ರಾಷ್ಟ್ರೀಯ ಸ್ಮಾರ್ಟ್ ಸಿಟಿ ಯೋಜನೆಯು ನಗರಗಳ ನವೀಕರಣ ಹಾಗೂ ಹೊಸ ತಂತ್ರಜ್ನಾನಗಳನ್ನು ನಗರಗಳಲ್ಲಿ ಅಳವಡಿಸುವ ಸಲುವಾಗಿ ರೂಪಿತಗೊಂಡ ಯೋಜನೆಯಾಗಿದೆ. ಹಾಗಾದರೆ ಈ ಯೋಜನೆಯ ಉದ್ದೇಶ ನಗರಗಳನ್ನು ಕೆಡವಿ ಹೊಸ ನಗರಗಳನ್ನು ನಿರ್ಮಿಸುವುದೇ? ಪುರಾತನ ಕಾಲದ ನೆನಪುಗಳನ್ನು ಮರೆಮಾಚುವುದೇ? ಇತಿಹಾಸವುಳ್ಳ ಪ್ರದೇಶವನ್ನು ಕೆಡವಿ ಹಾಕುವುದೇ? ಇಂತಹ ಪ್ರಶ್ನೆಗಳು ಎಲ್ಲರ ಮನದಲ್ಲಿ ಮೂಡಿರಬಹುದು. ಆದರೆ ಈ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರ ಎಲ್ಲಾ ಯೋಜನೆಗಳು ಸರಿಯಾದ ರೀತಿಯಲ್ಲಿ ಕಾರ್ಯಗತವಾದಗಲೇ ತಿಳಿಯುವುದು. ನಾವು ಸರಿಯಾದ ರೀತಿಯಲ್ಲಿ ಈ ಸ್ಮಾರ್ಟ್ ಸಿಟಿ ಯೋಜನೆಯ ಬಗ್ಗೆ ತಿಳಿಯುವುದಾದರೆ, ಇದೊಂದು ಉತ್ತಮ ರೀತಿಯ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ ಬರುವ ಎಲ್ಲಾ ನಗರಗಳಲ್ಲಿ ಆಧುನಿಕ ಶೈಲಿಯ ಸೌಲಭ್ಯಗಳನ್ನು ಒದಗಿಸುವ ಉದ್ದೇಶವಾಗಿದೆ.
ಉತ್ತಮ ರೀತಿಯ ಶೌಚಾಲಯಗಳು, ಬಸ್ಸು ತಂಗುದಾಣಗಳು, ಬೀದಿ ದೀಪಗಳು, ಚರಂಡಿಗಳು, ಕುಡಿಯುವ ನೀರಿನ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ಆಧುನಿಕ ಮಾರುಕಟ್ಟೆ ಇತ್ಯಾದಿ ಈ ಯೋಜನೆಯ ಕಾರ್ಯಗಳು.
ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ:
ವಿವಿಧ ಭಾಷೆ, ಜಾತಿ ಹಾಗೂ ಅನೇಕ ರೀತಿಯ ಸಂಸ್ಕøತಿಯುಳ್ಳ ನಾಡು ನಮ್ಮ ಮಂಗಳೂರು. ಇಲ್ಲಿ ಅನೇಕ ರೀತಿಯ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣಬಹುದು. ಮಂಗಳೂರು ಕರ್ನಾಟಕದಲ್ಲಿ ಅತೀ ವೇಗವಾಗಿ ಅಭಿವೃಧ್ಧಿ ಹೊಂದುವ ನಗರಗಳಲ್ಲಿ 2ನೇ ಸ್ಥಾನವನ್ನು ಬಾಚಿಕೊಂಡಿದೆ. ಜಲಮಾರ್ಗ, ವಾಯುಮಾರ್ಗ, ಭೂಮಾರ್ಗ ಹಾಗೂ ರೈಲು ಮಾರ್ಗ ನಮ್ಮ ಹೆಮ್ಮೆ ಹಾಗೂ ಆರ್ಥಿಕ ಅಭಿವೃಧ್ಧಿಯ ಪ್ರತೀಕ. ಈ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ನಮ್ಮ ನಾಡು ಅನೇಕ ರೀತಿಯ ಅಭಿವೃದ್ಧಿಯ ಕೆಲಸಗಳಿಂದ ವಂಚಿತವಾಗಿ ಉಳಿದಿದೆ.
ಸ್ಮಾರ್ಟ್ ಸಿಟಿ ಯೋಜನೆಯನ್ನು ಮಂಗಳೂರಿಗೆ ಪ್ರಸ್ತಾಪಿಸಿದಾಗ ಜನರ ಮನದಲ್ಲಿ ಮಂದಹಾಸ ಮೂಡಿತ್ತಾದರೂ, ಯಾವ ರೀತಿಯ ಕೆಲಸಗಳು ನಡೆಯಬಹುದೆಂಬುದು ಯಾರೂ ಊಹಿಸಿರಲಿಲ್ಲ. ಈ ಯೋಜನೆಯನ್ನು ಪ್ರಸ್ಥಾಪಿಸಿ ಅನೇಕ ವರ್ಷಗಳಾಗಿದ್ದರೂ ಯಾವುದೇ ಕೆಲಸಗಳು ತ್ವರಿತಗತಿಯ ವೇಗವನ್ನು ಪಡೆದಿರಲಿಲ್ಲ. ಕೆಲಸದ ರೂಪುರೇಷೆಯನ್ನು ತಯಾರಿಸುವಲ್ಲಿಯೇ ಕೆಲವು ವರ್ಷಗಳು ಉರುಳಿ ಹೋದವು. ಇತ್ತೀಚಿನ ವರ್ಷಗಳಲ್ಲಿ ಕೆಲವು ಕೆಲಸಗಳು ಪ್ರಗತಿಸಾಗುತ್ತಿವೆ.
ಮಂಗಳೂರನ್ನು ವಾಸಯೋಗ್ಯ ನಗರವೆಂದು ಕರೆಯಲಾಗುತ್ತಿದೆ. ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯು ಜಲಾಭಿಮುಖಿ ಪ್ರದೇಶಗಳ ಹಾಗೂ ರಸ್ತೆಗಳ ಅಭಿವೃಧ್ಧಿ, ಮೀನುಗಾರಿಕಾ ವಲಯದಲ್ಲಿ ಪ್ರಗತಿ ಮುಂತಾದ ಯೋಜನೆಗಳ ಮೂಲಕ ಮಂಗಳೂರಿನ ವ್ಯಾಪಾರ ಹಾಗೂ ತನ್ಮೂಲಕ ಆರ್ಥಿಕತೆಯ ಸಂಪೂರ್ಣ ಪ್ರಗತಿಯ ಗುರಿಯನ್ನಿಟ್ಟುಕೊಂಡಿದೆ.
ಉದ್ದಕ್ಕೂ ಕರಾವಳಿಯನ್ನು ಹೊಂದಿರುವ ನಗರವಾದ ಮಂಗಳೂರಿನ ಜಲಾಭಿಮುಖಿ ನಗರಾಭಿವೃಧ್ಧಿ ಯೋಜನೆಯು ಜನಸಮೂಹವನ್ನು ಜಲಸಂಪತ್ತಿನೊಂದಿಗೆ ಜೋಡಿಸುವ ಉದ್ದೇಶವನ್ನಿಟ್ಟುಕೊಂಡಿದೆ. ನದಿಗಳುದ್ದಕ್ಕೂ, ಸಮುದ್ರತೀರಗಳುದ್ದಕ್ಕೂ ಮಾಡಹೊರಟಿರುವ ಹೂಡಿಕೆಯ ಉದ್ದೇಶವು ಇಲ್ಲಿನ ಎಲ್ಲಾ ಚಟುವಟಿಕೆಗಳನ್ನು ಉತ್ತೇಜಿಸುವುದು ಹಾಗೂ ಭೂಮೌಲ್ಯವರ್ಧನೆಯೊಂದಿಗೆ ಜನರಿಗೆ ಮನೋರಂಜನೆಗೂ ಸ್ಥಳಾವಕಾಶವನ್ನೂ ಒದಗಿಸುವುದಾಗಿದೆ.
