ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ ತಾಲೂಕು ಭಜನಾ ಪರಿಷತ್ ಆಶ್ರಯದಲ್ಲಿ ಸಾವಿರ ಕಂಬದ ಬಸದಿಯಿಂದ ಹೊರಟು ಭಜನೆಯೊಂದಿಗೆ ಸ್ವರಾಜ್ಯ ಮೈದಾನದವರೆಗೆ ಭಜನಾ ಭಜಕರಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಮೆರವಣಿಗೆಯನ್ನು ಉದ್ಘಾಟಿಸಿ ಮಾತನಾಡಿದ ಮೂಡುಬಿದಿರೆ ಜೈನ ಮಠದ ಭಾರತ ಭೂಷಣ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸ್ತ್ರೀ ಹಾಗೂ ಮಹಿಳೆಗೆ ಅತ್ಯುನ್ನತ ಸ್ಥಾನ ನೀಡಿದ ಸನಾತನ ಧರ್ಮದ ಕಾರ್ಯ ಮತ್ತು ಭಜನೆಗಳನ್ನು ನಾವು ಸದಾ ಬೆಂಬಲಿಸುತ್ತೇವೆ. ಭಾರತೀಯ ಧರ್ಮ ಅನಾದಿಕಾಲದಿಂದ ಸಭ್ಯತೆಯ ಭಜನೆಗೆ ಹೆಸರುವಾಸಿಯಾದದು ಎಂದು ಹೊಗಳಿದರು.
ಸ್ವರಾಜ್ ಮೈದಾನದ ಆದಿಶಕ್ತಿ ದೇವಾಲಯದ ಎದುರು ಸಮಾಪನಗೊಂಡ ಪ್ರತಿಭಟನ ಮೆರವಣಿಗೆಯನ್ನು ಉದ್ದೇಶಿಸಿ ಶ್ರೀಕಾಂತ ಶೆಟ್ಟಿ ಕಾರ್ಕಳ ದಿಕ್ಸೂಚಿ ಭಾಷಣವನ್ನು ಮಾಡಿದರು. ಅವರು ತಮ್ಮ ಭಾಷಣದಲ್ಲಿ ಅಸ್ಪೃಶ್ಯತೆ ನಿವಾರಣೆಯಾಗಿ ಭಕ್ತಿ ಪಂಥ ಇಂದು ಮೆರೆಯುತ್ತಿದೆ. ದೇವರನ್ನು ಭಕ್ತಿಯಿಂದ ಸ್ತುತಿಸುವ ಪರಂಪರೆ ನಮ್ಮದು. ಭಜನೆಯಲ್ಲಿ ಹಿಂದೂ ಧರ್ಮದ ಅಂತ ಸತ್ವ ಅಡಗಿದೆ. ಆದರೆ ಅವಿವೇಕಿ, ಪರಮ ಸ್ವಾರ್ಥಿ, ಹೇಡಿ ಹಿಂದುಗಳಿಂದ ತೊಂದರೆ ಉಂಟಾಗುತ್ತಿದೆ ಅದನ್ನು ನಿವಾರಿಸಲು ನಾವೆಲ್ಲ ಒಂದುಗೂಡಬೇಕಾಗಿದೆ ಎಂದು ಕರೆಕೊಟ್ಟರು.
ರಾಜ್ಯ ಬಜನಾ ಪರಿಷತ್ನ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ ಯಾರಿಗೂ ಹಾಳು ಬಯಸದ ಹಿಂದೂ ಸಮಾಜ ಒಗ್ಗೂಡಬೇಕು. ದೀಪ ಬೆಳಗಿ ಭಜನೆಯ ಮೂಲಕ ಒಂದಾಗಿ ಝೇಂಕರಿಸಬೇಕಾಗಿದೆ. ಭಕ್ತಿ, ಶೃದ್ಧೆಯ ಭಜನೆಗೆ ಜಾತಿ, ಧರ್ಮ, ಪಕ್ಷದ ಭೇದವಿಲ್ಲ. ಭಜಕರು ಗುಡುಗಿದರೆ ಸರಕಾರವೇ ನಡುಗುವುದು, ಕಾನೂನು ರೀತ್ಯಾ ಎಲ್ಲವನ್ನು ಮಾಡುವೆವು ಎಂದು ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಲಕ್ಷ್ಮಣ ಸುವರ್ಣ ಪೆರಿಬೆಟ್ಟು ನುಡಿದರು.
ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಶಾಮ ಹೆಗ್ಡೆ , ಸಾಮಾಜಿಕ ಕಾರ್ಯಕರ್ತೆ ರಮಿತಾ ಶೈಲೇಂದ್ರ ಹಾಜರಿದ್ದರು. ಹಿಂದೂ ಜಾಗರಣ ವೇದಿಕೆಯ ಗ್ರಾಮಾಂತರ ಸಂಯೋಜಕ ಸಮಿತಿರಾಜ್ ದರೆಗುಡ್ಡೆ ಸ್ವಾಗತಿಸಿದರು.