ಲಕ್ಷಾಂತರ ವರುಷಗಳಿಂದಲೂ ಮಾನವನು ಉಪವಾಸ ಬಿದ್ದಿದ್ದಾನೆ, ಉಪಹಾರ ಉಂಡಿದ್ದಾನೆ, ಉಪವಾಸ ಮಾಡಿದ್ದಾನೆ ಅದು ಮಾನವನ ಇತಿಹಾಸದ ಒಂದು ಭಾಗವಾಗಿದೆ.

ಜಗತ್ತಿನ 28% ಜನರು ಈಗಲೂ ಹಸಿವಿನಿಂದ ಬಳಲುತ್ತಿದ್ದಾರೆ. ಭಾರತದ 40 ಕೋಟಿಯಷ್ಟು ಜನರು ಬಹುತೇಕ ಒಪ್ಪತ್ತೂಟದವರು. ಇವರೆಲ್ಲ ಅನಿವಾರ್ಯದ ಉಪವಾಸ ಆಚರಿಸುತ್ತಿದ್ದಾರೆ. ಇದರ ನಡುವೆ ಹಿಂದೂಗಳ ಅಷ್ಟಮಿ, ಏಕಾದಶಿ ಉಪವಾಸಗಳು, ಕ್ರಿಶ್ಚಿಯನರ ಲೆಂಟ್ ಉಪವಾಸಗಳು ಬಂದುಹೋದವು. ಇಸ್ಲಾಂ ಧರ್ಮದವರ ರಮದಾನ್ ಇಲ್ಲವೇ ರಮಜಾನ್ ಮಾಸದ ಉಪವಾಸ ಈಗ ನಡೆದಿದೆ.

                                                   ಬಾಬ್ಬಿ ಸ್ಯಾಂಡ್ಸ್  66 ದಿನಗಳ ಉಪವಾಸ

8ರಿಂದ 12 ಗಂಟೆಗಳ ಕಾಲದ ಉಪವಾಸ ದೈಹಿಕ ಆರೋಗ್ಯದ ದೃಷ್ಟಿಯಿಂದ ‌ಒಳ್ಳೆಯದು. ಅದಕ್ಕಿಂತ ಹೆಚ್ಚು ಅವಧಿಯ ಉಪವಾಸ ಆರೋಗ್ಯಕ್ಕೆ ಪೂರಕವಲ್ಲ. ಅದು ದೇಹದಂಡನೆ. ಸಾಧುಗಳು ದೇಹದಂಡನೆಗೆ ಉಪವಾಸ ಮಾಡುವುದನ್ನು ಕಂಡಿದ್ದ ಬುದ್ಧನು ಧರ್ಮ ಸಾಕ್ಷಾತ್ಕಾರಕ್ಕೆ ಮೊದಲು ಕೆಲವು ಪ್ರಯೋಗಗಳನ್ನು ‌ನಡೆಸಿದ. ಅವುಗಳಲ್ಲಿ ಆಹಾರದ ಪ್ರಮಾಣ ಕಡಿಮೆ ಮಾಡುತ್ತ ಬಂದು, ದಿನಕ್ಕೆ ಒಂದು ಅನ್ನದ ಅಗುಳು ತಿನ್ನುವ ಮತ್ತು ಪೂರ್ಣ ಉಪವಾಸದ ದೇಹದಂಡನೆ. ಇದರಿಂದ ಯಾವುದೇ ಸಾಧನೆ ಆಗದ್ದನ್ನು ಕಂಡುಕೊಂಡ ಬುದ್ಧ‌ ಮುಂದೆ ಉಪವಾಸ ಬೆಂಬಲಿಸಲಿಲ್ಲ; ಮಿತಾಹಾರ ಬೆಂಬಲಿಸಿದ. ಮೂಲ ಬೌದ್ಧ ಧರ್ಮ ದಾಟಿ ವೈದಿಕ ಅನುಸರಿಸುವ ಮಹಾಯಾನಿಗಳು ಉಪವಾಸ ವ್ರತಗಳಿಗೆ ಅಂಟಿಕೊಂಡಿದ್ದಾರೆ.

ಜೈನರಲ್ಲಿ ಕೂಡ ನಾನಾ ಉಪವಾಸಗಳು ಇದೆ. ಜಗತ್ತಿನಲ್ಲಿಯೇ ಅಪರೂಪವಾದುದು ಅವರ ಸಲ್ಲೇಖನ ವ್ರತ. ಆಹಾರ ಕಡಿಮೆ  ಮಾಡುತ್ತ ಬಂದು ಇಲ್ಲವೇ ನೇರ ಉಪವಾಸ ಮಾಡಿ ತಾವೇ ಸಾವು ತಂದುಕೊಳ್ಳುವುದು ಸಲ್ಲೇಖನ ವ್ರತವಾಗಿದೆ.

