ಹಾಸ್ಯ ನಟರನ್ನೇ‌ ನಂಬಿ ಬಂಡವಾಳ ಹೂಡುವವರು ಸಿಗುವುದು ಮತ್ತು ಅವರಿಗಾಗಿಯೇ ಕತೆ ಬರೆಯುವುದು ತುಳು ಚಿತ್ರರಂಗದ ಸದ್ಯದ ಶೈಲಿ ಆಗಿರುವುದರಿಂದ 'ಇಂಗ್ಲಿಷ್ ಎಂಕ್ ಬರ್ಪುಜಿ ಬ್ರೊ' ಕೂಡ ಆ ವೃತ್ತದಿಂದ ಈಚೆಗೆ ಬರುವುದಿಲ್ಲ.

ಸೂರಜ್‌ ಶೆಟ್ಟಿ ಕತೆ‌ ಬರೆದು ನಿರ್ದೇಶಿಸಿರುವ ಕುಲೆ ಕಲ್ಯಾಣ ಇಲ್ಲವೇ ಇಂಗ್ಲಿಷ್ ಎಂಕ್ ಬರ್ಪುಜಿ ಬ್ರೊ ತುಳು ಚಿತ್ರವು ತರ್ಕ ಮಾಡದೆ ನೋಡಿದರೆ ನಗಿಸುವುದರಲ್ಲಿ ಹಿಂದೆ ಬೀಳುವುದಿಲ್ಲ. ಸನ್ನಿವೇಶಗಳಿಗೆ‌ ತರ್ಕ ವಾದ ಹುಡುಕಲು ಹೋದರೆ ಕೆಲವರಿಗೆ ನಗೆ ಬಾರದಿರಬಹುದು.

ಇಂಗ್ಲಿಷ್ ಬಾರದವನು ಇಂಗ್ಲಿಷ್  ಕನ್ಯೆಯನ್ನು ಪ್ರೀತಿಸುವುದರಿಂದ ಏಳುವ ಸಮಸ್ಯೆಗಳು ಅದಕ್ಕೆ ಪೂರಕವೆಂಬಂತೆ ಪ್ರೀತಿಸಿದಾಕೆ ಬೇರೆ ಮದುವೆಯಾಗುವುದನ್ಮು ತಡೆಯಲು ಹೊರಡುವ ದಂಡು‌ ಮಾಡುವ ಕಿತಾಪತಿಗಳೇ‌ ನಗೆ‌ ಸರಕು. ಕಾಮಿಡಿ ತ್ರಿವಳಿ ನವೀನ್ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು ಇತರ ಹಾಸ್ಯ ಕಲಾವಿದರೊಂದಿಗೆ ನಗೆ ಗಾಡಿಯನ್ನು ಮುಂದೆಳೆಯುತ್ತಾರೆ. ನಾಯಕಿ ಕೊನೆಗೂ ನಾಯಕನನ್ನು ಒಪ್ಪಿದಾಗ ಅಪಘಾತದಲ್ಲಿ ಸತ್ತ  ನಾಯಕಿಯ ಅಕ್ಕನ ಕುಲೆ ಎಂದರೆ ಆತ್ಮವು ತಂಗಿಯಲ್ಲಿ ಕಾಣಿಸಿಕೊಂಡು ತನ್ನ ಮದುವೆ ಮಾಡದೆ ತಂಗಿಯ ಮದುವೆ ಆಗಲು ಬಿಡಲಾರೆ ಎನ್ನುವುದು ತಿರುವು. ಗಂಡು ಕುಲೆ ಹುಡುಕುವ ಕೋಡಂಗಿತನ, ಇಂಗ್ಲಿಷ್ ಬಾರದ ಕುಲೆಯನ್ನು ಮದುವೆಯಾಗಲು ನಿರಾಕರಿಸುವ ಹೆಣ್ಣು ಕುಲೆ ಎಂದು ತರ್ಕಕ್ಕಿಂತ ನಗಿಸಬೇಕೆಂಬ ಹಠದಲ್ಲಿ ಕತೆ ಮುಂದೆ ಹೋಗುತ್ತದೆ. ಕೊನೆಯಲ್ಲಿ ಕಿಟಕಿ ತೆರೆದಿಟ್ಟು ಮೊದಲಿರುಳು ನಡೆಸಲು ತಯಾರಿ, ವಿರೋಧಿಯು ಕಿಟಕಿ ಮೂಲಕ ಮತ್ತೆ ಮತ್ತೆ ಮೊದಲ ರಾತ್ರಿ ತಡೆಯುವುದು ತರ್ಕಹೀನ. ಆದರೆ ಜನ ನಕ್ಕರು ಎನ್ನುವುದೂ ಸುಳ್ಳಲ್ಲ.

ಅತಿಥಿ ನಟನಾಗಿ ಅನಂತನಾಗ್ ಒಂದು ದೃಶ್ಯದಲ್ಲಿ ಬಂದರೂ ತಾಯಿ ನುಡಿ ಮತ್ತು ವ್ಯವಹಾರ ಭಾಷೆ ಇಂಗ್ಲಿಷ್ ಬಗೆಗೆ ಸಮಯೋಚಿತ ಮಾತನ್ನು ಉತ್ತಮ ರೀತಿಯಲ್ಲಿ ನಟಿಸಿ ತೋರಿಸಿದ್ದಾರೆ. ಡೈಲಾಗ್ ಟೈಮಿಂಗ್ ಅನಂತನಾಗ್ ಬಿಟ್ಟರೆ ನವೀನ್ ಪಡೀಲ್ ಓಕೆ. ಉಳಿದವರ ಪ್ರಯತ್ನ ಸಫಲ.

