಲ. ಅಷ್ಟು ಗಲೀಜು.

                                                     ಸಾಲು ನೆರಳು

ಬೀಚ್ ಬಳಿ ಆಗೆಲ್ಲ ಯಾವುದೇ ಅಂಗಡಿಗಳು ಇರಲಿಲ್ಲ. ಮುಖ್ಯ ರಸ್ತೆಗೆ ಬರಬೇಕಿತ್ತು. ಬೀಚ್‌ನ ಉದ್ದಕ್ಕೂ ಬೆಸ್ತರು ರಂಪಣಿ ಬೆಲೆ , ಮಾರಿ ಬಲೆ‌ ಇತ್ಯಾದಿ ಮೀನುಗಾರಿಕೆಯಲ್ಲಿ ತೊಡಗಿರುತ್ತಿದ್ದರು. ಹಾಗಾಗಿ ಹಾರಿದ ಬಿದ್ದ ಮೀನು ಹೆಕ್ಕಲು ಒಂದಷ್ಟು ಜನ ಓಡಾಡುತ್ತಿದ್ದರು.  ತಾಂಡೇಲನು ತೊರಕೆ ಮೀನಿನ ಬಾಲ ಹಿಡಿದು ಅದನ್ನು ಚಾಟಿಯಂತೆ ಬೀಸಿ ಅವರನ್ನು ಓಡಿಸಲು ಪ್ರಯತ್ನಿಸಿದರೂ ಅವರು ಬಿಡಲಾರರು.

                                                                                          ಅಲೆಮೊರೆತ

ಆಗ ಐಸ್ ಫ್ಯಾಕ್ಟರಿಗಳು ಇರಲಿಲ್ಲ. ಹಾಗಾಗಿ ಉದ್ದಕ್ಕೂ ‌ಮೀನು ಬಿದ್ದು ದಾರಿ ವಾಸನೆ ಹೊಡೆಯುವುದೂ ಇತ್ತು. ಅನಂತರವೇ ಮೀನುಗಾರಿಕೆ ಬಂದರು, ಬೋಟುಗಳೆಲ್ಲ ಮೀನುಗಾರಿಕೆಗೆ ಇಳಿದದ್ದು. ಇತ್ತ ಒಡಿಪು ಉಡುಪಿ ಆದಂತೆ ಮಾಣಿಪಳ್ಳ ಮಣಿಪಾಲ ಆಯಿತು. ನಮ್ಮ ಅಮಾಸೆ ಮೀಯುವ ಜಾಗ ವಿದ್ಯಾರ್ಥಿಗಳ ಸಂಜೆಯ ವಿಹಾರ ತಾಣವಾಯಿತು. ಅದು ಬೀಚ್ ಆಗಿ ಬೆಳೆಯಿತು.

ಬೀಚ್ ಹೊಯಿಗೆಯಂಗಳ ಅಭಿವೃದ್ಧಿಯ ಹೆಸರಿನಲ್ಲಿ ಇಂದು ಅಲ್ಲಿ ಎಲ್ಲ ಬಗೆಯ ‌ವ್ಯಾಪಾರ ನಡೆಯುತ್ತದೆ. ಬೀಚ್ ಮನೋರಂಜನೆಗೂ ಕೊರತೆ‌ ಇಲ್ಲ; ಕೆಲವರಲ್ಲಿ ಕಾಸು ಕೊರತೆ ಇರಬಹುದು ಅಷ್ಟೇ. ಇಂದು ‌ಸಂಜೆಯಾದರೆ ಮಲಪು ಬೀಚ್‌ನಲ್ಲಿ ದೊಡ್ಡ ಸಂತೆ, ಭಾರೀ ಪೇಟೆ, ಮಕ್ಕಳ ಕಲರವ, ಲವರ್‌ಗಳ ಮಿಲರವ, ಖದೀಮರ ಕರಾಮತ್ತು, ಕೆಲವೊಮ್ಮೆ ಮಿಡ್‌ನೈಟ್ ಪಾರ್ಟಿ ಎಲ್ಲವೂ ನಡೆಯುತ್ತಿರುತ್ತವೆ. 


-By ಪೇಜಾ