ನಾವೆಲ್ಲ ಬಲ್ಲ ಬಾವಿಗಳು ಜ‌ನರಿಗೆ ನೀರು ‌ಸೇದಿ ಬಳಸಲು ಇರುವ ನೆಲೆಗಳು. ಕಾಲವು ಬಾವಿಗಳನ್ನು ಇತಿಹಾಸದಲ್ಲಿ ಕಳೆದುಹೋಗುವಂತೆ ಮಾಡಿದೆ.

ಹಂಪನಕಟ್ಟೆಯಲ್ಲಿ ಇರುವ ಈ ಬಾವಿ ದಿಢೀರನೆ ಪ್ರಸಿದ್ಧಿ ಪಡೆದುಕೊಂಡಿದೆ. ಜೊತೆಗೆ ಇತಿಹಾಸದ ಕಟ್ಟು ಕತೆಗಳಲ್ಲಿ ಕೊಚ್ಚಿ ಹೋಗುತ್ತಿದೆ. ಇದು ವಿಜಯನಗರ ಕಾಲದ್ದು, ಬ್ರಿಟಿಷರ ಕಾಲದ್ದು ಎಂದೆಲ್ಲ ಹೇಳಿದರೂ ಅದು ಆ ಜಾಗ ಹೊಂದಿದ್ದವರ ಖಾಸಗಿ ಬಾವಿ ಕೂಡ ಆಗಿರಬಹುದು.

ನದಿ, ಕೆರೆಗಳ ನೀರನ್ನು ಬಳಸುತ್ತಿದ್ದ ಮಾನವನು ತನ್ನ ವಸತಿ ವಿಸ್ತರಿಸಿಕೊಂಡಂತೆ ಹೊಸ ನೀರ ಮೂಲ ಮಾಡಿಕೊಳ್ಳಬೇಕಾಯಿತು. ಹೋದಲ್ಲಿ ಕೆರೆ ತೋಡಿದ. ತೋಡಿಗೆ ಒಡ್ಡು ಕಟ್ಟಿ ಕೆರೆ ಮಾಡಿದ. ಗುಡ್ಡವ ಮರೆ (ಮದೆ) ಅಗ ಮಾಡಿ ಮದಗ ಕಟ್ಟಿದ. ಹಾಗೆಯೇ ಬಾವಿಗಳನ್ನು ತೋಡಿಕೊಂಡ.

ಜನರು ಏಳೆಂಟು ಸಾವಿರ ವರುಷಗಳಿಂದ ಬಾವಿ ತೋಡಿಕೊಂಡಿದ್ದಾರೆ. ಮಡಕೆಯ ಅವಶೇಷಗಳ ಜೊತೆಗೆ ಬಾವಿಯ ಅವಶೇಷಗಳೂ ದೊರಕಿವೆ. ಎಲ್ಲ ನಾಗರಿಕತೆಗಳಲ್ಲೂ ಕೆರೆ, ಬಾವಿ, ಕಟ್ಟೆಗಳು ಕಂಡುಬರುತ್ತದೆ. ಆರ್ಯ ನಾಯಕ ‌ಇಂದ್ರನು ನದಿ ಒಡ್ಡುಗಳನ್ನು ಒಡೆದು ಸಿಂಧೂ ನಾಗರಿಕತೆಯ ಪುರಗಳನ್ನು ನಾಶ ಮಾಡಿದ. ಆದ್ದರಿಂದ ಅವನಿಗೆ ಪುರಂದರ ಎಂದು ಹೆಸರು.

ಜೆಕ್ ರಿಪಬ್ಲಿಕ್‌ನ ಓಸ್ಲೋವ್‌ನ ಕ್ರಿ. ಪೂ. 5,625ರ ಬಾವಿ, ಆಸ್ಟ್ರಿಯಾದ ಶೆಲ್‌ಟ್ಜ್‌ನ ಕ್ರಿ. ಪೂ. 5,200ರ ಬಾವಿ, ಅಯ್ತ್ರಾದ ಕುಕೋವನ್‌ನ ಕ್ರಿ. ಪೂ. 5,090ರ ಬಾವಿಗಳು ಪತ್ತೆಯಾಗಿರುವ ಅತಿ ಪುರಾತನ ಬಾವಿಗಳಾಗಿವೆ.

