ಎಲ್ಲಿಂದಲೋ ಬಂದ ಈ ಹಣ್ಣು ತರಕಾರಿ ಟೊಮ್ಯಾಟೊ ಇಂದು ನಮ್ಮ ಅಡುಗೆ ಮನೆಯ ಅವಿಭಾಜ್ಯ ಅಂಗವಾಗಿದೆ. ಜಗತ್ತಿನಲ್ಲಿ ಟೊಮ್ಯಾಟೊ ಬೆಳೆಯುವಲ್ಲಿ ಮತ್ತು ‌ಬಳಸುವಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ. ಲೋಕದ ಒಟ್ಟು ಟೊಮ್ಯಾಟೊ ಬೆಳೆಯಲ್ಲಿ ಚೀನಾದ ಪಾಲು 35 ಶೇಕಡಾ. ಜಾಗತಿಕವಾಗಿ ಟೊಮ್ಯಾಟೊ ಬೆಳೆಯುವ ಮತ್ತು ಬಳಸುವುದರಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಟರ್ಕಿ ಇದೆ.

ನಾನು ಕಲಿಯುವ ಕಾಲದಲ್ಲಿ ಟೊಮ್ಯಾಟೊಗೆ ಚಪ್ಪರ ಬದನೆ ಎಂಬ ಶಬ್ದ ಬಳಕೆಯಾಗಿತ್ತು. ನಾನು ಪತ್ರಿಕೆಗೆ ಬರೆಯತೊಡಗಿದ ಕಾಲದಲ್ಲಿ ಇದೇ ಶಬ್ದವನ್ನು ಲೇಖನದಲ್ಲೂ ಬಳಸಿದೆ. ಆದರೆ ಅನಂತರದ ದಿನಗಳಲ್ಲಿ ಕನ್ನಡದಲ್ಲಿ ಈ ಶಬ್ದ ಬಳಕೆ ಮಾಡುವುದನ್ನು ಕಂಡಿಲ್ಲ. ಅದು ಮದರಾಸು ಪ್ರಾಂತ್ಯಕ್ಕೆ ಸೇರಿದ ಪಠ್ಯ ಪುಸ್ತಕದಲ್ಲಿ ಇದ್ದಂತೆ ನೆನಪು. ಮುಂದೆ ಮೈಸೂರು ವಿಶ್ವವಿದ್ಯಾನಿಲಯದವರು ಇಂತಹ ಸಾಕಷ್ಟು ಶಬ್ದಗಳನ್ನು ನೀಡಿದ್ದಾರೆ. ಅನಂತರ ಅವೆಲ್ಲ ಮೈಸೂರು ವಿಶ್ವವಿದ್ಯಾನಿಲಯದ ವಿಶ್ವಕೋಶದಲ್ಲಿ ಉಳಿದು ಹೋದುದು ಕನ್ನಡದ ದುರಂತ.

ಇಂಗ್ಲೀಷ್ ಭಾಷೆಯಲ್ಲಿ ಇದನ್ನು ಬೆರಿ ಜಾತಿಯ ಹಣ್ಣು ಎನ್ನಲಾಗಿದೆ. ಯೂರೋಪು ಅದನ್ನು ಒಪ್ಪಿದೆ. ಚಪ್ಪರ ಬದನೆ ಅದಕ್ಕೆ ತರಕಾರಿಯಾಗಿ ಗುರುತಿಸುವಂತೆ ಮಾಡಿದೆ. ಅದನ್ನು ಹಣ್ಣಿನಂತೆ ತಿನ್ನಬಹುದು. ಅಡುಗೆಯಲ್ಲಿ ತರಕಾರಿಗಳ ಜೊತೆ ಬಳಸಬಹುದು ಎಂಬ ಎರಡೂ ಸತ್ಯ. ಟೊಮ್ಯಾಟೊ (ಕಾಯಿ) ಕತ್ತರಿಸಿದಾಗ ಅದರಲ್ಲಿ ಬೀಜಗಳು ಬದನೆಕಾಯಿ ರೀತಿಯಲ್ಲಿ ಜೋಡಣೆ ಹೊಂದಿರುವುದು ಇದನ್ನು ಚಪ್ಪರ ಬದನೆ ಎಂದು ಕರೆಯಲು ಕಾರಣವಾಗಿರಬೇಕು. ಅದು ಸೂಕ್ತ ಕೂಡ. ಹೆಚ್ಚಿನ ತಳಿಗಳು 10 ಅಡಿ ಎತ್ತರದವರೆಗೆ ಬೆಳೆಯುತ್ತವೆ. ಅದಕ್ಕೆ ಆಧಾರ ಕೊಡಬೇಕು. ಅದು ಸಣ್ಣ ಚಪ್ಪರ ಆದರೆ ಕಾಯಿ ಚೆನ್ನಾಗಿ ಬಿಡುತ್ತವೆ. ಆ ರೀತಿಯಲ್ಲೂ ಚಪ್ಪರ ಬದನೆ ಸೂಕ್ತ ಎನಿಸಿದೆ.

