ಭಾರತದಲ್ಲಿ ಮೊದಲ ಕೊರೊನಾ ಅಲೆಯ ಸಂದರ್ಭ ಸಾರ್ವಜನಿಕರು ನಗರಗಳಿಂದ ವಲಸೆ ಹೊರಟು, ಊರು ತಲುಪುವ ಭರಾಟೆಯ ನಡುವೆ ಸ್ವತ: ಸರಕಾರವೇ ಲಾಕ್ ಡೌನ್ ಮಾಡಿ ಹರಡುವಿಕೆಯನ್ನು ತಹಬಂದಿಗೆ ತಂದು ಕ್ರಮ ಕೈಗೊಂಡ ಕಾರಣ ಅದು ಮುಗಿದು ಹೋಗಿತ್ತು. ಆದರೆ ಇದೀಗ ಎರಡನೇ ಅಲೆಯ ಸಂದರ್ಭದಲ್ಲಿ ಕೊರೊನಾವೇ ಅಟ್ಟಹಾಸವನ್ನು ಮೆರೆಯುತ್ತಿದೆ. ಅದಕ್ಕೆ ಮುಖ್ಯವಾದ ಕಾರಣಗಳು-ಮೊದಲ ಅಲೆಯ ಸಂದರ್ಭದಲ್ಲಿ ಊರಿನತ್ತ ಮುಖ ಮಾಡಿದ ಜನರು ಬಹಳ ಅದ್ದೂರಿಯಾಗಿ ವಿವಿಧ ಕಾರ್ಯಕ್ರಮ ಹಾಗೂ ಶುಭ ಸಂದರ್ಭದಲ್ಲಿ ಮಾಸ್ಕ್ ರಹಿತ, ಅಂತರ ರಹಿತ, ಎಗ್ಗಿಲ್ಲದೆ ತಿರುಗಾಡಿದ್ದು. ಕೊರೊನಾದ ಪ್ರಥಮ ಅಲೆ ಮುಕ್ತಾಯದೊಂದಿಗೆ ಎಲ್ಲವೂ ಸುಖಾಂತ್ಯಗೊಂಡಿತೆಂದು ಮೈಮೆರೆತು ಊರಿನ ಹಬ್ಬ-ಹರಿದಿನ, ಜಾತ್ರೆ,-ಉತ್ಸವ, ಕೋಲ-ನೇಮ, ಸಂತೆ-ಕಂತೆಗಳಲ್ಲಿ ಮಾಸ್ಕ್ ಇಲ್ಲದೆ, ಅಂತರ ಇಲ್ಲದೆ, ಬೇಕಾಬಿಟ್ಟಿಯಾಗಿ ತಿರುಗಾಡಿ ಎರಡನೇ ಅಲೆಯ ಕೊರೊನಾವನ್ನು ಮೈಮೇಲೆ ಎಳೆದುಕೊಂಡುದು. ಚುನಾವಣೆಯ ಹೆಸರಲ್ಲಿ ರಾಜಕೀಯ ಮಂದಿ ಜನರನ್ನು ರ್ಯಾಲಿ, ಸಭೆ, ರೋಡ್ ಶೋ ಗಳೆಂದು ಒಟ್ಟು ಸೇರಿಸಿ ಕೊರೊನಾ ಬಿತ್ತಿ, ಹರಡಲು ಸಾಕಷ್ಟು ಉತ್ತೇಜನವನ್ನು ನೀಡಿದ್ದು, ಈ ಮನೂರನೇ ಕ್ರಮದಿಂದಾಗಿಯೇ ಕೊರೊನಾ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಭಾರತದಲ್ಲಿ ಹರಡಲು, ಜನರು ಪ್ರಾಣ ಕಳೆದುಕೊಳ್ಳಲು ಕಾರಣವಾಯ್ತು.