ನಾಯಕಿ ನವ್ಯಾ ಪೂಜಾರಿ ಪಾಸ್ ಮಾರ್ಕ್ ಪಡೆಯುತ್ತಾರೆ. ನಾಯಕ ಪೃಥ್ವಿ ಆ ಮಟ್ಟಿಗೆ ಪ್ರಯತ್ನ ಪಟ್ಟಿದ್ದಾರೆ. ಕುಲೆ ಮೈಮೇಲೆ ಇರುವಾಗ ನವ್ಯಾ ತೋರುವ ನಟನೆಯೆದುರು ನಾಯಕ ಸರಿಗಟ್ಟಲು ಸಾಧ್ಯವಾಗಿಲ್ಲ.

ಚಿತ್ರವನ್ನು ಹರೀಶ್ ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್ ಇತರ ಭಾಷಾ ಸಿನಿಮಾಗಳಿಗೆ ಸರಿಸಮ ಬರುವಂತೆ‌ ನಿರ್ಮಿಸಿದ್ದಾರೆ. ಸಂಗೀತದ ಬಗೆಗೆ ಹಾಗೆ ಹೇಳಲಾಗದು. ಸಂಭಾಷಣೆ ಒಂದೆರಡು ಕಡೆ ಗಮನ ಸೆಳೆಯುತ್ತದೆ. ಕ್ರಿಶ್ಚಿಯನ್ ಕುಲೆ ವಿಷಯದಲ್ಲಿ, ಬದುಕಿರುವಾಗಲೂ ಜಾತಿ ಜಗಳ ಮಾಡಿ ಊರು ಹಾಳು ಮಾಡಿದಿರಿ. ಸತ್ತವರ ವಿಷಯದಲ್ಲಾದರೂ ಜಾತಿ ತಾರತಮ್ಯ ಮಾಡಬೇಡಿ ಎಂಬುದು ಅವುಗಳಲ್ಲಿ ಒಂದು. ಸೊಂಟದ ಕೆಳಗಿನ ಮಾತು ಹಾಸ್ಯದ ಹೆಸರಿನಲ್ಲಿ ಕೆಲವೆಡೆ ಬಂದಿದೆಯಾದರೂ ಮುಖ ಸಿಂಡರಿಸುವಷ್ಟು ಇಲ್ಲ ಎನ್ನುವುದು ಸಮಾಧಾನಕರ.

ತುಳು ಸಂಸ್ಕೃತಿಯಲ್ಲಿ ಹಿಂದೆ ಮದುವೆಯಾಗದೆ ಸತ್ತವರಿಗೆ ಮದುವೆ ಮಾಡುವ ಒಂದು ಪದ್ಧತಿ ಇತ್ತು. ಆದರೆ ಅದಕ್ಕೆ ಸಿನಿಮಾದಲ್ಲಿ ತೋರಿಸಿರುವಂತೆ ಮಂತ್ರವಾದಿಯನ್ನು ಕರೆಸುವ ಪದ್ಧತಿ ಇರಲಿಲ್ಲ. ಜಾತಿ ಗುರಿಕಾರ ಮತ್ತು ಕುಟುಂಬದ ಹಿರಿಯರು ನಿರ್ಧಾರ ಮಾಡಿ ಮದುವೆ ಶಾಸ್ತ್ರ ಮುಗಿಸುತ್ತಿದ್ದರು. ಚಿತ್ರದಲ್ಲಿ ಇದು ಹೊಸತನ ತಂದಿದೆ ಎನ್ನಬಹುದು. ಪಾತ್ರಗಳಿಗೆ ನಟ ನಟಿಯರ ಆಯ್ಕೆ‌ ಆಗಬಹುದು. ಒಟ್ಟಾರೆ ತುಳುವರು ನೋಡಿ ಪ್ರೋತ್ಸಾಹಿಸಬೇಕಾದ, ನಕ್ಕು ಬರಬಹುದಾದ, ನಕ್ಕು ಬಿಡಬೇಕಾದ ಚಿತ್ರ ಕುಲೆ ಕಲ್ಯಾಣ.

ಅನಾಟಮಿ ಅಧ್ಯಯನದಂತೆ ಗಂಡು ಹೆಣ್ಣಿನ ಮಾಂಸಲ ಬೆಳವಣಿಗೆಯಲ್ಲಿ ವ್ಯತ್ಯಾಸ ಇದೆಯೇ ಹೊರತು ಎಲುಕಟ್ಟು ಇಲ್ಲವೇ ಸ್ಕೆಲಟನ್ ನಲ್ಲಿ ಅಲ್ಲ. ಆದ್ದರಿಂದ ಹೆಣ್ಣು ಕುಲೆಗೆ ಸೀರೆ ಕೂಡ ತರ್ಕ ಮಾಡದೆ ನಗಬಹುದಾದ ವಿಷಯವೇ ಆಗಿದೆ.


-By ಪೇಜಾ