ಮಾತಿನ ಚಿತ್ರಗಳು, ಪ್ರಪಂಚದಲ್ಲಿ ಮೂಡುವ ಮೊದಲು ಕೇವಲ ಮೂಕಿ ಚಿತ್ರಗಳ ಮೂಲಕವೇ ಚಿತ್ರರಂಗ ಪ್ರಸಿದ್ಧಿಯನ್ನು ಪಡೆದಿತ್ತು. ಅದರಲ್ಲೂ ಚಾರ್ಲಿ ಚಾಪ್ಲಿನ್ ನಂತಹವರೂ ಅತ್ಯಂತ ಸಮರ್ಥವಾಗಿ ಸನ್ನೆಯ ಪ್ರತಿಪಾದಕರಾಗಿ ಚಿತ್ರರಂಗವನ್ನು ಆಳಿದವರು. ಪ್ರಪಂಚದಲ್ಲಿ ನಾಗರೀಕತೆಗಳು ಪ್ರಾರಂಭಗೊಂಡಾಗ ಕೂಡಾ ಭಾಷೆ, ಲಿಪಿ, ಮಾತು ಇರಲು ಸಾಧ್ಯವೇ ಇಲ್ಲ. ಆಗೆಲ್ಲಾ ಹೆಚ್ಚಿನ ಪಕ್ಷ ಚಿತ್ರಗಳೇ ಅವರ ಭಾಷಾ ಮಾಧ್ಯಮವಾಗಿದ್ದಿರಬಹುದು ಎಂದು ಆ ಕಾಲದ ದೊರೆತ ಅವಶೇಷಗಳಿಂದ ತಿಳಿಯಬಹುದು. ಅದೇ ಪ್ರಕಾರ ಪ್ರಕೃತಿಯಲ್ಲಿರುವ ವಸ್ತು, ಪ್ರಾಣಿಗಳನ್ನು ಮಾಧ್ಯಮವಾಗಿ ಬಳಸಿಕೊಂಡು ವ್ಯಾಪಾರ, ವ್ಯವಹಾರಗಳನ್ನೂ ಮಾಡುತ್ತಿದ್ದಿರಬಹುದು ಎಂದು ದೊರಕಿದ ವಸ್ತು, ಇತ್ಯಾದಿಗಳಿಂದ ತಿಳಿದು ಬರುತ್ತದೆ. ಅದೇ ರೀತಿ ನಾಗರೀಕತೆ ಬೆಳೆದಂತೆ ಕೆಲವಾರು ಚಿತ್ರ ಸಂಕೇತಗಳು ಭಾಷಾ ಮಾಧ್ಯಮವಾಗಿ ಬೆಳೆದಿರಬಹುದೆಂದು ತಿಳಿಯಬಹುದು.

ಚರಿತ್ರೆಯ ಇಂತಹ ನೆನಪುಗಳು ಮರುಕಳಿಸಲು ಮುಖ್ಯ ಕಾರಣ ಹೆಚ್ಚುತ್ತಿರುವ ಕೊರೊನಾ. ಇಂತಹ ಕೊರೊನಾದ ಮಹಾ ಹೊಡೆತದ ನಡುವೆಯೇ ಹಲವಾರು ಮಂದಿ ತಮ್ಮ ಸ್ವಾರ್ಥದ ಲಾಲಸೆಯನ್ನು ಬಿಡದಿರುವದು. ಸರಕಾರ ಹಾಗೂ ವಿವಿಧ ಸಾಮಾಜಿಕ ಶ್ರೇಯದ ಸಂಘಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು ಕೊರೊನಾದ ಹಿಡಿತದಿಂದ ತತ್ತರಿಸಿರುವ ವ್ಯಕ್ತಿಗಳನ್ನು ಉಳಿಸುವ, ರಕ್ಷಿಸುವ, ಪುನರಪಿ ಸಾಮಾನ್ಯರನ್ನಾಗಿಸುವ ಪ್ರಯತ್ನದಲ್ಲಿ ಹಗಲಿರುಳೂ ಒದ್ದಾಡುತ್ತಿರುವಾU,À ಕೆಲವಾರು ಮಂದಿ ಹಣದ ಆಸೆಗೆ ಇರುವ ಸೌಲಭ್ಯಗಳಿಗೆ ತಡೆಯೊಡ್ಡಿ ಸಾಮಾನ್ಯರಿಗೆ, ಬಡವರಿಗೆ, ನಿಜವಾದ ಪೀಡಿತರಿಗೆ ಆಸ್ಪತ್ರೆಯ ಸೌಲಭ್ಯ ದೊರಕದಂತೆ ಮಾಡಿರುತ್ತಾರೆ. ರೋಗದಿಂದ ತತ್ತರಿಸುತ್ತಾ, ಪ್ರಾಣವಾಯುವಿನ ಒದಗಣೆಗೆ ಒದ್ದಾಡುತ್ತಿರುವ ವ್ಯಕ್ತಿಗಳಿಗೆ ಹೇಗಾದರೂ ಪ್ರಾಣ ಒದಗಿಸುವ, ಬದುಕಿಸುವ ಕಾರ್ಯಕರ್ತರು, ಮನೆಯವರುಗಳ ಕಾರ್ಯಕ್ಕೆ ತಣ್ಣೀರೆರಚಿ ಬೆಡ್ ಸಿಗದಂತೆ ಮಾಡಿ ಸಾಯುವಂತೆ ಮಾಡಿದ, ಮಾಡುತ್ತಿರುವ ಎಲ್ಲರನ್ನೂ ಬಂಧಿಸಿ ಅತ್ಯಂತ ಕ್ರೂರ ಶಿಕ್ಷೆ ನೀಡಬೇಕು. ನೇರವಾಗಿ ಕೊಲೆ ಮಾಡದಿದ್ದರೂ ಕೂಡಾ ಪರೋಕ್ಷವಾಗಿ ಹಲವರ ಪ್ರಾಣ ಹರಣಕ್ಕೆ ಕಾರಣರಾದ, ಬೆಡ್ ಬ್ಲಾಕ್ ದಂಧೆಯ ಮೂಲಕ ಪರೋಕ್ಷ ಕೊಲೆಗಾರರಾದ, ಎಲ್ಲರನ್ನೂ ಯಾವದೇ ವಿಚಾರಣೆ ಇಲ್ಲದೆ ಅತೀ ತೀಕ್ಷ್ಣ ಕಾನೂನಿನ ಅಡಿಯಲ್ಲಿ ನೇರ ಹೊಣೆಗಾರರನ್ನಾಗಿ ಮಾಡಬೇಕು. ಯಾವುದೇ ವಿಚಾರಣೆ ಇಲ್ಲದೆ ಇಂತಹ ವಿಕೃತಿಗೆ ಕಾರಣರಾದವರನ್ನು ಮೃತ್ಯುಕೂಪಕ್ಕೆ ತಳ್ಳುವಂತಾಗಬೇಕು. ಆಗಲೇ ಇತರರು ಇಂತಹ ವಿಕೃತಿಗೆ ಮನಸ್ಸು ಮಾಡಲಾರರು.