ವಿದೇಶಗಳಲ್ಲಿ ಜನರು ಮೊದಲ ಕೊರೊನಾದ ಹೊಡೆತದಿಂದಲೇ ಪಾಠ ಕಲಿತು ಮಾಸ್ಕ್, ಅಂತರಗಳೆಲ್ಲವನ್ನೂ ಪಾಲಿಸಿದ್ದರಿಂದ ಎರಡನೇ ಅಲೆ ಹೆಚ್ಚೇನೂ ಅಪಾಯಕಾರಿ ಮಟ್ಟವನ್ನು ಮುಟ್ಟಲಿಲ್ಲ. ಆದರೆ ಭಾರತದ ಜನ ಸಾಮಾನ್ಯರು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನೂ ಗಾಳಿಗೆ ತೂರಿ, ಎಲ್ಲರೊಂದಿಗೆ ಮೋಜು ಮಸ್ತಿ ಮಾಡಿ ರ್ಯಾಲಿ, ಸಭೆ, ರೋಡ್ ಶೋ,ಗಳೆಲ್ಲದರಲ್ಲೂ ಭಾಗಿಗಳಾಗಿ ಕೊರೊನಾದ ಅಬ್ಬರಕ್ಕೆ ತುಪ್ಪ ಸುರಿದರು. ಚುನಾವಣಾ ಆಯೋಗವಾದರೂ ಚುನಾವಣೆಯನ್ನು ಮುಂದೂಡಬಹುದಾಗಿತ್ತು. ಅದನ್ನೂ ಮಾಡಿಲ್ಲ. ಸಮಯಕ್ಕೆ ಸರಿಯಾಗಿ ಚುನಾವಣೆಯನ್ನು ಮುಗಿಸುವ ಜವಾಬ್ದಾರಿಯನ್ನು ಮಾತ್ರ ನಿರ್ವಹಿಸಿ ಕೈತೊಳೆದು ಕೊಂಡಿತು. ಆದರೆ ಕೊರೊನಾದ ಬಗೆಗೆ ಮೊದಲೇ ಎಚ್ಚರಿಕೆಯನ್ನು ನೀಡಿದ್ದ ಕಾರಣದಿಂದಾಗಿಯಾದರೂ ಕೇವಲ ವರ್ಚುವಲ್ ಸಭೆ, ಆನ್ ಲೈನ್ ಚರ್ಚೆಗಳಿಗೆ ಮಾತ್ರ ಅವಕಾಶವನ್ನು ನೀಡುವ ಮೂಲಕ ಕೊರೊನಾದ ತಡೆಗೆ ಕೊಡುಗೆ ಸಲ್ಲಿಸಬಹುದಾಗಿತ್ತು.
ಸಾವಿರಾರು ಮಂದಿಯ ಮರಣ ಮೃದಂಗದಲ್ಲಿ ಒದ್ದಾಡುತ್ತಿರುವ ಭಾರತೀಯರು ಇನ್ನಾದರೂ ಚಿಂತಿಸುವ, ಯೋಚಿಸುವ ಹಂತಕ್ಕೆ ಬರುವುದೊಳಿತು. ಚುನಾವಣೆ ಆಯೋಗ ಕೂಡಾ ಕೊರೊನಾದೊಂದಿಗೆ ಬದುಕಬೇಕಾದ ಜನರ ಬಗೆಗೆ ಯೋಚಿಸಬೇಕಾಗಿದೆ. ಏಕೆಂದರೆ ಕೊರೊನಾ ವೈರಸ್ ಮನುಷ್ಯನನ್ನು ಬಿಟ್ಟು ದೂರ ಹೋಗುವುದಿಲ್ಲ ಎಂದು ಶ್ರುತ ಪಡಲಾಗಿದೆ. ಹೀಗಾಗಿ ಅಂತಹ ಕೊರೊನಾದ ಹರಡುವಿಕೆಯನ್ನು ಮುಂದಿನ ದಿನಗಳಲ್ಲಿ ತಡೆಯುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಹಾಗೂ ದೇಶದ ಎಲ್ಲಾ ಅಧಿಕಾರೀ ವರ್ಗದವರೂ ಆಲೋಚಿಸುವುದು ಉತ್ತಮ. ಚುನಾವಣೆಯ ಎಲ್ಲಾ ಹಂತದಲ್ಲೂ ಮಾಸ್ಕ್ ಕಡ್ಡಾಯ, ಅಂತರ ಕಡ್ಡಾಯ, ಸ್ಯಾನಿಟೈಸ್ ಕಡ್ಡಾಯ ಎಂಬ ಕಾನೂನು ಜಾರಿಗೊಳಿಸಿ ಕಟ್ಟುನಿಟ್ಟಾಗಿ ಜಾರಿ ಮಾಡುವುದು ಬಹಳ ಉತ್ತಮ. ನಾಮ ನಿರ್ದೇಶನದ ಸಮಯ ಕೂಡಾ ಒಬ್ಬರು ಯಾ ಇಬ್ಬರೊಂದಿಗೆ ಮಾತ್ರ ಆಯೋಗದ ಅಧಿಕಾರಿಗಳಿಗೆ ಅಭ್ಯರ್ಥಿತನದ ಅರ್ಜಿ ನೀಡಿಕೆ . ಅಭ್ಯರ್ಥಿತನದ ಪಕ್ಕಾ ಆದ ತರುವಾಯ ಪ್ರೆಚಾರವನ್ನು ಕೇವಲ ಪ್ರಚಾರ ಮಾಧ್ಯಮಗಳಾದ ರೇಡಿಯೋ, ಟಿ.ವಿ., ವರ್ಚುವಲ್ ಸಭೆ, ಆನ್ ಲೈನ್ ಚರ್ಚೆ, ಇತ್ಯಾದಿಗಳಿಗೆ ಮಾತ್ರ ಸೀಮಿತಗೊಳಿಸಬೇಕು. ಯಾವುದೇ ಸಂದರ್ಭದಲ್ಲೂ ರ್ಯಾಲಿ, ಪ್ರಚಾರ ಸಭೆ, ರೋಡ್ ಶೋ, ಗಳಿಗೆ ಅವಕಾಶವನ್ನೇ ನೀಡಬಾರದು. ಚುನಾವಣೆಯ ಮೊದಲಾಗಲೀ ನಂತರವಾಗಲೀ ರ್ಯಾಲಿ, ಸಭೆ, ರೋಡ್ ಶೋ ಇತ್ಯಾದಿಗಳ್ಯಾವುದಕ್ಕೂ ಅವಕಾಶವೇ ಇರದಂತೆ ಕಟ್ಟು-ನಿಟ್ಟಿನ ಕಾನೂನು ಹಾಗೂ ಅಷ್ಟೇ ಕಟ್ಟು-ನಿಟ್ಟಾಗಿ ಜಾರಿಗೂ ತರಬೇಕು. ಹಬ್ಬ-ಹರಿದಿನ, ಶುಭ ಸಮಾರಂಭ ಇತ್ಯಾದಿಗಳೆಲ್ಲದಕ್ಕೂ ಕೂಡಾ ಅತ್ಯಂತ ಕನಿಷ್ಠ ಜನ ಸೇರಲು ಅವಕಾಶವನ್ನು ನೀಡಬಹುದು. ಏಕೆಂದರೆ ಕೊರೊನಾದ ಮೂರನೇ ಅಲೆ ನವೆಂಬರ್ ತಿಂಗಳಲ್ಲಿ ಅಪ್ಪಳಿಸಲಿದೆ ಎಂದು ತಿಳಿಸಿದ್ದಾರೆ.
ದಾಖಲೆಗಳೆಲ್ಲವೂ ಡಿಜಿಟಲೀಕರಣಗೊಂಡು ಆನ್ ಲೈನ್‍ನಲ್ಲಿಯೇ ದೊರಕುವದರಿಂದ ಸಾಧ್ಯವಾದಷ್ಟೂ ಹೆಚ್ಚಿನ ಅರ್ಜಿ, ಒಪ್ಪಿಗೆ, ಅನುಮತಿಗಳೆಲ್ಲವೂ ಆನ್ ಲೈನ್‍ನಲ್ಲಿಯೇ ನಡೆಯುವಂತೆ ಮಾಡಬೇಕು. ಇದರಿಂದಾಗಿ ಸಾಮಾನ್ಯರು ಕಚೇರಿ, ಆಫೀಸು ಎಂದೆಲ್ಲಾ ವೃಥಾ ತಿರುಗಾಡಿ ಕೊರೊನಾಕ್ಕೆ ಒಳಗಾಗುವುದು ತಡೆಯಲ್ಪಡುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಆನ್ ಲೈನ್ ನಲ್ಲಿಯೇ ಅರ್ಜಿ, ಒಪ್ಪಿಗೆ, ಅನುಮತಿಗಳೆಲ್ಲವೂ ಆದಲ್ಲಿ ಎಷ್ಟೋ ಕಚೇರಿಗಳ ಲಂಚ-ರುಷುವತ್ತುಗಳು ತಹಬಂದಿಗೆ ಬರಲಿವೆ. ಹಾಗೂ ಸಾಮಾನ್ಯರು ಬಹಳ ಉತ್ತಮ ದಿನಗಳನ್ನು ಎಣಿಸಬಹುದಾಗಿದೆ.