ಜನರಿಗೆ ವಾಸಯೋಗ್ಯ ಸ್ಥಳಗಳನ್ನು ಹಾಗೂ ಸಾರ್ವಜನಿಕ ಸ್ಥಳಗಳನ್ನು ಒದಗಿಸುವುದರಲ್ಲಿ ಸಾಕಷ್ಟು ಪ್ರಗತಿಯನ್ನು ತೋರಿಸುವುದು ಮೂಲಸೌಕರ್ಯಗಳ ಅಭಿವೃಧ್ಧಿ ಯೋಜನೆಯ ಅನಿವಾರ್ಯತೆಯಾಗಿದೆ.
ಈ ಯೋಜನೆಯಡಿಯಲ್ಲಿ ಬರುವಂತಹ ಕೆಲಸಗಳು:
ಸ್ಮಾರ್ಟ್ ಮಾರುಕಟ್ಟೆ:
ಈಗ ಇರುವ ಮೀನು ಮಾರುಕಟ್ಟೆ ಹಾಗೂ ಸೆಂಟ್ರಲ್ (ಕೇಂದ್ರೀಯ) ಮಾರುಕಟ್ಟೆಯನ್ನು ನವೀಕರಣಗೊಳಿಸಲಾಗುವುದು ಹಾಗೂ ಈ ಸ್ಥಳಗಳಲ್ಲಿ ನೈರ್ಮಲ್ಯತೆ, ಚರಂಡಿ ವ್ಯವಸ್ಥೆ ಹಾಗೂ ವ್ಯಾಪಾರಸ್ಥರು ಮತ್ತು ಗ್ರಾಹಕರಿಗೆ ಹೊಸ ತಂತ್ರಜ್ನಾನವುಳ್ಳ ಸೌಲಭ್ಯವನ್ನು ನೀಡುವುದು.
ಸಂಚಾರ ದಟ್ಟನೆ ನಿಯಂತ್ರಣ ಕೇಂದ್ರ:
ಮಂಗಳೂರಿನಲ್ಲಿ ವಾಹನ ಸಂಚಾರ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇದರ ನಿಯಂತ್ರಣವನ್ನು ನಿರ್ವಹಿಸಲು ಹಲವಾರು ವರ್ಷಗಳಿಂದ ಪೋಲೀಸರು ಪ್ರಯತ್ನಿಸುತ್ತಾ ಬರುತ್ತಿದ್ದಾರೆ. ಇದಕ್ಕಾಗಿ ನಮ್ಮ ನಗರದಲ್ಲಿ ಸಂಚಾರ ದಟ್ಟನೆ ನಿಯಂತ್ರಣ ಕೇಂದ್ರವನ್ನು ವಿವಿಧ ತಂತ್ರಜ್ನಾನದಿಂದ ಅಭಿವೃಧ್ಧಿ ಪಡಿಸಿ, ಅದಕ್ಕಾಗಿ ಪ್ರತ್ಯೇಕ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಇದರಲ್ಲಿ ಆದೇಶ ನಿಯಂತ್ರಣ ಕೇಂದ್ರವು ಒಳಗೊಂಡಿರುತ್ತದೆ.
ಸ್ಮಾರ್ಟ್ ಪಾರ್ಕಿಂಗ್:
ನಗರದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವುದೆಂದರೆ ತುಂಬಾ ತಲೆಬಿಸಿಯ ಕೆಲಸ. ಎಲ್ಲಿಯೂ ಪಾರ್ಕಿಂಗ್ ವ್ಯವಸ್ಥೆ ಸರಿಯಾಗಿ ಕಂಡುಬರುವುದಿಲ್ಲ. ಮಾರ್ಗದ ಬದಿಯಲ್ಲಿ ಗಾಡಿ ಇಟ್ಟರೆ, ಟೋಯಿಂಗ್ ನವರು ಬಂದು ವಾಹನವನ್ನು ಎತ್ತಿಕೊಂಡು ಹೋಗುವರೆಂದು ಭಯ. ಈ ಎಲ್ಲಾ ಸಮಸ್ಯೆಯನ್ನು ನಿವಾರಿಸುವುದಕ್ಕಾಗಿ ದೊಡ್ಡ ಕಟ್ಟಡಗಳನ್ನು ನಿರ್ಮಿಸಿ ಅದರಲ್ಲಿಯೇ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗುವುದು. ಇದಕ್ಕಾಗಿ ಶುಲ್ಕವನ್ನೂ ಪಾವತಿಸಲು ಇರಬಹುದು.
