ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ಜನರು ಅಷ್ಟಕ್ಕೇ ತೃಪ್ತರಾಗಿಲ್ಲ. ಕಪ್ಪು ಶುಕ್ರವಾರವನ್ನು ಶುಭ ಶುಕ್ರವಾರ ಎಂದು ಕರೆದು ವಂಚಿಸಿದ್ದಾರೆ.

ಪರಮ ಜ್ಞಾನಿ, ಮಹಾ ದಾನಿ ತುಳುವರಸ ಬಲಿಯೇಂದ್ರರನ್ನು ಮೋಸದಿಂದ ವಂಚಿಸಿದ ಜನ ಅವರ ಕುಲದವರು ಆ ದಿನವನ್ನು ಹಬ್ಬವಾಗಿ ಆಚರಿಸುವಂತೆ ಮಾಡಿದ್ದಾರೆ. ಇದೆಲ್ಲ ಇತಿಹಾಸದಲ್ಲಿ ನಡೆಯುತ್ತಲೇ ಇರುತ್ತದೆ. ಶೈವ ವಂಚಿಸಿ ವೈಷ್ಣವ ಮೇಲೆತ್ತಿದ್ದರಿಂದ ವಿಜಯನಗರದ ತುಳುವರಸರ ಕಾಲವನ್ನು ಸುವರ್ಣ ಯುಗ ಎನ್ನಲಾಗಿದೆ. 1857ರ ಸ್ವಾತಂತ್ರ್ಯ ಹೋರಾಟವನ್ನು ಸಿಪಾಯಿ ದಂಗೆ ಎನ್ನಲಾಗಿದೆ. ಕೃಷ್ಣ ರಾಜ ಒಡೆಯರ್ ಕಟ್ಟಿಸಿದ ಕನ್ನಂಬಾಡಿ ಕಟ್ಟೆಗೆ ವಿಶ್ವೇಶ್ವರಯ್ಯ ಉತ್ಸವ ನಡೆಯುತ್ತದೆ. ಕಾಂಗ್ರೆಸ್ ಕಾಲದ. ಸಾಧನೆಯೆಲ್ಲ ಹೆಸರು ಬದಲಾಗಿ ಬಿಜೆಪಿ ಸಾಧನೆ ಆಗುತ್ತದೆ.

ಕಪ್ಪು ಶುಕ್ರವಾರವನ್ನು ಪವಿತ್ರ ಶುಕ್ರವಾರ, ದೊಡ್ಡ ಶುಕ್ರವಾರ, ಶುಭ ಶುಕ್ರವಾರ ಎಂದಿತ್ಯಾದಿಯಾಗಿ ಕರೆದರೂ ಇದು ಮಾನವೀಯ ಲೋಕದ ಕಪ್ಪು ಶುಕ್ರವಾರ ಆಗಿದೆ. ಏಕೆಂದರೆ ಅಂದು ಯೇಸು ಕ್ರಿಸ್ತರನ್ನು ಸುಳ್ಳು ಆಪಾದನೆಯ ಮೇಲೆ ಅಮಾನವೀಯವಾಗಿ ಶಿಲುಬೆಗೆ ಏರಿಸಲಾಯಿತು.

ಯೆಹೂದ್ಯರು ತಮ್ಮ ಪಾಸ್ಕ 40 ದಿನಗಳ ಉಪವಾಸ ಆಚರಣೆ ಪ್ರಾರ್ಥನೆಯನ್ನು ಸಹ ಯೇಸು ಕ್ರಿಸ್ತರನ್ನು ಶಿಲುಬೆಗೇರಿಸುವುದರ ಜೊತೆಗೆ ತಳುಕು ಹಾಕಿಸಿದ್ದಾರೆ. ಹಳೆಯ ಒಡಂಬಡಿಕೆ ತೆಗೆದುಕೊಂಡರೂ ಇಂತಹ ಸಂಸ್ಕೃತಿ ಹೇರಿಕೆಯು ಕ್ರಿಸ್ತಾನುಯಾಯಿಗಳನ್ನು ಕತ್ತಲಲ್ಲಿ ಇಟ್ಟ ವಿಷಯವೇ ಆಗಿದೆ. ಶುಭ ಎಂಬುದಕ್ಕೆ ಯಾವುದೇ ವಿವರಣೆ ನೀಡಿದರೂ ಅದನ್ನು ಮಿದುಳು ತೊಳೆಯುವ ಕೆಲಸ ಎಂದೇ ಬಗೆಯಬೇಕಾಗುತ್ತದೆ.

