ಹಂಪನಕಟ್ಟೆ ವೃತ್ತ ಅಗೆದದ್ದು ಹಾಗೆಯೇ ಇರುವಂತೆಯೇ ಈಗ ಶರವು ದೇವಸ್ಥಾನಕ್ಕೆ ಸಾಗುವ ರಸ್ತೆಯನ್ನು ಅಗೆಯಲಾಗಿದೆ.
ಅಗೆದ ಮೇಲೆ ರಸ್ತೆ ಆಗುತ್ತದೆ ಎನ್ನುವುದು ಒಂದಾದರೆ, ರಸ್ತೆಯನ್ನು ಅಗೆಯಬೇಕಾಗಿ ಬರುತ್ತದೆ ಎನ್ನುವುದು ಎರಡನೆಯ ಸಂಗತಿ. ನಡೆ ನಡೆದು ದಾರಿ ತಾನೇ ತೆರೆದುಕೊಳ್ಳುತ್ತದೆ. ಆದರೆ ಒಂದು ಕಾಲದ ರಥ, ಬಂಡಿ, ಗಾಡಿ, ಇಂದಿನ ವಾಹನಗಳು ಓಡಾಡಲು ರಸ್ತೆಗಳನ್ನು ರಚಿಸಬೇಕಾಗುತ್ತದೆ. ಅದಕ್ಕೆ ಶ್ರಮ, ಹಣ, ಕೆಲವರ ಒಪ್ಪಿಗೆ ಸಹ ಬೇಕಾಗುತ್ತದೆ.
ಇಂದಿಗೆ 5,500 ವರುಷಗಳ ಹಿಂದೆ ಕ್ರಿ. ಪೂ. 3,500ರಲ್ಲಿ ಮೆಸಪೊಟೇಮಿಯಾದಲ್ಲಿ ಚಕ್ರಗಳ ಆವಿಷ್ಕಾರ ಆಯಿತು. ಇಂದಿನ ಸ್ಲೊವೇನಿಯಾದ ಜುಬ್ಲ್ ಜನಾದಲ್ಲಿ ಬಳಸಿದ ಕ್ರಿ. ಪೂ. 3,200ಕ್ಕೆ ಸೇರಿದ ಚಕ್ರ ಉತ್ಖನನದಲ್ಲಿ ದೊರೆತಿದೆ. ಕುದುರೆಗಳು ಎಳೆಯುವ ರಥಗಳಿಗೆ ಮೊದಲು ಇವು ಬಳಕೆಯಾದವು. ಮುಂದೆ ಎತ್ತು, ಹೇಸರಗತ್ತೆ ಇತ್ಯಾದಿ ಎಳೆಯುವ ಗಾಡಿಗಳ ಮೂಲಕ ಚಕ್ರ ಜನಸಾಮಾನ್ಯರನ್ನು ತಲುಪಿತು. ಮಡಕೆ ತಯಾರಿಕೆಯಲ್ಲಿ ಕ್ರಾಂತಿ ಸಾಧ್ಯವಾಯಿತು. ಈಜಿಪ್ತ್, ಮೆಸಪೊಟೇಮಿಯಾ ಶಿಲ್ಪಗಳಲ್ಲಿ ಗಾಲಿಗಳ ಬಳಕೆಯ, ರಥದ ಚಿತ್ರಗಳು ಸಾಕಷ್ಟು ದೊರೆತಿವೆ.
ರಥವೋ ಗಾಡಿಯೋ ಇವಕ್ಕೆಲ್ಲ ರಸ್ತೆ ನಿರ್ಮಾಣ ಆಗಲೇ ಆರಂಭವಾಯಿತು. ರಾಜ ರಸ್ತೆ ಮೊದಲು ಆಯಿತು, ಯುದ್ಧ ರಸ್ತೆ ಎರಡನೆಯದಾಗಿ ಆಯಿತು. ಮೂರನೆಯದಾಗಿ ಜನ ಬಳಕೆ ರಸ್ತೆಗಳು ನಿರ್ಮಾಣವಾದವು.