ಸಾಮಾನ್ಯವಾಗಿ ಕಿವಿ, ಮೂಗು, ಗಂಟಲುಗಳು ಒಂದಕ್ಕೊಂದು ಪೂರಕ, ಪ್ರೇರಕ, ಹಾಗೂ ಸಾಧಕಗಳು. ಆದುದರಿಂದಲೇ ಸಾಮಾನ್ಯವಾಗಿ ಬಾಯಿ ಬಾರದ ವ್ಯಕ್ತಿಗೆ ಕಿವಿಯೂ ಸರಿಯಾಗಿ ಕೇಳಿಸದು. ಹೀಗಾಗಿ ಮೂಕರೊಂದಿಗೆ, ಕಿವುಡರೊಂದಿಗೆ ವ್ಯವಹರಿಸುವಾಗ ವ್ಯಕ್ತಿಗಳು ಸನ್ನೆ ಅಥವಾ ಕೈ ಭಾಷೆಯಲ್ಲಿಯೇ ವ್ಯವಹರಿಸುತ್ತಾರೆ. ಅಥವಾ ಚಿತ್ರ ಬಿಡಿಸಿ ತೋರಿಸಿ ಮನದಟ್ಟು ಮಾಡಿಸುತ್ತಾರೆ. ಇದು ಒಂದು ರೀತಿಯಲ್ಲಿ ನಾಗರಿಕತೆಯಲ್ಲಿಯ ವ್ಯಕ್ತಿಗಳು ವ್ಯವಹರಿಸಿದಂತಾಯ್ತು. ಆದರೆ ಮೆಚ್ಚ ತಕ್ಕ ಸಂಗತಿ ಏನೆಂದರೆ ಕೆಲವಾರು ಮೂಗರು, ಕಿವುಡರು, ತಮ್ಮ ಅಂಗ ವೈಕಲ್ಯವನ್ನು ಮೆಟ್ಟಿ ನಿಂತು ಅತ್ಯಂತ ಉತ್ತಮ ಕೆಲಸ, ಕಾರ್ಯಗಳನ್ನು ಮಾಡಿ ಎಲ್ಲಾ ಅಂಗ ಸರಿ ಇರುವವರಿಗಿಂತ ಕೀರ್ತಿ, ಪ್ರಸಿದ್ಧಿ ಸಂಪಾಧಿಸಿದ ಎಷ್ಟೋ ಉದಾಹರಣೆಗಳು ನಮ್ಮೆದುರಿಗಿವೆ. ಅಂತಹ ಎಲ್ಲಾ ಸಾಧಕರಿಗೂ ನನ್ನ ಅಭಿವಂದನೆಗಳು. ಅಂತಹವರಿಗೆ ಇನ್ನಷ್ಟು ಕೀರ್ತಿ, ಪ್ರಸಿದ್ಧಿ ಲಭಿಸಲಿ ಎಂದು ಸದಾ ಹಾರೈಕೆ.

ಕೊರೊನಾದ ಹೊಡೆತದಿಂದಾಗಿ ಎಲ್ಲಾ ಮನುಷ್ಯರು ಇದೀಗ ಮೂಗರಂತಾಗಿದ್ದಾರೆ. ಪ್ರತಿಯೊಬ್ಬರೂ ಕೂಡಾ ಇದೀಗ ಒಂದರ ಮೇಲೆ ಇನ್ನೊಂದು ಎಂದು ಎರಡೆರಡು ಮಾಸ್ಕ್/ ಮುಖಗವಸು ಹಾಕಿಕೊಂಡು ಹೆಚ್ಚು ಮಾತನಾಡಲೂ ಆಗದೇ ಮೂಕರಂತೆಯೇ ಪರಿವರ್ತಿತರಾಗಿದ್ದಾರೆ. ಹೀಗಾಗಿ ಅವರಿಗೂ ಸನ್ನೆ ಅಥವಾ ಕೈ ಭಾಷೆಯೇ ಇಂದು ಪ್ರಧಾನವಾಗುತ್ತಲಿದೆ. ಕೊರೊನಾದ ಕಾರಣದಿಂದಾಗಿ ಹೆಚ್ಚಿನ ಜನರು ಮುಖಗವಸಿನೊಂದಿಗೆ ಕೈಗಳಿಗೂ ಕೈಗವಸನ್ನು