ಕಣಿವೆಗಳು, ಕಮರಿಗಳು, ಗುಂಡಿಗಳು ಹಿಂದೆಲ್ಲ ಪ್ರಾಕೃತಿಕವಾಗಿ ಕಾಡಿದರೆ ಇಂದು  ಮಾನವ ನಿರ್ಮಿತ ಎನಿಸಿ ಕಾಡುತ್ತಲಿವೆ.

ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣ, ಕೆರೆ ಕಟ್ಟೆ ಎಂದಿತ್ಯಾದಿಯಾಗಿ ಮಾನವನು ತಗ್ಗುಗಳನ್ನು ತೋಡುತ್ತಾನೆ. ಇಲ್ಲವೇ ಏರಿ ಮೇಲೇರಿ ಪಕ್ಕದಲ್ಲಿ ತಗ್ಗು ಉಂಟಾಗುವಂತೆ ‌ಮಾಡುವುದೂ ಇದೆ. ಯಾವುದೇ ರೀತಿಯದಾದರೂ ನಡೆಯುವವನು ಎಡವಿದರೆ ಹೊಂಡಕ್ಕೆ ಬೀಳುತ್ತಾನೆ.

ಗಾಯ ಆದರೆ ಗುಣ ಆದೀತು, ಊನಾಂಗರಾದರೆ ಬದುಕು ಕಾಡೀತು, ಸಾವೇ ಆದರೆ ಬೇರೆಯವರಿಗೆ ತೊಂದರೆ ಆದೀತು. ಆ ಕಾರಣಕ್ಕಾಗಿ ‌ನೋಡಿ ನಡೆಯಿರಿ, ಎಚ್ಚರಿಕೆ ಎಂಬಿತ್ಯಾದಿ ಫಲಕಗಳು ಇರುವುದಿದೆ. ಫಲಕ ಹಾಕದೆ ಯಾವುದಾದರೂ ಅವಘಡ‌ ನಡೆದಾದ ಮೇಲೆ ರಕ್ಷಣಾ ನಿಯಮಾವಳಿ ಪಾಲಿಸಲು ತರಾತುರಿ ತೋರುವುದಿದೆ.

ಹಿಂದೆ ಮೈಸೂರಿನಲ್ಲಿ ಆನೆಗಳನ್ನು ಹೊಂಡಕ್ಕೆ ಬೀಳಿಸುವ ಖೆಡ್ಡಾ ಜಗತ್ಪ್ರಸಿದ್ಧ ಎನಿಸಿತ್ತು. ಇಂದು ಅದಕ್ಕೆಲ್ಲ ಅವಕಾಶವಿಲ್ಲ. ಆದರೆ ರಾಜಕೀಯದಲ್ಲಿ ‌ಬೇರೆ ಬಗೆಯ ಖೆಡ್ಡಾಗಳು ಆಗಾಗ ಸುದ್ದಿ ಮಾಡುತ್ತಿರುತ್ತವೆ.

ಹಿಂದೆ ಪ್ರಧಾನಿ ಆಗಿದ್ದ ದೇಸಾಯಿ ಅವರ ಸೊಸೆಯಿಂದ‌ ಹಿಡಿದು ಕಳೆದ ವಾರ ಭಾರೀ ಚಿನ್ನದ ಅಡವು ಕಂಪೆನಿಯ ಮಾಲಕನವರೆಗೆ ಹಲವರು ವಸತಿ ಸಮುಚ್ಚಯದ‌ ಮಹಡಿಯಿಂದ ಬಿದ್ದು ಸತ್ತ ಸಂಗತಿಗಳು ನಮ್ಮ ಮುಂದೆ ಇವೆ. ಮಂಗಳೂರಿನಲ್ಲಿ ಐಸಿಎಸ್ ಅಧಿಕಾರಿ, ಲೇಖಕ, ರಾಜಕಾರಣಿ ಎಲ್ಲವೂ ಆಗಿದ್ದ ದಿವಂಗತ ಲೋಬೋ ಪ್ರಭು ಅವರ ಮಡದಿ ಮಹಡಿ ಏರದೆಯೇ ಬುಡದಲ್ಲೇ ತಳಕ್ಕೆ‌ ಬಿದ್ದು ಸತ್ತುದಿದೆ. ಪ್ರತಿದಿನ ಎಲ್ಲಾದರೂ ಒಂದು ಕಡೆ ಹಿರಿಯ ನಾಗರಿಕರು ಬಾತ್ ರೂಮಿನಲ್ಲಿ ಬಿದ್ದು ಗಾಯ ಮಾಡಿಕೊಂಡ, ಕೆಲವೊಮ್ಮೆ ಆಸ್ಪತ್ರೆಯಲ್ಲಿ ಸತ್ತ ಸುದ್ದಿಯೂ ನಮಗೆ ಹೊಸದಲ್ಲ.

ಇಂದು ರಸ್ತೆಗಳನ್ನು ಕಾಂಕ್ರೀಟಿನದಾಗಿ ಮಾಡುವುದು  ಸಾಮಾನ್ಯ. ಇದೀಗ ಸ್ಮಾರ್ಟ್ ಸಿಟಿ ಎಂದರೆ ಕಾಂಕ್ರೀಟ್ ರಸ್ತೆ ಎಂದು ತಪ್ಪು ತಿಳಿದುಕೊಂಡು ಕೆಲಸ ನಡೆಯುತ್ತಿರುವುದೂ ನಮ್ಮ ಮುಂದಿದೆ.