                                               ಪೊಟ್ಟಿ ಶ್ರೀರಾಮುಲು 54 ದಿನಗಳ ಉಪವಾಸ

ಹೀಬ್ರೂಗಳ ಲೆಂಟ್ ಉಪವಾಸ  ಕ್ರಿಶ್ಚಿಯನರಲ್ಲಿ ಬಂದಿದ್ದರೂ 40 ದಿನದ ಉಪವಾಸ ಮಾಡುವ‌ವರು ಇಲ್ಲ. ಬೂದಿ ಬುಧವಾರದ ಒಂದು ದಿನ ಇಲ್ಲವೇ, ಕೆಲವು ಶುಕ್ರವಾರ ಉಪವಾಸ ಮಾಡಿ ಬಿಡುತ್ತಾರೆ. ಎಲ್ಲ ಧರ್ಮಗಳಲ್ಲದೆ ಬುಡಕಟ್ಟು ಸಂಪ್ರದಾಯಗಳಲ್ಲೂ ಉಪವಾಸ ಆಚರಣೆ ಇದೆ. ಈಗ ಇಸ್ಲಾಂ ಧರ್ಮದವರ ಉಪವಾಸ ನಡೆದಿದೆ. ಇವರ ತಿಂಗಳ ಉಪವಾಸವು ಪೂರ್ಣ ಹಗಲಿನದು. ಸಂಜೆ ಇಫ್ತಾರ್ ಮೂಲಕ ಬ್ರೇಕ್‌ಫಾಸ್ಟ್ ಮಾಡುತ್ತಾರೆ. ಬ್ರೇಕ್‌ಫಾಸ್ಟ್ ಎಂದರೆ ಉಪವಾಸ ಮುರಿಯುವ ಉಪಹಾರ, ಬೆಳಿಗ್ಗೆಯದೇ ಎಂದು ಅರ್ಥವಲ್ಲ. ಆದರೆ ಬಹುಪಾಲು ಜಗರೂಢಿ ಹಾಗೆ ಇದೆ. ವ್ಯಕ್ತಿಗತವಾಗಿ ನಾನು 35 ವರುಷಗಳಿಂದ ರಾತ್ರಿ ಆಹಾರ ತೆಗೆದುಕೊಳ್ಳುವುದಿಲ್ಲ. 12 ಗಂಟೆಗಳ ಸದಾ ಉಪವಾಸ ಇದು. ಬ್ರೇಕ್‌ಫಾಸ್ಟ್ ಚೆನ್ನಾಗಿರಬೇಕು; ಅದನ್ನು ತಪ್ಪಿಸಬಾರದು. ಸಾಮಾನ್ಯವಾಗಿ ಅದು 10-12 ಗಂಟೆಗಳ ಉಪವಾಸದ ಬಳಿಕ ಸೇವಿಸುವ ಆಹಾರವಾಗಿದೆ.

ವೈಯಕ್ತಿಕವಾಗಿ ಕೆಲವರು ತಮ್ಮದನ್ನು ಸಾಧಿಸಲು ಉಪವಾಸ ಮಾಡುತ್ತಾರೆ. ಮಹಾತ್ಮಾ ಗಾಂಧೀಜಿಯವರು ಉಪವಾಸ ಸತ್ಯಾಗ್ರಹವನ್ನು ‌ಪ್ರತಿಭಟನೆಯ ಅಸ್ತ್ರವಾಗಿಸಿ ಗೆದ್ದಿದ್ದಾರೆ.  1980ರ ದಶಕದಲ್ಲಿ ಉತ್ತರ ಅಯರ್‌ಲ್ಯಾಂಡ್ ಸವಲತ್ತು ಹೋರಾಟದಲ್ಲಿ ಬಹಳ ಜನರನ್ನು ಬ್ರಿಟಿಷರು ಜೈಲಿಗೆ ಹಾಕಿದರು. ಜೈಲಿನಲ್ಲಿ ಸರಿಯಾದ ಸವಲತ್ತು ಕೊಡಬೇಕು ಎಂದು ಆಗ ತುಂಬ ಜನ ಮಾಡಿದ ಉಪವಾಸ ಸತ್ಯಾಗ್ರಹ ಜಗತ್ಪ್ರಸಿದ್ಧ. ಇವರಲ್ಲಿ  ಬಾಬ್ಬಿ ಸ್ಯಾಂಡ್ಸ್ ಎಂಬ ರಾಜಕೀಯ ನಾಯಕರ ಹೋರಾಟ ಚಾರಿತ್ರಿಕ ಎನಿಸಿದೆ. 66 ದಿನ ಉಪವಾಸ ಮಾಡಿದ ಇವರು ದೇಹತ್ಯಾಗ ಮಾಡಿದರು. ಗಾಂಧಿವಾದಿ ಪೊಟ್ಟಿ ಶ್ರೀರಾಮುಲು ಅವರು ತೆಲುಗರ ಆಂಧ್ರಕ್ಕಾಗಿ ಉಪವಾಸ ಮಾಡಿದರು. 54 ದಿನದ ಉಪವಾಸದ ಬಳಿಕ ‌ಡಿಸೆಂಬರ್ 15, 1952ರಲ್ಲಿ ಅವರು ನಿಧನ ಹೊಂದಿದರು. ಕೂಡಲೆ ಕೇಂದ್ರ ಆಂಧ್ರ ಪ್ರದೇಶ ಸ್ಥಾಪಿಸಿತು. ದೇಶದ ಮೊದಲ ಭಾಷಾವಾರು ರಾಜ್ಯವದು.

