ಭರತಕ್ಷೇತ್ರದ  ವರ್ತಮಾನ ಕಾಲದ 24 ನೇ ತೀರ್ಥಂಕರ ಭಗವಾನ್‌ ವರ್ಧಮಾನ ಮಹಾವೀರರು  ನಿಜ ಅರ್ಥದಲ್ಲಿ  ಯುಗ ಪ್ರವರ್ತಕರಾಗಿದ್ದಾರೆ. ಭಗವಾನ್‌ ಮಹಾವೀರರ ನಿರ್ವಾಣದ ಬಳಿಕ ಮಹಾವೀರ ಶಕ ಆರಂಭವಾಯಿತು. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಉಳಿದೆಲ್ಲಾ ಶಕೆಗಳು ಮಹಾವೀರ ಶಕದ ಬಳಿಕವಷ್ಟೇ ಆರಂಭಗೊಂಡಿದೆ.

       ಭಗವಾನ್‌ ವರ್ಧಮಾನ  ಮಹಾವೀರರಿಂದ ಪ್ರತಿಪಾದಿಸಲಾಗಿರುವ  ಸತ್ಯ ಮತ್ತು  ಅಹಿಂಸೆಯನ್ನು ಮಹಾತ್ಮ ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆಯೊಂದಿಗೆ  ತಪ್ಪಾಗಿ ಸಮೀಕರಿಸಲಾಗುತ್ತಿದೆ. ಭಗವಾನ್‌ ಮಹಾವೀರರ ಪ್ರಕಾರ ಸಮ್ಯಕ್‌ ದರ್ಶನ (ಸರಿಯಾದ ಮಾರ್ಗ Right Path) ಸಮ್ಯಕ್‌ ಜ್ಞಾನ (ಸರಿಯಾದ ತಿಳುವಳಿಕೆ Right Knowledge) ಮತ್ತು ಸಮ್ಯಕ್‌ ಚಾರಿತ್ರ್ಯ (ಸರಿಯಾದ ನಡವಳಿಕೆ Right Work) ಇವುಗಳ ಒಟ್ಟು ಮೊತ್ತವೇ ಸತ್ಯವಾಗಿದೆ. ಆದರೆ ಮಹಾತ್ಮಗಾಂಧೀಜಿ  ಪ್ರಕಾರ ಸತ್ಯವು  ನ್ಯಾಯಕ್ಕಾಗಿ ಹೋರಾಟವಾಗಿದೆ ಮತ್ತು ಪ್ರಾಮಾಣಿಕ ಜೀವನವಾಗಿದೆ.  ಭಗವಾನ್‌ ಮಹಾವೀರರ ಪ್ರಕಾರ ಅಹಿಂಸೆ ಎಂದರೆ  ‘ಬದುಕು ಮತ್ತು ಬದುಕಲು  ಬಿಡುʼ ಎಂಬ ಧೋರಣೆಯಾಗಿದೆ. ಯಾವುದೇ ಜೀವಿಯ  ಬದುಕನ್ನು ಕುಸಿಯದಿರುವುದು  ಅಹಿಂಸೆಯಾಗಿದೆ. ಪ್ರತಿಯೊಂದು  ಜೀವಿಗೂ ಗೌರವಾನ್ವಿತವಾಗಿ ಬದುಕುವ ಹಕ್ಕಿದೆ ಎಂಬುವುದೇ ಭಗವಾನ್‌ ಮಹಾವೀರರ ಅಹಿಂಸೆಯ ವ್ಯಾಖ್ಯಾನವಾಗಿದೆ. ಆದರೆ ಮಹಾತ್ಮಗಾಂಧೀಜಿಯವರ ಪ್ರಕಾರ ಅಹಿಂಸೆ ಎಂಬುವುದು ಸಹನೆ ಮತ್ತು ಕ್ಷಮೆಯಾಗಿದೆ

ಭಗವಾನ್‌ ಮಹಾವೀರರ ಅಹಿಂಸೆಯ ನಿರ್ದ್ಯಾಕ್ಷಿಣ್ಯತೆ ಮತ್ತು ನಿರ್ಭಯತೆಯಿಂದ  ಕೂಡಿತ್ತು. ಇದಕ್ಕೆ ಮಹಾವೀರರ ಜೀವನದ ಈ ಕೆಳಗಿನ ಎರಡು ಘಟನೆಗಳನ್ನು ಉಲ್ಲೇಖಿಸಲಾಗಿದೆ.