ಸ್ಮಾರ್ಟ್ ಬಸ್ಸು ತಂಗುದಾಣ:
ಪ್ರಸ್ತುತ ನಗರದಲ್ಲಿ ಎಲ್ಲಿಯೂ ಸರಿಯಾಗಿ ತಂಗುದಾಣಗಳ ವ್ಯವಸ್ಥೆ ಇಲ್ಲ. ಅಧಿಕ ಜನರು ನಿಲ್ಲುವ ಪ್ರದೇಶಗಳಲ್ಲಂತೂ ಜನರ ಕಷ್ಟವನ್ನು ಕೇಳುವ ಜನವೇ ಇಲ್ಲ. ಎಷ್ಟೋ ಹಿರಿಯ ನಾಗರಿಕರು ಈ ಸಮಸ್ಯೆಗಳಿಗಾಗಿ ಜನಪ್ರತಿನಿಧಿಗಳಿಗೆ ಶಾಪವನ್ನು ಹಾಕಿರಬಹುದು. ಇದೊಂದು ನಮ್ನ ನಗರದ ಅತೀ ದೊಡ್ಡ ಸಮಸ್ಯೆಯೆಂದರೆ ತಪ್ಪಾಗಲಾರದು. ಈ ಸಮಸ್ಯೆಗಳನ್ನು ನಿವಾರಿಸಲು ಸ್ಮಾರ್ಟ್ ಬಸ್ಸು ತಂಗುದಾಣ ವ್ಯವಸ್ಥೆಯನನ್ನು ನೀಡಲು ಸರ್ಕಾರ ಮುಂದಾಗಿದೆ. ಈ ಯೋಜನೆಯಡಿಯಲ್ಲಿ ಸುಸರ್ಜಿತವಾದ ತಂಗುದಾಣ ಹಾಗೂ ಅದರಲ್ಲಿ ಇ-ಶೌಚಾಲಯದ ವ್ಯವಸ್ಥೆ ಕೂಡಾ ಇರಲಿದೆ.
ಆಣೆಕಟ್ಟು ಹಾಗೂ ಚರಂಡಿ:
ನಗರದಲ್ಲಿ ನೀರಿನ ಬಾವಿ, ಕೆರೆ, ಕೊಳ ಇದ್ದಲ್ಲಿ ಅದರ ಹೂಳೆತ್ತುವಿಕೆ, ಬದಿ ಹಾಗೂ ಸಣ್ಣ ಅನೆಕಟ್ಟುಗಳಂತಹ ಕೆಲಸಗಳನ್ನು ಮಾಡಲು ಯೋಜನೆ ರೂಪಿಸಿದೆ. ನಗರಕ್ಕೆ ಜೋಡನೆಯಾಗುವಂತಹ ನದಿ, ಕೆರೆಗಳ ಸಮಗ್ರ ಅಭಿವೃಧ್ಧಿ ಈ ಯೋಜನೆಯ ಉದ್ದೇಶವಾಗಿದೆ.