                                            ಪ್ರತಿಭಟನೆಗೆ ಉಪವಾಸ ಸತ್ಯಾಗ್ರಹ

ಉಪವಾಸ ಮುಂದುವರಿಸಿದಾಗ ಮುಖ್ಯವಾಗಿ ನಮ್ಮ ದೇಹಕ್ಕೆ ಅಗತ್ಯವಾದ ವಿಟಮಿನ್‌ಗಳಿತ್ಯಾದಿ ದೊರೆಯದೆ ದೇಹ ಬಳಲುತ್ತದೆ. ದೇಹದಲ್ಲಿನ ಕೊಬ್ಬನ್ನು ಕರಗಿಸಿಕೊಂಡು ದೇಹವು ಶಕ್ತಿ ಉತ್ಪಾದನೆ ಮಾಡಿಕೊಳ್ಳುತ್ತದೆ. ಆದರೆ ವಿಟಮಿನ್, ಲವಣಗಳನ್ನು ಉತ್ಪಾದಿಸಿಕೊಳ್ಳುವ ವ್ಯವಸ್ಥೆ ದೇಹದಲ್ಲಿ ಇಲ್ಲ. ಆದ್ದರಿಂದ ದೇಹದ ರೋಗನಿರೋಧಕ ಶಕ್ತಿ ‌ಕುಂಠಿತವಾಗುತ್ತದೆ. ರಕ್ತ ಪರಿಚಲನೆ, ಪಚನಕ್ರಿಯೆ, ರಸಗ್ರಂಥಿಗಳ ಕೆಲಸ ಕೆಡುತ್ತದೆ. ಮಲಬದ್ಧತೆ, ಹೊಟ್ಟೆ ಹುಣ್ಣು ಬರುತ್ತದೆ. ಉಪವಾಸದ ಕಾರಣ  ಇರುವ ಕೊಬ್ಬು ಶಕ್ತಿ ಉತ್ಪಾದನೆಗೆ ಹೋಗುವುದರಿಂದ ಕೊಬ್ಬು ಇಲ್ಲದೆ ದೇಹವು ಚಳಿ ತಡೆಯಲಾಗದ ಸ್ಥಿತಿಯನ್ನು ಮುಟ್ಟುತ್ತದೆ. ಸಕ್ಕರೆ ಕಾಯಿಲೆ, ಹೃದಯ ಬೇನೆ ಮೊದಲಾದ ರೋಗ ಇರುವ‌ವರು ಉಪವಾಸ ಮಾಡಲೇಬಾರದು. ಇಸ್ಲಾಂ ಧರ್ಮೀಯರ ತಿಂಗಳ ಉಪವಾಸವು ನಿತ್ಯ 12 ಗಂಟೆಯಷ್ಟು ಕಾಲಕ್ಕೆ ಸೀಮಿತವಾಗಿರುವುದರಿಂದ ಸಾಮಾನ್ಯ ದೇಹ ಸ್ಥಿತಿಯವರಿಗೆ ಅದರಿಂದ ಯಾವ ಹಾನಿಯೂ ಇಲ್ಲ.ದೈಹಿಕ ಆರೋಗ್ಯ ಹಾಗೂ ಮನೋದೃಢತೆ ವೃದ್ಧಿ ಸಾಧ್ಯ. 


-By ಪೇಜಾ