ಇಷ್ಟಕ್ಕೂ ಈ ಉಷ್ಣ ವಲಯದಲ್ಲಿ ಉತ್ತಮವಾಗಿ ಬೆಳೆಯುವ ಟೊಮ್ಯಾಟೊ ಮೂಲ ಮೆಕ್ಸಿಕೊ ಮತ್ತು ತೆಂಕಣ ಅಮೆರಿಕ. ಬೀದಿ ಗಿಡವಾಗಿದ್ದ ಇದನ್ನು ಮೆಕ್ಸಿಕನರು ಕ್ರಿ. ಪೂ. 500ರ ಹೊತ್ತಿಗೆ ನೆಟ್ಟು ಬೆಳೆಸತೊಡಗಿದರು. ಇಂದಿಗೂ ಆ ಸುತ್ತಿನಲ್ಲಿ ಮೆಕ್ಸಿಕನರ ಅಡುಗೆ‌ಮನೆಯಲ್ಲಿ ಟೊಮ್ಯಾಟೊ ತಪ್ಪುವುದಿಲ್ಲ.

ಅಜ್ ಟೆಕ್ ಸಂಸ್ಕೃತಿಯವರು ಇದನ್ನು ವ್ಯಾಪಕವಾಗಿ ಬೆಳೆಸಿದರು. ಅವರ ನವ್ಹತಿ ಟೊಮಟಿ ಎಂದರೆ ರಸಭರಿತ ಅರ್ಥದ ಹೆಸರು ಸ್ಪಾನಿಶ್ ಜನರು ಟೊಮಾಟೆ ಎಂದರು. ಯೂರೋಪಿಗೆ ಅದನ್ನು ಪರಿಚಯಿಸಿದವರು ಸ್ಪೆಯಿನರು.  ಅದೇ ಇಂಗ್ಲೀಷ್ ನಲ್ಲಿ ಟೊಮ್ಯಾಟೊ ಆಗಿ ಜಗತ್ತಿನ ಹೆಚ್ಚಿನ ಕಡೆ ಆ ಹೆಸರೇ ಬಳಕೆಯಲ್ಲಿದೆ. ಯೂರೋಪಿನಲ್ಲಿ ಆರಂಭದಲ್ಲಿ ಟೊಮ್ಯಾಟೊ ಬಗೆಗೆ ಯಾರಿಗೂ  ಆಸಕ್ತಿ ಇರಲಿಲ್ಲ. 1544ರಲ್ಲಿ ಇಟೆಲಿಯ ಸಸ್ಯ ವಿಜ್ಞಾನಿ ಪಿತ್ರೋ ಆಂಡ್ರಿಯಾ ಮ್ಯಾಟಿಯೋ ಇದನ್ನು ಇಟೆಲಿಗೆ ತರಿಸಿ ಅದರ ಅಧ್ಯಯನ ಮಾಡಿ ಅದರ ವಿಶೇಷತೆ ದಾಖಲಿಸಿದ. ಮತ್ತೆ ಟೊಮ್ಯಾಟೊ ಜಗತ್ತಿನ ಆಹಾರ ಆಗಲು ತಡವಾಗಲಿಲ್ಲ.