ಕೇಂದ್ರ ಸರಕಾರ ಸಾಧ್ಯವಾದಷ್ಟೂ ಶೀಘ್ರದಲ್ಲಿ ಚುನಾವಣೆಯ ಮೊದಲ ಹಾಗೂ ನಂತರದ ಎಲ್ಲಾ ಪ್ರಕ್ರಿಯೆಗಳನ್ನೂ ಪ್ರಚಾರ ಮಾಧ್ಯಮ, ರೇಡಿಯೋ, ಟಿ.ವಿ.,ವರ್ಚುವಲ್ ಸಭೆ, ಆನ್ ಲೈನ್ ಚರ್ಚೆಗಳಿಗೆ ಮಾತ್ರ ಸೀಮಿತಗೊಳಿಸಬೇಕು. ಅದೇ ರೀತಿ ಸಾಧ್ಯವಾದಷ್ಟೂ ಹೆಚ್ಚಿನ ಪ್ರಮಾಣದಲ್ಲಿ ಎಲ್ಲಾ ಇಲಾಖೆಗಳ ಅರ್ಜಿ, ಒಪ್ಪಿಗೆ, ಅನುಮತಿಗಳೆಲ್ಲವನ್ನೂ ಆನ್ ಲೈನ್‍ನಲ್ಲಿಯೇ ಸಲ್ಲಿಸಿ ಪಡೆಯುವಂತೆ ನಿರ್ದಿಷ್ಟ ಪಡಿಸಬೇಕು. ಎಲ್ಲಾ ಇಲಾಖೆಗಳ ಇಮೇಲ್, ಇತ್ಯಾದಿ ಆನ್ ಲೈನ್ ಮಾಧ್ಯಮಗಳೆಲ್ಲವನ್ನೂ ಸದಾ ಜಾಗೃತಿಯಲ್ಲಿರಿಸಬೇಕು. ಬೇಕಾದ ಅರ್ಜಿಗಳೆಲ್ಲವೂ ಆನ್ ಲೈನ್‍ನಲ್ಲಿಯೇ ದೊರಕುವಂತೆ ಹಾಗೂ ಅದರಲ್ಲಿಯೇ ಸಲ್ಲಿಸಲ್ಪಡುವಂತೆ ಮಾಡಬೇಕು. ಇಂತಹ ಕ್ರಮಗಳನ್ನು ಕಟುನಿಟ್ಟಾಗಿ ಜಾರಿಗೆ ತರಲು ಇದು ಸಕಾಲ. ಜನರು ಕಚೇರಿಗೆ ಬರುವದನ್ನು ಶೂನ್ಯಕ್ಕೆ ಇಳಿಸಬೇಕು. ಇಂತಹ ಪರಿವರ್ತನೆಗಳಿಂದ ಜನರ ಆರೋಗ್ಯ, ಶ್ರಮ, ಹಣ ಉಳಿತಾಯವಾಗಲಿದೆ. ತಿಳಿವಳಿಕೆ ಹೆಚ್ಚುವ, ಹೆಚ್ಚಿಸುವ ಸುಲಭ ಮಾಧ್ಯಮಗಳು ಜನರ ಕಣ್ಣು ತೆರೆಸಲಿವೆ. ಜನರ ಶಿಕ್ಷಣ ಮಟ್ಟ ಹೆಚ್ಚಲೂ ಕಾರಣವಾಗಬಹುದು. ಹೇಗೆಂದರೆ ಹೆಚ್ಚು ಹೆಚ್ಚು ಜನ ಮೊಬೈಲ್, ಕಂಪ್ಯೂಟರ್ ಇತ್ಯಾದಿ ಕಲಿತು ಹೆಚ್ಚು ಚುರುಕಾಗಲು ಕಾರಣವಾಗಲಿದೆ. ಆದರೆ ಇಂತಹ ಉಪಕ್ರಮಕ್ಕೆ ಸರಕಾರ, ಅಧಿಕಾರಿಗಳು, ಸಚಿವರುಗಳು, ಮನಮಾಡಬೇಕಿದೆ. ಅಷ್ಟೆ.
ಲೇಖನ: ರಾಯೀ ರಾಜಕುಮಾರ್,ಮೂಡುಬಿದಿರೆ