ಹಾಕಿಕೊಳ್ಳಲಾರಂಭಿಸಿದ್ದಾರೆ. ಇನ್ನು ಅತಿಹೆಚ್ಚು ಜನರನ್ನು ಸಂಧಿಸುವ/ ಸಂಪರ್ಕಿಸುವ ವ್ಯಕ್ತಿ ಹೆಲ್ಮೆಟ್ ನಂತಹ ಶಿರಸ್ತ್ರಾಣವನ್ನೂ ಧರಿಸುತ್ತಿದ್ದಾರೆ. ಯಾರು, ಎಂತಹ ಸಾಧನವನ್ನು ಧರಿಸಿ ದೇಹದ ಬಾಗಗಳನ್ನು ಮುಚ್ಚಿಕೊಂಡು, ಎಲ್ಲರಿಂದಲೂ ದೂರಾಗಿ ಮುಚ್ಚಿದ ಮನೆಯಲ್ಲಿದ್ದವರೂ ಕೂಡಾ ಕೊರೊನಾದ ಹೊಡೆತಕ್ಕೆ ಈಡಾದ ಬಗ್ಗೆ ತಿಳಿದುಬರುತ್ತಿದೆ. ಇದಕ್ಕೆ ಮುಖ್ಯ ಕಾರಣ ಇದೀಗದ ಎರಡನೇ ಅಲೆಯ ಕೊರೊನಾ ರೂಪಾಂತರಗೊಂಡು, ಕೇವಲ ಗಾಳಿಯಿಂದ ಹರಡುವ ಮಟ್ಟಕ್ಕೆ ಮುಟ್ಟಿದೆ. ಎಂದರೆ ನಿರ್ದಿಷ್ಟ ದೂರದಲ್ಲಿರುವ ವ್ಯಕ್ತಿ ಉಸಿರಾಡಿ ಬಿಟ್ಟ; ಉಸಿರಾಟದಲ್ಲಿರುವ ಕೊರೊನಾದ ಅತೀ ಸೂಕ್ಷ್ಮವೈರಸ್ ಗಳು ನಿರ್ದಿಷ್ಟ ದೂರದ ವ್ಯಕ್ತಿಯನ್ನು ತಲುಪಿ ಆತನ ಉಸಿರಿನಲ್ಲಿ ಒಳ ಸೇರಿ ಆತನ ದೇಹದಲ್ಲಿ ನೂತನ ಇನ್ನೊಂದು ರೂಪಾಂತರಿ ವೈರಸ್‍ನ ಕೊರೊನಾವಾಗಿ ಪರಿವರ್ತನೆಗೊಂಡು ಮತ್ತಷ್ಟು ಮತ್ತೆ ಮತ್ತೆ ಹರಡುತ್ತದೆ.

ಲಸಿಕೆ: ಸಾರ್ವತ್ರಿಕ, ಕಡ್ಡಾಯವಾಗಲಿ -  ಜೀವಹರಣ ಗೈಯುವ ಕೊರೊನಾವನ್ನು ಮಣಿಸಲು ಇರುವ ಒಂದೇ ಒಂದು ಉಪಾಯವೆಂದರೆ ಈಗಾಗಲೇ ಬಹಳಷ್ಟು ಉಪಯೋಗಕಾರಿ ಹಾಗೂ ಕೊರೊನಾ ತಡೆಯ ರಾಮಬಾಣವಾದ ಲಸಿಕೆಗಳನ್ನು ವ್ಯಾಪಕಗೊಳಿಸುವುದು. ಲಸಿಕೆಯನ್ನು ದೇಶದ ಪ್ರತಿಯೊಬ್ಬರೂ ಕಡ್ಡಾಯವಾಗಿ ಹಾಕಿಸಿಕೊಳ್ಳುವುದರಿಂದ ಖಂಡಿತವಾಗಿಯೂ ನಾವು ಕೊರೊನಾದ ಮೂರನೇ ಅಲೆಯನ್ನು ಶಾಶ್ವತಾಗಿ ತಡೆಯಬಹುದಾಗಿದೆ. ಆದರೆ ಪ್ರಪಂಚದ ಉಳಿದ ದೇಶಗಳಿಗೆ ಲಸಿಕೆಯನ್ನು ಪ್ರಾರಂಭದಿಂದ ಸರಬರಾಜು