30 ಬಂಗಾರದ ನಾಣ್ಯಗಳಿಗೆ ಜೂದ ಇಸ್ಕಾರಿಯೋಸ ಯೇಸು ಕ್ರಿಸ್ತರನ್ನು ತೋರಿಸಿಕೊಟ್ಟರು. ಯೆಹೂದ್ಯರು ಗೆತ್ಸೆಮನೆ ತೋಟದಲ್ಲಿ ಯೇಸು ಸ್ವಾಮಿಯನ್ನು ಬಂಧಿಸಿ ಕಾಯಪನ ಮಾವ ಅನಾಸನೆದುರು ನಿಲ್ಲಿಸಿ, ಆಮೇಲೆ ಸೆನ್ನೆದಿನ್ ನ್ಯಾಯಾಲಯದಲ್ಲಿ ವಿಚಾರಣೆ ಮಾಡಿದರು. ಪ್ರಧಾನ ಗುರು ಯೇಸುವಿಗೆ ಮರಣದಂಡನೆ ವಿಧಿಸಿದರು. ಅದರ ಜಾರಿಗೆ ಅಲ್ಲಿನ ರೋಮನ್ ರಾಜ್ಯಪಾಲ ಪಿಲಾತನಲ್ಲಿಗೆ ತಂದರು. ವಿವಾದ ಏಕೆಂದು ಆತನು ಯೇಸುವಿನ ಗಲಿಲಿಯಾದ ರಾಜ ಹೆರೋದನಲ್ಲಿಗೆ ಕಳುಹಿಸಿದ. ಹೆರೋದ ಏನೂ ತಿಳಿಯದೆ ಪಿಲಾತರಲ್ಲಿಗೇ ಕಳುಹಿಸಿದ. ವಿಚಾರಣೆಯಲ್ಲಿ ತಪ್ಪು ಕಾಣದ್ದರಿಂದ ಪಿಲಾತ ಶಿಕ್ಷೆ  ಒಪ್ಪಲು ಅಂಜಿದ. ಆದರೆ ಯೆಹೂದ್ಯರ ಗುಂಪು ಮರಣದಂಡನೆ ಆಗಲೇಬೇಕು ಎಂದು ಕೂಗಾಡಿತು. ಕೊನಗೆ ಪಿಲಾತ ನಿಮ್ಮ ಧಾರ್ಮಿಕ ವಿಧಿಗೆ‌ ತಾನೆ ಯೇಸು ಅಡ್ಡ ಆಗಿರುವುದು ಎಂದು ಯೇಸುವನ್ನು ಯೆಹೂದ್ಯರ ಗುಂಪಿಗೆ ಒಪ್ಪಿಸಿದರು.

ಮುಳ್ಳಿನ ಕಿರೀಟ ತೊಡಿಸಿ, ನೇರಳೆ ಬಟ್ಟೆ ತೊಡಿಸಿ ಕಪಾಲ ಬೆಟ್ಟಕ್ಕೆ ಶಿಲುಬೆ ಹೊರಿಸಿ ಇತರ ಇಬ್ಬರು ಅಪರಾಧಿಗಳ ಜೊತೆಗೆ ಯೇಸು ಕ್ರಿಸ್ತರನ್ನು ನಡೆಸಲಾಯಿತು. ಗ್ರೀಕ್ ನಲ್ಲಿ ಗೋಲ್ಗೊತಾ, ಲ್ಯಾಟಿನ್ ನಲ್ಲಿ ಕಲ್ದಾರಿ ಎನ್ನಲಾದ ಈ ಬೆಟ್ಟದಲ್ಲಿ  ಯೆಹೂದ್ಯರು ಯೇಸುವನ್ನು ಶಿಲುಬೆಗೆ ಏರಿಸಿದರು. ಅವರನ್ನು ಕ್ಷಮಿಸು ತಂದೆ, ಅವರೇನು ಮಾಡುವರೆಂದು ಅವರರಿಯರು ಎಂದು ಯೇಸು ಶಿಲುಬೆ ಏರಿ ಕರುಣೆ, ಕ್ಷಮೆ ಮೆರೆದನು.

ಪಿಲಾತನ ಪತ್ನಿ ಮತ್ತು ಯೆಹೂದ್ಯರಲ್ಲೂ ಹಲವರಿಗೆ ಈ ಶಿಲುಬೆ ಶಿಕ್ಷೆ ಹಿಡಿಸಲಿಲ್ಲ. ಅರಿಮತಾಯ ಜೋಸೆಫ್ ಪಿಲಾತನಲ್ಲಿ ಯೇಸುವಿನ ಶವಕ್ಕೆ ಮನವಿ ಸಲ್ಲಿಸಿದ. ನಿಕೋದೆಮುಸ್ ಅರಗು ಪರಿಮಳ ದ್ರವ್ಯ ತಂದ. ಯೇಸು ಶವ ಪಡೆದು, ದೇಹಕ್ಕೆ ಪರಿಮಳ ದ್ರವ್ಯ ಹಚ್ಚಿ ಯೆಹೂದ್ಯ ಪದ್ಧತಿಯಲ್ಲಿ ಶವ ಸಂಸ್ಕಾರ ನಡೆಸಿ, ಶವ ಪೆಟ್ಟಿಗೆಯನ್ನು ಬೆಟ್ಟದ ಗುಹೆಯಲ್ಲಿ ಇಟ್ಟರು. ಮೂರನೇ ದಿನ ಈಸ್ಟರ್ ದಿನ ಯೇಸು ಎದ್ದು ಬಂದರು ಎಂಬುದು ‌ಕ್ರಿಸ್ತರ‌ ನಂಬಿಕೆ.