16ನೇ ಶತಮಾನದಲ್ಲಿ ಟೊಮ್ಯಾಟೊ ಚೀನಾ ಮತ್ತು ಭಾರತಕ್ಕೆ ಬಂತು. ಭಾರತದಲ್ಲಿ ಕಳೆದ ಒಂದು ಶತಮಾನದಿಂದಲಷ್ಟೆ ಟೊಮ್ಯಾಟೊ ಬಹು ಬಳಕೆಗೆ ಬಂದಿದೆ. ಕಳೆದ 50 ವರುಷಗಳಿಂದ ಭಾರತೀಯರು ಟೊಮ್ಯಾಟೊ ಇಲ್ಲದೆ ಸಾರು ಸಾಂಬಾರು ಇಲ್ಲ ಎಂಬ ಸ್ಥಿತಿ ತಲುಪಿರುವುದು ವಿಚಿತ್ರವಾದರೂ ನಿಜ. ವಿಶ್ವದಲ್ಲಿ ಮುಖ್ಯವಾಗಿ ಟೊಮ್ಯಾಟೊ ಇಲ್ಲದೆ ಸಾಲಡ್ ಇಲ್ಲ, ಸ್ಯಾಂಡ್‌ವಿಚ್ ಇಲ್ಲ ಎಂಬುದೇ ಹೆಚ್ಚು ಸತ್ಯ.

ಮಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ತಾರಸಿ ತೋಟ ಜನಪ್ರಿಯ ಎನಿಸಿದೆ. ತಾರಸಿ ತೋಟದಲ್ಲಿ ಮೊದಲ ಮಣೆ ಟೊಮ್ಯಾಟೊಗೆ. ಪದವು ಬಳಿಯ ಎಕ್ಸೋಟಿಕಾ ವಸತಿ ಸಮುಚ್ಚಯದ ಅಯ್ದನೆಯ ಮಹಡಿಯ ಕುಂಡದಲ್ಲಿ ಟೊಮ್ಯಾಟೊ ಕಾಯಿ ಹಣ್ಣು ಆಗಲು ತಯಾರಾಗಿದೆ. ಅದನ್ನು ನೀವು ಚಿತ್ರದಲ್ಲಿ ನೋಡಬಹುದು.

ಬೆಂಗಳೂರು ನಗರದಲ್ಲಿ ಓಕ್ಲಿ ಎಂಬ ಆಂಗ್ಲೊ ಇಂಡಿಯನ್ ವೃಷಭಾವತಿ ದಡದಲ್ಲಿ 80 ವರುಷಗಳ ಹಿಂದೆ ಟೊಮ್ಯಾಟೊ ಬೆಳೆಸಿದರು. ಆ ಪ್ರದೇಶ ಇಂದು ಓಕಳಿಪುರ ಎನಿಸಿದೆ. ಸ್ಪೆಯಿನಿನಲ್ಲಿ ಟೊಮ್ಯಾಟೊ ರಾಶಿ ಮೇಲೆ‌ ಉರುಳಾಡುವ ಓಕಳಿ ಹಬ್ಬವೊಂದು ಪ್ರತಿ ವರುಷ ನಡೆಯುತ್ತದೆ. ಈಗ ತುಳುನಾಡಿನ ಗೃಹಿಣಿಯರು ಟೊಮ್ಯಾಟೊ ತರಲಿಲ್ಲವೆ? ಕೇಳುವರು. ನಾಲ್ಕು ದಶಕದ ಹಿಂದೆ ಅಂಥ ಪ್ರಶ್ನೆಯನ್ನು ಅವರು ಕೇಳುತ್ತಿರಲಿಲ್ಲ. 


-By ಪೇಜಾ