ನೆಲದ ಮೇಲೆ ನೀರಿಲ್ಲ, ನೆಲದಡಿ  ನೀರ ಒರತೆ ಇದೆ ಎಂದಾಗ ತೋಡಿ ನೀರು ಪಡೆದವುಗಳೇ ಬಾವಿಗಳು. ಭಾರತದ ಮೆಟ್ಟಿಲು ಬಾವಿಗಳು, ಟರ್ಕಿ ಕತಾರ್‌ನ ಗುಹೆ ಬಾವಿಗಳು ವಿಶಿಷ್ಟವಾದವು. ಮೊದಲು ಚೌಕಕ್ಕೆ ಅಗೆದ ಬಾವಿ ಮುಂದೆ ಉರುಟಾಯಿತು. ಬಾವಿಗೆ ಕಲ್ಲು ಕಟ್ಟುವುದಕ್ಕೆ ಮೊದಲು ಅಡಿ ಇಡುವ ಮರದ ಆಯಕ್ಕೆ‌ ಚೌಕ ಎಂದೇ ಹೆಸರು. ಭಾರತದಲ್ಲಿ ಉರುಟು ಬಾವಿಗಳು ತಡವಾಗಿ ಆದವು ಎಂಬುದು ಅಧ್ಯಯನದಿಂದ ತಿಳಿದು ‌ಬರುತ್ತದೆ.

ಆಲಯಗಳಲ್ಲಿ ಕಟ್ಟಿಕೊಂಡ ಅಗಲ ಕೆರೆಗಳು ಕಲ್ಯಾಣಿ ಎನಿಸಿದವು. ಮೂಲದಲ್ಲಿ ಜನ ಕಲ್ಯಾಣ ಯೋಜನೆಯ ಜನ ಬಳಕೆಯ ಕೆರೆಗಳಿವು.

ಮಂಗಳೂರಿನಂಥ ನಗರಗಳಲ್ಲಿ ನಲ್ಲಿ ನೀರು ದೊರೆತ ಮೇಲೆ ಬಾವಿಗಳು ನಿರುಪಯುಕ್ತ ಎನಿಸಿದವು. ಹೆಚ್ಚಿನವು ಭೂಗತಕ್ಕೆ ಕಳಿಸಲ್ಪಟ್ಟವು. ಹಂಪನಕಟ್ಟೆ ವೃತ್ತದಲ್ಲಿ ರಸ್ತೆ ಅಗಲ ಮಾಡಲು ಅಗೆದಾಗ‌ ದೊರೆತ ಬಾವಿ ಕೂಡ ಅಂಥ ಒಂದು ಭೂಗತ ಬಾವಿಯಾಗಿದೆ. ಸತ್ತವರ ಸ್ಮಾರಕ ಮಾಡುವಂತೆ ಅದನ್ನು ಪೂರ್ಣ ‌ಮುಚ್ಚಿ ಮೇಲೆ ಅಲಂಕಾರದ ಕಟ್ಟೆ ಕಟ್ಟಲಾಗಿದೆ ಆದ್ದರಿಂದ ಇದು ಬಾವಿಯ‌ ಸಮಾಧಿ.

