ಬ್ಯಾರಿ ಸಮುದಾಯದ ಸಾಹಿತಿಗಳು ತಮ್ಮ ಮಾತೃ ಭಾಷೆಯಲ್ಲೇ ಸಾಹಿತ್ಯ ರಚಿಸಿದಿದ್ದರೆ ಬ್ಯಾರಿ ಭಾಷಾ ಸಾಹಿತ್ಯ ಇಂದು ಇನ್ನಷ್ಟು ಶ್ರೀಮಂತವಾಗಿರುತ್ತಿತ್ತು ಎಂದು ಬದ್ರಿಯಾ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ. ಎನ್ ಇಸ್ಮಾಯಿಲ್ ತಿಳಿಸಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಅಧ್ಯಯನ ಪೀಠದ ವತಿಯಿಂದ ಇತ್ತೀಚೆಗೆ ನಡೆದ “ಬ್ಯಾರಿ ಸಾಹಿತ್ಯ: ನೆಲೆ - ಬೆಲೆ” ಪ್ರಚಾರೋಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಬ್ಯಾರಿ ಭಾಷೆಗೆ 1400 ವರ್ಷಗಳ ಇತಿಹಾಸವಿದ್ದು ಸಾಹಿತ್ಯಿಕವಾಗಿ ಶ್ರೀಮಂತವಾಗಿದೆ. ಕರಾವಳಿಯಲ್ಲಿ ತುಳು ಸಂಸ್ಕೃತಿಯೊಂದಿಗೆ ಬೆರೆತಿರುವ ಬ್ಯಾರಿ ಸಾಹಿತ್ಯವನ್ನು ಬೆಳೆಸುವತ್ತ ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕಾಗಿದೆ ಎಂದರು.
ದಿ. ಪ್ರೋ. ಬಿ. ಎಂ. ಇಚ್ಲಂಗೋಡು ಸಾಹಿತ್ಯ ಕೃಷಿಯ ಸವಿನೆನಪಿಗಾಗಿ ಅವರ ಪುತ್ರ, ವೃತ್ತಿಯಲ್ಲಿ ಅಭಿಯಂತರರಾಗಿರುವ ಜ. ಹಾರಿಸ್ ಮಹಮ್ಮದ್ ಇಚ್ಲಂಗೋಡು ನೂರಕ್ಕೂ ಅಧಿಕ ಪುಸ್ತಕಗಳನ್ನು ಬ್ಯಾರಿ ಅಧ್ಯಯನ ಪೀಠಕ್ಕೆ ಕೊಡುಗೆಯಾಗಿ ನೀಡಿದರು. ಬ್ಯಾರಿ ಅಧ್ಯಯನ ಪೀಠದ ವತಿತಿಂದ ಅವರನ್ನು ಸನ್ಮಾನಿಸಲಾಯಿತು.
ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ. ಹರೀಶ್, ಅಧ್ಯಯನ ಪೀಠದ ಸಲಹಾ ಸಮಿತಿಯ ಸದಸ್ಯರಾದ ಅಬ್ದುಲ್ ರೆಹಮಾನ್ ಕುತ್ತೆತ್ತೂರು, ಸಂಶುದ್ದೀನ್ ಮಡಿಕೇರಿ, ಅಹ್ಮದ್ ಬಾವಾ ಮೊಯ್ದೀನ್, ಬದ್ರಿಯಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೋ. ರೆಹಮತ್ ಆಲಿ ಉಪಸ್ಥಿತರಿದ್ದರು. ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಎ. ಸಿದ್ಧಿಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಲಹಾ ಸಮಿತಿ ಸದಸ್ಯ ಇಬ್ರಾಹಿಂ ಕೋಡಿಜಾಲ್ ವಂದಿಸಿ, ಅರ್ಥಶಾಸ್ತ್ರ ಉಪನ್ಯಾಸಕಿ ಶಮಾ ಐ ಎನ್ ಎಂ ನಿರೂಪಿಸಿದರು.