       ಭಗವಾನ್‌ ಮಹಾವೀರರು ಬಾಲಕನಾಗಿದ್ದಾಗ ಒಮ್ಮೆ ಮದವೇರಿದ್ದ ಆನೆಯೊಂದು ಅಲ್ಲಿದ್ದವರನ್ನು  ಓಡಿಸಿತು.  ಇತರ ಬಾಲಕರು ಮದವೇರಿದ ಆನೆಯಿಂದ ಭಯಭೀತರಾಗಿದ್ದರು. ಆದರೆ ಬಾಲಕ ವರ್ಧಮಾನ ಮಹಾವೀರರು ಧೈರ್ಯದಿಂದ ಆನೆಯನ್ನು ಹಿಡಿದು ಅದರ ಮದವನ್ನು ನಿಯಂತ್ರಿಸಿದರು. ಮದ ಅಥವಾ ಅಹಂಕಾರವನ್ನು  ದಮನಿಸುವುದು ಕೂಡ ಅಹಿಂಸೆಯೇ ಆಗಿದೆ. ಎಂಬುವುದನ್ನು ವರ್ಧಮಾನ ಮಹಾವೀರರು ತೋರಿಸಿದರು. ಮದ ಅಥವಾ ದುರಂಹಂಕಾರವು ದೌರ್ಜನ್ಯಕ್ಕೆ ಕಾರಣವಾಗುತ್ತದೆ.

       ಇನ್ನೊಮ್ಮೆ ಸಂಗಮದೇವ  ಎಂಬ ಹೆಸರಿನ ವ್ಯಂತರವಾಸಿ ದೇವನೊಬ್ಬ ಸರ್ಪದ ರೂಪದಲ್ಲಿ ವರ್ಧಮಾನ  ಮಹಾವೀರರ  ಎದುರು  ಪ್ರತ್ಯಕ್ಷವಾಗಿ  ಅಲ್ಲಿದ್ದವರನ್ನು  ಭೀತಿಗೊಳಿಸುತ್ತಾನೆ. ಆದರೆ  ಮಹಾವೀರರು  ಆ ನಾಗರಹಾವನ್ನು  ದೂರ ಬಿಸಾಕಿ, ತನ್ನ ದೈರ್ಯ  ಹಾಗೂ ಸಾಮರ್ಥ್ಯ ತೋರಿಸಿದರು. ಬಳಿಕ  ಸಂಗಮದೇವ  ತನ್ನ ನಿಜ ರೂಪವನ್ನು  ತೋರಿಸಿ  ಭಗವಾನ್‌ ಮಹಾವೀರರಿಗೆ  ನಮಸ್ಕರಿಸುತ್ತಾನೆ. ಈ ಪ್ರಕಾರವಾಗಿ ಮಹಾವೀರರು ದೌರ್ಜನ್ಯವನ್ನು  ಹಿಮ್ಮೆಟ್ಟಿಸುವುದು ಕೂಡಾ ಅಹಿಂಸೆಯೆಂದು ಸಾಬೀತುಪಡಿಸಿದರು.  ವಿರೋಧಿಗಳನ್ನು  ಹತ್ಯೆಗೈಯದೇ ಅವರ ದುರಂಕಾರವನ್ನು ಬಗ್ಗುಬಡಿಯುವುದೇ ನಿಜವಾದ ಸಾಹಸವಾಗಿದೆ ಮತ್ತು ವಿರೋಧಿಗಳನ್ನು  ಹತ್ಯೆಗೈಯುವುದು. ಹೇಡಿತನವಾಗಿದೆ  ಎಂಬುವುದನ್ನು ನಾವು ಭಗವಾನ್‌ ಮಹಾವೀರರ ಜೀವನದಿಂದ ತಿಳಿಯಬಹುದಾಗಿದೆ.

      ಭಗಾವನ್‌ ಮಹಾವೀರರ ಉಪದೇಶ ಸರ್ವೋದಯತೀರ್ಥವಾಗಿತ್ತು. ಅವರ  ಉಪದೇಶದ ಉದ್ದೇಶ ಸಮಸ್ತ ಜೀವಿಗಳ  ಉದ್ಧಾರವಾಗಿತ್ತು  ಪ್ರತಿಯೊಂದು  ಜೀವಿಯು ಆತ್ಮವಾಗಿತ್ತು ಎಲ್ಲಾ ಆತ್ಮರೂ ಸ್ವತಂತ್ರರಾಗಿದ್ದಾರೆ ಮತ್ತು ಸಂಸಾರಬಂಧನದಿಂದ ಬಿಡುಗಡೆ  ಹೊಂದಿ ಮುಕ್ತಿ ಪಡೆಯಲು  ಅರ್ಹರಾಗಿದ್ದಾರೆ. ಬದುಕು ಮತ್ತು ಬದುಕಲು ಬಿಡು ಎಂಬುವುದು. ಅವರ ಘೋಷಣೆಯಾಗಿತ್ತು. ತಾನೂ ಬದುಕಿ ಇತರ  ಜೀವಿಗಳ  ಬದುಕುವ  ಹಕ್ಕನ್ನು  ಕಸಿಯದಿರುವುದೇ  ನಿಜವಾದ ಅಹಿಂಸೆಯಾಗಿದೆ.