ಹಂಪನಕಟ್ಟೆಯಲ್ಲಿ ಹಂಪಿ ವಿಜಯನಗರ ‌ಸುಂಕದ ಕಟ್ಟೆ ಇತ್ತು. ಅರವಟ್ಟಿಗೆ ಕೂಡ ‌ಇತ್ತು. ನೀರು ಯಾವ ಬಾವಿಯಿಂದ ‌ಎಂಬುದಕ್ಕೆ ಆಧಾರವಿಲ್ಲ. ಇದು ಸಾಧಾರಣ ಬಾವಿಯಾದ್ದರಿಂದ ರಾಜರ ಕಾಲದ ರಾಜರ ಬಾವಿ‌‌ ಎನ್ನಲಾಗದು. ಬ್ರಿಟಿಷರ ವಸತಿ ಮತ್ತು ಕಚೇರಿಗಳು ಈ ಜಾಗದಲ್ಲಿ ಇರಲಿಲ್ಲ. ಅವರು ಕಟ್ಟಿಸಿರುವ ಸಾಧ್ಯತೆ ಇಲ್ಲ ಎನ್ನಲಾಗದಾದರೂ ಸಾಧ್ಯತೆ ಕಡಿಮೆ.

ರಸ್ತೆ ಮಿತಿಯದಿದ್ದಾಗ ಇದು ಖಾಸಗಿಯವರ ಜಾಗದ ಬಾವಿ ಆಗಿರಬೇಕು. ನನ್ನ ಅಜ್ಜಿ ಕುಡಿಯುವ ನೀರಿಗೆ ಒಂದು, ಏತಕ್ಕೆ ಒಂದು ಎಂದು ಎರಡು ಬಾವಿ ತೋಡಿಸಿದ್ದರು. ಕ್ರಯಕ್ಕೆ ಪಂಪ್ ನೀರು ಪಡೆಯತೊಡಗಿದ ಮೇಲೆ ಏತದ ಬಾವಿ‌ ಬಳಕೆ ನಿಂತಿತು. ಕಾಲು ಶತಮಾನದ ಹಿಂದೆ ರಸ್ತೆ ಮಾಡುವಾಗ ನಮ್ಮ ಜಾಗವನ್ನು ಉದ್ದಕ್ಕೆ ನೀಡಿದ್ದೆವು. ಆ ರಸ್ತೆಯಡಿ ಅಂದಿನಿಂದ ನನ್ನ ತಾಯಿಯ ತಾಯಿ ತೋಡಿಸಿದ್ದ ಒಂದು ಬಾವಿ ಗಪ್‌ಚುಪ್ ಆಗಿದೆ. ಮೇಲೆ ವಾಹನಗಳ ದರ್‌ಬರ್!

ಇಲ್ಲಿ ದೂಮಪ್ಪ ಮೇಸ್ತ್ರಿ ಮೊದಲಾದ ಬಿರುವರ ಜಾಗ ಇದ್ದವು. ಬಹುಶಾ ಇದು ದೂಮಪ್ಪ ಮೇಸ್ತ್ರಿಯವರ ಕುಟುಂಬದ ಬಾವಿಯಾಗಿದ್ದಿರಬಹುದು. ರಸ್ತೆ ವಿಸ್ತರಿಸಿಕೊಂಡಂತೆ ಬಾವಿಯ ಬಾಯಿಗೆ ಮಣ್ಣು ಬಿದ್ದಿರುತ್ತದೆ. ಜನರಿಗಂತೂ ಕೊಳಾಯಿ ತಿರುವಿದರೆ ನೇತ್ರಾವತಿ ಇಳಿದು ಬರುವಳು ಬಿಡಿ. ಊರಿಗೆ ಬಂದವಳು ನೀರಿಗೆ ಬರದಿರುತ್ತಾಳೆಯೆ ಎಂಬುದು ಹಳೆಯ ಗಾದೆ. ಮನೆಯ ಒಳಗೆ ನಲ್ಲಿ ನೀರು ಎಂದಾದ ಮೇಲೆ ಎಷ್ಟೋ ಕಡೆ ನಗರಗಳಲ್ಲಿ ಪಕ್ಕದ ಮನೆಯವರ ಪರಿಚಯವೂ ಇರುವುದಿಲ್ಲ; ಇನ್ನು ಬಾವಿಯ ಪರಿಚಯ ಏಕಿರಬೇಕು? 


-By ಪೇಜಾ