ಯೇಸು ಕ್ರಿಸ್ತನು ‌ಪುನರುತ್ಥಾನಗೊಂಡ ದಿನದ ನಂಬಿಕೆ ಮತ್ತು ಯೇಸು ಪಾಪ ನಿವಾರಿಸಿದ ದಿನ ಎಂದು ಈಸ್ಟರ್ ಕ್ರಿಶ್ಚಿಯನ್ನರ ನಂಬುಗೆಯ ಮೇಲೆ ಮುಖ್ಯತ್ವ ಪಡೆದಿರುವ ಹಬ್ಬವಾಗಿದೆ.

(PC:https://www.google.com/url?sa=i&url=https%3A%2F%2Fwww.smithsonianmag.com%2Fhistory%2Fthe-secrets-of-easter-island-59989046%2F&psig=AOvVaw2n3tM_Il-1SaMJE2-aYQdl&ust=1617507238654000&source=images&cd=vfe&ved=0CAMQjB1qFwoTCNDYutGS4e8CFQAAAAAdAAAAABAD)

ಡಚ್ ಪ್ರವಾಸಿ ಜಾಕೋಬ್ ರಾಗಾವಿನ್ ತನ್ನ ತಂಡದೊಂದಿಗೆ ಯೂರೋಪಿಯನರು ನೋಡಿರದ ಒಂದು ದ್ವೀಪ ತಲುಪಿದ. ಅಂದು ಈಸ್ಟರ್ ದಿನವಾದುದರಿಂದ ಅದನ್ನು ಈಸ್ಟರ್ ದ್ವೀಪ ಎಂದು ಕರೆದ. ಕ್ರಿ. ಶ. 3ನೇ ಶತಮಾನದಿಂದ ಚರ್ಚುಗಳಲ್ಲಿ ಆಚರಣೆ ಆರಂಭವಾಗಿ ಅನಂತರ ‌ಪ್ರತಿಯೊಬ್ಬ ಕ್ರಿಸ್ತನ ನಂಬಿಕೆಯ ಬುನಾದಿ ಹಬ್ಬ ಎನಿಸಿತು.

ಕಪ್ಪು ಶುಕ್ರವಾರಕ್ಕೆ ಹಳೆಯ ಒಡಂಬಡಿಕೆ ಆಧಾರ ಎಂಬಂತೆ ಈಸ್ಟರ್ ಆಚರಣೆಗೆ ಹೊಸ ಒಡಂಬಡಿಕೆ ಆಧಾರ ಎನ್ನಲಾಗಿದೆ. ಆದರೆ ಸಂಶೋಧನೆಯು ಎರಡೂ ಆಚರಣೆಗಳು ಕ್ರಿ. ಪೂ.ದ ಆಚರಣೆ ಮೇಲೆ ನಿಂತಿರುವುದು ಕಂಡು ಬರುತ್ತದೆ. ಕಪ್ಪು ಶುಕ್ರವಾರವನ್ನು ಯೆಹೂದ್ಯರು ತಮ್ಮ ಧರ್ಮದ ಗೆಲುವಿನ ನೆನಪಿಗಾಗಿ ಶುಭ ಶುಕ್ರವಾರ ಎಂದರು. ಇನ್ನು ಈಸ್ಟರ್ ಎಂಬ ಹೆಸರು ಇಂಗ್ಲೆಂಡಿನ ಕ್ರಿಸ್ತ ಧರ್ಮ  ಪೂರ್ವದ ಧರ್ಮದಲ್ಲಿನ ಈಸ್ಟ್ರೋ ಎಂಬ ದೇವಿಯ ಹೆಸರಿನಿಂದ ಬಂದಿದೆ. ಅಲ್ಲಿ ವಸಂತ ಮಾಸದಲ್ಲಿ ಈಸ್ಟ್ರೋ ಉತ್ಸವ ನಡೆಯುತ್ತಿತ್ತು. ಕ್ರಿಶ್ಚಿಯನ್ನರು ಅದರ ಮೇಲೆ ಈ ಹಬ್ಬಕ್ಕೆ ಅಡಿಯಿಟ್ಟರು.

ಡಚ್ಚರು ಕಾಲಿಟ್ಟಾಗ 64 ಚದರ ಮೈಲು ವಿಸ್ತೀರ್ಣದ ಈಸ್ಟರ್ ದ್ವೀಪದಲ್ಲಿ 4,000 ಜನ ವಾಸವಿದ್ದರು. ಅದಾದ ನಾಲ್ಕು ವರುಷಕ್ಕೆ ಜೇಮ್ಸ್ ಕುಕ್ ಹೋದಾಗ ಬರೇ 30 ಹೆಂಗಸರ ಸಹಿತ 730 ಜನರಿದ್ದರು. 1786ರಲ್ಲಿ ಫ್ರೆಂಚರು ಹೋದಾಗ ‌2,000 ಜನ ಕಂಡುಬಂದರು. 1888ರಲ್ಲಿ ಬರೇ 111 ಜನ ಉಳಿದಿದ್ದರು. ಆ ವರುಷ ಸ್ಪೆಯಿನ್ ತನ್ನ ಪೆರು ರಾಜ್ಯಪಾಲನಿಗೆ ಈ ದ್ವೀಪ ಸಂದರ್ಶಿಸುವಂತೆ ಹೇಳಿತು. ಅದನ್ನು ಚಿಲಿಯ ಭಾಗವಾಗಿ ಸೇರಿಸಿಕೊಳ್ಳಲಾಯಿತು. ಚಿಲಿಯಿಂದ 2,300 ಮೈಲು, ತಾಹಿತಿಯಿಂದ 2,500 ಮೈಲು‌ ದೂರದಲ್ಲಿ ಶಾಂತ‌ ಸಾಗರದಲ್ಲಿರುವ ಒಂಟಿ ಜ್ವಾಲಾಮುಖಿ ದ್ವೀಪವಾಗಿದೆ ಇದು.