ಭಗವಾನ್‌  ಮಹಾವೀರರು ‘ಸರ್ವಜ್ಞʼ ಎಂಬ ಪದವನ್ನು  ಎಲ್ಲಿಯೂ  ಬಳಸದೇ  ‘ಕೇವಲ ಜ್ಞಾನʼ ಮತ್ತು ‘ಅನಂತ ಜ್ಷಾನʼ  ಎಂಬ ಎರಡು  ಪ್ರತ್ಯೇಕ  ಪದಗಳನ್ನು  ಬಳಸಿದರು. ರಾಗ ಮತ್ತು  ದ್ವೇಷಗಳೆಂಬ  ದೋಷಗಳಿಂದ ರಹಿತರಾಗಿ ಜೀವನ್ಮುಕ್ತಿಯನ್ನು ಪಡೆದ  ಅರಿಹಂತರು   ಕೇವಲಜ್ಞಾನ ಪಡೆಯುತ್ತಾರೆ.  ತ್ರಿಲೋಕ ಹಾಗೂ  ತ್ರಿಕಾಲಜ್ಞಾನಗಳ  ಮೊತ್ತವನ್ನು  ‘ಕೇವಲಜ್ಞಾನʼವೆಂದು ಕರೆಯಲಾಗುತ್ತದೆ.  ದೇಹವನ್ನು ತೊರೆದು  ಪರಮಧಾಮವನ್ನು  ಪಡೆದವರನ್ನು ಸಿದ್ಧರೆಂದು  ಕರೆಯಲಾಗಿದ್ದು,  ಅವರು ‘ಅನಂತಜ್ಞಾನʼವನ್ನು  ಹೊಂದಿರುತ್ತಾರೆ. ‘ಅನಂತಜ್ಞಾನʼವು ಲೋಕ  ಹಾಗೂ ಕಾಲಗಳನ್ನು  ಮೀರಿದ ಜ್ಞಾನವಾಗಿದೆ.