ಮಂಗಳೂರಿನಲ್ಲಿ ಹೊಸದಾಗಿ ಕಾಂಕ್ರೀಟ್ ಹಾಕುತ್ತಿರುವ ರಸ್ತೆಗಳ ಸಂಗತಿ ವಿಚಿತ್ರ. ಅವು ಯಾವುವೂ ಪರಿಪೂರ್ಣ ಅಲ್ಲ. ಅಲ್ಲಲ್ಲಿ ಅಂಚುಗಳಲ್ಲಿ ತಗ್ಗುಗಳು ಗುಂಡಿಗಳು ಹಾಗೆಯೇ ಉಳಿದುಕೊಂಡಿವೆ. ಸ್ವಲ್ಪ ಆಚೀಚೆ ಆದರೂ ಗಾಯ ಮಾಡಿಕೊಳ್ಳಲು ಎಲ್ಲ ರೀತಿಯಲ್ಲಿಯೂ ಸಹಕರಿಸುವ ರಸ್ತೆಗಳಿವು. ಹೆಚ್ಚಿನ ಕಡೆ ಕಾಂಕ್ರೀಟ್ ಹಾಕುವುದು ಎತ್ತರಕ್ಕೆ ಆಗಿರುವುದರಿಂದ ರಸ್ತೆಗಳ ಆಚೀಚೆ ಮುಗ್ಗರಿಸುವಂಥ ತಗ್ಗುಗಳು ಇರುತ್ತವೆ.

ಕಟ್ಟಡಗಳಲ್ಲಿ ಇಂದು ಕೆಳ ಅಂತಸ್ತು, ಆಳ ಅಂತಸ್ತು, ಪಾತಾಳ ಅಂತಸ್ತುಗಳೆಲ್ಲ ಇರುತ್ತವೆ. ಮಂಗಳೂರು ಮಹಾನಗರ ಪಾಲಿಕೆಯ ಕಟ್ಟಡ ಕೂಡ ಇದೇ ಬಗೆಯದು. ಎದುರುಗಡೆಯ‌ ಮಹಾತ್ಮಾ ಗಾಂಧಿ ರಸ್ತೆಯಿಂದ ಕಟ್ಟಡದ ನೆಲ ಮಹಡಿಯು 12 ಅಡಿಗಳಷ್ಟು ಕೆಳಗೆ ಇದೆ. ರಸ್ತೆಯ ಪಕ್ಕದಲ್ಲಿ ಕಾಲು ದಾರಿ ಇದೆ. ಅಲ್ಲಿ ಎಡವಿದರೆ ನೇರ ‌ಪಾಲಿಕೆಯ ಹೊಂಡಕ್ಕೆ ಬೀಳುತ್ತೀರಿ ಏಕೆಂದರೆ ಇಲ್ಲಿ ತಡೆಗೋಡೆ ಒಂದೂವರೆ ಅಡಿ ಎತ್ತರ ಮಾತ್ರ ಇದೆ. ಅತಿ ಎಚ್ಚರಿಕೆಯಿಂದ ನಡೆದರೂ ಬವಳಿ ಬಂದರೆ, ಓಡುವ ಯಾರಾದರೂ ಡಿಕ್ಕಿ ಹೊಡೆದರೆ ಸಾವರಿಸಿಕೊಳ್ಳುವುದು ಕಷ್ಟ. ನೇರ ಕೆಳಗೆ ಬಿದ್ದು ಎಲುಬು ಮುರಿದು ಬೀಳುತ್ತೀರಿ. ಇಲ್ಲಿ ‌ಮೋಟು ಗೋಡೆಯ ಬಗೆಗೆ ಎಚ್ಚರಿಕೆ ಫಲಕಗಳು ಕೂಡ ಇಲ್ಲ.

ಮನಪಾ ತನ್ನ ಕಟ್ಟಡದಲ್ಲೇ ಸೂಕ್ತ ರಕ್ಷಣಾ ನಿಯಮಗಳನ್ನು ಯಾಕೆ ಅನುಸರಿಸಿಲ್ಲ? ಈ ಮೋಟು ಗೋಡೆಯನ್ನು ನಾಲ್ಕು ಅಡಿಗಳಷ್ಟಾದರೂ ಎತ್ತರದ್ದಾಗಿ ಕಟ್ಟಬೇಡವೆ? ಮನಪಾ ಬಳಿ ಯೋಜನೆ ಇಲ್ಲವೆ ಅಥವಾ ಆಲೋಚನೆಯೇ ಇಲ್ಲವೇ? ಬಿದ್ದವರಿಗೆ ಪರಿಹಾರ ಕೊಟ್ಟಂತೆ ಮಾಡಿ ಕಾಸು ಹೊಡೆಯುವ ಉದ್ದೇಶ ಕೆಲವರಿಗಿದೆಯೇ? ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಇಂತಹ ಮೋಟು ಗೋಡೆ ನೀಟು ಮಾಡುವ ನಿಧಿ ಇಲ್ಲವೇ? ಇಟ್ಟರೆ ಕೂಡಲೆ ಅದನ್ನು ವ್ಯಯ‌ ಮಾಡಲು ಕೆಲವು ಕಾರ್ಪೊರೇಟರ್ ಗಳು ಬರುತ್ತಾರೆ. ಮೋಟು ಗೋಡೆ ರಿಪೇರಿ ಆದೀತು. ಕಡೆ ಮಟ್ಟಿಗೆ ರಿಪೇರಿ ಆದ‌ ಬಿಲ್ ಆದರೂ ‌ಆದೀತು ಬಿಡಿ.

-By ಪೇಜಾ