ಮಧ್ಯ ಮತ್ತು ಪಶ್ಚಿಮ ಶಾಂತ (ಪೆಸಿಫಿಕ್) ಸಾಗರದ ಹರಡಿರುವ ನಾನಾ ದ್ವೀಪಗಳನ್ನು ಪಾಲಿನೇಶಿಯಾ ಎನ್ನುವರು. ಅಲ್ಲಿನ ಮಾರ್ಕೋಸಾ ಬುಡಕಟ್ಟು ಜನರು ಅಕಸ್ಮಾತ್ ಇಲ್ಲಿಗೆ ಬಂದುದು ಕ್ರಿ. ಶ. 700ರ ಸುತ್ತು. ಮೊದಲ ರಾಜ ಹೋತೋ ಮತುವಾ. ಇವರ ಭಾರೀ ಕೊಡುಗೆ ಗೊಮ್ಮಟ ಗಾತ್ರದ ನೂರಾರು ಮೂರ್ತಿಗಳು. 12ರಿಂದ 17 ಶತಮಾನದ ‌ನಡುವಿನ ಹಕ್ಕಿ ಆರಾಧನಾ ಸಂಸ್ಕೃತಿ ಇವನ್ನು ನಾಶ ಮಾಡಿದ್ದು ಕಂಡರೂ ಸಾಕಷ್ಟು ‌ಉಳಿದಿವೆ. ಚಿಲಿಗೆ ಸೇರಿದ ಬಳಿಕ ಇಲ್ಲಿನವರು ಕ್ರಿಶ್ಚಿಯನರಾದರು. 1965ಕ್ಕೆ  ಎಲ್ಲರೂ ಚಿಲಿ ನಾಗರಿಕತೆ ಪಡೆದರು. 1995ರಲ್ಲಿ ವಿಶ್ವ ಸಂಸ್ಥೆಯು ಈ ದ್ವೀಪವನ್ನು ವಿಶ್ವ ಪರಂಪರೆಯ ತಾಣವಾಗಿ ಘೋಷಿಸಿದೆ.

(PC:https://www.google.com/url?sa=i&url=https%3A%2F%2Fwww.lovefood.com%2Fnews%2F56494%2Fthe-history-of-easter-eggs&psig=AOvVaw0pnwnB9NZCys8muNuo5sSi&ust=1617507286762000&source=images&cd=vfe&ved=0CAMQjB1qFwoTCIiPvbyT4e8CFQAAAAAdAAAAABAO)

ಈಸ್ಟರ್ ದ್ವೀಪದ ಸಹಿತ ಈಸ್ಟರ್ ಹಬ್ಬದ ಈಸ್ಟರ್ ಮೊಟ್ಟೆಗೂ ಒಂದು ಮಹತ್ವವಿದೆ. ಕ್ರಿಸ್ತನ ಪುನರುತ್ಥಾನವನ್ನು ಮೊಟ್ಟೆಯಿಂದ ಹೊಸ ಜೀವ ಎಂದು ಸಮೀಕರಿಸಲಾಗಿದೆ. ಕ್ರಿಸ್ತನ ಸಮಾಧಿ ಪೆಟ್ಟಿಗೆಯಾಗಿ ಮೊಟ್ಟೆಯ ಹೊರ ಆವರಣವನ್ನು ಪರಿಗಣಿಸಿದವರೂ ಇದ್ದಾರೆ. ಇವೆಲ್ಲ ಆಚರಣೆ ‌1800ರ ಬಳಿಕ ‌ಮಕ್ಕಳ ಮೋಜಿನ ಮೊಟ್ಟೆ ಬೇಟೆಯಾಗಿ ಬದಲಾವಣೆ ಕಂಡಿತು. ಈಸ್ಟರ್ ಮುನ್ನಾ ರಾತ್ರಿ ಹಿರಿಯರು ಮೊಟ್ಟೆ ಚಿಪ್ಪಿನೊಳಗೆ ಚಾಕಲೇಟ್ ಹಿಡಿದು ಉಂಗುರದವರೆಗೆ ಏನಾದರೂ ಇಟ್ಟು ಅಡಗಿಸಿಡುತ್ತಿದ್ದರು. ಮಕ್ಕಳು ಬೆಳಿಗ್ಗೆ ಅದನ್ನು ಹುಡುಕಿ ತನ್ನದಾಗಿಸಿಕೊಳ್ಳುವುದೇ ಈಸ್ಟರ್ ದಿನದ ಮಕ್ಕಳ ಮೊಟ್ಟೆ ಬೇಟೆ.

ಈಸ್ಟರ್ ‌ಹಬ್ಬ ಮರು ಅರಳುವ ಬದುಕಿನ ನಂಬಿಕೆ ‌ಉಕ್ಕಿಸುವ ದಿನವಾಗಿ ಎಲ್ಲರಿಗೂ ಬದುಕುವ ಹಕ್ಕು, ಅವಕಾಶ ತೆರೆದುಕೊಂಡ ನೆನಪಿನ ದಿನವೂ ಆಗಿದೆ. 


-By ಪೇಜಾ