ಮಾಡಿದ ಕಾರಣ ನಮ್ಮ ದೇಶದಲ್ಲಿ ಅದರ ಸಂಗ್ರಹದ ಕೊರತೆ ಉಂಟಾಯಿತು. ಹೀಗಿದ್ದೂ ಕೂಡಾ ಸರಕಾರದ ಮುತುವರ್ಜಿಯಿಂದ ವಿವಿಧ ದೇಶಗಳ ಎಲ್ಲಾ ರೀತಿಯ ಪರಿಣಾಮಕಾರಿ ಲಸಿಕೆಗಳನ್ನೂ ಸ್ವತ: ಭಾರತದಲ್ಲಿಯೇ ತಯಾರಿಸಿ ಬಳಸಲು ಎಲ್ಲಾ ಏರ್ಪಾಡುಗಳನ್ನೂ ಮಾಡುತ್ತಿದೆ, ಭಾರತ. ಅದಕ್ಕಾಗಿ ಬೇಕಾದ ಎಲ್ಲಾ ರೀತಿಯ ಮೂಲ ಉತ್ಪಾದನಾ ಏರ್ಪಾಢುಗಳನ್ನೂ ತ್ವರಿತವಾಗಿ ಮಾಡಿ ಸಮರೋಪಾದಿಯಲ್ಲಿ ಅಣಿಗೊಳಿಸುತ್ತಿದೆ. ಆದರೆ ತಜ್ಞರುಗಳು ತಿಳಿಸಿದಂತೆ ಮುಂದಿನ ಅಕ್ಟೋಬರ್ ತಿಂಗಳೊಳಗಾಗಿ ಮೊದಲ, ಎರಡನೇ, ಹಾಗೂ ಮೂರನೇ ಬೂಸ್ಟರ್ ಲಸಿಕೆಗಳನ್ನೂ ನೀಡಿ ಭಾರತೀಯರನ್ನು ಕೊರೊನಾದ ಹೊಡೆತದಿಂದ ಕಾಪಾಡಬೇಕಾಗಿದೆ. ದೇಶದ ಎಲ್ಲಾ ಪ್ರಜೆಗಳಿಗೂ ಈ ಮೂರೂ ಹಂತಹ ಲಸಿಕೆಗಳನ್ನು ನೀಡಲು ಕನಿಷ್ಠ 3 ರಿಂದ 5 ತಿಂಗಳಾದರೂ ಬೇಕು. ಇಂತಹ ಕಾಲ ಘಟ್ಟದಲ್ಲಿ ನಾವಿರುವಾಗ ಯೋಚಿಸಲು, ನಿಧಾನಿಸಲು, ಸಮಯವೇ ಇರದು. ಎಲ್ಲವೂ ಸಮರೋಪಾದಿಯಲ್ಲಿ ನಡೆಯಬೇಕಾಗಿದೆ. ಯಾರನ್ನೂ ಬಿಡದೇ ಲಸಿಕೆಯನ್ನು ಕಡ್ಡಾಯವಾಗಿ ಹಾಕಬೇಕಾಗಿದೆ. ಸರಕಾರಕ್ಕೆ ಸಾಕಷ್ಟು ಖರ್ಚು, ವೆಚ್ಚ, ತುರ್ತು ಖಂಡಿತ ಇದೆ. ಇಂತಹ ವೇಳೆಯಲ್ಲಿ ಪ್ರತಿಯೊಬ್ಬರೂ ಭಾರತದ, ಭಾರತೀಯರ ಒಳಿತಿಗಾಗಿ, ಕೈಜೋಡಿಸಬೇಕಾಗಿದೆ. ಶುಭಸ್ಯ ಶೀಘ್ರಂ.

ಲೇಖನ: ರಾಯೀ ರಾಜಕುಮಾರ್,ಮೂಡುಬಿದಿರೆ

(ಲೇಖಕರು: ಹಿರಿಯ ಶಿಕ್ಷಕರು, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತರು, ಸಂಪನ್ಮೂಲ ವ್ಯಕ್ತಿ, ಸಮಾಜ ಚಿಂತಕರು, ಲೇಖಕರು,)