            ಭಗವಾನ್‌ ವರ್ಧಮಾನ ಮಹಾವೀರರು ಅನಂತಕೋಟಿ  ಬ್ರಹ್ಮಾಂಡವನ್ನು‘ಜಗತ್ತುʼ ಎಂಬುವುದಾಗಿ ವ್ಯಾಖ್ಯಾನಿಸಿ  ಜಗತ್ತು ಅನಾದಿ  ಮತ್ತು ಅನಂತ ಎಂಬುವುದಾಗಿ ತಿಳಿಸಿದರು. ಜೈನ ಆಗಮದಲ್ಲಿ ಪ್ರತ್ಯೇಕ  ಬ್ರಹ್ಮಾಂಡವನ್ನು ‘ದ್ವೀಪʼ ಎಂಬ ಹೆಸರಿನಿಂದ ಕರೆಯಲಾಗಿದೆ.  ಅಹಿಂಸೆಯು ವಿಶ್ವಧರ್ಮವಾಗಿದೆ. ಅಹಿಂಸೆಯು ಯಾವುದೇ ನಿರ್ದಿಷ್ಟ  ಮತ ಅತವಾ ಸುದಾಯಕ್ಕೆ  ಸೀಮಿತವಾದ  ಸೊತ್ತಲ್ಲ . ಭಗವಾನ್‌  ವರ್ಧಮಾನ  ಮಹಾವೀರರಾಗಲೀ ಅಥವಾ ವರ್ತಮಾನ  ಕಾಲದ ಪ್ರಥಮ  ತೀರ್ಥಂಕರ ವೃಷಭನಾಥರಾಗಲೀ  ಅಥವಾ ಯಾವುದೇ ತೀರ್ಥಂಕರಾಗಲೀ ಅವರುಗಳನ್ನು  ಯಾವುದೇ ನಿರ್ದಿಷ್ಟ  ಮತದ ಸ್ಥಾಪಕ  ಅಥವಾ ಪ್ರತಿಪಾದಕರೆಂದು ವ್ಯಾಖ್ಯಾನಿಸುವುದು ತಪ್ಪಾಗುತ್ತದೆ.  ರಾಗ ದ್ವೇಷರಹಿತರೂ (ವೀತರಾಗಿ) , ತ್ರಿಕಾಲ  ಹಾಗೂ ತ್ರಿಲೋಕ  ಜ್ಞಾನಿಗಳೂ (ಕೇವಲ ಜ್ಞಾನಿ,) ಸರ್ಮೋದಯ  ತೀರ್ಥದ ಉದ್ಧೋಷಕರೂ  ಆಗಿರುವ ತೀರ್ಥಂಕರನ್ನು  ನಿರ್ದಿಷ್ಟ  ಮತದ ಸ್ಥಾಪಕ  ಅಥವಾ ಪ್ರವರ್ತಕ ಎನ್ನುವುದು ಆಗಮ ವಿರೋಧವಾಗುತ್ತದೆ. ತೀರ್ಥಂಕರರು  ಮುಕ್ತಿ ಮಾರ್ಗದ ಅಗ್ರಮಾನ್ಯ  ನೇತಾರರೂ, ಪರಮೋಚ್ಛ ಗುರುಗಳೂ ಆಗಿರುತ್ತಾರೆ.  ನಿರ್ದಿಷ್ಟ ತೀರ್ಥಂಕರರಿಗೆ  ಸರಿಸಾಟಿ ಇನ್ನೊಬ್ಬ  ತೀರ್ಥಂಕರರು  ಮಾತ್ರವೇ ಆಗಿರುತ್ತಾರೆ. ಇದನ್ನು ಕೇಶಿ  ಮತ್ತು ಗೌತಮ ಗಣಧರರ ಚಾರಿತ್ರಿಕ  ಸಂವಾದದ ಮೂಲಕ ಸಾಬೀತುಪಡಿಸಲಾಗಿದೆ.  23 ನೇ ತೀರ್ಥಂಕರ ಭಗವಾನ್‌ ಪಾರ್ಶ್ವನಾಥ ಪರಂಪರೆಯ ಪ್ರಮುಖ ಕೇಶಿ ಮತ್ತು 24 ನೇ ತೀರ್ಥಂಕರ ಭಗವಾನ್‌ ಮಹಾವೀರರ ಪ್ರಧಾನ  ಶಿಷ್ಯ ಗೌತಮ ಗಣಧರರ ನಡುವೆ ದಾರ್ಶನಿಕ ವಿಷಯದಲ್ಲಿ  ಭಿನ್ನಾಭಿಪ್ರಾಯ  ಉಂಟಾಗಿ ಇವರಿಬ್ಬರೂ ಭಗವಾನ್‌  ಮಹಾವೀರರ ಬಳಿ ತೆರಳಿ ತಮ್ಮ ಭಿನ್ನಾಬಿಪ್ರಾಯವನ್ನು ಬಗೆಹರಿಸಿಕೊಂಡರು.

            ಆಚಾರದಲ್ಲಿ ಅಹಿಂಸೆ, ವಿಚಾರದಲ್ಲಿ ಅನೇಕಾಂತ, ಜೀವನದಲ್ಲಿ  ಅಪರಿಗ್ರಹ, ವ್ಯವಹಾರದಲ್ಲಿ ಸರ್ವೋದಯವನ್ನು ರೂಢಿಸಿಕೊಂಡು, ಪಂಚಪರಮೇಷ್ಠಿಗಳನ್ನು ದೇವರೆಂದೂ ಸರ್ವಸಂಗ ಪರಿತ್ಯಾಗಗಳಾಗಿರುವ  ನಿಗ್ರಂಥ ಮುನಿಗಳನ್ನು ಗುರುಗಳೆಂದೂ, ಜಿನದೇವ ತೀರ್ಥಂಕರರಿಂದ  ಹೇಳಲ್ಪಟ್ಟ  ಶಾಸ್ತ್ರವನ್ನು  ಆಗಮವೆಂದೂ ಅಂಗೀಕರಿಸಿರುವ ಜನಸಮುದಾಯವೇ‘ಜೈನಸಮಾಜʼ ಎಂದು ಪರಿಗಣಿಸಲ್ಪಟ್ಟಿದೆ.


By ಸುಪಾರ್ಶ್ವ ಎಂ.ಮೂಡುಬಿದಿರೆ 

(ದಾರ್ಶನಿಕ ಸಂಶೋಧಕರು)