ಮಂಗಳೂರಿನಲ್ಲಿ ಓಣಿಗಳನ್ನು ಮೀರಿ ರಸ್ತೆಗಳಿಗೆ ಆದ್ಯತೆ ದೊರೆತುದು ವಿಜಯನಗರದ ಅರಸರು ಮಂಗಳೂರಿಗೆ ರಾಜ್ಯಪಾಲರನ್ನು ನೇಮಕ ಮಾಡತೊಡಗಿದ ಮೇಲೆ. ಹಂಪನಕಟ್ಟೆಯಲ್ಲಿ ಅವರ ಸುಂಕದ ಕಟ್ಟೆ ಆರಂಭವಾದ ಮೇಲೆ ಅಲ್ಲಿಂದ ಹಲವು ಕವಲು ದಾರಿಗಳು ಬೊಕ್ಕಪಟ್ಣ, ಬೋಳೂರು ಕಡೆಗೆ ಸಾಗಿದವು. ಆಗ ಇದ್ದ ಶರವು ಆಲಯದ ಎದುರಿನ ಓಣಿಯೂ ರಸ್ತೆ ಆಗಿದೆ. ಟಿಪ್ಪು ಸುಲ್ತಾನ್ 1783ರಲ್ಲಿ ಇದೇ ದಾರಿಯಲ್ಲಿ ಬಂದು ಶರವು ಗಣಪತಿಯ ಪ್ರಸಾದ ಪಡೆದ. ಆಲಯಕ್ಕೆ ತಿಂಗಳಿಗೆ ಎರಡು ಚಿನ್ನದ ಗದ್ಯಾಣಗಳ ಆದಾಯ ಪ್ರತ್ಯೇಕ ಸಿಗುವಂತೆ ಮಾಡಿದ.
ಈ ಓಣಿಯಲ್ಲಿ ಮುಂದೆ ಮಠಗಳು, ಆಲಯ ವಲಯ ಹೆಚ್ಚಿದವು. ಜಿಎಸ್‌ಬಿಗಳು ತಮ್ಮ ವೆಂಕಟರಮಣ ದೇವಾಲಯವನ್ನು ಆ ರಸ್ತೆಯ ಕೊನೆಯ ಬದಿಯಲ್ಲಿ ನಿರ್ಮಿಸಿಕೊಂಡರು. ಒಟ್ಟಾರೆ ಈ ರಸ್ತೆಯಾದ ಓಣಿ ಪ್ರಮುಖ ಸಂಪರ್ಕ ದಾರಿಯೂ ಆಯಿತು.
ಹಿಂದಿನ ಕಾಲದಲ್ಲಿ ತೋಡು ಗೀಡು ಇದ್ದರೆ ಅದಕ್ಕೆ ಪುಟ್ಟ ಕಲ್ಲಿನ ಸಂಕ ಕಟ್ಟುವುದು ಸಾಧ್ಯವಿದ್ದರೆ ಅದಕ್ಕಾಗಿ ರಸ್ತೆ ಅಗೆಯುತ್ತಿದ್ದರು. ಆಧುನಿಕ ಕಾಲದಲ್ಲಿ ಹಾಗಲ್ಲ. ಕೇಬಲ್, ಒಳಚರಂಡಿ, ಕೆಳ ಮಾರ್ಗ, ಮೇಲು ಸೇತುವೆ ಎಂದು ನಾನಾ ಕಾರಣಕ್ಕಾಗಿ ರಸ್ತೆ ಅಗೆಯಬೇಕಾಗುತ್ತದೆ. ಈಗ ಕಾರ್ನಾಡ್ ಸದಾಶಿವರಾವ್ ರಸ್ತೆಯಿಂದ ಶರವು ಮಂದಿರಕ್ಕೆ ಹೋಗುವ ರಸ್ತೆಯನ್ನು ಮಧ್ಯದಿಂದ ಅಗೆದಿದ್ದಾರೆ. ಮೊದಲೇ ಆ ರಸ್ತೆ ಪೊರೆ ಕಳಚಿಕೊಂಡಂತೆ ಇತ್ತು. ಈಗ ಇಲ್ಲಿನ ರಸ್ತೆ ಬಳಕೆದಾರರ ಮತ್ತು ನಿವಾಸಿಗಳ ಪ್ರಶ್ನೆ ಇಷ್ಟೆ. ಇದು ಬೇಗ ಮುಗಿಯುವುದೆ?
-By ಪೇಜಾ