ಸ್ಮಾರ್ಟ್ ರಸ್ತೆ ಯೋಜನೆ:
ನಗರದಲ್ಲಿರುವ ಹಳೆಯ ರಸ್ತೆಗಳನ್ನು ತೆಗೆದು, ಹೊಸ ರೂಪದ ಹಾಗೂ ಸಾರ್ವಜನಿಕರಿಗೆ ಹಾಗೂ ನಗರಾಭಿವೃಧ್ಧಿಗೆ ಸಹಕಾರಿಯಾಗುವಂತಹ ರಸ್ತೆಗಳ ನಿರ್ಮಾಣ ಈ ಯೋಜನೆಯ ಗುರಿ. ಹೊಸ ಶೈಲಿಯ ರಸ್ತೆ ಹಾಗೂ ರಸ್ತೆಯ ಬದಿ ನಡೆಯಲು ಯೋಗ್ಯವಾದಂತಹ ರಸ್ತೆಗಳನ್ನು ನಿರ್ಮಿಸುವುದು ಇದರ ಉದ್ದೇಶವಾಗಿದೆ.
ಕ್ರೀಡಾಂಗಣ/ ಮೈದಾನ:
ಕ್ರೀಡೆಗೂ ಈ ಯೋಜನೆಯಲ್ಲಿ ಮಹತ್ವವನ್ನು ನೀಡಲಾಗಿದೆ. ಸರಿಯಾದ ಜಾಗಗಳನ್ನು ಗುರುತಿಸಿ ಅಲ್ಲಿ ಜಿಲ್ಲಾ ಹಾಗೂ ಸ್ಥಳೀಯ ಮಟ್ಟದ ಕ್ರೀಡಾಪಟ್ಟುಗಳಿಗೆ ಪ್ರೋತ್ಸಾಹವನ್ನು ನೀಡಿ ಅವರಿಗೆ ಸರಿಯಾದ ಜಾಗವನ್ನು ಹಾಗೂ ವ್ಯವಸ್ಥೆಯನ್ನು ಕಲ್ಪಿಸಿಕೊಡುವುದಾಗಿದೆ. ಹಳೇಯ ಹೊರಾಂಗಣ ಹಾಗೂ ಒಳಾಂಗಣ ಕ್ರೀಡಾಂಗಣಗಳನ್ನು ನವೀಕರಣಗೊಳಿಸಿ, ಉತ್ತಮ ದರ್ಜೆಗೆ ಕೊಂಡೊಯ್ಯುವುದು ಈ ಯೋಜನೆಯ ಗುರಿ.
ಸ್ಮಾರ್ಟ್ ಸಿಟಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದಾಗ, ನಮ್ಮ ಹೆಮ್ಮೆಯ ಕರಾವಳಿ ನಗರವಾದ ಮಂಗಳೂರು ತನ್ನ ಅಗಾಧವಾದ ನೈಸರ್ಗಿಕ ಸಂಪತ್ತು ಹಾಗೂ ಮಾನವಸಂಪನ್ಮೂಲಗಳಿಂದ ಜಗತ್ತಿಗೇ ತನ್ನನ್ನು ತೆರೆದಿಡುವಂತಾಗುತ್ತದೆ.
ಈ ಎಲ್ಲಾ ಯೋಜನೆಗಳನ್ನು ಸರ್ಕಾರವು ಸರಿಯಾಗಿ ನಿಭಾಯಿಸಿದ್ದಾದರೆ, ಖಂಡಿತವಾಗಿಯೂ ನಮ್ಮ ನಗರವು ಸುಂದರವಾಗಿ , ಸ್ವಚ್ಛತೆಯಿಂದ, ನವೀಕರಣದೆಡೆಗೆ ಹೆಜ್ಜೆ ಹಾಕಿ, ವಿವಿಧ ಮೂಲಭೂತ ಸೌಕರ್ಯಗಳಿಂದ ಕೂಡಿ, ವಿವಿಧ ಹೊಸ ತಂತ್ರಜ್ನಾನಗಳನ್ನು ಒಳಗೊಂಡು ಇಡೀ ದೇಶಕ್ಕೆ ಮಾದರಿಯಾಗುವಂತಹ ನಗರವಾಗಿ ಬೆಳೆಯುವುದೆನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇದೇ ನಮ್ಮೆಲ್ಲರ ಆಶಯ.
-By ಪ್ರೀತಮ್. ಜೆ. ಡಿಸೋಜ
ಫಜೀರು