ಕ್ರಿ. ಶ. 33ರಲ್ಲಿ ಈ ಶಿಲುಬೆಗೇರಿಸಿದ ಕಪ್ಪು ದಿನ ಬಂದುದಾಗಿ ನಂಬುತ್ತಾರೆ. ಯೇಸು ಶಿಷ್ಯ ಪೇತ್ರನ ರಕುತ ಚಂದ್ರನ ಉಲ್ಲೇಖದ ಮೇಲೆ ಅದು ಕ್ರಿ. ಶ. 33ರ ಏಪ್ರಿಲ್ 3 ಎಂಬುದು ಒಂದು ಲೆಕ್ಕಾಚಾರ. ಐಸಾಕ್ ನ್ಯೂಟನ್ ಚಾಂದ್ರಮಾನದ ದಿನ ಕೊರತೆಯನ್ನೆಲ್ಲ ಗಣಿಸಿ ಅದು ಕ್ರಿ. ಶ. 34ನೇ ಇಸವಿ ಎಂದಿದ್ದಾನೆ.

ಈ 40 ದಿನ ಸಂಭ್ರಮಾಚರಣೆಗಳು ಇಲ್ಲ. ಹಿಂದೆ ಮಾಡುತ್ತಿದ್ದ ಉಪವಾಸ ಎಲ್ಲ ಇಂದಿಲ್ಲ; ಆಚರಣೆ ಕೂಡ ಕಷ್ಟ. ಇಂದು ಅದೆಲ್ಲ ಬೂದಿ ಬುಧವಾರದ ಒಂದು ದಿನದ ಉಪವಾಸಕ್ಕೆ ಸೀಮಿತವಾಗಿದೆ. ಕೆಲವರು 40 ದಿನಗಳ ನಡುವೆ ಬರುವ ಆರು‌ (ಸಾಮಾನ್ಯವಾಗಿ) ಶುಕ್ರವಾರಗಳಲ್ಲಿ ಉಪವಾಸ, ಪ್ರಾರ್ಥನೆಗಳಲ್ಲಿ ತೊಡಗಿಕೊಳ್ಳುತ್ತಾರೆ.

ಸ್ಟಾಕ್ ಹೋಂ ಸಿಂಡ್ರೋಮ್ ಎನ್ನುವುದು ಒಂದೂವರೆ ಶತಮಾನಗಳ ಈಚಿನ ಶಬ್ದ. ಕೈ ಸೋತವರು ಗೆದ್ದ ಕೆಡುಕರ ಆಚರಣೆ ಪಾಲಿಸುವುದು, ಅವರ ಮಾತು ಕೇಳುವುದು ಸ್ಟಾಕ್ ಹೋಂ ಸಿಂಡ್ರೋಮ್ ಲಕ್ಷ್ಮಣ. ಆದರೆ ಇದು ಬಹು ಹಿಂದೆಯೂ ನಡೆದಿದೆ. ಬಲಿ ಚಕ್ರವರ್ತಿಯ ಬಲಿ ದಿನವನ್ನು ಅವನ ಆರಾದಕರು ವಾಮನ ಗೆಲುವಾಗಿ ಆಚರಿಸುವುದು. ಕಪ್ಪು ಶುಕ್ರವಾರವನ್ನು ಕ್ರಿಸ್ತರು ಯೆಹೂದ್ಯರು‌ ಹೇಳಿದಂತೆ ಶುಭ ಶುಕ್ರವಾರ ಎನ್ನುವುದು ಇಂಥ‌ ಮನೋಭಾವಗಳೇ ಆಗಿದೆ. ಶುಭದ‌ ವಿವರಣೆ ಏನೇ ಇದ್ದರೂ  ಅದು ತಥ್ಯವಲ್ಲ. ಯೇಸು ಜನರ ಪಾಪ ಹೊತ್ತು ಶಿಲುಬೆಗೆ ಏರಿದ್ದನ್ನು ಕೂಡ ಶುಭ ಎನ್ನುವುದು ಹೇಗೆ? ಇದು ಅಶುಭವಲ್ಲದಿದ್ದರೂ ಕಪ್ಪು ‌ದಿನವೇ ಹೊರತು ಶುಭ ದಿನ ಅಲ್ಲ.   

-By ಪೇಜಾ